ಸ್ವಲ್ಪ ಯಾಮಾರಿದರೂ ನೈಟ್‌ ಔಟ್ ಆಗಿಬಿಡುತ್ತೆ: ಸೌಂದರ್ಯ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್!

Published : Sep 06, 2026, 08:48 PM IST
Soundarya Shetty

ಸಾರಾಂಶ

‘ಬಿಗ್‌ ಬಾಸ್ ಕನ್ನಡ ಸೀಸನ್ 13’ರ ಎರಡನೇ ಸ್ಪರ್ಧಿಯಾಗಿ ಮಾಡೆಲ್ ಹಾಗೂ ‘MTV Splitsvilla Season 16’ ಖ್ಯಾತಿಯ ಸೌಂದರ್ಯ ಶೆಟ್ಟಿ ಅಲಿಯಾಸ್ ಸ್ಯಾಂಡಿ ಎಂಟ್ರಿ ನೀಡಿದ್ದಾರೆ. ಮಂಗಳೂರು ಮೂಲದ ಸೌಂದರ್ಯ..

‘ಬಿಗ್‌ ಬಾಸ್ ಕನ್ನಡ ಸೀಸನ್ 13’ರ ಗ್ರ್ಯಾಂಡ್ ಓಪನಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಒಂದೊಂದೇ ಸ್ಪರ್ಧಿಗಳ ಎಂಟ್ರಿ ಕುತೂಹಲ ಹೆಚ್ಚಿಸುತ್ತಿದೆ. ಮೊದಲ ಸ್ಪರ್ಧಿಯಾಗಿ ಜಗ್ಗು ಮಮ್ಮಿ ಮನೆಗೆ ಕಾಲಿಟ್ಟ ಬಳಿಕ ಇದೀಗ ಎರಡನೇ ಸ್ಪರ್ಧಿಯಾಗಿ ಮಾಡೆಲ್ ಹಾಗೂ ರಿಯಾಲಿಟಿ ಶೋ ಖ್ಯಾತಿಯ ಸೌಂದರ್ಯ ಶೆಟ್ಟಿ ಬಿಗ್‌ ಬಾಸ್ ಮನೆ ಪ್ರವೇಶಿಸಿದ್ದಾರೆ. ಬೋಲ್ಡ್ ಲುಕ್ ಹಾಗೂ ಫ್ಯಾಷನ್ ಸ್ಟೈಲ್ ಮೂಲಕವೇ ಗಮನ ಸೆಳೆದಿರುವ ಸೌಂದರ್ಯ ಅವರ ಎಂಟ್ರಿ ಇದೀಗ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಯಾರಿವರು ಸೌಂದರ್ಯ ಶೆಟ್ಟಿ?

ಸೌಂದರ್ಯ ಶೆಟ್ಟಿ ಅವರ ಪೂರ್ಣ ಹೆಸರು ಸೌಂದರ್ಯ ಯುವರಾಜ್ ಶೆಟ್ಟಿ. ಮೂಲತಃ ಕರ್ನಾಟಕದ ಮಂಗಳೂರಿನವರಾದ ಅವರು, ಸೋಷಿಯಲ್ ಮೀಡಿಯಾದಲ್ಲಿ ‘ಸ್ಯಾಂಡಿ’ ಎಂದೇ ಜನಪ್ರಿಯರಾಗಿದ್ದಾರೆ. ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ಅವರನ್ನು ಪ್ರೀತಿಯಿಂದ ‘ಸ್ಯಾಂಡಿ’ ಎಂದೇ ಕರೆಯುತ್ತಿದ್ದರು ಎನ್ನಲಾಗಿದೆ.

ಫ್ಯಾಷನ್, ಮಾಡೆಲಿಂಗ್ ಮತ್ತು ಲೈಫ್‌ಸ್ಟೈಲ್‌ಗೆ ಸಂಬಂಧಿಸಿದ ಕಂಟೆಂಟ್‌ಗಳ ಮೂಲಕ ಗುರುತಿಸಿಕೊಂಡಿರುವ ಸೌಂದರ್ಯ, ಬಳಿಕ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘MTV Splitsvilla Season 16 – Pyaar Ya Paisa’ ಮೂಲಕ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು. ಈ ಶೋನಲ್ಲಿ ತಮ್ಮ ಆತ್ಮವಿಶ್ವಾಸ ಹಾಗೂ ನೇರ ಮಾತಿನ ಶೈಲಿಯಿಂದ ಗಮನ ಸೆಳೆದ ಅವರು ಫೈನಲಿಸ್ಟ್ ಆಗಿಯೂ ಹೊರಹೊಮ್ಮಿದ್ದರು.

ಸ್ಪ್ಲಿಟ್ಸ್‌ವಿಲ್ಲಾದಲ್ಲಿ ‘ಕ್ವೀನ್’ ಆಗಿದ್ದ ಸ್ಯಾಂಡಿ

ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಸೌಂದರ್ಯ ಶೆಟ್ಟಿ ತಮ್ಮ ಆಟದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದರು. ಲವ್ ಟ್ರ್ಯಾಪ್‌ಗಳಿಗೆ ಸಿಲುಕದೆ ಆಟವನ್ನು ಆಟದ ರೀತಿಯಲ್ಲೇ ಆಡಿದ ಅವರು, ಸಿಕ್ಕ ಅವಕಾಶ ಹಾಗೂ ಅಡ್ವಾಂಟೇಜ್‌ಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದರು. ಇದೇ ಕಾರಣಕ್ಕೆ ಶೋನಲ್ಲಿ ಅವರಿಗೆ ‘ಕ್ವೀನ್’ ಎಂಬ ಟ್ಯಾಗ್ ಕೂಡ ಸಿಕ್ಕಿತ್ತು. ಈಗ ಇದೇ ಆತ್ಮವಿಶ್ವಾಸದೊಂದಿಗೆ ಸೌಂದರ್ಯ ಬಿಗ್‌ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಹೀಗಾಗಿ ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಕಂಡ ಅವರ ಗೇಮ್ ಪ್ಲೇ ಇಲ್ಲಿ ಹೇಗಿರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ಸುದೀಪ್ ಮುಂದೆ ಸ್ಯಾಂಡಿ ಹೇಳಿದ್ದೇನು?

ಬಿಗ್‌ ಬಾಸ್ ವೇದಿಕೆಗೆ ಸೌಂದರ್ಯ ಶೆಟ್ಟಿ ಎಂಟ್ರಿ ಕೊಡುತ್ತಿದ್ದಂತೆ ಕಿಚ್ಚ ಸುದೀಪ್ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಪಾರ್ಟಿ ಹಾಗೂ ನೈಟ್‌ಔಟ್‌ಗಳನ್ನು ಇಷ್ಟಪಡುವ ಸೌಂದರ್ಯ ಅವರ ಬಗ್ಗೆ ಸುದೀಪ್ ಕೂಡ ತಮಾಷೆಯಾಗಿ ಮಾತನಾಡಿದ್ದಾರೆ. ‘ನೀವು ಪಾರ್ಟಿ ಪ್ರಿಯೆ ಎಂದಿದ್ದೀರಿ. ಸ್ವಲ್ಪ ಯಾಮಾರಿದರೂ ನೈಟ್‌ ಔಟ್ ಆಗಿಬಿಡುತ್ತೆ’ ಎಂಬ ರೀತಿಯಲ್ಲಿ ಸೌಂದರ್ಯ ಅವರ ಪಾರ್ಟಿ ಲವ್ ಬಗ್ಗೆ ಸುದೀಪ್ ತಮಾಷೆ ಮಾಡಿದ್ದಾರೆ. ಬಳಿಕ ಸೌಂದರ್ಯಗೆ ಬೋರ್ಡಿಂಗ್ ಪಾಸ್ ನೀಡಿ ಬಿಗ್‌ ಬಾಸ್ ಮನೆಯೊಳಗೆ ಕಳುಹಿಸಿದ್ದಾರೆ.

ಬಿಗ್‌ ಬಾಸ್ ಮನೆಯಲ್ಲಿ ಸ್ಯಾಂಡಿ ಹೇಗೆ ಆಡ್ತಾರೆ?

ಸ್ಪ್ಲಿಟ್ಸ್‌ವಿಲ್ಲಾದಲ್ಲಿ ತಮ್ಮದೇ ಆದ ಸ್ಟೈಲ್‌ನಲ್ಲಿ ಆಟವಾಡಿ ಗಮನ ಸೆಳೆದಿರುವ ಸೌಂದರ್ಯ ಶೆಟ್ಟಿ, ಬಿಗ್‌ ಬಾಸ್ ಕನ್ನಡದಲ್ಲಿ ಯಾವ ರೀತಿಯ ಗೇಮ್ ಆಡಲಿದ್ದಾರೆ ಎಂಬುದೇ ಈಗ ಪ್ರಮುಖ ಕುತೂಹಲ. ನೇರವಾಗಿ ಮಾತನಾಡುವ ಸ್ವಭಾವ, ಆತ್ಮವಿಶ್ವಾಸ ಹಾಗೂ ರಿಯಾಲಿಟಿ ಶೋ ಅನುಭವ ಅವರಿಗೆ ಎಷ್ಟು ಪ್ಲಸ್ ಆಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ. ಅದರಲ್ಲೂ ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಸೌಂದರ್ಯ ಅವರ ಪರಿಚಯ ಹೊಸದು. ಹೀಗಾಗಿ ಬಿಗ್‌ ಬಾಸ್ ಮನೆಯೊಳಗಿನ ಅವರ ನಡೆ, ಆಟ ಹಾಗೂ ಇತರ ಸ್ಪರ್ಧಿಗಳೊಂದಿಗೆ ಅವರು ಬೆಳೆಸಿಕೊಳ್ಳುವ ಸಂಬಂಧಗಳು ಹೇಗಿರಲಿವೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಒಂದೇ ಸಮಯದಲ್ಲಿ ನಾಲ್ಕು ಭಾಷೆಗಳಲ್ಲಿ ಬಿಗ್‌ ಬಾಸ್

ಈ ಬಾರಿಯ ಸೀಸನ್‌ನ ಮತ್ತೊಂದು ವಿಶೇಷವೆಂದರೆ ಕನ್ನಡದ ಜತೆಗೆ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳ ಬಿಗ್‌ ಬಾಸ್ ಶೋಗಳೂ ಏಕಕಾಲದಲ್ಲಿ ಆರಂಭವಾಗಿವೆ. ನಾಲ್ಕು ಭಾಷೆಗಳ ಬಿಗ್‌ ಬಾಸ್ ಕಾರ್ಯಕ್ರಮಗಳು ಒಂದೇ ಸಮಯದಲ್ಲಿ ಆರಂಭವಾಗಿರುವುದು ವಿಶೇಷ ಬೆಳವಣಿಗೆಯಾಗಿದೆ. ‘ಬಿಗ್‌ ಬಾಸ್ ಕನ್ನಡ 13’ರಲ್ಲಿ ಜಗ್ಗು ಮಮ್ಮಿ ಬಳಿಕ ಎರಡನೇ ಸ್ಪರ್ಧಿಯಾಗಿ ಸೌಂದರ್ಯ ಶೆಟ್ಟಿ ಎಂಟ್ರಿ ಕೊಟ್ಟಿದ್ದು, ಈ ಮೂಲಕ ಹೊಸ ಸೀಸನ್‌ನ ಗೇಮ್ ಇನ್ನಷ್ಟು ರಂಗೇರಿದೆ. ಇದೀಗ ‘ಸ್ಯಾಂಡಿ’ ಬಿಗ್‌ ಬಾಸ್ ಮನೆಯಲ್ಲಿ ಯಾವ ರೀತಿ ಆಟ ಕಟ್ಟುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನೀವು ನಿಯಮ ಮುರಿದಿದ್ದೀರಿ' ಎಂದ ಸುದೀಪ್: ಗಾಬರಿಯಾದ ಜಗ್ಗು ಮಮ್ಮಿಗೆ ಬೋರ್ಡಿಂಗ್ ಪಾಸ್ ಸಿಕ್ತಾ?
Bigg Boss: ಬಿಗ್ ಬಾಸ್ ವೇದಿಕೆ ಮೇಲೆ 'ವಿಷ್ಣುವರ್ಧನ್' ಸ್ಟೈಲ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್‌.. ಇದು ಏಕೆ ಗೊತ್ತಾ?