‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಜನಪ್ರಿಯ ಕಿರುತೆರೆ ಕಲಾವಿದರಾದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಹೊಸ ಜೀವನದತ್ತ ಮೊದಲ ಹೆಜ್ಜೆ ಇಟ್ಟಿದ್ದು, ಅಭಿಮಾನಿ ವಲಯದಲ್ಲಿ ಸಂಭ್ರಮ ಮನೆಮಾಡಿದೆ.
ಬಿಗ್ ಬಾಸ್ ಮನೆಯ ಮೂಲಕ ಆರಂಭವಾದ ಶಿಶಿರ್ ಮತ್ತು ಐಶ್ವರ್ಯ ಅವರ ನಡುವಿನ ಬಾಂಧವ್ಯ ದಿನಕಳೆದಂತೆ ಮತ್ತಷ್ಟು ಗಟ್ಟಿಯಾಗುತ್ತಾ ಸಾಗಿತ್ತು. ಶೋ ಮುಗಿದ ಬಳಿಕವೂ ಒಟ್ಟಿಗೆ ಕೆಲಸ ಮಾಡುತ್ತಾ ಮುಂದುವರಿದ ಇವರ ಪರಿಚಯ, ಕ್ರಮೇಣ ಆಳವಾದ ಸ್ನೇಹವಾಗಿ ಬೆಳೆದಿತ್ತು. ಇದೀಗ ಆ ಪರಿಶುದ್ಧ ಸ್ನೇಹವು ಪ್ರೀತಿಯ ಸುಂದರ ರೂಪ ತಾಳಿ, ನಿಶ್ಚಿತಾರ್ಥದ ಸಂಭ್ರಮದ ಹಂತಕ್ಕೆ ಬಂದು ನಿಂತಿದೆ. ಈ ವಿಶೇಷ ಸಂದರ್ಭದಲ್ಲಿ ಇಬ್ಬರೂ ತಮ್ಮ ಪ್ರೇಮಕಥೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ತಮ್ಮ ನಿಶ್ಚಿತಾರ್ಥದ ಸಂಭ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಶಿರ್ ಶಾಸ್ತ್ರಿ, ತಮ್ಮ ಪ್ರೇಮಕಥೆಯ ಹಾದಿಯನ್ನು ಹಂಚಿಕೊಂಡು ವಿವರಿಸಿದರು. "ನಮ್ಮ ಪಯಣ ಪ್ರೀತಿಯಿಂದ ಶುರುವಾಗಿದ್ದಲ್ಲ. ಒಟ್ಟಿಗೆ ಕೆಲಸ ಮಾಡುತ್ತಾ ಆರಂಭವಾದ ಪರಿಚಯ ಸ್ನೇಹವಾಯಿತು. ಆ ಸ್ನೇಹದಿಂದಾಗಿ ಪರಸ್ಪರ ಗೌರವ ಹೆಚ್ಚಾಯಿತು, ಬಳಿಕ ಅದು ನಿಧಾನವಾಗಿ ಪ್ರೀತಿಗೆ ತಿರುಗಿತು. ನಾವು ಪ್ರೀತಿಸಿ ಮದುವೆಯಾಗುತ್ತೇವೆ ಎಂದು ನಾವೇ ಅಂದುಕೊಂಡಿರಲಿಲ್ಲ. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿದ್ದಾಗ ನಮ್ಮ ನಡುವೆ ಪ್ರೀತಿ ಆಗಿರಲಿಲ್ಲ. ಆದರೆ ಐಶ್ವರ್ಯ ಬಗ್ಗೆ ನನಗೆ ವಿಶೇಷ ಭಾವನೆ ಇತ್ತು" ಎಂದು ಹೇಳಿದರು. ಅಲ್ಲದೆ, "ಮೊದಲು ಪ್ರಪೋಸ್ ಮಾಡಿದ್ದು ಐಶ್ವರ್ಯನೇ" ಎಂದು ತಮ್ಮ ಲವ್ ಸ್ಟೋರಿಯ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟರು.
ಇನ್ನು ಈ ಸಂಭ್ರಮದ ನಡುವೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿರುವ ಐಶ್ವರ್ಯ ಸಿಂಧೋಗಿ ಕೂಡ ತಮ್ಮ ಸಂಬಂಧದ ಕುರಿತು ಭಾವುಕರಾಗಿ ಮಾತನಾಡಿದ್ದಾರೆ. "ನಾವು ಮದುವೆಯಾಗುತ್ತೇವೆ ಎಂದು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ. ನಾವೇ ಆ ಬಗ್ಗೆ ಯೋಚಿಸುವುದಕ್ಕೂ ಮೊದಲೇ ಎಲ್ಲರೂ ನಮ್ಮ ಮದುವೆಯ ಬಗ್ಗೆ ಮಾತನಾಡುತ್ತಿದ್ದರು. ನಮ್ಮ ಪ್ರೀತಿಯ ಕಥೆ ಶುರುವಾಗಿದ್ದು ತುಂಬಾ ತಡವಾಗಿ. ಆರಂಭದಲ್ಲಿ ನನಗೆ ಅವರ ಮೇಲೆ ಪ್ರೀತಿ ಇರಲಿಲ್ಲ, ಆದರೆ ಶಿಶಿರ್ ಅವರಲ್ಲಿದ್ದ ಮಾನವೀಯ ಗುಣಗಳನ್ನು ಕಂಡು ವ್ಯಕ್ತಿಯಾಗಿ ಅವರ ಮೇಲೆ ನನಗೆ ತುಂಬಾ ಗೌರವವಿತ್ತು. ಅದರಲ್ಲೂ ಶಿಶಿರ್ ನನಗಾಗಿ ತೋರಿಸಿದ ಕಾಳಜಿಗೆ ನಾನು ಸೋತುಹೋದೆ" ಎಂದು ತಮ್ಮ ಮನದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯೊಳಗೆ ಆರಂಭವಾಗಿದ್ದ ಒಂದು ಸುಂದರ ಸ್ನೇಹ, ಹೊರಜಗತ್ತಿನಲ್ಲಿ ಪ್ರೀತಿಯಾಗಿ ಅರಳಿ, ಇದೀಗ ನಿಶ್ಚಿತಾರ್ಥದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಪರಸ್ಪರ ಗೌರವ, ಕಾಳಜಿ ಮತ್ತು ಸ್ನೇಹದ ಗಟ್ಟಿಯಾದ ಬುನಾದಿಯ ಮೇಲೆ ಹೊಸ ಬದುಕು ಕಟ್ಟಿಕೊಳ್ಳಲು ಸಜ್ಜಾಗಿರುವ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಜೋಡಿಯ ಹೊಸ ಜೀವನದ ಪಯಣಕ್ಕೆ ಅಭಿಮಾನಿಗಳಿಂದ ಪ್ರೀತಿ ಹಾಗೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ನಿಶ್ಚಿತಾರ್ಥದ ಸಂಭ್ರಮಕ್ಕೂ ಮುನ್ನ ಶಿಶಿರ್ ಮತ್ತು ಐಶ್ವರ್ಯ ಅವರು ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರನ್ನು ಖುದ್ದಾಗಿ ಭೇಟಿಯಾಗಿ ಆಹ್ವಾನ ಪತ್ರಿಕೆಯನ್ನು ನೀಡಿದ್ದರು.
ಇದಕ್ಕೂ ಕೆಲವು ದಿನಗಳ ಹಿಂದೆಯಷ್ಟೇ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಸೃಜನಾತ್ಮಕ (ಕ್ರಿಯೇಟಿವ್) ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ತಮ್ಮಿಬ್ಬರ ಬಗ್ಗೆ ಕಾಮೆಂಟ್ ಮಾಡುತ್ತಿದ್ದ ಟ್ರೋಲರ್‌ಗಳಿಗೆ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡುತ್ತಲೇ, "ನಾವು ಒಂದಾಗುತ್ತಿದ್ದೇವೆ" ಎಂಬ ಸಿಹಿ ಸುದ್ದಿಯನ್ನು ಜಗತ್ತಿನ ಮುಂದಿಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.