
'ನಾವು ಯಾವತ್ತೂ ಒಂದಾಗಿ ಇರಲೇ ಇಲ್ಲ. ಮದುವೆಯಾದಾಗಿನಿಂ ನಮ್ಮ ನಡುವೆ ದೈಹಿಕ ಸಂಬಂಧವೇ ಇರಲಿಲ್ಲ. ಮೊದಲ ದಿನದಿಂದ ಹಿಡಿದು ಬೇರೆಯಾಗುವ ದಿನದವರೆಗೂ ನಮ್ಮಿಬ್ಬರ ನಡುವೆ ಯಾವುದೇ ಭಾವನಾತ್ಮಕ ಸಂಬಂಧವೂ ಇರಲಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದಿದ್ದರೆ, ನಾನು ಆ ಸಂಬಂಧದಲ್ಲೇ ಉಳಿಯುತ್ತಿದ್ದೆ' ಎಂದು ಟ್ರಾನ್ಸ್‌ಜೆಂಡರ್ ಪತ್ರಕರ್ತೆ ಹೈದಿ ಸಾದಿಯಾ ಹೇಳಿಕೊಂಡಿದ್ದಾರೆ.
ಕೇರಳ ಮಾಧ್ಯಮ ಲೋಕದಲ್ಲಿ ಇತಿಹಾಸ ಸೃಷ್ಟಿಸಿದವರು ಹೈದಿ ಸಾದಿಯಾ. ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಪತ್ರಕರ್ತೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾದ ಇವರು, ತಮ್ಮ ವೃತ್ತಿಜೀವನದಷ್ಟೇ ವೈಯಕ್ತಿಕ ಜೀವನದ ಕಾರಣಕ್ಕೂ ಅಂದು ಸುದ್ದಿಯಾಗಿದ್ದರು. ಟ್ರಾನ್ಸ್ಮೆನ್ ಆಗಿರುವ ಅಥರ್ವ್ ಮೋಹನ್ ಜೊತೆ ಹೈದಿ ಅವರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಆದರೆ, ಈ ಸುಂದರ ಸಂಬಂಧ ದೀರ್ಘಕಾಲ ಉಳಿಯಲಿಲ್ಲ. ಮದುವೆಯಾದ ಕೇವಲ 2 ವರ್ಷಗಳಲ್ಲೇ ಈ ಜೋಡಿ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾದರು. ಇದೀಗ, ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ಕೆ.ಬಿ. ಶಾರಿಕಾ ಜೊತೆಗಿನ ಸಂದರ್ಶನದಲ್ಲಿ ಹೈದಿ ಸಾದಿಯಾ ತಮ್ಮ ವಿಚ್ಛೇದನದ ಹಿಂದಿನ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಸಂದರ್ಶನದಲ್ಲಿ ತಮ್ಮ ದಾಂಪತ್ಯ ಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಹೈದಿ, 'ನನ್ನ ಓದು ಮುಗಿದ ತಕ್ಷಣ, ತುಂಬಾನೇ ಚಿಕ್ಕ ವಯಸ್ಸಿನಲ್ಲಿ ಈ ಮದುವೆ ನಡೆಯಿತು. ನನಗೂ ಆ ವ್ಯಕ್ತಿಗೂ (ಅಥರ್ವ್) ಸಾಕಷ್ಟು ವಯಸ್ಸಿನ ಅಂತರವಿತ್ತು. ಪ್ರತಿಯೊಂದು ವಿಚಾರದಲ್ಲೂ ನಾವು ಬೇರೆ ಬೇರೆ ಆಲೋಚನೆಯಲ್ಲಿದ್ದೆವು. ನನ್ನ ಇಷ್ಟಗಳಿಗೆ ಅವರು ಯಾವತ್ತೂ ಮ್ಯಾಚ್ ಆಗುತ್ತಿರಲಿಲ್ಲ. ರೊಮ್ಯಾಂಟಿಕ್ ಆಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ನಮ್ಮಿಬ್ಬರ ನಡುವೆ ಯಾವುದೇ ಕನೆಕ್ಷನ್ ಇರಲಿಲ್ಲ. ಒಂದು ಸಂಬಂಧದಲ್ಲಿ ಕನೆಕ್ಷನ್ ಇದ್ದರೆ ಮಾತ್ರ ಮದುವೆಯಾಗಬೇಕು ಅನ್ನೋದು ನನಗೆ ಅಂದು ತಿಳಿದಿರಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ವಿಚ್ಛೇದನದ ಬಗ್ಗೆ ಮಾತನಾಡುತ್ತಾ ಹೈದಿ ಅತ್ಯಂತ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ. 'ನನ್ನ ಜೀವನದಲ್ಲಿ ವಿಚ್ಛೇದನ ಒಂದು ದೊಡ್ಡ ಪಾಠ ಕಲಿಸಿದೆ. ಅದರ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ. ನಾನು ಒಬ್ಬಳು ಹೆಮ್ಮೆಯ ಡಿವೋರ್ಸಿ (proud divorcée). 2020ರಲ್ಲಿ ನಮ್ಮ ಮದುವೆ ಆಗಿತ್ತು. 2021ರ ಹೊತ್ತಿಗೆ ಈ ಸಂಬಂಧ ಮುಂದೆ ಸಾಗಲ್ಲ ಅಂತ ನನಗೆ ಅನಿಸಿತ್ತು. 'ನಾವಿದನ್ನು ನಿಲ್ಲಿಸೋಣ' ಅಂತ ಆ ವ್ಯಕ್ತಿ ನನಗೆ ನೇರವಾಗಿ ಹೇಳದಿದ್ದರೂ, ಅವರ ನಡವಳಿಕೆಯಲ್ಲಿ ಅದು ಗೊತ್ತಾಗುತ್ತಿತ್ತು. ನಾವು ಯಾವತ್ತೂ ಒಂದಾಗಿ ಇರಲೇ ಇಲ್ಲ. ನಮ್ಮ ನಡುವೆ ದೈಹಿಕ ಸಂಬಂಧವೇ ಇರಲಿಲ್ಲ. ಮೊದಲ ದಿನದಿಂದ ಹಿಡಿದು ಬೇರೆಯಾಗುವ ದಿನದವರೆಗೂ ನಮ್ಮಿಬ್ಬರ ನಡುವೆ ಯಾವುದೇ ಭಾವನಾತ್ಮಕ ಸಂಬಂಧವೂ ಇರಲಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದಿದ್ದರೆ, ನಾನು ಆ ಸಂಬಂಧದಲ್ಲೇ ಉಳಿಯುತ್ತಿದ್ದೆ' ಎಂದು ವಿವರಿಸಿದ್ದಾರೆ.
ಮದುವೆಯ ನಂತರದ ದಿನಗಳು ಎಷ್ಟು ಕಷ್ಟಕರವಾಗಿದ್ದವು ಎಂಬುದಕ್ಕೆ ಹೈದಿ ನೀಡಿದ ಉದಾಹರಣೆ ಎಂತಹವರನ್ನೂ ದಂಗಾಗಿಸುತ್ತದೆ. 'ಮದುವೆಯಾದ ಮೇಲೆ ನಾವು ಆಲುವಾ ಮಣಪ್ಪುರಂ ಜಾತ್ರೆಯಲ್ಲಿ ಸೇರಿದ ಅಪರಿಚಿತರ ಹಾಗೆ ಒಂದೇ ಮನೆಯಲ್ಲಿದ್ದೆವು. ಒಂದು ಕಪ್ ಚಹಾ ಬೇಕೆಂದರೂ ನಾನು ಅವರಿಗೆ ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡಬೇಕಿತ್ತು. ಅಷ್ಟರಮಟ್ಟಿಗೆ ನಮ್ಮ ನಡುವೆ ಅಂತರವಿತ್ತು. ನಾನು ಜೀವನದಲ್ಲಿ ಹುಡುಕಿದ್ದು ಒಂದು ರೊಮ್ಯಾಂಟಿಕ್ ಆದ ಅಟ್ಯಾಚ್‌ಮೆಂಟ್, ಆದರೆ ಅದು ಅಲ್ಲಿ ಸಿಗಲೇ ಇಲ್ಲ. ಇಂದು ಆ ವ್ಯಕ್ತಿ ತುಂಬಾ ಖುಷಿಯಾಗಿದ್ದಾರೆ, ಸ್ವಂತ ಬ್ಯುಸಿನೆಸ್ ಶುರು ಮಾಡಿದ್ದಾರೆ ಮತ್ತು ಹೊಸ ಸಂಬಂಧದಲ್ಲೂ ಇದ್ದಾರೆ. ಅವರಿಗೆ ಒಳ್ಳೆಯದಾಗಲಿ, ನನಗೆ ಅಷ್ಟು ಸಾಕು' ಎಂದು ಹೈದಿ ಸಾದಿಯಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ, ಹೈದಿ ಸಾದಿಯಾ ಅವರ ಈ ಮಾತುಗಳು ಒಂದು ಸಂಬಂಧದಲ್ಲಿ ಭಾವನಾತ್ಮಕ ಮತ್ತು ದೈಹಿಕ ಕನೆಕ್ಷನ್ ಎಷ್ಟು ಮುಖ್ಯ ಎಂಬುದನ್ನು ಸಾರುತ್ತಿವೆ. ವಿಚ್ಛೇದನದ ನೋವಿನಿಂದ ಹೊರಬಂದು ಹೈದಿ ಈಗ ತಮ್ಮ ವೃತ್ತಿಜೀವನದತ್ತ ಗಮನ ಹರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.