ಬಿಗ್‌ಬಾಸ್ ಮನೆಯ ಗೋಡೆ ಹಾರಿಕೊಂಡು ಹೋಗೋ ಪ್ಲ್ಯಾನ್! ವೈರಲ್ ಆಯ್ತು ವರ್ತೂರು ಸಂತೋಷ್ ಚರ್ಚೆ
ಬಿಗ್‌ಬಾಸ್ ಮನೆಯಲ್ಲಿ ನಡೆಯುವುದೆಲ್ಲವೂ ಹೈಡ್ರಾಮಾಗಳೇ ಎನ್ನುವುದು ಬಹುತೇಕರ ಅಭಿಪ್ರಾಯ. ಇಲ್ಲಿ ಏನೇ ನಡೆದರೂ, ಯಾವುದೇ ಕೃತ್ಯ ಜರುಗಿದರೂ ಅದು ಎಲ್ಲವೂ ಅಚಾನಕ್ ಆಗಿ ನಡೆಯುವಂಥದ್ದು ಎಂದು ಬಿಗ್‌ಬಾಸ್ ಪ್ರಿಯರೆಲ್ಲಾ ಅಂದುಕೊಂಡಿದ್ದರೂ ಅದರಲ್ಲಿ ಎಲ್ಲವೂ ಸ್ಕ್ರಿಪ್ಟೆಡ್ ಅಂದರೆ ಹೇಳಿ ಮಾಡಿಸಿರುವುದು ಎಂಬುದಾಗಿ ಬಿಗ್‌ಬಾಸ್ ಮನೆಯಿಂದ ಈ ಹಿಂದೆ ಹೊರಬಂದಿರುವ ಹಲವು ಸ್ಪರ್ಧಿಗಳು ಹೇಳಿದ್ದುಂಟು. ಅಳುವುದು, ಕಿರುಚಾಡುವುದು, ಹೊರಗಡೆ ಇದ್ದಾಗ ಕುಟುಂಬದವರ ಬಳಿ ಸುಳಿಯದೇ ಇದ್ದವರು ಬಿಗ್‌ಬಾಸ್ ಮನೆಯೊಳಕ್ಕೆ ಹೋಗುತ್ತಿದ್ದಂತೆಯೇ ಅವರು ನೆನಪಾಗುತ್ತಾರೆ, ಇವರು ನೆನಪಾಗುತ್ತಾರೆ ಎಂದು ತಾವೂ ಅಳುವುದು ಅಲ್ಲದೇ, ಪ್ರೇಕ್ಷಕರನ್ನೂ ಅಳಿಸುವುದು, ಅದಕ್ಕೆ ಮತ್ತೊಂದಿಷ್ಟು ಮಂದಿ ಸಮಾಧಾನ ಮಾಡಿದಂತೆ ಮಾಡುವುದು... ಹೀಗೆ ಎಲ್ಲವೂ ಇಲ್ಲಿ ಮೊದಲೇ ನಿಗದಿಯಾಗಿರುತ್ತದೆ ಎಂದು ಬೇರೆ ಬೇರೆ ಭಾಷೆಗಳ ಸ್ಪರ್ಧಿಗಳೂ ಹೇಳಿದ್ದಾರೆ. ಅದರ ಸತ್ಯಾಸತ್ಯತೆ ಏನೋ ಗೊತ್ತಿಲ್ಲ. ಆದರೆ ಇದೀಗ, ಬಿಗ್‌ಬಾಸ್ 10 ಸೀಸನ್ನಲ್ಲಿ ಈಗ ವರ್ತೂರು ಸಂತೋಷ್ ಅವರ ಹೊಸ ಸ್ಟೋರಿ ಶುರುವಾಗಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಹುಲಿ ಉಗುರು ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನು ಸಿಕ್ಕ ಬಳಿಕ ಮತ್ತೆ ಬಿಗ್‌ಬಾಸ್ ಮನೆಗೆ ಹೋಗಿರುವ ವರ್ತೂರ್ ಸಂತೋಷ್ ಅವರು ಸಕತ್ ಸದ್ದು ಮಾಡುತ್ತಿದ್ದಾರೆ. ಇವರಿಗೆ 34 ಲಕ್ಷದ 15 ಸಾವಿರದ 472 ವೋಟುಗಳು ಬಂದಿದ್ದು, ಸೇಫ್ ಆಗಿದ್ದರೂ ಸಂತೋಷ್ ಯಾವುದೋ ಕಾರಣ ನೀಡಿ ಬಿಗ್ಬಾಸ್ನಿಂದ ಹೊರಕ್ಕೆ ಹೋಗುವ ಮಾತು ಆಡಿದ್ದರು. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದರು. ಹೋಗಬೇಡಿ ಎಂದು ಅವರನ್ನು ಎಷ್ಟು ಒಲಿಸಿದರೂ ಸಂತೋಷ್ ಮಾತ್ರ ನನಗೆ ಆಗ್ತಾ ಇಲ್ಲ ಅಣ್ಣಾ ಎಂದು ಅತ್ತರು. ಸುದೀಪ್ ಅವರೂ ಸಮಾಧಾನ ಮಾಡಿ ಅವರಿಗೆ ಬಿದ್ದಿರುವ ವೋಟಿನ ಪ್ರಮಾಣ ಹೇಳಿದರೂ ಸಂತೋಷ್ ಮಾತ್ರ ಕೇಳಲಿಲ್ಲ. ನಂತರ ಸುದೀಪ್ ಜನಗಳ ವಿರುದ್ಧವಾಗಿ ನಾನು ಹೋಗಲ್ಲ. ಹೋಗೋದು ಇಲ್ಲ. ನಾನು ನಿಮ್ಮ ನಿರ್ಧಾರಕ್ಕೆ ತುಂಬಾ ಡಿಸಪಾಯಿಂಟೆಡ್ ಆಗಿದ್ದೇನೆ ಎಂದು ಹೇಳಿದರು.
ವರ್ತೂರ್ ಸಂತೋಷ್‌ನ ಉಳಿಸಿಕೊಳ್ಳಲು ಬಿಗ್ ಬಾಸ್ ಮನೆಗೆ ಕಾಲಿಟ್ಟ ಭಾಗ್ಯ; ನೆಟ್ಟಿಗರಿಂದ ಆಕ್ರೋಶ!
ನಂತರ ಅವರ ಮನಸ್ಸು ಒಲಿಸಲು ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಎಂಟ್ರಿ ಕೊಟ್ಟರು. ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ ಬಾಸ್ ಮನೆಯೊಳಗೆ ಭಾಗ್ಯಲಕ್ಷ್ಮಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಭಾಗ್ಯ ಎಂಟ್ರಿ ಕೊಟ್ಟು 'ನಿನ್ನ ಸಹೋದರಿ ರೀತಿಯಲ್ಲಿ ನಿನ್ನ ಜೊತೆ ಮಾತನಾಡುತ್ತಿರುವೆ. ನಿನ್ನ ಕೈಯಲ್ಲಿ ಆಗುತ್ತಿಲ್ಲ ಆಗೋಲ್ಲ ಅನ್ನೋ ಮಾತುಗಳನ್ನು ನಿನ್ನ ತಲೆಯಿಂದ ಹೊರ ತೆಗೆಯಬೇಕು' ಎಂದು ಭಾಗ್ಯ ಕಿವಿ ಮಾತು ಹೇಳಿದರು. ಆಗ 'ಒಂದೊಂದು ನಿಮಿಷನೂ ನರಳಾಟದ ತರ ಆಗಿಬಿಟ್ಟಿದೆ' ಎಂದು ವರ್ತೂರ್ ಹೇಳುತ್ತಾರೆ. 'ಒಬ್ಬ ಮನುಷ್ಯರನ್ನು ಉಳಿಸಿಕೊಳ್ಳುತ್ತಿದ್ದೀವಿ ಅಂದ್ರೆ ನಿನ್ನಲ್ಲಿರುವ ಒಳ್ಳೆ ತನಕ್ಕೆ ಎಂದು' ತುಕಾಲಿ ಸಂತೋಷ್ ಹೇಳುತ್ತಾರೆ. 'ನಿನಗೆ ನಾವು ಏನಾದರೂ ಮಾಡಿದ್ವಾ?' ಎಂದು ವಿನಯ್ ಕೂಡ ಪ್ರಶ್ನೆ ಮಾಡುತ್ತಾರೆ. ಡ್ರೋನ್ ಪ್ರತಾಪ್ ಎಷ್ಟೇ ಒತ್ತಾಯ ಮಾಡಿದರೂ ವರ್ತೂರ್ ಸಂತೋಷ್ ನೀರು ಕುಡಿಯುವುದಿಲ್ಲ ಹಾಗೂ ಊಟ ಮಾಡುವುದಿಲ್ಲ ಹೊರ ಹೋಗಲೇ ಬೇಕು ಎಂದು ಹಠ ಮಾಡಿ ಕುಳಿತುಕೊಂಡರು. ನಂತರ, ವರ್ತೂರ್ ಸಂತೋಷ್ ಅವರ ಅಮ್ಮ ಬುತ್ತಿ ಹಿಡಿದು ಒಳಗೆ ಬಂದು 'ಕಂದಾ' ಎಂದು ಕರೆದು ತುತ್ತು ನೀಡಿದರು.
ಇಷ್ಟೆಲ್ಲಾ ಆದ ಬಳಿಕ ಈಗ ಇನ್ನೊಂದು ಪ್ರೋಮೋ ರಿಲೀಸ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ನಾನು ಇರೋದಿಲ್ಲ ನನ್ನನ್ನು ಹೊರಗೆ ಕಳಿಸಿ ಎಂದು ಹಠ ಹಿಡಿದಿರುವ ವರ್ತೂರ್ ಸಂತೋಷ್, ಮನೆಯಿಂದ ಏನು ಮಾಡಿದ್ರೆ ಹೊರಗೆ ಹೋಗಬಹುದು ಎಂದು ಯೋಚಿಸುತ್ತಿದ್ದಾರೆ. ಈ ಬಗ್ಗೆ ತುಕಾಲಿ ಸಂತು ಹಾಗೂ ಡ್ರೋನ್ ಪ್ರತಾಪ್ ಜೊತೆ ಚರ್ಚೆ ಮಾಡುತ್ತಿದ್ದಾರೆ. ವರ್ತೂರ್ ಸಂತೋಷ್‌ಗೆ ತುಕಾಲಿ ಸಂತು ಬಿಗ್ ಬಾಸ್ ಮನೆಯ ಗೋಡೆ ಹಾರುವ ಬಗ್ಗೆ ಐಡಿಯಾ ಕೊಟ್ಟಿದ್ದಾರೆ. ಮನೆಯಲ್ಲಿರುವ ಮಹಿಳೆಯರ ಸೀರೆಯನ್ನು ಕಟ್ಟಿ ಗೋಡೆ ಹಾರಿ ಹಾಗೇ ಮನೆಗೆ ಹೋಗು ಎಂದಿದ್ದಾರೆ. ಓಡಿ ಹೋಗು, ಅಲ್ಲಿ ಮರ ಇದೆ ಅದನ್ನು ಹತ್ತು. ನಂತರ ಎಳ್ಳುನೀರು ಕುಡಿದು ಜಂಪ್ ಮಾಡು ಎಂದು ಹೇಳಿದ್ದಾರೆ. ಆಗ ಸಂತೋಷ್, ನಿಮ್ಮರಿಗೂ ಹೊಡೆದ್ರೆ ಸಾಕು ಅವರೇ ನನ್ನನ್ನು ಹೊರಗೆ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ. ಮುಂದೇನಾಗುತ್ತದೆಯೋ ಎಂದು ನೋಡಲು ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.
ವರ್ತೂರ್ ಸಂತೋಷ್‌ಗೆ ಸಿಕ್ತು ಅಮ್ಮನ ಕೈತುತ್ತು! ಜನಮತಕ್ಕಲ್ಲದಿದ್ದರೂ ಮಾತೆಯ ಮಾತಿಗೆ ತಲೆ ಬಾಗ್ತಾರಾ?