
'ನಾನು ಕನ್ನಡಿಗ ಅಂತ ಹೇಳಿಕೊಳ್ಳೋಕೆ ನಾಚಿಕೆ ಆಗ್ತಿದೆ!'.. 'ಕನ್ನಡ ಕಂದ' ಮೈಕಲ್ ಅಜಯ್ ಸಡನ್ ಆಗಿ ಹೀಗೆ ಹೇಳಿದ್ದೇಕೆ?
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಒಬ್ಬ ಸ್ಪರ್ಧಿ ಎಲ್ಲರ ಗಮನ ಸೆಳೆದಿದ್ದರು. ಅವರೇ ಮೈಕಲ್ ಅಜಯ್. ತನ್ನ ವಿಭಿನ್ನ ಲುಕ್, ಫಿಟ್ನೆಸ್ ಮತ್ತು ಕನ್ನಡದ ಮೇಲಿರುವ ಪ್ರೀತಿಯಿಂದ 'ಮಣ್ಣಿನ ಮಗ', 'ಕನ್ನಡ ಕಂದ' ಎಂದೇ ಖ್ಯಾತಿ ಪಡೆದಿದ್ದರು. ತಂದೆ ನೈಜೀರಿಯನ್ ಮೂಲದವರಾದರೂ, ಮೈಕಲ್ (Michael Ajay) ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಹಾಗಾಗಿ ತಮ್ಮನ್ನು ತಾವು ಕನ್ನಡಿಗ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದ ಮೈಕಲ್, ಇದೀಗ ಅದೇ ಕನ್ನಡಿಗರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, "ನಾನು ಕನ್ನಡಿಗ ಅಂತ ಹೇಳಿಕೊಳ್ಳೋಕೆ ನಾಚಿಕೆ ಆಗ್ತಿದೆ" ಎಂದು ಹೇಳುವ ಮೂಲಕ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ!
ಯಾರೀ ಮೈಕಲ್ ಅಜಯ್?
ಮೊದಲೇ ಹೇಳಿದಂತೆ ಮೈಕಲ್ ಅಜಯ್ ಹಾಫ್ ಇಂಡಿಯನ್ ಮತ್ತು ಹಾಫ್ ನೈಜೀರಿಯನ್. ಎಂಟಿವಿ ರೋಡಿಸ್ ಮೂಲಕ ಮಿಂಚಿದ್ದ ಮೈಕಲ್, ನಂತರ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಮನೆಯೊಳಗೆ ಕನ್ನಡ ಕಲಿಯಲು ಅವರು ಪಟ್ಟ ಶ್ರಮ ಮತ್ತು ಅವರ ವ್ಯಕ್ತಿತ್ವಕ್ಕೆ ಕನ್ನಡಿಗರು ಫಿದಾ ಆಗಿದ್ದರು. ಬಿಗ್‌ಬಾಸ್ ನಂತರ ಮೈಕಲ್ ಸೋಷಿಯಲ್ ಮೀಡಿಯಾದಲ್ಲಿ ಫಿಟ್ನೆಸ್ ಮತ್ತು ಲೈಫ್‌ಸ್ಟೈಲ್ ಬಗ್ಗೆ ಕಂಟೆಂಟ್ ಕ್ರಿಯೇಟ್ ಮಾಡುತ್ತಾ ದೊಡ್ಡ ಫಾಲೋಯಿಂಗ್ ಸಂಪಾದಿಸಿದ್ದಾರೆ.
ಇತ್ತೀಚೆಗೆ ಮೈಕಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು ತಮ್ಮ ಮನದ ಬೇಸರವನ್ನು ಹೊರಹಾಕಿದ್ದಾರೆ. "ನನಗೆ ಭಾರತದಾದ್ಯಂತ ಮತ್ತು ವಿದೇಶಗಳಲ್ಲೂ ಫಾಲೋವರ್ಸ್ ಇದ್ದಾರೆ. ನಾನು ಹಾಕುವ ಪ್ರತಿಯೊಂದು ವಿಡಿಯೋ ಕೂಡ ಡೀಸೆಂಟ್ ಆಗಿರುತ್ತದೆ. ಯಾವುದೇ ಅಶ್ಲೀಲತೆ ಇರುವುದಿಲ್ಲ. ಆದರೆ, ನನ್ನ ಕಾಮೆಂಟ್ ಸೆಕ್ಷನ್ ಓಪನ್ ಮಾಡಿದರೆ ಸಾಕು, ಅಲ್ಲಿ ಬರುವ ಕೆಟ್ಟ ಕಾಮೆಂಟ್‌ಗಳನ್ನು ನೋಡಿ ನನಗೆ ವಾಕರಿಕೆ ಬರುತ್ತದೆ" ಎಂದು ಗುಡುಗಿದ್ದಾರೆ.
ಕನ್ನಡಿಗರಿಂದಲೇ ಟ್ರೋಲ್ ಆಗ್ತಿರೋದು ದೊಡ್ಡ ನೋವು!
ಮೈಕಲ್ ಅವರ ನೋವಿಗೆ ಮುಖ್ಯ ಕಾರಣ ಟ್ರೋಲ್ ಮಾಡುವವರು ಬೇರೆ ಯಾರೂ ಅಲ್ಲ, ನಮ್ಮ ಕನ್ನಡಿಗರೇ ಆಗಿರುವುದು! "ನನಗೆ ಕನ್ನಡ ಓದಲು ಬರುವುದಿಲ್ಲ ಎಂಬುದು ನಿಜ. ಆದರೆ ಕಾಮೆಂಟ್ ನೋಡಿದ ಕೂಡಲೇ ಅದು ಕನ್ನಡದ ಬ್ಯಾಡ್ ವರ್ಡ್ಸ್ ಎಂದು ನನಗೆ ಅರ್ಥವಾಗುತ್ತದೆ. ಬೇರೆ ರಾಜ್ಯದವರು ಅಥವಾ ಬೇರೆ ದೇಶದವರು ಯಾರೂ ಈ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡುವುದಿಲ್ಲ. ಆದರೆ ನನ್ನದೇ ರಾಜ್ಯದವರು, ಕನ್ನಡಿಗರೇ ನನ್ನ ಮೇಲೆ ಪದೇ ಪದೇ ಕೀಳು ಮಟ್ಟದ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿರುವುದು ನೋಡಿ ಅಸಹ್ಯವಾಗುತ್ತಿದೆ" ಎಂದಿದ್ದಾರೆ ಮೈಕಲ್.
"ಒಬ್ಬ ಮನುಷ್ಯ ತನಗೆ ಇಷ್ಟ ಬಂದ ಕಂಟೆಂಟ್ ಮಾಡುವ ಸ್ವಾತಂತ್ರ್ಯ ಇರುತ್ತದೆ. ನಾನು ಫಿಟ್ನೆಸ್ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. ಒಂದು ವೇಳೆ ನನ್ನ ಕಂಟೆಂಟ್ ಕೆಟ್ಟದಾಗಿದ್ದರೆ ಇನ್ಸ್ಟಾಗ್ರಾಮ್ ಅವರೇ ನನ್ನನ್ನು ಬ್ಲಾಕ್ ಮಾಡುತ್ತಿದ್ದರು. ಆದರೆ ಕೆಲವರು ಬೇಕಂತಲೇ ನನ್ನ ವೈಯಕ್ತಿಕ ವಿಚಾರಗಳನ್ನು ಎಳೆದು ತಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಇಂಥವರ ವರ್ತನೆ ನೋಡಿದ ಮೇಲೆ ನಾನು ಕನ್ನಡಿಗ ಎಂದು ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದೇನೆ" ಎಂದು ಮೈಕಲ್ ಅಜಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಬಿಗ್‌ಬಾಸ್ ಮನೆಯಲ್ಲಿ ಎಲ್ಲರ ಪ್ರೀತಿ ಗೆದ್ದಿದ್ದ ಮೈಕಲ್, ಇಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ಕೆಲವು ಕಿಡಿಗೇಡಿಗಳು ಮಾಡುವ ಕೆಟ್ಟ ಕಾಮೆಂಟ್‌ಗಳಿಂದ ಕಂಗೆಟ್ಟು ಹೋಗಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.