
ಬಿಗ್ ಬಾಸ್ ಸೀಸನ್ 12ರ ಫಿನಾಲೆ ವಾರಕ್ಕೆ ಒಟ್ಟು 7 ಸ್ಪರ್ಧಿಗಳು ಬಂದಿದ್ದಾರೆ. ಅದರಲ್ಲಿ ರಾಜ್ಯದ ಬಹುತೇಕ ವೀಕ್ಷಕರಿಗೆ ಗಿಲ್ಲಿ ನಟ ಅವರೇ ಹಾಟ್ ಫೇವರೀಟ್ ಆಗಿದ್ದಾರೆ. ಉಳಿದಂತೆ, ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಅವರು ಗೆಲ್ಲುವ ಫೇವರೀಟ್ ಸ್ಪರ್ಧಿಗಳ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಆದರೆ, ಧ್ರುವಂತ್ ಕೂಡ ಗೆಲ್ಲುವ ಸ್ಪರ್ಧಿಯಾಗಿದ್ದಾರೆ ಎಂದು ಹೇಳುವ ವೀಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಲ್ಲೊಬ್ಬ ಮಹಿಳೆ, ಧ್ರುವಂತ್ ಅವರ 10ಕ್ಕೂ ಹೆಚ್ಚು ಒಳ್ಳೆಯ ಗುಣಗಳನ್ನು ಬಿಚ್ಚಿಟ್ಟು, ಅವರಿಗೆ ಓಟ್ ಹಾಕಿ ಗೆಲ್ಲಿಸುವ ಬಗ್ಗೆಯೂ ತಿಳಿಸಿದ್ದಾರೆ.
ಈ ಬಗ್ಗೆ ಲೆಕ್ಕ ಪರಿಶೋಧಕಿಯಾಗಿರುವ ಸಂಧ್ಯಾ ಉಷಾನಾಥ್ ಮಾತನಾಡಿದ್ದು, ಸಂಬಂಧಪಟ್ಟ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಧ್ರುವಂತ್ ಅವರ ಆಟವೂ ಉತ್ತಮವಾಗಿದೆಲ್ಲಾ ಎಂಬ ಅಭಿಪ್ರಾಯವೂ ಮೂಡುತ್ತಿದೆ. ಜೊತೆಗೆ, ಜನರ ಮನಸ್ಸಿನಲ್ಲಿ ಧ್ರುವಂತ್ ಬಗ್ಗೆ ಉತ್ತಮ ಅಭಿಪ್ರಾಯಗಳು ಮೂಡಿದಲ್ಲಿ ಅವುಗಳು ಮತಗಳಾಗಿ ಕನ್ವರ್ಟ್ ಕೂಡ ಆಗಬುದು. ಒಂದು ವೇಳೆ ಹೀಗಾದಲ್ಲಿ ಧ್ರುವಂತ್ ವಿನ್ನರ್ ಅಥವಾ ರನ್ನರ್ ಅಪ್ ಸ್ಥಾನದವರೆಗೂ ಹೋಗಬಹುದು.
ಸಂಧ್ಯಾ ಅವರು ಹೇಳಿದ ಮಾತುಗಳು ಇಲ್ಲಿವೆ ನೋಡಿ... 'ಅಚ್ಚುಕಟ್ಟಾಗಿ ಸ್ನಾನ ಮಾಡಿ, ತಲೆ ಬಾಚಿಕೊಂಡು, ಶುಭ್ರವಾಗಿರುವ ಬಟ್ಟೆ ಹಾಕಿಕೊಂಡು, ಕೊಟ್ಟಿರುವ ಮನೆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ, ಅವಕಾಶ ಸಿಕ್ಕಾಗೆಲ್ಲಾ ತನ್ನನ್ನು ತಾನು ಪ್ರೂವ್ ಮಾಡಿಕೊಂಡು, ಯಾವುದೇ ಹುಡುಗಿಯ ಹಿಂದೆ ಜೊಲ್ಲು ಸುರಿಸಿಕೊಂಡು ಹೋಗದೇ, ಯಾರ ಮೈಮೇಲೂ ಫ್ರೆಂಡು-ಅಣ್ಣ-ತಂಗಿ ಎಂದು ಬೀಳದೇ, ಊಟವನ್ನು ಕದ್ದು ತಿನ್ನದೇ, ಯಾವಾಗಲೂ ರೋಗಿಷ್ಟರಂತೆ ಮಲಗಿಕೊಂಡಿರದೇ, ಚಟುವಟಿಕೆಯಿಂದ ಓಡಾಡುವ ವ್ಯಕ್ತಿ, ಪದೇ ಪದೇ ಮನೆಯವರಿಂದ ಟಾರ್ಗೆಟ್ ಆಗುವ ಈ ವ್ಯಕ್ತಿ ನಮಗೆ ಯಾಕೆ ಇಷ್ಟ ಆಗಿರಬಾರದು?' ಎಂದು ಪ್ರಶ್ನೆ ಮಾಡಿದ್ದಾರೆ.
ಒಬ್ಬೊಬ್ಬರೂ ಒಂದೊಂದು ಆಯಾಮಗಳಿಂದ ಈ ರಿಯಾಲಿಟಿ ಶೋ ನೋಡ್ತಾರೆ. ನಾವು ಈ ದೃಷ್ಟಿಕೋನದಿಂದ ನೋಡಿದಾಗ ನಮಗೆ ಅನ್ನಿಸಿದ್ದು ಧ್ರುವಂತ್ ಇಷ್ಟವಾಗಿದ್ದಾನೆ. ನೀವು ಆಂಟಿ ನಿಮಗೆ ವಯಸ್ಸಾಯ್ತು, ಸ್ಪೆಕ್ಟ್ಸ್ ಹಾಕಿಕೊಳ್ಳಿ, 24/7 ಲೈವ್ ಸ್ಟ್ರೀಮ್ ನೋಡಿ, ಮಲ್ಲಮ್ಮನ ಕಾಲದ ಕಥೆ ಅಥವಾ ಹಿಂದಿನ ಸೀಸನ್ ನೋಡಿ ಎಂದು ಹೇಳಬಹುದು. ಇದೆಲ್ಲಾ ಹೇಳೋರು ಕೂತ್ಕೊಳ್ರಿ ಕಂಡಿದ್ದೀನಿ, ನಾನೂ ಕೂಡ ಒಂದು ಕಾಲದಲ್ಲಿ ರೋಡೀಸ್ ರಿಯಾಲಿಟಿ ಶೋ ನೋಡಿದವಳು ಎಂದು ಹೇಳಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ 10 ವಾರಗಳ ಆಸುಪಾಸಿನಲ್ಲಿದ್ದಾಗ ನನ್ನನ್ನು ಮನೆಗೆ ಕಳಿಸಿಬಿಡಿ, ನಾನು ಇಲ್ಲಿಂದ ಹೋಗುತ್ತೇನೆ. ಇಲ್ಲಿ ಮರ್ಯಾದೆ ಹಾಳು ಮಾಡಿಕೊಂಡು ಇರಲಾರೆ ಎಂದು ಹೇಳಿದ್ದ ನಟ ಧ್ರುವಂತ್ ಇನ್ನೆರಡು ದಿನಗಳಲ್ಲಿ ಫೈನಲಿಸ್ಟ್ ಸಾಲಿನಲ್ಲಿ ನಿಲ್ಲಲಿದ್ದಾರೆ. ಮನೆಯಿಂದ ಹೊರಗೆ ಹೋಗಬೇಕು ಎಂದಿದ್ದ ಧ್ರುವಂತ್‌ನಲ್ಲಿ ಸೀಕ್ರೆಟ್ ರೂಮಿಗೆ ಹಾಕಿ, ಮನೆಯವರ ಎಲ್ಲ ಆಟವನ್ನು ಗಮನಿಸಲು ಹಾಗೂ ಟಾಸ್ಕ್‌ನಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲು ಅವರಿಗೆ ಅವಕಾಶ ನೀಡಲಾಗಿತ್ತು. ಎಲ್ಲವನ್ನೂ ಸೂಕ್ತವಾಗಿ ನಿಭಾಯಿಸುತ್ತಾ, ಎಲ್ಲಿ ಬೇಕೋ ಅಲ್ಲಿ ತುಸು ಹೆಚ್ಚೆಂಬಂತೆ ಮಾತನಾಡುತ್ತಿದ್ದ ಧ್ರುವಂತ್ ವಾಪಸ್ ಮನೆಯೊಳಗೆ ಬಂದಾಗ ಅದ್ಭುತವಾಗಿ ಆಟವಾಡಲು ಮುಂದಾದರು.
ಇನ್ನು ಕಳೆದ ಕಿಚ್ಚನ ಪಂಚಾಯಿತಿಯಲ್ಲಿ ಧ್ರುವಂತ್ ಅವರಿಗೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸೀಸನ್ 12ರ ಕಿಚ್ಚನ ಚಪ್ಪಾಳೆಯನ್ನು ಕೊಟ್ಟಿದ್ದಾರೆ. ಇದಕ್ಕೆ ಕಾರಣ ಇಡೀ ಮನೆಯ ಬಹುತೇಕ ಸದಸ್ಯರು ಒಟ್ಟಾಗಿ ಆಟವಾಡಿದರೂ, ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರು ಇಬ್ಬರೇ ಒಂದು ಗುಂಪಾಗಿ ಟಾಸ್ಕ್ ಆಟವಾಡಿ ಗೆಲುವು ಸಾಧಿಸಿದ್ದರು. ಎಲ್ಲರಿಗೂ ಮಾತಿನಿಂದ ಉತ್ತರವನ್ನು ಕೊಡದೇ ಟಾಸ್ಕ್‌ನ ಮೂಲಕ ಉತ್ತರ ಕೊಡುವ ಮೂಲಕ ತಮ್ಮನ್ನು ವಿರೋಧಿಸಿದವರಿಂದಲೇ ಭೇಷ್ ಎನ್ನುವಂತಹ ಕೆಲಸ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.