ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣದ ರಾಮನ ಪಾತ್ರಧಾರಿ ಒಮ್ಮೆ ಸ್ಮೋಕ್ ಮಾಡಿದಾಗ ಏನಾಗಿತ್ತು ಎಂಬ ಅನುಭವವನ್ನು ಹಂಚಿಕೊಂಡಿದ್ದಾರೆ.
1987- 88ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ (Ramayana) ಯಾರಿಗೆ ತಾನೆ ನೆನಪಿಲ್ಲ. ಟಿ.ವಿ ಇನ್ನೂ ಕೆಲವೇ ಕೆಲವರ ಮನೆಯನ್ನು ಅಲಂಕರಿಸಿತ್ತು. ಆ ಸಮಯದಲ್ಲಿ ರಾಮಾಯಣ ಧಾರಾವಾಹಿಯನ್ನು ನೋಡುವುದಕ್ಕಾಗಿ ಪ್ರತಿ ಭಾನುವಾರ ಎಷ್ಟೋ ದೂರದ ಮನೆಗಳಿಗಳಿಗೆ ಹೋಗಿ ನೋಡಿದವರೂ ಇದ್ದಾರೆ. ಅಷ್ಟೊಂದು ರೀತಿಯಲ್ಲಿ ಈ ಧಾರಾವಾಹಿ (Serial) ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಬಹುತೇಕ ಮನೆಗಳಲ್ಲಿ, ಈ ಧಾರಾವಾಹಿ ಶುರುವಾಗುವ ಪೂರ್ವದಲ್ಲಿ ಟಿ.ವಿಗೆ ಹಾರ ಹಾಕಿ ಪೂಜೆ ಮಾಡಿದವರೂ ಇದ್ದಾರೆ. ಇಲ್ಲಿಯ ಪಾತ್ರಧಾರಿಗಳನ್ನು ನಿಜವಾಗಿ ದೇವತೆಗಳು ಎಂದು ನಂಬಿದ್ದರು . ರಾಮ, ಲಕ್ಷ್ಮಣ, (Lakshmana) ಸೀತೆ, ಹನುಮಂತನ ಪಾತ್ರಧಾರಿಗಳಿಗೆ ಆಗ ವಿಶೇಷ ಮಾನ್ಯತೆ ನೀಡಲಾಗುತ್ತಿತ್ತು. ರಾಮನ ಪಾತ್ರಧಾರಿಯಾಗಿದ್ದ ಅರುಣ್ ಗೋವಿಲ್, ಸೀತೆಯ ಪಾತ್ರಧಾರಿ ದೀಪಿಕಾ ಚಿಖಲಿಯಾ(Deepika Chikhalia) , ಲಕ್ಷ್ಮಣನಾಗಿದ್ದ ಸುನಿಲ್ ಲಹರಿ, ಹನುಮಂತನಾಗಿದ್ದ ಧಾರಾ ಸಿಂಗ್ (Dhara singh) ಅವರನ್ನು ಖುದ್ದು ದೇವರೆಂದು ಪೂಜಿಸಿದ್ದಾರೆ. ಅವರು ಹೋದ ಕಡೆಗಳಲ್ಲಿ ದೇವರೇ ಮನೆಗೆ ಬಂದವಂತೆ ಪೂಜೆ, ಪುನಸ್ಕಾರ ಮಾಡಿದ್ದಾರೆ. ಅದೇ ರೀತಿ ರಾವಣನ ಪಾತ್ರಧಾರಿಯಾಗಿದ್ದ ಅರವಿಂದ್ ತ್ರಿವೇದಿಯವರು ನಿಜ ಜೀವನದಲ್ಲಿಯೂ ಕೆಟ್ಟವರೆಂದು ಬಿಂಬಿಸಿದವರೂ ಇದ್ದಾರೆ. ಅಷ್ಟು ಈ ಪಾತ್ರಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು.
ಈಗಿನ ಫ್ಯಾನ್ಸ್ ತಮ್ಮ ನಾಯಕ ಒಳ್ಳೆಯ ಕೆಲಸ ಬಿಟ್ಟು ಮಚ್ಚು, ಲಾಂಗು ಹಿಡಿದರೂ ಅದನ್ನೇ ಅನುಕರಿಸುವವರು ಬಹಳ ಮಂದಿ ಇದ್ದಾರೆ. ತಮ್ಮ ನೆಚ್ಚಿನ ನಾಯಕ ಏನು ಮಾಡಿದರೂ ಚೆನ್ನವೇ. ಆದರೆ ಅಂದು ಹಾಗಿರಲಿಲ್ಲ. ಪೌರಾಣಿಕ ಪಾತ್ರಧಾರಿಗಳು ಖುದ್ದು ದೇವರೇ ಆಗಿದ್ದರಿಂದ ಅವರು ತಪ್ಪು ಮಾಡಿದರೆ ಅದನ್ನು ಅವರ ಫ್ಯಾನ್ಸ್ ಸುಲಭದಲ್ಲಿ ಸ್ವೀಕರಿಸುತ್ತಿರಲಿಲ್ಲ. ಅಂಥದ್ದೇ ಒಂದು ನಿಂದನೆಯನ್ನು ಅರುಣ್ ಗೋವಿಲ್ ಎದುರಿಸಬೇಕಾಗಿತ್ತು. ಸಂದರ್ಶನವೊಂದರಲ್ಲಿ ಅರುಣ್ ಗೋವಿಲ್ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದರು. ಒಮ್ಮೆ ಅವರ ಅಭಿಮಾನಿಯೊಬ್ಬರು ತುಂಬಾ ನಿರಾಶೆಗೊಂಡು ಸೆಟ್‌ಗಳಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ್ದನ್ನು ಅವರು ಸ್ಮರಿಸಿಕೊಂಡರು. 'ದಿ ಕಪಿಲ್ ಶರ್ಮಾ ಶೋ' ಸಂಚಿಕೆಯಲ್ಲಿ ಅರುಣ್ ಗೋವಿಲ್ (Arun Govil) ಘಟನೆಯ ಬಗ್ಗೆ ಹೇಳಿದ್ದಾರೆ.
RAMAYANA: 36 ವರ್ಷಗಳ ಬಳಿಕ ರಾಮ ಸೀತೆ ಮತ್ತೆ ಜೊತೆ ಜೊತೆಯಲಿ...
'ನಾನು ತಮಿಳು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಅದರ ಚಿತ್ರೀಕರಣ ದಕ್ಷಿಣ ಭಾರತದಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದ್ದರು. ನಾನು ಆ ಚಿತ್ರದಲ್ಲಿ ಲಾರ್ಡ್ ಬಾಲಾಜಿ ಪಾತ್ರವನ್ನು ನಿರ್ವಹಿಸುತ್ತಿದ್ದೆ ಮತ್ತು ಭಾನುಮತಿ ಅವರೊಂದಿಗೆ ಕೆಲಸ ಮಾಡುತ್ತಿದ್ದೆ. ನಾನು ಆಗಷ್ಟೇ ಧೂಮಪಾನದ ಅಭ್ಯಾಸವನ್ನು ಬೆಳೆಸಿಕೊಂಡಿದ್ದೆ ಮತ್ತು ಚಿತ್ರೀಕರಣದ ಸಮಯದಲ್ಲಿ ಧೂಮಪಾನ ಮಾಡಲೇಬೇಕಿತ್ತು. ಅಂದು ಕೂಡ ಹಾಗೆಯೇ ಆಯಿತು. ನಾನು ಯಾರೂ ಇಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಮೂಲೆಗೆ ಹೋದೆ. ಪರದೆಯ ಹಿಂದೆ ಸಿಗರೇಟು (Cigeratte) ಹಚ್ಚಿದೆ. ಅಷ್ಟರಲ್ಲಿ ಇದನ್ನು ಅಲ್ಲಿದ್ದ ಓರ್ವ ವ್ಯಕ್ತಿ ನೋಡಿಯೇ ಬಿಟ್ಟರು. ನನ್ನನ್ನು ದುರುಗುಟ್ಟಿ ನೋಡಿದ ಅವರು ತಮಿಳಿನಲ್ಲಿ ಏನೋ ಹೇಳಿದರು. ಅದು ಏನೆಂದು ಅರ್ಥವಾಗದಿದ್ದರೂ, ಅವರು ನನ್ನನ್ನು ಬೈಯುತ್ತಿದ್ದಾರೆ ಎಂದು ಅವರ ಹಾವಭಾವ ನೋಡಿಯೇ ತಿಳಿಯಿತು' ಎಂದು ಅರುಣ್ ಹೇಳಿದ್ದಾರೆ.
ನಂತರ ಅಲ್ಲಿಯೇ ಇದ್ದ ಒಬ್ಬ ತಮಿಳಿಗನನ್ನು ಕರೆದು ಅವರು ಏನೆಂದು ಬೈಯುತ್ತಿದ್ದಾರೆ ಎಂದು ಕೇಳಿದೆ. ಅವರು ಹೇಳಿದ್ದು ಕೇಳಿ ಶಾಕ್ ಆಗೋಯ್ತು. ಅಸಲಿಗೆ ಅವರು ಓರ್ವ ನಟನಾಗಿ ನಾನು ಸ್ಮೋಕ್ ಮಾಡುತ್ತಿದ್ದುದಕ್ಕೆ ಸಿಟ್ಟು ಇರಲಿಲ್ಲ, ಬದಲಿಗೆ ರಾಮನಾದ ನಾನು ಸ್ಮೋಕ್ ಮಾಡಿದ್ದನ್ನು ಅವರಿಂದ ಸಹಿಸಿಕೊಳ್ಳಲು ಆಗಲಿಲ್ಲ. ನಾವು ನಿಮ್ಮನ್ನು ದೇವರೆಂದು ಪರಿಗಣಿಸುತ್ತೇವೆ ಮತ್ತು ನೀವು ನೋಡಿದರೆ ಇಲ್ಲಿ ಕುಳಿತು ಧೂಮಪಾನ ಮಾಡುತ್ತಿದ್ದೀರಿ ಎಂದು ಆವೇಷ ಭರಿತನಾಗಿ ಆ ವ್ಯಕ್ತಿ ನನಗೆ ಬೈದದ್ದು ಎಂದು ತಿಳಿದಾಗ ತಲೆ ತಗ್ಗಿಸಿಬಿಟ್ಟೆ. ಆ ಮಾತು ನನ್ನ ಮೇಲೆ ಅದೆಷ್ಟು ಪ್ರಭಾವ ಬೀರಿತು ಎಂದರೆ ಮತ್ತೆ ಜೀವನದಲ್ಲಿ ನಾನು ಸಿಗರೇಟನ್ನು ಮುಟ್ಟಲಿಲ್ಲ' ಎಂದರು.
ರಾಮಾಯಣದ 'ರಾಮ' ಅರುಣ್ ಗೋವಿಲ್, ಕಂಡೊಡನೆ ಭಾವುಕಳಾಗಿ ಕಾಲಿಗೆ ಬಿದ್ದ ಮಹಿಳೆ, ವಿಡಿಯೋ ವೈರಲ್!
1977 ರಲ್ಲಿ ರಾಜಶ್ರೀ ಪ್ರೊಡಕ್ಷನ್‌ನ 'ಪಹೇಲಿ' ಚಿತ್ರದ ಮೂಲಕ ಅರುಣ್ ಗೋವಿಲ್ ನಟನೆಗೆ ಪದಾರ್ಪಣೆ ಮಾಡಿದರು. ನಂತರ ಅವರು ರಾಜಶ್ರೀ ನಿರ್ಮಾಣದ ಮತ್ತೊಂದು ಚಿತ್ರ 'ಸಾವನ್ ಕೊ ಆನೆ ದೋ'ದಲ್ಲಿ ಕಾಣಿಸಿಕೊಂಡರು. ಆದರೆ, 80ರ ದಶಕದಲ್ಲಿ ಪ್ರಸಾರವಾದ ‘ರಾಮಾಯಣ’ದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಿದ ನಂತರವೇ ಅವರಿಗೆ ಮನ್ನಣೆ ಸಿಕ್ಕಿತು. ಅಂದಹಾಗೆ, ಅರುಣ್ ಗೋವಿಲ್ ಅವರು ಒಂದು ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. 1999ರಲ್ಲಿ ತೆರೆಕಂಡಿದ್ದ, ನಟ- ನಿರ್ದೇಶಕ ಉಪೇಂದ್ರ ಅಭಿನಯದ ‘ಉಪೇಂದ್ರ’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು.