ಹತ್ತುವಾಗ ಇಳಿಯುವಾಗ ಅಂತರದ ಬಗ್ಗೆ ಗಮನವಿರಲಿ, ಮೆಟ್ರೋ ಪ್ರಯಾಣಿಕರು ಈ ಧ್ವನಿ ಕೇಳಿರುತ್ತೀರಿ. ಸ್ಪಷ್ಟ ಕನ್ನಡ, ಇಂಪಾದ ಧ್ವನಿ ಮೂಲಕ ಮೆಟ್ರೋ ಪ್ರಯಾಣಿಕರ ಕಾಳಜಿ ವಹಿಸಿದ್ದ ಖ್ಯಾತ ನಿರೂಪಕಿ, ನಟಿ ಅಪರ್ಣಾ ನಿಧನರಾಗಿದ್ದಾರೆ.
ಬೆಂಗಳೂರು(ಜು.11) ಮೆಟ್ರೋ ಹತ್ತುವಾಗ, ಇಳಿಯುವಾಗ ಅಂತರದ ಬಗ್ಗೆ ಗಮನವಿರಲಿ. ಮುಂದಿನ ನಿಲ್ದಾಣ..., ಬಾಗಿಲುಗಳು ಬಲಕ್ಕೆ ತೆರೆಯಲಿದೆ. ಹೀಗೆ ಮೆಟ್ರೋ ಪರ್ಯಾಣಿಕರ ಕಾಳಜಿ ವಹಿಸಿ, ಮುಂದಿನ ನಿಲ್ದಾಣ, ಮೆಟ್ರೋ ಬಾಗಿಲು, ಶುಚಿತ್ವ ಸೇರಿದಂತೆ ಪ್ರತಿಯೊಂದನ್ನು ಸ್ಪಷ್ಟ ಕನ್ನಡದ ಮೂಲಕ ಹೇಳುತ್ತಿದ್ದ ಇಂಪಾದ ಧ್ವನಿಯ ನಿರೂಪಕಿ, ನಟಿ ಅಪರ್ಣ ಇನ್ನು ನೆನಪು ಮಾತ್ರ. ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 58ರ ಹರೆಯದ ಅಪರ್ಣ ನಿಧನರಾಗಿದ್ದಾರೆ.
ನಟಿಯಾಗಿ, ನಿರೂಪಕಿಯಾಗಿ, ಬರಹಗಾರ್ತಿಯಾಗಿ ಹಲವು ಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದ ಅಪರ್ಣ ನಿಧನ ಸುದ್ದಿ ಆಘಾತ ತಂದಿದೆ. ಮೆಟ್ರೋದಲ್ಲಿ ಪ್ರಯಾಣಿಕರ ಸುರಕ್ಷತೆ ಕುರಿತು ಕಾಳಜಿ ವಹಿಸಿದ್ದ ಅಪರ್ಣಾ ತಾವೇ ಇಹಲೋಕ ತ್ಯಜಿಸಿರುವುದು ಕನ್ನಡಿಗರಿಗೆ ನೋವು ತರಿಸಿದೆ.
undefined
ಕನ್ನಡಿಗರಿಗೆ ಮತ್ತೊಂದು ಆಘಾತ, ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ!
ಮೆಟ್ರೋ ಮಾತ್ರವಲ್ಲ, ಟಿವಿ ಕಾರ್ಯಕ್ರಮದಲ್ಲಿ ನಿರೂಪಣೆ, ಸರ್ಕಾರಿ ಕಾರ್ಯಕ್ರಮ, ಖಾಸಗಿ ಕಾರ್ಯಕ್ರಮಗಳ ನಿರೂಪಣೆ, ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮ, ಚಂದನ ವಾಹಿನಿಯಲ್ಲಿ ನಿರೂಪಣೆ, ಹಿನ್ನಲೆ ಧ್ವನಿ ಸೇರಿದಂತೆ ಹಲವು ರೀತಿಯಲ್ಲಿ ಅಪರ್ಣಾ ಕನ್ನಡಗಿರ ಮನೆ ಮಾತಾಗಿದ್ದರು.
ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರಾಗಿರುವ ಅಪರ್ಣಾ ರಾಜ್ಯಕ್ಕೆ ಚಿರಪರಿತರಾಗಿದ್ದರು. 1985ರಲ್ಲಿ ಮಸಣದ ಹೂವು ಚಿತ್ರದ ಮೂಲಕ ಅಪರ್ಣ ಸಿನಿ ರಂಗ ಪ್ರವೇಶ ಮಾಡಿದ್ದರು.
ಅಪರ್ಣ ಅಭಿನಯಿಸಿದ ಸಿನಿಮಾಗಳು
ಮಸಣದ ಹೂವು (1985)
ಸಂಗ್ರಾಮ (1987)
ನಮ್ಮೂರ ರಾಜ (1988)
ಸಾಹಸ ವೀರ (1988)
ಮಾತೃ ವಾತ್ಸಲ್ಯ (1988)...ರೋಹಿಣಿ
ಒಲವಿನ ಆಸರೆ (1989)
ಇನ್‌ಸ್ಪೆಕ್ಟರ್ ವಿಕ್ರಮ್ (1989)
ಒಂದಾಗಿ ಬಾಲು (1989)
ಡಾಕ್ಟರ್ ಕೃಷ್ಣ (1989)
ಒಂಟಿ ಸಲಗ (1989)
ಚಕ್ರವರ್ತಿ (1990)
ಗ್ರೇ ಗೇಮ್ಸ್ (2024)...ತಾರಾ
ಮೂಡಲಮನೆ, ಮುಕ್ತ ಸೇರಿದಂತೆ ಹಲವು ಜನಪ್ರಿಯ ಧಾರವಾಹಿಗಳಲ್ಲಿ ಅಪರ್ಣ ನಟಿಸಿದ್ದಾರೆ. ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದಾರೆ. 2013ರಲ್ಲಿ ಕನ್ನಡದಲ್ಲಿ ಮೊದಲ ಆವೃತ್ತಿ ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭಗೊಂಡಿತ್ತು. ಮೊದಲ ಆವೃತ್ತಿಯಲ್ಲಿ ಅಪರ್ಣಾ ಸ್ಪರ್ಧಿಯಾಗಿ ಜನರ ಮನಗೆದ್ದಿದ್ದರು. ಬಿಗ್‌ಬಾಸ್ ಬಳಿಕ 2015ರಲ್ಲಿ ಮಜಾ ಟಾಕೀಸ್ ಮೂಲಕ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡರು. ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಹಾಸ್ಯ ಮನೋರಂಜನಾ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರದಲ್ಲಿ ಅಪರ್ಣ ಕಾಣಿಸಿಕೊಂಡಿದ್ದರು.