
ಪ್ರತಿನಿತ್ಯ ಟಿವಿ ವಾಹಿನಿಗಳಲ್ಲಿ ಬೆಳಗ್ಗೆ 'ಭವಿಷ್ಯವಾಣಿ' (Bhavishyavani) ಕಾರ್ಯಕ್ರಮದ ಮೂಲಕ ಲಕ್ಷಾಂತರ ಜನರಿಗೆ ದಿನಭವಿಷ್ಯ ಹಾಗೂ ಗ್ರಹಗತಿಗಳ ಬಗ್ಗೆ ಜ್ಯೋತಿಷ್ಯ ಹೇಳುತ್ತಿದ್ದ ಪ್ರಸಿದ್ಧ ಜ್ಯೋತಿಷಿ ಆಚಾರ್ಯ ಇಂದುಪ್ರಕಾಶ್ ಮಿಶ್ರಾ (Indu Prakash Mishra) ಅವರ ಕುಟುಂಬಕ್ಕೆ ರಾಜಕೀಯ ಅಂಗಳದಲ್ಲಿ ದೊಡ್ಡ ಹಿನ್ನಡೆಯಾಗಿದೆ. ಉತ್ತರ ಪ್ರದೇಶದ ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರ ಪತ್ನಿ ಸ್ಮಿತಾ ಮಿಶ್ರಾ (Smita Mishra) ಅವರು ಹೀನಾಯವಾಗಿ ಸೋಲನುಭವಿಸಿದ್ದಾರೆ.
ಉತ್ತರ ಪ್ರದೇಶದ ಲಖನೌ ಪದವೀಧರ ಕ್ಷೇತ್ರದಿಂದ ಚುನಾವಣೆಗೆ ಧುಮುಕಿದ್ದ ಸ್ಮಿತಾ ಮಿಶ್ರಾ ಅವರಿಗೆ ಕನಿಷ್ಠ 300 ಮತಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಪರಾಭವಗೊಂಡಿದ್ದಾರೆ.
2007ರಿಂದಲೂ ಖಾಸಗಿ ಟಿವಿ ವಾಹಿನಿಯ 'ಭವಿಷ್ಯವಾಣಿ' ಕಾರ್ಯಕ್ರಮದ ಮೂಲಕ ಜನಜನಿತರಾಗಿರುವ ಇಂದುಪ್ರಕಾಶ್ ಮಿಶ್ರಾ ಅವರ ಪತ್ನಿ ಸ್ಮಿತಾ ಮಿಶ್ರಾ ಆರಂಭದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಆ ಪಕ್ಷದಿಂದ ಟಿಕೆಟ್ ಪಡೆಯಲು ಯತ್ನಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯಾಗಿ ಅವರಿಗೆ ಟಿಕೆಟ್ ತಪ್ಪಿತು. ಹೀಗಾಗಿ ಅವರು ಪಕ್ಷೇತರ (Independent Candidate) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸ್ಥಳೀಯ ಸಂಘಟನೆಗಳು ಮತ್ತು ನಾಯಕರ ಬೆಂಬಲವಿದೆ ಎಂದು ಭಾವಿಸಲಾಗಿದ್ದರೂ, ಚುನಾವಣಾ ಫಲಿತಾಂಶ ಹೊರಬಿದ್ದಾಗ ಅವರು 300 ಮತಗಳ ಗಡಿಯನ್ನೂ ದಾಟಲಾಗದೆ ತೀವ್ರ ಮುಖಭಂಗ ಅನುಭವಿಸಿದರು. ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ (SP) ಅಭ್ಯರ್ಥಿ ಕಾಂತಿ ಸಿಂಗ್ ಗೆಲುವು ಸಾಧಿಸಿದ್ದಾರೆ.
ದೇಶದ ದೊಡ್ಡ ದೊಡ್ಡ ಘಟನಾವಳಿಗಳ ಬಗ್ಗೆ ಯಶಸ್ವಿ ಭವಿಷ್ಯ ನುಡಿದಿದ್ದೇನೆ ಎಂದು ಹೇಳಿಕೊಳ್ಳುವ ಆಚಾರ್ಯ ಇಂದುಪ್ರಕಾಶ್ ಮಿಶ್ರಾ, ಸ್ವತಃ ತಮ್ಮ ಪತ್ನಿಯ ಚುನಾವಣಾ ಭವಿಷ್ಯವನ್ನು ಸರಿಯಾಗಿ ಪ್ರಿಡಿಕ್ಟ್ ಮಾಡಲು ಸಾಧ್ಯವಾಗಲಿಲ್ಲವೇ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡುತ್ತಿದ್ದಾರೆ. "ಇತರರಿಗೆ ಜಯ ತರುವ ಉಪಾಯ ಹೇಳುವ ಜ್ಯೋತಿಷಿ, ಸ್ವಂತ ಪತ್ನಿಗೆ ಗೆಲ್ಲುವ ಹಾದಿ ತೋರಿಸಲಿಲ್ಲವೇ?" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಈ ಸೋಲಿನ ಕುರಿತು ಪ್ರತಿಕ್ರಿಯಿಸಿರುವ ಸ್ಮಿತಾ ಮಿಶ್ರಾ, "ಚುನಾವಣೆಯಲ್ಲಿ ವ್ಯಾಪಕ ಅಕ್ರಮ ಹಾಗೂ ಬೂತ್ ಕ್ಯಾಪ್ಚರಿಂಗ್ ನಡೆದಿದೆ. ನನ್ನ ಪೊಲಿಂಗ್ ಏಜೆಂಟ್ಗಳನ್ನು ಬೂತ್ನಿಂದ ಹೊರಹಾಕಲಾಯಿತು ಮತ್ತು ಮತಕ್ಕಾಗಿ ಹಣ ಹಂಚಲಾಯಿತು. ಸೋಲಿನಿಂದ ನಾನು ಧೃತಿಗೆಡುವುದಿಲ್ಲ, ಮುಂದಿನ 2027ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ 'ನವಯುವಕ್ ದಳ' ಪಕ್ಷದಿಂದ 50 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದೇವೆ" ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.