ಬಿಗ್ ಬಾಸ್ ಮನೆಯಲ್ಲಿ ತಲೆ ಮೇಲೆ ಕೈಹೊತ್ತು ಕುಳಿತ ಹನುಮಂತ, ಮುಗ್ಧನ ಮೇಲೆ ಮೃಗಗಳ ದಾಳಿ ಎಂದ ಫ್ಯಾನ್ಸ್‌

By Roopa Hegde  |  First Published Oct 21, 2024, 10:22 AM IST

ಬಿಗ್ ಬಾಸ್ ಮನೆಯಿಂದ ಜಗದೀಶ್ ಹೊರಗೆ ಬರ್ತಿದ್ದಂತೆ ಹನುಮಂತನ ಎಂಟ್ರಿಯಾಗಿದೆ. ಆದ್ರೆ ಹನುಮಂತ ಹಾಗೂ ಜಗದೀಶ್ ಗೆ ಅಜಗಜಾಂತರ ವ್ಯತ್ಯಾಸವಿದ್ದು, ಮುಗ್ಧ ಹುಡುಗನ ಮೇಲೆ ಬಿಗ್ ಬಾಸ್ ಸ್ಪರ್ಧಿಗಳು ಮುಗಿಬಿದ್ದಿದ್ದಾರೆ. 
 


ಬಿಗ್ ಬಾಸ್ ಮನೆ (Bigg Boss house) ಯಲ್ಲಿ ಸರಿಗಮಪ (Sa re ga ma pa) ಘಮ ಶುರುವಾಗುತ್ತೆ ಅಂದ್ಕೊಂಡ ವೀಕ್ಷಕರು ಮತ್ತೆ ಬೇಸರಗೊಂಡಿದ್ದಾರೆ. ಜೀ ಕನ್ನಡ (Zee Kannada ) ಸರಿಗಮಪ ಖ್ಯಾತಿಯ ಹನುಮಂತ ಲಮಾಣಿ (Hanumanta Lamani), ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹನುಮಂತ ಅವರ ವೈಲ್ಡ್ ಕಾರ್ಡ್ ಎಂಟ್ರಿ ನೋಡಿ ಫ್ಯಾನ್ಸ್ ಖುಷಿಯಾಗಿದ್ದರು. ಇವರ ಬಾಯಿಂದ ಸುಂದರ ಹಾಡುಗಳನ್ನು ಕೇಳುವ ಅವಕಾಶ ಸಿಗುತ್ತೆ ಅಂದ್ಕೊಂಡಿದ್ದರು. ಆದ್ರೆ ಹನುಮಂತನ ತಲೆ ಮೇಲೆ ಬಿಗ್ ಬಾಸ್ ಏಕಾಏಕಿ ಒಂದಿಷ್ಟು ಭಾರ ಹೊರಿಸಿದ್ದಾರೆ. ಬಿಗ್ ಬಾಸ್ ಮನೆಯಂಥ ಝಗಮಗಿಸುವ ಮನೆಯನ್ನು ಮೊದಲ ಬಾರಿ ನೋಡಿರುವ ಹನುಮಂತನಿಗೆ ಅಲ್ಲಿನ ಐಷಾರಾಮಿ ವ್ಯವಸ್ಥೆಗೆ ಹೊಂದಿಕೊಳ್ಳಲು ಕೆಲ ದಿನ ಬೇಕು. ಆದ್ರೆ ಬಿಗ್ ಬಾಸ್ ಬರ್ತಿದ್ದಂತೆ ಕ್ಯಾಪ್ಟನ್ ಪಟ್ಟ ನೀಡಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ನಿನ್ನೆ ಬಿಗ್ ಬಾಸ್ ಮನೆಯ ನಾಯಕರಾದ ಹನುಮಂತ, ಮನೆ ಸದಸ್ಯರಿಗೆ ಜವಾಬ್ದಾರಿ ಹಂಚಲು ಸ್ವಲ್ಪ ಹೆಣಗಾಡಿದ್ದರು. ಆ ನಂತ್ರ ತಮ್ಮ ಸುಂದರ ಕಂಠದಿಂದ ಒಂದು ಹಾಡನ್ನು ಹಾಡಿ ಮನೆಯವರನ್ನು ರಂಜಿಸಿದ್ದರು. ಆದ್ರೆ ಇಂದು ಬಿಗ್ ಬಾಸ್ ಮನೆಯಲ್ಲಿ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಹನುಮಂತ ನೀಡಿದ ಸ್ಥಾನವನ್ನು ಬಿಗ್ ಬಾಸ್ ಸ್ಪರ್ಧಿಗಳು ಒಪ್ಪಿಕೊಳ್ತಿಲ್ಲ. ಅವರ ಜಗಳ ನೋಡಿ ಹನುಮಂತ ಕಂಗಾಲಾಗ್ತಾರೆ.

Tap to resize

Latest Videos

ಬಿಗ್ ಬಾಸ್ 11 ಮನರಂಜನೆ ಕಡಿಮೆ, ವಿವಾದ ಜಾಸ್ತಿ: ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಗಾಯಕ ಹನುಮಂತು ಎಂಟ್ರಿ!

ಹನುಮಂತ ಕೊಟ್ಟ ಸ್ಥಾನ, ಬುಗಿಲೆದ್ದ ಅಸಮಾಧಾನ ಎನ್ನುವ ಶೀರ್ಷಿಕೆಯಲ್ಲಿ ಕಲರ್ಸ್ ಕನ್ನಡ, ಬಿಗ್ ಬಾಸ್ ಪ್ರೋಮೋ ಪೋಸ್ಟ್ ಮಾಡಿದೆ. ಹನುಮಂತ ಚೈತ್ರಾರವರಿಗೆ 13ನೇ ಸ್ಥಾನ ನೀಡಿದ್ರೆ, ಭವ್ಯ ಗೌಡಗೆ 7ನೇ ಸ್ಥಾನ ನೀಡ್ತಾರೆ. ಇನ್ನು ಧರ್ಮ 9ನೇ ಸ್ಥಾನದಲ್ಲಿದ್ರೆ ಅನುಷಾಗೆ 8ನೇ ಸ್ಥಾನ ನೀಡಿದ್ದಾರೆ.  ತ್ರಿವಿಕ್ರಮ್ ಗೆ 12ನೇ ಸ್ಥಾನ ನೀಡಿದ್ದು, ಮೊದಲನೇ ಸ್ಥಾನವನ್ನು ಶಿಶಿರ್ ಗೆ ನೀಡಿದ್ದಾರೆ. ಈ ಸ್ಥಾನ ಬಿಗ್ ಬಾಸ್ ಮನೆಯವರನ್ನು ಅಸಮಾಧಾನಗೊಳಿಸಿದೆ. ನನಗೆ ಯಾಕೆ ಈ ಸ್ಥಾನ ನೀಡಿದ್ರಿ ಎಂದು ಒಬ್ಬರಾದ್ಮೇಲೆ ಒಬ್ಬರಂತೆ ಪ್ರಶ್ನೆ ಮಾಡ್ತಿದ್ದರೆ, ಹನುಮಂತ ಗೊಂದಲಕ್ಕೀಡಾಗ್ತಾರೆ. ಯಾರಿಗೆ ಉತ್ತರ ನೀಡಬೇಕು ಎಂಬುದು ಅವರಿಗೆ ತಿಳಿಯೋದಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಗಲಾಟೆ ಹೆಚ್ಚಾಗ್ತಿದ್ದಂತೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಹನುಮಂತ, ಇಷ್ಟೆಲ್ಲ ಗಲಾಟೆ ಆಗುತ್ತೆ ಅಂತ ತಿಳಿದಿದ್ದರೆ ನಾನು ಬರ್ತಾನೆ ಇರ್ಲಿಲ್ಲ ಎನ್ನುತ್ತಾರೆ. ಅಷ್ಟೇ ಅಲ್ಲ, ನನ್ನ ಕ್ಯಾಪ್ಟನ್ಸಿ ಕ್ಯಾನ್ಸಲ್ ಮಾಡಿ ಎನ್ನುತ್ತಾರೆ. 

ಅಪ್ಪು ವೈರಲ್ ವೀಡಿಯೋ ಕಥೆಯೇನು, ಗುರುಪ್ರಸಾದ್ ಮಾತಿಗೆ ಪುನೀತ್ ಯಾಕೆ ಸುಳ್ಳು

ಇನ್ಸ್ಟಾ ಈ ವಿಡಿಯೋ ನೋಡಿದ ವೀಕ್ಷಕರು, ಹನುಮಂತನ ಮೇಲೆ ಕರುಣೆ ತೋರಿದ್ದಾರೆ. ಹನುಮಂತ ಮುಗ್ದ. ಬಿಗ್ ಬಾಸ್ ಮನೆಗೆ ಕರೆಯಿಸಿ ಅವರ ಮುಗ್ದತೆ ಹಾಳು ಮಾಡ್ಬೇಡಿ ಎಂದು ಮನವಿ ಮಾಡಿದ್ದಾರೆ. ಕೆಲವರು ಹನುಮಂತ ನೀಡಿದ ಸ್ಥಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಯೋಗ್ಯತೆಗೆ ತಕ್ಕಂತೆ ಹನುಮಂತ ಸ್ಥಾನ ನೀಡಿದ್ದಾರೆ ಎಂದಿದ್ದಾರೆ. ಬಣ್ಣ ಹಚ್ಚಿಕೊಂಡು ನಾಟಕ ಮಾಡುವ ಜನರ ಮಧ್ಯೆ ಹಳ್ಳಿ ಹುಡುಗ, ಮುಗ್ಧ ಹನುಮಂತನಿಗೆ ಬೆಲೆ ಇಲ್ಲದಂತಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಜಗದೀಶ್ ಅವರನ್ನೇ ಬಿಡದ ಸ್ಪರ್ಧಿಗಳು, ಹನುಮಂತನನ್ನು ಬಿಡ್ತಾರಾ, ಪಾಪದ ಹನುಮಂತನನ್ನು ಬಲಿಪಶು ಮಾಡೋ ಪ್ಲಾನ್, ಹನುಮಂತ ಅವರಿಗೆ ಇನ್ನೂ ಮನೆ ಬಗ್ಗೆ ತಿಳಿದಿಲ್ಲ. ಈಗ ನಿಮ್ಮ ಬಿಲ್ಡಪ್ ಅವಶ್ಯಕತೆ ಇಲ್ಲ ಎಂದು ಬಹುತೇಕ ವೀಕ್ಷಕರು ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಗ್ಧ ಜೀವಿ ಕರೆದುಕೊಂಡು ಹೋಗಿ ಮೃಗಗಳ ಮಧ್ಯೆ ಬಿಟ್ಟ ಹಾಕಾಗಿದೆ, ಕುರಿಕಾಯುವ ಹುಡುಗನನ್ನೇ ಕುರಿಮಾಡಿ ಕಟುಕರ ಕೈಗೆ ಬಿಟ್ಟಿದ್ದಾರೆ ಹೀಗೆ ನಾನಾ ಕಮೆಂಟ್ ಗಳು ಬಂದಿದ್ದು, ಹನುಮಂತನ ಪರ ವೀಕ್ಷಕರು ಬ್ಯಾಟ್ ಬೀಸಿದ್ದಾರೆ.  

click me!