ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ತಮ್ಮ ಊರಿನ ಆಂಜನೇಯ ದೇವಸ್ಥಾನಕ್ಕೆ ಟ್ರೋಫಿ ಸಮರ್ಪಿಸಿದ್ದಾರೆ. ಸವಣೂರಿನಲ್ಲಿ ಅದ್ದೂರಿ ಮೆರವಣಿಗೆ ನಡೆಸಿ, ನಂತರ ಚಿಲ್ಲೂರು ಬಡ್ನಿ ಗ್ರಾಮದಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು.
ಹಾವೇರಿ (ಜ.30): ಬಿಗ್ ಬಾಸ್ ಕನ್ನಡ ಸೀಸನ್ 11ರ ಟ್ರೋಫಿ ವಿಜೇತ ಹಳ್ಳಿ ಹೈದ ಹನುಮಂತ ತಮ್ಮ ಸ್ವಗ್ರಾಮ ಚಿಲ್ಲೂರು ಬಡ್ನಿ ಗ್ರಾಮದಲ್ಲಿರುವ ತಮ್ಮ ಆರಾಧ್ಯ ದೈವ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ಪಾದಕ್ಕೆ ಬಿಗ್ ಬಾಸ್ ಟ್ರೋಫಿಯನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಗ್ರಾಮಸ್ಥರು ಮತ್ತು ನೂರಾರು ಅಭಿಮಾನಿಗಳು ಕೂಡ ಸಾಥ್ ನೀಡಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಎಲ್ಲ ಸ್ಪರ್ಧಿಗಳ ಸಂಭ್ರಮ ಈಗಾಗಲೇ ಪೂರ್ಣಗೊಂಡಿದೆ. ಆದರೆ, ಬಿಗ್ ಬಾಸ್ ಟ್ರೋಫಿ ವಿಜೇತ ಗಾಯಕ ಹನುಮಂತು ಮಾತ್ರ ಮೂರು ದಿನಗಳ ಕಾಲ ಸಂಭ್ರಮಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಕಾರಣ ಹನುಮಂತ ಅವರ ಚಿಕ್ಕಪ್ಪ ಸೋಮವಾರ ಬೆಳಗ್ಗೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ದುಃಖದಲ್ಲಿದ್ದ ಕುಟುಂಬದಲ್ಲಿ ಸೂತಕ ತೆಗೆಯುವ ಕಾರ್ಯಗಳನ್ನು ಮುಕ್ತಾಯಗೊಳಿಸಿ ಇದೀಗ ಅಭಿಮಾನಿಗಳ ಆಸೆಯಂತೆ ಹನುಮಂತ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಹೀಗಾಗಿ, ಸವಣೂರು ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಸಂಭ್ರಮಾಚರಣೆ ಮಾಡಿದ ಹನುಮಂತ, ನಂತರ ತಮ್ಮ ಸ್ವಗ್ರಾಮದ ಆರಾಧ್ಯ ದೈವ ಆಂಜನೇಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ಬಿಗ್ ಬಾಸ್ ಟ್ರೋಫಿಯನ್ನು ಆಂಜನೇಯ ದೇವರ ಪಾದಕ್ಕಿಟ್ಟು ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ತಾನು ದೇವರಿಂದ ಆಶೀರ್ವಾದದಿಂದಲೇ ಈ ಟ್ರೋಫಿ ಗೆದ್ದಿದ್ದು, ದೇವರಿಗೆ ಟ್ರೋಫಿ ಅರ್ಪಿಸುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ದೋಸ್ತನ ಗೆಲುವು ಸಂಭ್ರಮಿಸಿದ ಧನರಾಜ್ ಆಚಾರ್ … ವಿಷ್ಣು-ದ್ವಾರಕೀಶ್ ಜೋಡಿ ನಿಮ್ಮದು ಎಂದ ಫ್ಯಾನ್ಸ್
ಇದಕ್ಕೂ ಮುನ್ನ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಅದ್ದೂರಿ ಸ್ವಾಗತ ಕೋರಲಾಯಿತು. ಸವಣೂರು ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆ ವೇಳೆ ಡಿ.ಜೆ ಹಾಕಿ ಅಭಿಮಾನಿಗಳು ಭರ್ಜರಿ ಕುಣಿತ ಹಾಕಿದ್ದಾರೆ. ಬಿಗ್ ಬಾಸ್ ವಿನ್ನರ್ ಹನುಮಂತು ಟ್ರೋಫಿಯನ್ನು ಹಿಡಿದು ಪೋಸ್ ಕೊಟ್ಟು, ತಮ್ಮ ಗೆಲವಿಗೆ ಮತ ಹಾಕಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ತಿಳಿದಿದ್ದಾರೆ. ಅಲ್ಲಿ ನೆರೆದಿದ್ದ ಜನರು ಹನುಮಂತನಿಗೆ ಹೂವುಗಳನ್ನು ಎರಚಿ ಸ್ವಾಗತ ಕೋರಿದ್ದಾರೆ. ಈ ವೇಳೆ ಹನುಮಂತ ಹಾಡು ಹೇಳಿ ಅಭಿಮಾನಿಗಳನ್ನು ರಂಜಿಸಿದ್ದಾನೆ. ಪಾತ್ರದಾರಿ ನಾವೆಲ್ಲ, ಸೂತ್ರದಾರಿ ಶಿವ ಮೇಲ ಎಂದು ಹಾಡು ಹೇಳುವ ಮೂಲಕ ಎಲ್ಲ ದೇವರ ಆಶೀರ್ವಾದ ಎಂಬುದನ್ನು ಗಾಯನದ ಮೂಲಕ ತಿಳಿಸಿದ್ದಾನೆ.
ಸವಣೂರು ಪಟ್ಟಣದಿಂದ ಹುಟ್ಟೂರು ಚಿಲ್ಲೂರು ಬಡ್ನಿಗೆ ಬಂದ ಗಾಯಕ ಹನುಮಂತ, ಕಾರಿನಲ್ಲಿ ಕೈ ಬೀಸುತ್ತಾ ಹುಟ್ಟೂರಿಗೆ ಆಗಮಿಸಿದ್ದಾರೆ. ತಮ್ಮ ಊರಿಗೆ ಬಂದರೂ ನೇರವಾಗಿ ಮಬೆಗೆ ಹೋಗದೇ ತಾನು ಭಜನೆ , ಸಂಗೀತ, ತತ್ವಪದ ಕಲೆತಿದ್ದ ಆಂಜನೇಯನ ದೇವಸ್ಥಾನಕ್ಕೆ ಹೋಗುವುದಾಗಿ ತಿಳಿಸಿದ್ದಾನೆ. ಎಲ್ಲ ಅಭಿಮಾನಿಗಳೊಂದಿಗೆ ಹಾಗೂ ತಮ್ಮೂರಿನ ಗುರು-ಹಿರಿಯರೊಂದಿಗೆ ತನ್ನ ಆರಾಧ್ಯ ಧೈವ ಆಂಜನೇಯ ದೇವಸ್ಥಾನಕ್ಕೆ ಹೋಗಿ ನಮಿಸಿದ್ದಾರೆ. ನಂತರ, ಗ್ರಾಮಸ್ಥರೆಲ್ಲರೂ ಸೇರಿ ಹನುಮಂತನಿಗೆ ಸನ್ಮಾನ ಮಾಡಿ ಗೌರವಿಸಿದ್ದಾರೆ.
ಇದನ್ನೂ ಓದಿ: ‘ಸಿರಿವಂತನಾದರೂ ತಾಂಡಾದಲ್ಲೇ ಇರುವೆ’ ಹನುಮಂತನ ಶಪಥ!