
ಬೆಂಗಳೂರು (ಮಾ.06): ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ, ಕಿರುತೆರೆಯ ಜನಪ್ರಿಯ ಮುಖ ರಜತ್ ಅಲಿಯಾಸ್ ರಜತ್ ಬುಜ್ಜಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಫೋನ್ ಕರೆ ಮೂಲಕ ಬೆದರಿಕೆ ಹಾಕಿದ್ದಾರೆ ಎನ್ನಲಾದ ಗಂಭೀರ ಆರೋಪದ ಮೇಲೆ ರಜತ್ ವಿರುದ್ಧ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರು ರಜತ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಅನ್ವಯ, ರಜತ್ ಅವರು ಗಿರೀಶ್ ಕುಮಾರ್ ಅವರಿಗೆ ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ 'ಡಾಗ್ ಸತೀಶ್' ಎಂಬುವವರ ಜೊತೆಗಿನ ಸ್ನೇಹವನ್ನು ಕಡಿದುಕೊಳ್ಳಬೇಕು ಎಂದು ರಜತ್ ಒತ್ತಾಯಿಸಿದ್ದಾರೆ ಎಂಬ ಅಂಶ ದೂರಿನಲ್ಲಿದೆ.
ಗಿರೀಶ್ ಕುಮಾರ್ ಅವರ ದೂರಿನ ಪ್ರಕಾರ, ರಜತ್ ಅವರು ಕೇವಲ ಕರೆ ಮಾಡಿದ್ದಲ್ಲದೆ, ಮೆಸೇಜ್ ಮೂಲಕವೂ ಭಯ ಹುಟ್ಟಿಸುವ ಕೆಲಸ ಮಾಡಿದ್ದಾರೆ. ದೂರುದಾರರ ಕಾರಿನ ಫೋಟೋವನ್ನು ಅವರಿಗೆ ಕಳುಹಿಸಿ, 'Sir this is Rajath Bujji, call maadtidini call back madthira… illa nave olage kalusbeka? (ಸರ್ ನಾನು ರಜತ್ ಬುಜಿ, ಕಾಲ್ ಮಾಡ್ತಿದ್ದೀನಿ ಕಾಲ್ ಬ್ಯಾಕ್ ಮಾಡ್ತೀರಾ.. ಇಲ್ಲ ನಾವೇ ಒಳಗೆ ಕಳುಹಿಸಬೇಕಾ?) ಎಂದು ಸಂದೇಶ ಕಳುಹಿಸಿದ್ದಾರೆ. ಇದು ನೇರವಾದ ಬೆದರಿಕೆ ಎಂದು ಗಿರೀಶ್ ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕೆ.ಆರ್. ಪುರಂ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ) ಮತ್ತು 352 (ಅಪಮಾನ ಅಥವಾ ನಿಂದನೆ) ಅಡಿಯಲ್ಲಿ ರಜತ್ ಹಾಗೂ ಕಿರಣ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕಾನ್ಫರೆನ್ಸ್ ಕರೆ ಸಂದರ್ಭದಲ್ಲಿ ರಜತ್ ಅವರು ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ದಾಖಲಾಗಿರುವ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆ ಕರೆಯಲ್ಲಿ ಮಾತನಾಡಿರುವುದು ನಿಜವಾಗಿಯೂ ರಜತ್ ಅವರೇ ಅಥವಾ ಬೇರೆ ಯಾರಾದರೂ ಅವರ ಹೆಸರು ಬಳಸಿ ಬೆದರಿಕೆ ಹಾಕಿದ್ದಾರೆಯೇ ಎಂಬ ಬಗ್ಗೆ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ಮುಂದಿನ ಹಂತವಾಗಿ ಕೆ.ಆರ್. ಪುರಂ ಪೊಲೀಸರು ರಜತ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆಯಿದೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ರಜತ್ ಅವರ ವರ್ತನೆ ಹಾಗೂ ವಿವಾದಗಳು ಆಗಾಗ್ಗೆ ಸುದ್ದಿಯಾಗುತ್ತಲೇ ಇವೆ. ಈಗ ನೇರವಾಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದು ರಜತ್ ಅವರಿಗೆ ಕಾನೂನಾತ್ಮಕವಾಗಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.