'ನೀವು ನಿಯಮ ಮುರಿದಿದ್ದೀರಿ' ಎಂದ ಸುದೀಪ್: ಗಾಬರಿಯಾದ ಜಗ್ಗು ಮಮ್ಮಿಗೆ ಬೋರ್ಡಿಂಗ್ ಪಾಸ್ ಸಿಕ್ತಾ?

Published : Sep 06, 2026, 08:34 PM IST
Jaggu Mummy

ಸಾರಾಂಶ

ಬಿಗ್‌ ಬಾಸ್ ಕನ್ನಡ ಸೀಸನ್ 13ರ ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೆಲ್ 3’ ಖ್ಯಾತಿಯ ಜಗ್ಗು ಮಮ್ಮಿ ಎಂಟ್ರಿ ನೀಡಿದ್ದಾರೆ. ವೇದಿಕೆಯಲ್ಲಿ ಸುದೀಪ್ ಆರಂಭದಲ್ಲೇ ಜಗ್ಗುಗೆ ಶಾಕ್ ನೀಡಿದ್ದು, ಬಳಿಕ ಆತ್ಮವಿಶ್ವಾಸ ತುಂಬಿದ್ದಾರೆ.

‘ಬಿಗ್‌ ಬಾಸ್ ಕನ್ನಡ ಸೀಸನ್ 13’ ಭರ್ಜರಿ ಆರಂಭ ಕಂಡಿದ್ದು, ಮೊದಲ ಸ್ಪರ್ಧಿಯಾಗಿಯೇ ‘ಲವ್ ಮಾಕ್ಟೆಲ್ 3’ ಖ್ಯಾತಿಯ ಹಾಸ್ಯನಟ ಜಗ್ಗು ಮಮ್ಮಿ ಎಂಟ್ರಿ ಕೊಟ್ಟಿದ್ದಾರೆ. ಹಳ್ಳಿಯ ಮುಗ್ಧ ಯುವಕನಾಗಿ ವೇದಿಕೆಗೆ ಬಂದ ಜಗ್ಗುಗೆ ಕಿಚ್ಚ ಸುದೀಪ್ ಆರಂಭದಲ್ಲೇ ಸಖತ್ ಶಾಕ್ ನೀಡಿದ್ದಾರೆ. ಆದರೆ ಆ ಶಾಕ್‌ನ ಹಿಂದೆ ಜಗ್ಗು ಅವರ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶವೂ ಇತ್ತು ಎಂಬುದು ವಿಶೇಷ.

ಹೊಸ ಸೀಸನ್‌ಗೆ ಅದ್ಧೂರಿ ಚಾಲನೆ ನೀಡಿದ ಸುದೀಪ್, ಮೊದಲಿಗೆ ಬಿಗ್‌ ಬಾಸ್ ಮನೆಯ ಹೊಸ ವಿನ್ಯಾಸವನ್ನು ಪ್ರೇಕ್ಷಕರಿಗೆ ಪರಿಚಯಿಸಿದರು. ಬಳಿಕ ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೆಲ್ 3’ ಸಿನಿಮಾದ ಹಾಸ್ಯನಟ ಜಗದೀಶ್ ಅಲಿಯಾಸ್ ಜಗ್ಗು ಮಮ್ಮಿ ವೇದಿಕೆಗೆ ಆಗಮಿಸಿದರು. ಒಂದೇ ಸಿನಿಮಾದ ಮೂಲಕ ಗಮನ ಸೆಳೆದಿದ್ದ ಜಗ್ಗು ಅವರಿಗೆ ಇದೀಗ ಬಿಗ್‌ಬಾಸ್ ವೇದಿಕೆ ಮತ್ತೊಂದು ದೊಡ್ಡ ಅವಕಾಶ ನೀಡಿದೆ.

‘ನೀವು ನಿಯಮ ಮುರಿದಿದ್ದೀರಿ!’ ಎಂದ ಸುದೀಪ್

ವೇದಿಕೆಗೆ ಬರುತ್ತಿದ್ದಂತೆ ಜಗ್ಗು ತುಸು ನರ್ವಸ್ ಆಗಿಯೇ ಸುದೀಪ್ ಜೊತೆ ಮಾತನಾಡಿದರು. ಈ ವೇಳೆ, ನಮ್ಮೂರಿನ ಜನ ನಿಮ್ಮ ಅಭಿಮಾನಿಗಳು, ಅವರಿಗೆ ಒಮ್ಮೆ ಹಾಯ್ ಹೇಳಿ ಎಂದು ಸುದೀಪ್ ಬಳಿ ಮನವಿ ಮಾಡಿದರು. ಅಷ್ಟಕ್ಕೇ ಸುದೀಪ್ ತುಸು ಗಂಭೀರವಾಗಿ, ನೀವು ಬಿಗ್‌ಬಾಸ್ ನಿಯಮ ಮುರಿದಿದ್ದೀರಿ. ಬಿಗ್‌ಬಾಸ್‌ಗೆ ಬರುತ್ತಿರುವ ವಿಚಾರವನ್ನು ಯಾರಿಗೂ ಹೇಳುವಂತಿಲ್ಲ. ಆದರೆ ನೀವು ಇಡೀ ಊರಿನವರಿಗೆ ಹೇಳಿದ್ದೀರಲ್ಲ. ನಿಯಮ ಮುರಿದಿರುವ ನಿಮ್ಮನ್ನು ವಾಪಸ್ ಕಳಿಸುತ್ತೇವೆ ಎಂದಿದ್ದಾರೆ. ಸುದೀಪ್ ಅವರ ಮಾತು ಕೇಳಿ ಜಗ್ಗು ಕ್ಷಣಕಾಲ ಗಾಬರಿಯಾಗಿ ನಿಂತುಕೊಂಡಿದ್ದಾರೆ.

ಜನರ ಮುಂದೆ ಅನುಮತಿ ಕೇಳಿದ ಜಗ್ಗು!

ಆ ಬಳಿಕ ಸುದೀಪ್, ಜಗ್ಗುಗೆ ಮತ್ತೊಂದು ಟಾಸ್ಕ್ ನೀಡಿದ್ದಾರೆ. ಜನರೊಂದಿಗೆ ಮಾತನಾಡಿ ಅವರನ್ನು ಒಪ್ಪಿಸಿ, ಅವರು ಅನುಮತಿ ನೀಡಿದರೆ ಮಾತ್ರ ಬಿಗ್‌ಬಾಸ್ ಮನೆಗೆ ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ ಜಗ್ಗುಗೆ ಗೊತ್ತಾಗದಂತೆ ಸುದೀಪ್ ಅವರು ಪ್ರೇಕ್ಷಕರಿಗೆ ‘ಆಗಲ್ಲ’ ಎಂದು ಹೇಳುವಂತೆ ಸನ್ನೆ ಮಾಡಿದ್ದಾರೆ. ಜಗ್ಗು ತಮ್ಮಲ್ಲಿದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿಕೊಂಡು ಜನರ ಬಳಿ ಬಿಗ್‌ಬಾಸ್‌ಗೆ ಹೋಗಲು ಅನುಮತಿ ಕೇಳಿದ್ದಾರೆ.

ಆದರೆ ಪ್ರೇಕ್ಷಕರು ಸುದೀಪ್ ಅವರ ಸನ್ನೆಯಂತೆ ಒಪ್ಪಿಗೆ ನೀಡಿಲ್ಲ. ಜಗ್ಗು ಅವರ ಸ್ನೇಹಿತರೂ ಕೂಡ ‘ಆಗಲ್ಲ’ ಎಂದಿದ್ದಾರೆ. ಇದರಿಂದ ಮತ್ತಷ್ಟು ಗಾಬರಿಗೊಂಡ ಜಗ್ಗುಗೆ ಕೊನೆಗೆ ಸುದೀಪ್ ನಿಜವಾದ ವಿಚಾರವನ್ನು ತಿಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಬಳಿಕ ಜಗ್ಗು ಅವರ ವಿಡಿಯೋ ಪ್ಲೇ ಮಾಡಲಾಗಿದ್ದು, ಅದನ್ನು ನೋಡಿ ಅವರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.

‘ನಾನು ಬಡವ, ಗೆಳೆಯನ ಮದುವೆ ಬಟ್ಟೆ ಹಾಕಿಕೊಂಡು ಬಂದಿದ್ದೇನೆ’

ತಮ್ಮ ಜೀವನದ ಕಷ್ಟಗಳ ಬಗ್ಗೆ ಮಾತನಾಡಿದ ಜಗ್ಗು, ತಾವು ಬಡ ಕುಟುಂಬದಿಂದ ಬಂದಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಬಿಗ್‌ಬಾಸ್ ವೇದಿಕೆಗೆ ತಾವು ಧರಿಸಿರುವ ಬಟ್ಟೆಯೂ ಗೆಳೆಯನ ಮದುವೆಯ ಉಡುಪು ಎಂದು ಹೇಳಿದ್ದಾರೆ. ನನ್ನನ್ನು ಹುಡುಗಿಯಂತೆ ಆಡುತ್ತಾನೆ ಎಂದು ಊರಿನವರು ಲೇವಡಿ ಮಾಡುತ್ತಾರೆ ಎಂದು ತಮ್ಮ ನೋವನ್ನು ಜಗ್ಗು ಹಂಚಿಕೊಂಡಿದ್ದಾರೆ. ಮನೆಯಲ್ಲಿ ಸಾಕಷ್ಟು ಕಷ್ಟಗಳಿವೆ. ಚಿನ್ನವನ್ನು ಅಡವಿಟ್ಟಿದ್ದು, ಸುಮಾರು 2.50 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದೇನೆ. ಬಿಗ್‌ಬಾಸ್‌ನಲ್ಲಿ ಗೆದ್ದರೆ ಆ ಚಿನ್ನವನ್ನು ಬಿಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಜಗ್ಗುಗೆ ಧೈರ್ಯ ತುಂಬಿದ ಕಿಚ್ಚ

ಜಗ್ಗು ಅವರ ಮುಗ್ಧತೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಗಮನಿಸಿದ ಸುದೀಪ್, ಅವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ನೀವು ಬಿಗ್‌ಬಾಸ್ ಮನೆ ಒಳಗೆ ಹೋದಾಗ ಯಾರೇ ಎದುರು ಸಿಕ್ಕರೂ, ‘ನಾನು ಜಗ್ಗು, ಸೀಸನ್ 13ರ ವಿನ್ನರ್’ ಎಂದು ನಿಮ್ಮನ್ನು ಪರಿಚಯಿಸಿಕೊಳ್ಳಿ ಎಂದು ಸುದೀಪ್ ಸಲಹೆ ನೀಡಿದ್ದಾರೆ.

ಇದಷ್ಟೇ ಅಲ್ಲದೆ, ವೇದಿಕೆಯ ಮೇಲೆಯೇ ಜಗ್ಗು ಜೊತೆ ಹಲವು ಬಾರಿ ಅಭಿನಯಿಸಿ, ಅವರಿಗೆ ರಿಹರ್ಸಲ್ ಕೂಡ ಮಾಡಿಸಿದ್ದಾರೆ. ಆರಂಭದಲ್ಲಿ ಆತಂಕದಲ್ಲಿದ್ದ ಜಗ್ಗು ಕೊನೆಗೆ ಸುದೀಪ್ ಅವರ ಮಾತುಗಳಿಂದ ಆತ್ಮವಿಶ್ವಾಸ ಪಡೆದುಕೊಂಡಿದ್ದಾರೆ. ನಂತರ ಕಿಚ್ಚ ಸುದೀಪ್ ಜಗ್ಗುಗೆ ಬೋರ್ಡಿಂಗ್ ಪಾಸ್ ನೀಡಿ ಬಿಗ್‌ಬಾಸ್ ಮನೆಯತ್ತ ಕಳುಹಿಸಿದ್ದಾರೆ. ಈ ಮೂಲಕ ‘ಬಿಗ್‌ಬಾಸ್ ಕನ್ನಡ ಸೀಸನ್ 13’ರ ಮೊದಲ ಸ್ಪರ್ಧಿಯಾಗಿ ಜಗ್ಗು ಮಮ್ಮಿ ಅಧಿಕೃತವಾಗಿ ಮನೆ ಪ್ರವೇಶಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ಬಿಗ್ ಬಾಸ್ ವೇದಿಕೆ ಮೇಲೆ 'ವಿಷ್ಣುವರ್ಧನ್' ಸ್ಟೈಲ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್‌.. ಇದು ಏಕೆ ಗೊತ್ತಾ?
Bigg Boss ಶೋ ಆರಂಭದಲ್ಲಿಯೇ ಬಿಗ್ ಟ್ವಿಸ್ಟ್; ವಿಶೇಷ ವ್ಯಕ್ತಿಗೆ ಸಿಕ್ತು ಕಿಚ್ಚನ ಮೊದಲ ಚಪ್ಪಾಳೆ