ಬಿಗ್ಬಾಸ್ ಖ್ಯಾತಿಯ ನಟಿ ಯಮುನಾ ಶ್ರೀನಿಧಿ ಅವರು ಚಿನ್ನದ ಒಡವೆಯನ್ನು ಧರಿಸುವುದಿಲ್ಲ. 17ನೇ ವಯಸ್ಸಿನಲ್ಲಿ ನಡೆದ ಘಟನೆ ಹೇಗೆ ತಮ್ಮ ಬದುಕನ್ನೇ ಬದಲಿಸಿತು ಎನ್ನುವುದನ್ನು ತಿಳಿಸಿದ್ದಾರೆ ನಟಿ.
ಸೀರಿಯಲ್, ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಯಮುನಾ ಶ್ರೀನಿಧಿ ಸಾಕಷ್ಟು ಫೇಮಸ್ ಆಗಿದ್ದು ಬಿಗ್‌ಬಾಸ್‌ಗೆ ಬಂದ ಮೇಲೆ. ಸಿಂಪಲ್ ಸೀರೆ, ಮೈಮೈಲೆ ಒಂದೂ ಚಿನ್ನಾಭರಣಗಳು ಧರಿಸದೇ ಇರುವುದನ್ನು ಕೆಲವರು ಗಮನಿಸಿರಬಹುದು. ಇಷ್ಟು ದೊಡ್ಡ ನಟಿಯಾದರೂ, ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ, ಅತ್ಯಂತ ಶ್ರೀಮಂತರು ಎನಿಸಿಕೊಂಡವರ ಕಾರ್ಯಕ್ರಮಗಳಿಗೆ ಹೋದರೂ ಯಮುನಾ ಇದುವರೆಗೆ ಚಿನ್ನ ಧರಿಸಿದ್ದೇ ಇಲ್ಲ. ಅವರ ಮೈಮೇಲೆ ಒಂದೂ ಚಿನ್ನಾಭರಣ ಇಲ್ಲ. ಇದೀಗ ಅದರ ರೋಚಕ ಕಥೆಯನ್ನು ತೆರೆದಿಟ್ಟಿದ್ದಾರೆ. ಅದನ್ನು ಅವರ ಬಾಯಲ್ಲೇ ಕೇಳಿ...
'17ನೇ ವಯಸ್ಸಿನಲ್ಲಿ ಆಗಿರುವ ಕಥೆ ಇದು. ಅಮ್ಮನನ್ನು ಕರೆದುಕೊಂಡು ಒಂದು ಮದುವೆ ಹೋಗಿದ್ದೆ. ಮುಂದಿನ ಸಾಲಿನಲ್ಲಿ ನಾನು ಮತ್ತು ಅಮ್ಮ ಕುಳಿತಿದ್ವಿ. ಅಲ್ಲಿದ್ದವರು ನಮ್ಮನ್ನು ಎಬ್ಬಿಸಿ ಹಿಂದೆ ಕುಳ್ಳರಿಸಿದರು. ಈ ಜಾಗದಲ್ಲಿ ವಿಐಪಿಗಳು ಬರುತ್ತಾರೆ ಎಂದರು. ನಾನು ಮತ್ತು ಅಮ್ಮ ಅಲ್ಲಿಂದ ಎದ್ದು ಹಿಂಬದಿ ಹೋಗಿ ಕುಳಿತಿವೆ. ಏಕೆಂದರೆ ಅಲ್ಲಿ ಬರುವುದು ಯಾವುದೋ ಕ್ಷೇತ್ರದ ಗಣ್ಯರು, ಸಾಧಕರು ಇದ್ದಿರಬಹುದು ಎಂದು ನಾನು ಅಂದಾಜಿಸಿದ್ದೆ. ಅವರು ಬಂದಾಗ ಎಲ್ಲರೂ ರಿಸ್ಪೆಕ್ಟ್ ಕೊಟ್ಟರು. ಆಗಂತೂ ಅವರು ತುಂಬಾ ದೊಡ್ಡ ವ್ಯಕ್ತಿಗಳೇ ಇರಬೇಕು ಎಂದುಕೊಂಡೆ. ಇಂಥ ಸಾಧನೆ ಮಾಡಿದವರನ್ನು ನೋಡಿ ಅವರ ಅನುಭವ ಕೇಳುವ ಆಸೆಯಾಯಿತು. ಅದಕ್ಕಾಗಿ ಅಲ್ಲಿಗೆ ಹೋಗಿ ಕೆಲವರನ್ನು ವಿಚಾರಿಸಿದಾಗ ತಿಳಿದದ್ದು ಇಷ್ಟೇ. ಅವರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರಲ್ಲ, ಬದಲಿಗೆ ಆಗರ್ಭ ಶ್ರೀಮಂತರು ಅಷ್ಟೇ ಎಂದು. ಮೈಮೇಲೆ ಕೆಜಿಗಟ್ಟಲೆ ಚಿನ್ನವಿತ್ತು. ಅದನ್ನು ನೋಡಿ ನನಗೆ ಇವರಿಗಾಗಿ ನಮ್ಮನ್ನು ಹಿಂದಕ್ಕೆ ಕಳಿಸಿದ್ದಾ ಎಂದು ತುಂಬಾ ಬೇಸರವಾಯಿತು' ಎನ್ನುತ್ತಲೇ ಅಂದು ತಾಯಿಗೆ ಕೊಟ್ಟ ಮಾತನ್ನು ನೆನಪಿಸಿಕೊಂಡಿದ್ದಾರೆ ಯಮುನಾ.
ಮದುವೆಯ ಮೊದಲ ಹೆಜ್ಜೆ 'ಲಗ್ನ ಕಳಿಸುವ ಕಾರ್ಯ'ದ ವಿಡಿಯೋ ಶೇರ್ ಮಾಡಿದ ಸೀತಾರಾಮ ಪ್ರಿಯಾ
undefined
'ಅಂದು ನಾನು ನಿರ್ಧಾರ ಮಾಡಿಬಿಟ್ಟೆ. ಮೈಮೇಲೆ ಒಂದೇ ಒಂದು ಚಿನ್ನಾಭರಣ ಧರಿಸದೇ, ಅತ್ಯಂತ ಕಡಿಮೆ ದರದ ಸೀರೆಯಲ್ಲಿ ಹೋದರೂ ಜನರು ಕರೆದು ನನ್ನನ್ನು ಮುಂದಿನ ಸೀಟಿನಲ್ಲಿ ಕುಳ್ಳರಿಸುವಂಥ ಸಾಧನೆ ನಾನು ಮಾಡಬೇಕು, ಅದೇ ನನ್ನ ಧ್ಯೇಯ ಎಂದುಕೊಂಡೆ. ಅಮ್ಮನಿಗೂ ಅವತ್ತೇ ಮಾತುಕೊಟ್ಟು ಬಿಟ್ಟೆ. ಈ ಘಟನೆ ನನಗೆ ಅಷ್ಟೊಂದು ನೋವು ಕೊಟ್ಟಿತ್ತು. ಅಂದಿನಿಂದ ಇಂದಿನವರೆಗೂ ಒಂದೇ ಒಂದು ಚಿನ್ನದ ಒಡವೆ ಹಾಕಲ್ಲ. ಎಷ್ಟೇ ದೊಡ್ಡವರು ಎನಿಸಿಕೊಂಡವರ ಕಾರ್ಯಕ್ರಮ ಇದ್ದರೂ ಬೇಕಿದ್ದರೆ ನೂರು-ಇನ್ನೂರು ರೂಪಾಯಿ ಸೀರೆ ಧರಿಸಿ ಹೋಗುತ್ತೇನೆ. ಮನುಷ್ಯರನ್ನು ದುಡ್ಡಿನಿಂದ ಅಲ್ಲ, ಅವರ ಸಾಧನೆಯಿಂದ ಅಳೆಯಬೇಕು ಎಂದು ಈ ನಿರ್ಧಾರ ಮುಂದುವರೆಸಿಕೊಂಡು ಬಂದಿದ್ದೇನೆ. ಅದು ಫಲಪ್ರದವಾಗಿದೆ. ಈಗ ಎಲ್ಲಿಯೇ ಹೋದರೂ ಅಲ್ಲಿಯ ಜನರು ನನ್ನ ಒಡವೆ, ಸೀರೆ ನೋಡುವುದಿಲ್ಲ. ಪ್ರೀತಿಯಿಂದ ಮಾತನಾಡಿಸಿ, ಮುಂದೆ ಕರೆದುಕೊಂಡು ಹೋಗುತ್ತಾರೆ' ಎಂದಿದ್ದಾರೆ.
ಇಂದು ಎಷ್ಟೋ ಶಾಲಾ ಮಕ್ಕಳು ತಮ್ಮ ಬಳಿ ದುಡ್ಡಿಲ್ಲ, ಅಪ್ಪ-ಅಲ್ಲ ದುಡ್ಡು ಕೊಡಲ್ಲ, ಇಷ್ಟವಾದದ್ದನ್ನು ಖರೀದಿಸಲು ದುಡ್ಡು ಇಲ್ಲ, ನಾವು ಅವರಂತೆ ಶ್ರೀಮಂತರಲ್ಲ ಎನ್ನುವ ಕಾರಣಕ್ಕೆ ಒತ್ತಡ, ಖಿನ್ನತೆಗೆ ಜಾರುವುದನ್ನು ನಾನು ಅವರ ಜೊತೆ ಸಂವಹನ ಮಾಡುವಾಗ ನೋಡಿದ್ದೇನೆ. ಅದಕ್ಕಾಗಿಯೇ ಹಲವು ಶಾಲೆಗಳಿಗೆ ಭೇಟಿ ಕೊಟ್ಟು ನನ್ನದೇ ಉದಾಹರಣೆ ನೀಡಿ ಅವರಿಗೆ ಜೀವನ ಸ್ಫೂರ್ತಿ ತುಂಬುತ್ತಿದ್ದೇನೆ. ದುಡ್ಡು ಮುಖ್ಯವಲ್ಲ, ಸಾಧನೆ ಮುಖ್ಯ ಎಂದು ಮನವರಿಕೆ ಮಾಡಿಕೊಡುತ್ತಿದ್ದೇನೆ ಎಂದಿದ್ದಾರೆ.
ಅಂದಹಾಗೆ ಯಮುನಾ ಶ್ರೀನಿಧಿ ಕುರಿತು ಹೇಳುವುದಾದರೆ, ಇವರು ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಭರತನಾಟ್ಯ ಕಲಾವಿದೆಯೂ ಹೌದು. 'ತಾರಕ್' ಚಿತ್ರದಲ್ಲಿಯೂ ನಟಿಸಿರುವ ಇವರು 'ಅಶ್ವಿನಿ ನಕ್ಷತ್ರ', 'ಅಮೃತ ವರ್ಷಿಣಿ', 'ಒಂದೂರಲ್ಲಿ ರಾಜಾ ರಾಣಿ', 'ಮದುಮಗಳು', 'ಸಾಕ್ಷಿ', 'ತ್ರಿವೇಣಿ ಸಂಗಮ', 'ನಾಗಕನ್ನಿಕೆ', 'ಕಮಲಿ', 'ಮನಸಾರೆ', 'ಕನ್ಯಾಕುಮಾರಿ' ಸೇರಿ ಅನೇಕ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಅಮೆರಿಕದಲ್ಲಿ ಹಲವು ವರ್ಷಗಳು ನೆಲೆಸಿದ್ದ ಯಮುನಾ ಇವತ್ತಿಗೂ ಅಲ್ಲಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ನೃತ್ಯ ತರಬೇತು ನೀಡುತ್ತಾರೆ. ಯಮುನಾ ಬಹಳ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದು, ಕರೋನಾ ಟೈಮಲ್ಲಿ ರಕ್ತದಾನ ಮಾಡಿದ್ದಲ್ಲದೇ, ಅದರ ಬಗ್ಗೆ ಅರಿವು ಮೂಡಿಸಿದ್ದರು. ಕಳೆದ 7 ವರ್ಷಗಳಿಂದ ಸುಮಾರು 10 ಸಾವಿರ ಎನ್‌ಸಿಸಿ ಕೆಡೆಟ್‌ಗಳಿಗೆ ಮತ್ತು 6 ಸಾವಿರ ಗ್ರಾಮೀಣ ವಿದ್ಯಾರ್ಥಿಗಳಿಗೆ ಜೀವನ ಕೌಶಲಗಳ ತರಬೇತಿ ನೀಡಿದ್ದಾರೆ. ಈ ಮೂಲಕ ಆರ್ಥಿಕವಾಗಿ ಹಿಂದುಳಿದ ಅನೇಕ ವಿದ್ಯಾರ್ಥಿಗಳಿಗೆ ಹಣಕಾಸಿನ ಬೆಂಬಲ ನೀಡಿದ್ದಾರೆ. ಯಮುನಾ ಶ್ರೀನಿಧಿ ತಂದೆಯೂ ಶಿಕ್ಷಕರಾಗಿದ್ದು ಅವರ ಗೌರವಾರ್ಥವಾಗಿ 'ಫ್ರೋ. ಕೃಷ್ಣೇಗೌಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ' ಆರಂಭಿಸಿದ್ದಾರೆ.
ರಾಜಕೀಯ ಕೋಲಾಹಲ... ಇನ್ನಾರು ತಿಂಗಳಲ್ಲಿ... ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಸ್ಫೋಟಕ ಭವಿಷ್ಯ...