ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದರೂ ಕನ್ನಡ ಗೊತ್ತಿಲ್ಲ ಎಂದು ಹೆಮ್ಮೆಯಿಂದ ಹೇಳುವ ಜನರಿಗೆ ಕನ್ನಡದ ಹಾಡು ಹೇಳಿ ಭೇಷ್ ಎನ್ನಿಸಿಕೊಂಡಿದ್ದಾರೆ ಈ ಜರ್ಮನ್ ಪುಟಾಣಿಗಳು..
ಕನ್ನಡ್ ಗೊತ್ತಿಲ್, ಕನ್ನಡ್ ಬರಲ್ ಎಂದು ಅಭಿಮಾನದಿಂದ ಹೇಳಿಕೊಳ್ಳುವ ಕನ್ನಡಿಗರು ಅದೆಷ್ಟೋ ಮಂದಿ ಇದ್ದಾರೆ. ಕನ್ನಡದಲ್ಲಿ ಮಾತನಾಡುವುದು ಎಂದರೆ ಅಸಹ್ಯ ಪಡುವವರೂ ಈ ಕರ್ನಾಟಕದಲ್ಲಿಯೇ ಹುಟ್ಟಿದವರೂ ಇದ್ದಾರೆ. ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ, ಕನ್ನಡ ಬರುವುದಿಲ್ಲ ಎನ್ನುವುದನ್ನೇ ಪ್ರತಿಷ್ಠೆಯ ಸಂಕೇತವಾಗಿಸಿಕೊಂಡವರು ಅದೆಷ್ಟು ಮಂದಿ ಇಲ್ಲ ಹೇಳಿ! ಇಂಗ್ಲಿಷ್ ಬರಲ್ಲ ಎಂದು ಹೇಳಲು ಮುಜುಗರ ಪಟ್ಟುಕೊಳ್ಳುವವರ ಸಂಖ್ಯೆ ಹೆಚ್ಚಿದ್ದರೂ, ಕನ್ನಡ ನಾಡಿನಲ್ಲಿಯೇ ಹುಟ್ಟಿ ಬೆಳೆದು ಎರಡಕ್ಷರವೂ ಮಾತನಾಡಲು ಬರುವುದಿಲ್ಲ ಎಂದು ಜಂಬ ಕೊಚ್ಚಿಕೊಳ್ಳುವವರ ಸಂಖ್ಯೆಗೇನೂ ಕೊರತೆಯಿಲ್ಲ. ಇದೇ ಕಾರಣಕ್ಕೆ ಕನ್ನಡೇತರರು ಕನ್ನಡ ಕಲಿತು ಮಾತನಾಡಿದರೆ ಅಂಥವರ ಬಗ್ಗೆ ನಿಜವಾದ ಕನ್ನಡಿಗರಿಗೆ ಹೆಮ್ಮೆ ಆಗುವುದು ಸಹಜವೇ. ಅಂಥ ಅಪರೂಪದ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ.
ಇಲ್ಲಿರುವ ಕನ್ನಡ ನ್ಯೂಸ್ ಎನ್ನುವ ಫೇಸ್‌ಬುಕ್ ಖಾತೆಯಲ್ಲಿ ಈ ಮಕ್ಕಳ ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿ ಕೆಲವರು ಜರ್ಮನ್ ಮಕ್ಕಳು ಕನ್ನಡದ ಕೆಲವು ಹಾಡುಗಳನ್ನು ಸ್ಪಷ್ಟವಾಗಿ ಹಾಡಿ ಮನರಂಜಿಸುತ್ತಿದ್ದಾರೆ. ಇವರ ಕನ್ನಡದ ಮಾತಿಗೆ ಕನ್ನಡಿಗರಂತೂ ಪುಳಕಿತರಾಗಿದ್ದಾರೆ. ಮಕ್ಕಳಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಡಿಯೋಡರ್ ವಿಂಟರ್ ಎನ್ನುವ ಬಾಲಕ ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ ಹಾಡಿ ಅದರ ಅಭಿನಯವನ್ನೂ ಮಾಡಿ ತೋರಿಸಿದ್ದರೆ, ಕಲ್ಲಾದರೆ ನಾನು ಬೆಲೂರಿನ ಗುಡಿಯಲ್ಲಿರುವೆ ಎಂದು ಮತ್ತೊಬ್ಬ ಹಾಡಿ ರಂಜಿಸಿದ್ದಾನೆ. ಹಿಂದೂಸ್ತಾನವೂ ಎಂದೂ ಮರೆಯದ ಭಾರತ ರತ್ನ ಹಾಡನ್ನೂ ಈ ಮಕ್ಕಳು ಹಾಡಿದ್ದಾರೆ. ಲಿವೀಯಾ ವಿಂಟರ್ ಎನ್ನುವ ಬಾಲಕಿ ಕೂಡ ತನ್ನ ಕಂಠದಿಂದ ಮೋಡಿ ಮಾಡಿದ್ದಾಳೆ.
ಮಗುವಿಗಾಗಿ ಬಾಲ್ಕನಿಗೆ ಸೇಫ್ಟಿ ಮಾಡಿದ ವೈಷ್ಣವಿ ಗೌಡ! ಮನೆಯಲ್ಲಿ ಏನೇನಿವೆ? ಹೋಮ್ ಟೂರ್ ವಿಡಿಯೋ ವೈರಲ್
ಈ ಮಕ್ಕಳ ತಂದೆ ಜರ್ಮನ್‌ದವರಾದರೂ ತಾಯಿ ಬೆಂಗಳೂರು ಮೂಲದವರು. ಇದೇ ಕಾರಣಕ್ಕೆ ಮಕ್ಕಳಿಗೆ ಕನ್ನಡದ ಪಾಠ ಮಾಡಿದ್ದಾರೆ ಅಮ್ಮ. ವಿದೇಶದಲ್ಲಿ ನೆಲೆಸಿದ್ದರೂ, ಮಕ್ಕಳು ವಿದೇಶದಲ್ಲಿ ಹುಟ್ಟಿದ್ದರೂ ತವರಿನ ಕನ್ನಡದ ಕಂಪನ್ನು ಮಕ್ಕಳಿಗೆ ಕಲಿಸಿರುವ ಇವರ ತಾಯಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡದ ನೆಲವನ್ನು ಮರೆಯದೇ, ಮಕ್ಕಳಲ್ಲಿಯೂ ಕನ್ನಡ ಪ್ರೀತಿ ಹುಟ್ಟಿಸಿರುವ ತಾಯಿಗೆ ಮಹಾ ಶರಣು ಎಂದು ಕಮೆಂಟ್‌ಗಳಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ ನೆಟ್ಟಿಗರು.
ಕೆಲ ದಿನಗಳ ಹಿಂದೆ ಜರ್ಮನ್ ಯುವತಿಯೊಬ್ಬರು ಕನ್ನಡಿಗರು ನಾಚಿಕೊಳ್ಳುವಂತೆ ಸ್ಪಷ್ಟವಾಗಿ, ಸುಲಲಿತವಾಗಿ ಕನ್ನಡ ಮಾತನಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಜರ್ಮನ್ ಯುವತಿಯ ಕನ್ನಡ ಪ್ರೇಮಕ್ಕೆ ಕನ್ನಡಿಗರು ಸಲಾಂ ಎಂದಿದ್ದರು. ಮೂಲತಃ ಜರ್ಮನಿಯಿಂದ ಬೆಂಗಳೂರಿಗೆ ಬಂದಿರುವ ಯುವತಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುವತಿಯ ಕನ್ನಡ ಪ್ರೇಮ ಎಂತಹದ್ದೆಂದರೆ,ಇಲ್ಲಿನ ಸ್ನೇಹಿತರು, ಮಕ್ಕಳು, ಸಹೋದ್ಯೋಗಿಗಳು, ಸಣ್ಣಪುಟ್ಟ ವ್ಯವಹಾರಕ್ಕೆ ಸ್ಥಳೀಯರೊಂದಿಗೆ ಕನ್ನಡವನ್ನೇ ಮಾತನಾಡುತ್ತಾರೆ. ಇನ್ನು ನಟಿ ಪೂಜಾ ಗಾಂಧಿ ಕೂಡ ಸ್ಪಷ್ಟವಾಗಿ ಕನ್ನಡ ಕಲಿತು ಅದನ್ನು ಮಾತನಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಹೀಗೆ ಕನ್ನಡೇತರರು ಕನ್ನಡ ಕಲಿಯುತ್ತಿರುವಾಗ ಕನ್ನಡದ ನೆಲದಲ್ಲಿಯೇ ಬದುಕುತ್ತಿರುವ, ಇಲ್ಲೇ ಹುಟ್ಟಿ ಬೆಳೆದರೂ ಕನ್ನಡ ಬರುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರಿಗೂ ಇದು ಪಾಠವಾದರೆ ಒಳಿತು.
ಕತ್ತೆ ಮುಖ ನೋಡಿದ್ರೆ ಐಟಿ ರೇಡ್ ಆಗತ್ತೆ! ಖ್ಯಾತ ಪಶುವೈದ್ಯ ಡಾ. ಜಗನ್ನಾಥ್ ಇಂಟರೆಸ್ಟಿಂಗ್ ಮಾಹಿತಿ...