
ದೇಶಾದ್ಯಂತ ಭಾರೀ ಕ್ರೇಜ್ ಹುಟ್ಟುಹಾಕಿರುವ ಬಿಗ್ ಬಾಸ್ ಶೋಗಳಲ್ಲಿ ಆಗಾಗ ಪ್ರೇಮಕಥೆಗಳು, ಜಗಳಗಳು ನಡೆಯುತ್ತವೆ. ಆದರೆ, 'ಬಿಗ್ ಬಾಸ್ ಬಾಂಗ್ಲಾ ಸೀಸನ್ 3' (Bigg Boss Bangla 3) ರಲ್ಲಿ ಮಾತ್ರ ಸ್ಪರ್ಧಿಗಳು ಸಕಲ ಮರ್ಯಾದೆಯ ಎಲ್ಲೆ ಮೀರಿ ವರ್ತಿಸಿದ್ದಾರೆ. ಮನೆಯೊಳಗಿನ ಸ್ಪರ್ಧಿಗಳಾದ ರಾಜ್‌ವೀರ್ ದೇಯ್ ಮತ್ತು ನಂದಿನಿ ದತ್ತಾ ಎಂಬ ಜೋಡಿ ಕ್ಯಾಮೆರಾಗಳ ಮುಂದೆಯೇ ಅತಿಯಾಗಿ ರೊಮ್ಯಾನ್ಸ್ ಮಾಡಿ, ಮುತ್ತು ಕೊಡುತ್ತಾ ಓಯೋ (OYO) ರೂಮ್‌ನಂತೆ ವರ್ತಿಸಿದ್ದು ವೀಕ್ಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಹಲವು ವಿಡಿಯೋ ಕ್ಲಿಪ್‌ಗಳು ಸದ್ಯ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿವೆ. ಗಾರ್ಡನ್ ಏರಿಯಾದ ಸೋಫಾದ ಮೇಲೆ ಕುಳಿತು ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು, ಮುತ್ತಿಕ್ಕುವುದು ಇವರ ನಿತ್ಯದ ಕಾಯಕವಾಗಿತ್ತು. ಅಷ್ಟೇ ಅಲ್ಲದೆ, ಒಂದು ಹಂತದಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಬಾರದೆಂದು ಶರ್ಟ್ ಮುಖಕ್ಕೆ ಹೊದ್ದುಕೊಂಡು ಅದರೊಳಗೆ ತೀವ್ರವಾಗಿ ಲಿಪ್‌ಲಾಕ್ (Lip Lock) ಮಾಡಿಕೊಂಡಿದ್ದಾರೆ. ಇವರ ಈ ಅತಿಯಾದ ಚೇಷ್ಟೆಗಳನ್ನು ಕಂಡ ನೆಟ್ಟಿಗರು, "ಇದೇನು ಸ್ವಾಮೀ ಬಿಗ್ ಬಾಸ್ ಮನೆಯೋ ಅಥವಾ ಓಯೋ ರೂಮೋ?" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.
ವಾರಾಂತ್ಯದ 'ದಾದಾ ದರ್ಬಾರ್' ಎಪಿಸೋಡ್‌ನಲ್ಲಿ ನಿರೂಪಕ, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಈ ಜೋಡಿಯ ವರ್ತನೆಗೆ ಸಿಡಿದೆದ್ದಿದ್ದಾರೆ. ವೇದಿಕೆ ಮೇಲೆಯೇ ಇಬ್ಬರಿಗೂ ಬೆಂಡೆತ್ತಿದ ಗಂಗೂಲಿ ಅಂತಿಮ ಎಚ್ಚರಿಕೆ ರವಾನಿಸಿದ್ದಾರೆ. 'ಆರಂಭದಲ್ಲಿ ನಿಮ್ಮಿಬ್ಬರ ನಡುವಿನ ಪ್ರೀತಿ, ಬಾಂಡಿಂಗ್ ನೋಡಿ ವೀಕ್ಷಕರಿಗೆ ಇಷ್ಟವಾಗಿತ್ತು. ಆದರೆ ಈಗ ನೀವು ಎಲ್ಲಾ ಮಿತಿಗಳನ್ನು ದಾಟಿದ್ದೀರಿ. ಪ್ರೀತಿ ಮಾಡುವುದು ತಪ್ಪಲ್ಲ, ಆದರೆ ಇದು ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡುವ ‘ಫ್ಯಾಮಿಲಿ ಶೋ’ ಎಂಬುದನ್ನು ಮರೆಯಬೇಡಿ. ಇಂತಹ ಅಶ್ಲೀಲ ವರ್ತನೆಯನ್ನು ಬಿಗ್ ಬಾಸ್ ಸಹಿಸುವುದಿಲ್ಲ. ನೀವು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಈ ಶೋನಲ್ಲಿ ಇರಲು ನೀವಿಬ್ಬರೂ ಅರ್ಹರಲ್ಲ ಎನಿಸುತ್ತಿದೆ. ಇದು ನಿಮಗೆ ಕೊನೆಯ ವಾರ್ನಿಂಗ್, ಇನ್ನೊಮ್ಮೆ ಹೀಗಾದರೆ ಶೋನಿಂದ ಹೊರದಬ್ಬಬೇಕಾಗುತ್ತದೆ' ಎಂದು ಗಂಗೂಲಿ ನೇರವಾಗಿಯೇ ಎಚ್ಚರಿಸಿದ್ದಾರೆ.
ರಾಜ್‌ವೀರ್ ದೇಯ್: ಪಶ್ಚಿಮ ಬಂಗಾಳದ ಸಿಲಿಗುರಿಯ ಮಾಡೆಲ್ ಮತ್ತು ನಟ. ಈ ಹಿಂದೆ ಎಂಟಿವಿ 'ರೋಡೀಸ್: ಕರ್ಮ್ ಯಾ ಕಾಂಡ್' (2023) ಮೂಲಕ ಪ್ರಸಿದ್ಧಿ ಪಡೆದಿದ್ದ ಈತ, ಬಿಗ್ ಬಾಸ್ ಬಾಂಗ್ಲಾ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ.
ನಂದಿನಿ ದತ್ತಾ: ಬಂಗಾಳಿ ಕಿರುತೆರೆ ಮತ್ತು ಒಟಿಟಿಯ ಖ್ಯಾತ ನಟಿ. 'ಬಸಂತ ಬಿಲಾಶ್ ಮೆಸ್‌ಬಾರಿ', 'ರಾಮ್ ಕೃಷ್ಣಾ' ಧಾರಾವಾಹಿಗಳು ಹಾಗೂ 'ಬೋಧೋನ್' ವೆಬ್ ಸೀರೀಸ್ ಮೂಲಕ ಮನೆಮಾತಾಗಿದ್ದಾಳೆ.
ಸದ್ಯ ಸೌರವ್ ಗಂಗೂಲಿ ನೀಡಿರುವ ಈ ಕಠಿಣ ಎಚ್ಚರಿಕೆಯ ನಂತರವಾದರೂ ಈ ಜೋಡಿ ತಮ್ಮ ರೊಮ್ಯಾನ್ಸ್ ಬದಿಗಿಟ್ಟು ಆಟದ ಕಡೆ ಗಮನ ಹರಿಸುತ್ತಾರಾ ಅಥವಾ ಮನೆಯಿಂದ ಹೊರಬೀಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.