ರಾಣಿ ಇವತ್ತಿಗೂ ಮಗುನೇ, ಆಕೆಯನ್ನು ಜಗತ್ತಿಗೆ ತೋರಿಸಲು ಇಷ್ಟ ಇರ್ಲಿಲ್ಲ ಎಂದು ನಟ ಧನಂಜಯ್ ಅಕ್ಕನ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಸ್ಯಾಂಡಲ್‌ವುಡ್ ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ರಾಕ್ಷಸ ಧನಂಜಯ್ ಕಿರುತೆರೆಯ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ವೀಕೆಂಡ್‌ನ ಕೆಂಪು ಕುರ್ಚಿ ಏರಿದ್ದ ಧನಂಜಯ್ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಸಾಧಕರ ಕುರ್ಚಿಯಲ್ಲಿ ನಟ ಧನಂಜಯ್ ಅವರನ್ನು ನೋಡಲು ಅನೇಕರು ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಆ ದಿನ ಬಂದಿದೆ. ವೀಕೆಂಡ್ ಕುರ್ಚಿಯಲ್ಲಿ ಧನಂಜಯ್ ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಧನಂಜಯ್ ಹೆಚ್ಚು ಭಾವುಕರಾದರು. ತನ್ನ ಕುಟುಂಬದವರನ್ನು ನೆನೆದು ಧನಂಜಯ್ ಭಾವುಕರಾದರು. ಬಳಿಕ ಅವರ ಅಕ್ಕ ರಾಣಿ ಅವರ ಬಗ್ಗೆ ಮಾತನಾಡಿ ಕಣ್ಣೀರಾದರು.
ಸಾವಿತ್ರಮ್ಮ ಹಾಗೂ ಅಡವಿ ಸ್ವಾಮಿ ದಂಪತಿಯ ನಾಲ್ಕು ಜನ ಮಕ್ಕಳಲ್ಲಿ ಧನಂಜಯ್ ಕೊನೆಯವರು. ಧನಂಜಯ್‌ಗೆ ಇಬ್ಬರೂ ಅಕ್ಕರು ಹಾಗೂ ಒಬ್ಬ ಅಣ್ಣ. ಓರ್ವ ಅಕ್ಕನಿಗೆ ಚಿಕ್ಕ ವಯಸ್ಸಿನಲ್ಲೇ ಪೋಲಿಯೋ ಅಟ್ಯಾಕ್ ಆಗಿ ಇನ್ನು ಮಗುವಿನ ಹಾಗೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಧನಂಜಯ್ ಅಕ್ಕ ರಾಣಿ ಅವರು ಕೂಡ ಭಾಗಿಯಾಗಿದ್ದರು. ಮೊದಲ ಬಾರಿಗೆ ಧನಂಜಯ್ ಅಕ್ಕ ರಾಣಿ ಕ್ಯಾಮರಾ ಮುಂದೆ ಬಂದಿದ್ದರು. ರಾಣಿ ಅಕ್ಕ ಕಾರ್ಯಕ್ರಮಕ್ಕೆ ಬರುತ್ತಿದ್ದಂತೆ ಜಗತ್ತಿಗೆ ಅಕ್ಕನ್ನು ತೋರಿಸಬಾರದು ಎಂದುಕೊಂಡಿದ್ದೆ ಅಂತ ಧನಂಜಯ್ ಹೇಳಿದರು.
ಅವಳು ದೇವರಕೊಟ್ಟ ಗಿಫ್ಟ್
ಧನಂಜಯ್ ಮದುವೆಯಾಗು ಎನ್ನುತ್ತಾ ರಾಣಿ ಅಕ್ಕ ವೇದಿಕೆಗೆ ಎಂಟ್ರಿ ಕೊಟ್ಟರು. ಆಕೆಯನ್ನು ಹ್ಯಾಂಡಲ್ ಮಾಡುವುದು ತುಂಬಾ ಕಷ್ಟ ಆದರೆ ವೀಕೆಂಡ್ ಟೀಂ ಕಷ್ಟ ಪಟ್ಟು ಕರ್ಕೊಂಡು ಬಂದಿದ್ದಾರೆ ಎಂದು ಧನಂಜಯ್ ಹೇಳಿದರು. ರಮೇಶ್ ಅರವಿಂದ್ ಕೂಡ ರಾಣಿ ಅಕ್ಕನನ್ನು ಪ್ರೀತಿಯಿಂದ ಮಾತನಾಡಿಸಿದರು. ಅಜ್ಜಿ ಹೇಳಿಕೊಟ್ಟ ಹಾಗೆ ರಾಣಿ ಅವರು ಮಾತನಾಡಿದರು. ಬಳಿಕ ಮಾತನಾಡಿದ ಧನಂಜಯ್ 'ರಾಣಿ ನಮ್ಮನೆಯ ಮಗು. ಚಿಕ್ಕವಯಸ್ಸಿನಲ್ಲಿ ಅವಳಿಗೆ ಪೋಲಿಯೋ ಅಟ್ಯಾಕ್ ಆಯ್ತು. ಅವಳು ಇವತ್ತಿಗೂ ಮಗುವಿನ ಹಾಗೆ. ತಾತನ ಜೊತೆ ತುಂಬಾ ಬಾಂಧವ್ಯವಿತ್ತು. ಈಗ ಅಜ್ಜಿ ಜೊತೆಗೆ ತುಂಬಾ ಕ್ಲೋಸ್ ಆಗಿದ್ದಾಳೆ. ಅವರೇನು ಮಾತಾಡ್ತಾರೋ, ಅದೆಲ್ಲವನ್ನ ಅವಳೂ ಮಾತಾಡ್ತಾಳೆ. ಅವಳು ನಮಗೆ ದೇವರು ಕೊಟ್ಟಿರುವ ಗಿಫ್ಟ್' ಎಂದು ಹೇಳಿದರು.
ಐರನ್ ಲೆಗ್ ಅಂತ ಕೆಟ್ಟ ಪದಗಳಲ್ಲಿ ಬೈದಿದ್ದಾರೆ, ನಿಜವಾದ ಕೊಡಲಿಯಿಂದ ಪೆಟ್ಟುಬಿದ್ದಿದೆ: ಭಾವುಕರಾದ ಧನಂಜಯ್
ಅಕ್ಕ ಎನ್ನುವುದಕ್ಕಿಂತ ಮಗಳು
‘ನೀವೆಲ್ಲಾ ಚೆನ್ನಾಗಿದ್ದೀರಾ ಅಂದ್ರೆ ಅದು ಅವಳ ಯೋಗ ಅಂತ ನಮ್ಮಜ್ಜಿ ಯಾವಾಗಲೂ ಹೇಳ್ತಾರೆ, ಅದು ನಿಜ. ನನಗೆ ಅವಳನ್ನ ಜಗತ್ತಿಗೆ ತೋರಿಸೋಕೆ ಇಷ್ಟ ಇರಲಿಲ್ಲ. ಬೇಡ ಅಂತ ಇದ್ದೆ. ಅವಳು ನನಗೆ ಅಕ್ಕ ಅನ್ನೋದಕ್ಕಿಂತ ಮಗಳು ಅಂತಾನೇ ಹೇಳಬಹುದು' ಎಂದು ಧನಂಜಯ್ ಅಕ್ಕನ ಬಗ್ಗೆ ಹೇಳಿದ್ದಾರೆ.
ರಮ್ಯಾ ಇಂಗ್ಲಿಷ್, ಪ್ರಭುದೇವ್ ಚಾಮರಾಜನಗರ ಕನ್ನಡ ಬಗ್ಗೆ ವೈರಲ್ ಪೋಸ್ಟ್; ರಮೇಶ್ ಅರವಿಂದ್ ಪ್ರತಿಕ್ರಿಯೆ ವೈರಲ್
ಅಕ್ಕನಿಗೆ ಕಣ್ಣು ಕೊಡು ಅಂತ ಬೇಡಿಕೊಳ್ಳುತ್ತಿದ್ದೆ
ಚಿಕ್ಕ ವಯಸ್ಸಿನಲ್ಲಿ ದೇವಸ್ಥಾನಕ್ಕೆ ಹೋದಾಗಲೆಲ್ಲ ಅಕ್ಕನಿಗೆ ಕಣ್ಣು ಕೊಡು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ ಎಂದು ರಾಣಿ ಅಕ್ಕನ ಬಗ್ಗೆ ಮಾತನಾಡುತ್ತ ಧನಂಜಯ್ ಭಾವುಕರಾದರು. ಅವಳನ್ನ ನೋಡಿಕೊಳ್ಳೋಕೆ ತುಂಬಾ ಜನ ಇದ್ದಾರೆ. ಇಡೀ ಊರು ಅವಳನ್ನು ಪ್ರೀತಿ ಮಾಡುತ್ತೆ. ಇಡೀ ಊರಿಗೆ ರಾಣಿ ಅವಳು ಎಂದು ಧನಂಜಯ್ ಹೇಳಿದರು.