ಕೆಂಡಸಂಪಿಗೆ ಸೀರಿಯಲ್ ನಾಯಕ ತೀರ್ಥಂಕರ ಪ್ರಸಾದ್ ಅಲಿಯಾಸ್ ಆಕಾಶ್ ಅವರು ಫ್ಯಾನ್ಸ್ ಜೊತೆ ನೇರಪ್ರಸಾರದಲ್ಲಿ ಮಾತನಾಡಿದರು.
ಕಲರ್ಸ್ ಕನ್ನಡ ವಾಹಿನಿಯ ಕಡೆಯಿಂದ ಪ್ರೇಕ್ಷಕರಿಗೆ ದೀಪಾವಳಿ ಗಿಫ್ಟ್ ರೂಪದಲ್ಲಿ ನೆಚ್ಚಿನ ನಟ-ನಟಿಯರ ಜೊತೆ ವೀಕ್ಷಕರಿಗೆ ನೇರಪ್ರಸಾರದ ಮೂಲಕ ಮಾತನಾಡುವ ಅವಕಾಶವನ್ನು ನವೆಂಬರ್ 14ರಂದು ಕಲ್ಪಿಸಿತ್ತು. ಹಲವಾರು ನಟ-ನಟಿಯರು ನೇರಪ್ರಸಾರದಲ್ಲಿ ಬಂದು ತಮ್ಮ ಸೀರಿಯಲ್ ಫ್ಯಾನ್ಸ್ ಜೊತೆ ಮಾತನಾಡಿದರು. ಅದರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್ ತೀರ್ಥಂಕರ ಪ್ರಸಾದ್, ಅವರು ಅಭಿಮಾನಿಗಳ ಜೊತೆ ಕೆಲವು ಹೊತ್ತು ಮಾತನಾಡಿದರು. ಅಂದಹಾಗೆ ತೀರ್ಥಂಕರ ಪ್ರಸಾದ್ ಅವರ ರಿಯಲ್ ಹೆಸರು ಆಕಾಶ್. ಅಭಿಮಾನಿಗಳ ಜೊತೆ ಮಾತನಾಡಿದ ನಟ, ಕಲರ್ಸ್ ಕನ್ನಡ ನಮ್ಮೆಲ್ಲರ ಹೆಮ್ಮೆ. ಕೆಂಡಸಂಪಿಗೆ ಧಾರಾವಾಹಿಗೆ ಇಷ್ಟು ಪ್ರೀತಿ ತೋರಿಸ್ತಿರೋ ನಿಮಗೆ ತುಂಬಾ ಧನ್ಯವಾದ ಎಂದರು. ನಿಮ್ಮ ಪ್ರೀತಿ ದಿನವೂ ಹೆಚ್ಚುತ್ತಲೇ ಇದ್ದು, ಪ್ರತಿ ವಾರವೂ ವೀಕ್ಷಕರ ಸಂಖ್ಯೆ ಹೆಚ್ಚುತ್ತಿರುವುದೇ ಸಾಕಷಿ ಎಂದರು. ಕೆಂಡಸಂಪಿಗೆ ಧಾರಾವಾಹಿಯನ್ನು ಟಾಪ್-2 ತಗೊಂಡು ಬಂದಿರೋ ಎಲ್ಲರಿಗೂ ಧನ್ಯವಾದ, ಎಲ್ಲರೂ ತುಂಬಾ ಸಪೋರ್ಟ್ ಮಾಡುತ್ತೀರಿ ಎನ್ನುವ ನಂಬಿಕೆ ಇದೆ. ನಿಮ್ಮ ಪ್ರೀತಿಯನ್ನು ಹೀಗೆಯೇ ಉಳಿಸಿಕೊಳ್ತೀವಿ ಎಂದರು.
ಆರಂಭದಲ್ಲಿ ಎಲ್ಲರಿಗೂ ನಟಿ ದೀಪಾವಳಿ ಶುಭಾಶಯ ಕೋರಿದ ಆಕಾಶ್ ಅವರು, ಇದಾಗಲೇ ನೇರಪ್ರಸಾರದಲ್ಲಿ ಬಂದು ಮಾತನಾಡಿರುವ ಕಲಾವಿದರಂತೆಯೇ, ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯ ಬಳಕೆದಾರರ ಸಂಖ್ಯೆ ಮೂರು ಮಿಲಿಯನ್ ಅಂದರೆ 30 ಲಕ್ಷ ಮಾಡಿರುವ ಬಳಕೆದಾರರಿಗೆ ಧನ್ಯವಾದ ಸಲ್ಲಿಸಿದರು. ಇದೇ ವೇಳೆ ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ಧಪಡಿಸಿದ್ದ ವಿಶೇಷ ಹಾಡಿನ ಕುರಿತು ಮಾತನಾಡಿದ ಅವರು ಈ ಹಾಡು ನಾಲ್ಕು ಮಿಲಿಯನ್ ವೀಕ್ಷಣೆ ಕಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಹಾಡನ್ನು ತುಂಬಾ ಕಷ್ಟಪಟ್ಟು ಮಾಡಿದ್ದು ಎಲ್ಲರೂ ನೋಡಿ, ಆದಷ್ಟು ಶೇರ್ ಮಾಡುವಂತೆ ಮನವಿ ಮಾಡಿಕೊಂಡರು.
ನೇರಪ್ರಸಾರದಲ್ಲಿ ಪ್ರೇಕ್ಷಕರ ಜೊತೆ 'ಅಂತರಪಟ' ಆರಾಧನಾ: ಕನಸು ಅನಿಸ್ತಿದೆ ಅಕ್ಕಾ ಎಂದ ಬಾಲಕಿ
ಇದೇ ವೇಳೆ, ಅವರ ಅಭಿಮಾನಿಗಳು ಅನೇಕ ಸಂದೇಶಗಳನ್ನು ಕಳುಹಿಸಿದರು. ಜೊತೆಗೆ ನೇರಪ್ರಸಾರದಲ್ಲಿ ಬಂದು ನಟನ ಜೊತೆ ಮಾತನಾಡಿದರು. ಈ ಸಮಯದಲ್ಲಿ ಅವರಿಗೆ ಒಂದು ಮೆಸೇಜ್ ಬಂದಿತ್ತು. ಅದೇನೆಂದರೆ ನಿಮ್ಮ ರೊಮ್ಯಾಂಟಿಕ್ ಸೀನ್ ಸಕತ್ ಇತ್ತು ಸಾರ್, ನೀವು ತುಂಬಾ ಚೆನ್ನಾಗಿ ರೊಮ್ಯಾಂಟಿಕ್ ಸೀನ್ ಮಾಡುತ್ತೀರಾ ಎಂದರು. ಇದಕ್ಕೆ ನಾಚಿಕೆಯಿಂದ ಕೆಂಪಾದ ನಟ, ಛೇ ಹಾಗೆಲ್ಲಾ ಹೇಳ್ಬೇಡಿಯಪ್ಪಾ... ನಾಚಿಕೆಯಾಗುತ್ತದೆ ಎಂದರು. ಇನ್ನೋರ್ವ ಫ್ಯಾನ್ ನೀವು ಬಿಗ್ಬಾಸ್ ನೋಡ್ತೀರಾ ಎಂದು ಪ್ರಶ್ನಿಸಿದರು. ಅದಕ್ಕೆ ಆಕಾಶ್ ಅವರು, ಹೂಂ. ನೋಡುತ್ತೇನೆ. ಚೆನ್ನಾಗಿ ಬರುತ್ತಿದೆ ಎಂದರು.
ಅಂದಹಾಗೆ ಕೆಂಡಸಂಪಿಗೆ ಕಥೆ, ಕಾರ್ಪೊರೇಟರ್ ಆಗಿರುವ ತೀರ್ಥಂಕರ್ ಪ್ರಸಾದ್‌ಗೆ ಶಾಸಕನಾಗುವ ಕನಸು. ಎಲ್ಲವನ್ನೂ ರಾಜಕೀಯದ ದೃಷ್ಟಿಯಲ್ಲೇ ತೀರ್ಥಂಕರ್ ಪ್ರಸಾದ್ ಲೆಕ್ಕಾಚಾರ ಮಾಡುತ್ತಾರೆ. ತಮ್ಮ ಗೆಲುವಿಗೆ ಕಾಲೋನಿಯ ವೋಟುಗಳು ತುಂಬಾ ಮುಖ್ಯ ಅನ್ನೋದು ತೀರ್ಥಂಕರ್ ಪ್ರಸಾದ್ ನಂಬಿಕೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಕಾಲೋನಿಯ ಹೂವು ಮಾರುವ ಹುಡುಗಿ ಸುಮನಾಳನ್ನ ತೀರ್ಥಂಕರ್ ಪ್ರಸಾದ್ ಮದುವೆಯಾಗುತ್ತಾರೆ. ಮುಂದೇನಾಗುತ್ತದೆ ಎನ್ನುವ ಕುತೂಹಲ ಈ ಧಾರಾವಾಹಿಯದ್ದು.