ಸಲಗದ ಮದ ಆನೆಗೆ ಟಾಪ್​ ಮೂರನೇ ಸ್ಥಾನವೂ ಸಿಗಲಿಲ್ಲ: ಬಿಗ್‌ಬಾಸ್ ಮನೆಯಿಂದ ವಿನಯ್ ಗೌಡ ಔಟ್, ಹೇಗಿತ್ತು ಅವರ ಹೆಜ್ಜೆ ಗುರುತುಗಳು!

By Govindaraj S  |  First Published Jan 28, 2024, 10:02 PM IST

ಬಿಗ್‌ಬಾಸ್‌ ಕನ್ನಡ 10ನೇ ಸೀಸನ್‌ ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಷನ್‌ ಚಕ್ರದ ಕುರ್ಚಿಯಲ್ಲಿ ಕಾರ್ತಿಕ್, ಸಂಗೀತಾ, ಪ್ರತಾಪ್‌ ಮತ್ತು ವಿನಯ್ ಕೂತಿದ್ದರು. 


ಬಿಗ್‌ಬಾಸ್‌ ಕನ್ನಡ 10ನೇ ಸೀಸನ್‌ ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಷನ್‌ ಚಕ್ರದ ಕುರ್ಚಿಯಲ್ಲಿ ಕಾರ್ತಿಕ್, ಸಂಗೀತಾ, ಪ್ರತಾಪ್‌ ಮತ್ತು ವಿನಯ್ ಕೂತಿದ್ದರು. ತಿರುಗುಣಿ ತಿರುಗುತ್ತಿದ್ದ ಹಾಗೆಯೇ ಮೂವರ ಉಸಿರೂ ಅಷ್ಟೇ ಏರಿಳಿಯುತ್ತಿತ್ತು. ಎಲ್ಲ ಸ್ಪರ್ಧಿಗಳು ಕಣ್ಣುಮುಚ್ಚಿ ಪ್ರಾರ್ಥಿಸುತ್ತಿದ್ದರು. ಕೊನೆಗೂ ವಿನಯ್‌ ಎದುರಿಗೆ ಬಂದಾಗ ಮನೆಯ ಬಾಗಿಲು ತೆರೆದುಕೊಂಡಿತು. ವಿನಯ್ ಮನೆಯಿಂದ ಹೊರಬಂದರು. ಮೂರನೇ ರನ್ನರ್ ಅಪ್ ಆಗಿರುವ ವಿನಯ್ ಗೌಡ ಅವರು ಈ ಸೀಸನ್‌ನಲ್ಲಿ ಮೂಡಿಸಿರುವ ಹೆಜ್ಜೆಗುರುತು ಸಣ್ಣದೇನಲ್ಲ. ಅದು ಅಳಿಸಲಾಗದಂಥ ಛಾಪು. ಬಿಗ್‌ಬಾಸ್ ಮನೆಯೊಳಗೆ ವಿನಯ್ ಗೌಡ ಮೂಡಿಸಿದ ಹೆಜ್ಜೆಗುರುತನ್ನು ತೋರಿಸುವ ಪ್ರಯತ್ನವನ್ನು ಜಿಯೊಸಿನಿಮಾ ಇಲ್ಲಿ ಮಾಡುತ್ತಿದೆ. 

ಬಿಗ್‌ಬಾಸ್‌ ಮನೆಗೆ ಜನರ ಕಣ್ಣಲ್ಲಿ ಹೀರೊ ಆಗಲು ಬರುವವರು ಸಾಕಷ್ಟಿದ್ದಾರೆ. ಆದರೆ ‘ನಾನು ವಿಲನ್ ಆಗಲು ಬಂದಿದ್ದೇನೆ’ ಎಂದು ಹೇಳಿಕೊಂಡೇ ಬಂದವರು ಬಹುಶಃ ಒಬ್ಬರೇ! ಅವರು ವಿನಯ್ ಗೌಡ!! ಈ ಸೀಸನ್‌ನಲ್ಲಿ ನಡೆದ ಅತಿದೊಡ್ಡ ಗಲಾಟೆಗಳನ್ನು ಪಟ್ಟಿಮಾಡಿದಾರೆ ಅದರ ಕೇಂದ್ರದಲ್ಲಿ ವಿನಯ್ ಕಾಣಿಸುತ್ತಾರೆ. ಈ ಮನೆಯಲ್ಲಿ ಅತಿ ಹೆಚ್ಚು ಜನರ ಜೊತೆ ಸ್ನೇಹಸಂಬಂಧ ಕಾಪಾಡಿಕೊಂಡವರ ಪಟ್ಟಿಯನ್ನು ತಯಾರಿಸಿದರೆ ಅದರ ಕೇಂದ್ರದಲ್ಲಿಯೂ ವಿನಯ್ ಇರುತ್ತಾರೆ. ಸದಾಕಾಲ ಯುದ್ಧದ ಉನ್ಮಾದ; ಜೊತೆಗದ್ದವರ ಹಿತಕಾಯಲು ಸದಾ ಬದ್ಧ ಇದು ವಿನಯ್ ಅವರ ವ್ಯಕ್ತಿತ್ವಕ್ಕೆ ನಿಡಬಹುದಾದ ಟ್ಯಾಗ್‌ಲೈನ್. ಮೂರನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟ ವಿನಯ್, ಶೇ 60ರಷ್ಟು ಮತಗಳನ್ನು ಪಡೆದು ಸಮರ್ಥ ಸದಸ್ಯರಾಗಿ ಆಯ್ಕೆಯಾಗಿದ್ದರು. 

Tap to resize

Latest Videos

ಸಂತು ಹಿಂದೆ ಪಂತು ಕೂಡ ಔಟ್: ಬಿಗ್‌ಬಾಸ್ ಮನೆಯಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಭರ್ಜರಿ ಜರ್ನಿ ಹೇಗಿತ್ತು ಗೊತ್ತಾ!

ಫಿನಾಲೆಗೆ ಎರಡೇ ದಿನಕ್ಕೆ ಮುಂಚಿತವಾಗಿ ಬಿಗ್‌ಬಾಸ್‌ ಮನೆಯಲ್ಲಿ ‘ಜ್ಞಾಪಕ ಚಿತ್ರಶಾಲೆ’ಯನ್ನು ತೆರೆಯಲಾಗಿತ್ತು. ಅಂದರೆ ಗೋಡೆಯ ಮೇಲೆ ಈ ಸೀಸನ್‌ ಅತಿಮುಖ್ಯ ಘಟ್ಟಗಳ ಛಾಯಾಚಿತ್ರವನ್ನು ಇರಿಸಿ, ಸದಸ್ಯರಿಗೆ ಆ ಗಳಿಗೆಗಳನ್ನು ನೆನಪಿಸಿಕೊಳ್ಳಲು ಕೇಳಲಾಗಿತ್ತು. ಅದರಲ್ಲಿ ಕಾರ್ತಿಕ್ ಅವರು ವಿನಯ್‌ ಅವರಿಗೆ ಆಡಿದ ಮಾತು, ‘ನೀನು ಇಷ್ಟೊಂದು ಪರೀಕ್ಷೆಗಳನ್ನು ಒಡ್ಡದಿದ್ದರೆ, ನಾನು ಈವತ್ತು ಈ ಜಾಗದಲ್ಲಿ ನಿಲ್ಲುತ್ತಿರಲಿಲ್ಲ’. ಸಂಗೀತಾ ಆಡಿದ ಮಾತು, ‘ಈ ಮನೆಯಲ್ಲಿ ನೀವಿಲ್ಲದೆ ನಾನಿಲ್ಲ. ನಾನಿಲ್ಲದೆ ನೀವಿಲ್ಲ’. ಪ್ರಮುಖ ಪ್ರತಿಸ್ಫರ್ಧಿಗಳ ಬಾಯಿಂದ ಬಂದ ಈ ಮಾತುಗಳೇ ವಿನಯ್ ಗೌಡ ಅವರ ಸ್ಥಾನ ಎಂಥದ್ದು ಎಂಬುದನ್ನು ತಿಳಿಸುವಂತಿದೆ.  ಬರೀ ಏರಿಳಿತಗಳಷ್ಟೇ ಅಲ್ಲ, ನಾಟಕೀಯ ತಿರುವುಗಳನ್ನೂ ಒಳಗೊಂಡಿರುವ ವಿನಯ್ ಅವರ ಜರ್ನಿಯ ಪ್ರಮುಖ ಘಟ್ಟವನ್ನು ಜಿಯೊ ಸಿನಿಮಾ ನಿಮ್ಮ ಮುಂದೆ ತೆರೆದಿಡುತ್ತಿದೆ. 

ಟಾಸ್ಕ್‌ನಲ್ಲಿ ಸಾಟಿಯಿಲ್ಲ: ಬಿಗ್‌ಬಾಸ್‌ ಮನೆಯ ಟಾಸ್ಕ್‌ಗಳ ವಿಷಯ ಬಂದರೆ ವಿನಯ್ ಮೂಡಿಸಿದ ಛಾಪು ಯಾರೂ ಅಳಿಸುವಂಥದ್ದಲ್ಲ. ಗುಂಪುಗಳಲ್ಲಿ ಆಡುವಾಗಲೂ, ವೈಯಕ್ತಿಕ ಆಟದಲ್ಲಿಯೂ ವಿನಯ್‌ ಎರಡು ಹೆಜ್ಜೆ ಮುಂದೇ ಇರುತ್ತಿದ್ದರು. ಆಟದಲ್ಲಿ ಅವರ ಅಗ್ರೆಶನ್ ಮನೆಯೊಳಗೆ ಮೂಡಿಸಿದ ಕಂಪನಗಳಿಗೆ ಲೆಕ್ಕವಿಲ್ಲ.  ಎರಡನೇ ವಾರದಲ್ಲಿ ಹಳ್ಳಿಮನೆ ಟಾಸ್ಕ್‌ನಲ್ಲಿ ನಮ್ರತಾ ನಾಯಕಿಯಾಗಿದ್ದ ಉಗ್ರಂ ತಂಡ, ತನಿಷಾ ನೇತೃತ್ವದ ತಂಡವನ್ನು ಸೋಲಿಸುವಲ್ಲಿ ವಿನಯ್ ಅವರ ಪಾತ್ರ ಹಿರಿದಾದದ್ದು. ಕುಸ್ತಿಯ ಕಣದಲ್ಲಿ ವಿನಯ್ ಮತ್ತು ಮೈಕಲ್ ಎದುರಾಬದಿರಾದಾಗ ಮೈಕಲ್ ಗೆಲುವನ್ನು ನೆಚ್ಚಿಕೊಂಡವರೇ ಹೆಚ್ಚು. ಆದರೆ ಗೆದ್ದಿದ್ದು ಮಾತ್ರ ವಿನಯ್ ಇದು ಗುಂಪಿನಲ್ಲಿ ಅವರ ಆಟದ ಸಾಮರ್ಥ್ಯವನ್ನು ಸಾಬೀತುಗೊಳಿಸಿದರೆ, ನಾಲ್ಕನೇ ವಾರದಲ್ಲಿ ತುಕಾಲಿ ಸಂತೋಷ್ ಅವರನ್ನು ಹಿಂದಿಕ್ಕಿ ನಾಯಕನಾಗಿ ಆಯ್ಕೆಯಾಗಿದ್ದು ಅವರ ವೈಯಕ್ತಿಕ ಆಟದ ಸಾಮರ್ಥ್ಯವನ್ನು ಸಾಬೀತುಗೊಳಿಸುವಂತಿತ್ತು. 

ವಿವಾದಗಳ ಸರಮಾಲೆ: ವಿಲನ್ ಆಗಲು ಬಯಸುತ್ತೇನೆ ಎಂದು ಒಳಗೆ ಹೋದ ವಿನಯ್ ಮನೆಯೊಳಗಿನ ಹಲವು ಸ್ಪರ್ಧಿಗಳ ಪಾಲಿಗೆ ಅಕ್ಷರಶಃ ವಿಲನ್ ಆದರು. ಹಲವರು ಇವರನ್ನುಎದುರು ಹಾಕಿಕೊಂಡು ಹೀರೊ ಆಗಲು ಯತ್ನಿಸಿದ್ದೂ ಇದೆ. ಕೋಪ, ಅಗ್ರೆಶನ್, ಮುನ್ನುಗ್ಗುವ ಛಲ ಆ ಒತ್ತಡದಲ್ಲಿ ಬಂದ ಮಾತುಗಳಿಂದ ಬಂದ ಮಾತುಗಳು, ಆಡಿದ ವರ್ತನೆಗಳಿಂದ ಮನೆಯ ಹೊರಗೂ ‘ವಿಲನ್’ ಆಗಿ ಕಾಣಿಸಿದ್ದೂ ಇದೆ. ವಿವಾದಗಳ ಸರಪಳಿ ಬಿಗ್‌ಬಾಸ್ ಜರ್ನಿಯುದ್ಧಕ್ಕೂ ಅವರನ್ನು ಸುತ್ತಿಕೊಳ್ಳುತ್ತಲೇ ಇತ್ತು. ಅದು ಕೆಲವೊಮ್ಮೆ ಅತಿರೇಕಕ್ಕೂ ಹೋಗಿತ್ತು. ಮೊದಲು ಸಂಗೀತಾ ಜೊತೆಗೆ, ಕಾರ್ತಿಕ್ ಜೊತೆಗೆ, ನಂತರದ ದಿನಗಳಲ್ಲಿ ಪ್ರತಾಪ್ ಜೊತೆಗೆ ಅವರ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. 

ಹೂವುಗಳನ್ನು ಕಾಪಾಡಿಸಿಕೊಳ್ಳುವ ಟಾಸ್ಕ್‌ನಲ್ಲಿಯೂ ವಿನಯ್‌ ಅವರ ಆಕ್ರಮಣಕಾರಿ ಆಟ ಜಗಳಕ್ಕೆ ಕಾರಣವಾಗಿತ್ತು. ಇದೇ ಪರಿಸ್ಥಿತಿ ಬಟ್ಟೆಗಳನ್ನು ಒಗೆದು ಹಾಕುವ ‘ಕಲೆ ಒಳ್ಳೆಯದಲ್ಲ’ ಟಾಸ್ಕ್‌ನಲ್ಲಿಯೂ ಉಂಟಾಗಿತ್ತು. ಅಲ್ಲಿ ಅವಿನಾಶ್ ಮತ್ತು ವಿನಯ್ ಮಧ್ಯೆ ನಡೆದ ಘರ್ಷಣೆ, ವಿನಯ್ ಮತ್ತು ಕಾರ್ತಿಕ್ ನಡುವೆ ನಡೆದ ಘರ್ಷಣೆ ಸಾಕಷ್ಟು ಜಗಳ ಹುಟ್ಟಿಸಿತ್ತು. ರಕ್ಕಸರು ಮತ್ತು ಗಂಧರ್ವರ ಟಾಸ್ಕ್‌ನಲ್ಲಿ ವಿನಯ್ ರಾಕ್ಷಸರಾಗಿದ್ದಾಗ ಕಾರ್ತಿಕ್ ಜೊತೆಗೆ ನಡೆದುಕೊಂಡ ರೀತಿ ವಿವಾದವನ್ನೇ ಸೃಷ್ಟಿಸಿತ್ತು. ಹಿಟ್ಟನ್ನು ತೆಗೆದುಕೊಂಡು ವಿನಯ್, ಕಾರ್ತಿಕ್ ಮುಖಕ್ಕೆ ಹೊಡೆದಿದ್ದರು. ಹಾಗೆಯೇ ಕಾರ್ತಿಕ್ ನೆಲಕ್ಕೆಸೆದ ಚಪ್ಪಲಿ ವಿನಯ್ ಅವರಿಗೆ ಹೋಗಿ ಬಡಿದಿತ್ತು. ಇದರಿಂದ ಸಿಟ್ಟಿಗೆದ್ದ ವಿನಯ್, ಮನೆಬಿಟ್ಟು ಹೋಗುತ್ತೇನೆ ಎಂದು ಹೇಳಿ ಬಿಗ್‌ಬಾಸ್ ಮುಖ್ಯದ್ವಾರವನ್ನು ತಟ್ಟಿದ್ದರು. 

ಸಂಗೀತಾ-ವಿನಯ್‌ ಮುಖಾಮುಖಿ: ಈ ಸೀಸನ್‌ನಲ್ಲಿ ವಿನಯ್ ಗೌಡ ಮತ್ತು ಸಂಗೀತಾ ನಡುವಿನ ಸಂಬಂಧದ ಏರಿಳಿತದ ಗ್ರಾಫ್ ತುಂಬ ಕುತೂಹಲಕಾರಿಯಾಗಿದ್ದು. ಈ ಮೊದಲೇ ಧಾರಾವಾಹಿಯೊಂದರಲ್ಲಿ ಸುಧೀರ್ಘ ಅವಧಿಗೆ ತೆರೆಯನ್ನು ಹಂಚಿಕೊಂಡಿದ್ದ ವಿನಯ್ ಮತ್ತು ಸಂಗೀತಾ ಮತ್ತೆ ಬಿಗ್‌ಬಾಸ್ ಮನೆಯೊಳಗೆ ಭೇಟಿಯಾದಾಗ ಖುಷಿಯಿಂದಲೇ ತಬ್ಬಿಕೊಂಡಿದ್ದರು. ಆದರೆ ಈ ಖುಷಿ ತುಂಬ ಕಾಲ ಉಳಿಯಲಿಲ್ಲ. ಅಸಮರ್ಥರ ಗುಂಪಿನಿಂದ ಬಂದಿರುವ ಸಂಗೀತ ಸೋಪಾ ಮೇಲೆ ಕೂಡಬಾರದು ಎಂದು ವಿನಯ್ ಹೇಳಿದ್ದನ್ನು ಸಂಗೀತಾ ಲೆಕ್ಕಿಸದೇ ಹೋಗಿದ್ದು ಅವರಿಬ್ಬರ ನಡುವೆ ಮೊದಲ ಕಿಡಿ ಹೊತ್ತಿಕೊಳ್ಳಲು ಕಾರಣವಾಯ್ತು. ನಂತರ ಇದು ನಾಮಿನೇಷನ್‌ನಲ್ಲಿಯೂ ಇನ್ನಷ್ಟು ಜೋರಾಗಿ ಉರಿಯಿತು. ಅಲ್ಲಿಂದ ಮುಂದೆ ಅಸಮರ್ಥರು ಸಮರ್ಥರಾದ ನಂತರವೂ ಮನೆ ಎರಡು ಗುಂಪುಗಳಲ್ಲಿ ವಿಂಗಡಿಸಿಹೋಗಿತ್ತು. ಒಂದು ಗುಂಪಿನಲ್ಲಿ ಸಂಗೀತಾ ಮತ್ತು ಕಾರ್ತೀಕ್ ಇದ್ದರೆ, ಇನ್ನೊಂದು ಗುಂಪಿನಲ್ಲಿ ವಿನಯ್ ಇದ್ದರು. 

ಮೊದಲೇ ವಾರವೇ ಕಿಡಿಯಾಗಿ ಸಿಡಿದಿದ್ದ ಸಂಗೀತಾ-ವಿನಯ್ ನಡುವಿನ ಅಸಮಧಾನ ಕಿಚ್ಚಾಗಿ ಧಗಧಗಿಸಿದ್ದು ಎರಡನೇ ವಾರದ ಹಳ್ಳಿ ಟಾಸ್ಕ್‌ನಲ್ಲಿ. ಎರಡು ಕುಟುಂಬಗಳಾಗಿ ಆಡುವಾಗ ಒಂದು ಗುಂಪಿಗೆ ವಿನಯ್ ಮತ್ತೊಂದು ಗುಂಪಿಗೆ ಸಂಗೀತಾ ನೇತೃತ್ವ ವಹಿಸಿದ್ದರು. ಒಬ್ಬರು ತಯಾರಿಸಿದ ಸಾಮಗ್ರಿಗಳನ್ನು ಇನ್ನೊಬ್ಬರು ಹಾಳುಗೆಡವುವ ಚಟುವಟಿಕೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಮಾತಿನ ಬಾಣಗಳು ಎರಡೂ ಕಡೆಗಳಿಂದ ಹಾರಿದವು. ಆ ಹೊತ್ತಿನಲ್ಲಿ ವಿನಯ್ ‘ನಾವೇನೂ ಕೈಗೆ ಬಳೆ ತೊಟ್ಕೊಂಡಿಲ್ಲ’ ಎಂದು ಆಡಿದ ಮಾತು ಸಂಗೀತಾ ಅವರನ್ನು ಸಿಟ್ಟಿಗೆಬ್ಬಿಸಿತ್ತು. ಅದೇ ಹಟದಲ್ಲಿ ಅವರು ಇಡೀ ಟಾಸ್ಕ್‌ ಅನ್ನು ಕೈತುಂಬ ಬಳೆ ತೊಟ್ಟುಕೊಂಡೇ ಆಡಿದ್ದರು. ಅಲ್ಲದೆ ವಿನಯ್ ಜತೆಗೆ ಜಗಳವಾದಾಗಲೆಲ್ಲ ‘ನಾನು ಬಳೆ ತೊಟ್ಕೊಂಡಿದೀನಿ’ ಎಂದು ಎತ್ತಿತೋರಿಸಿದ್ದರು. 

ಈ ಬಳೆಯ ವಿವಾದ ಮನೆಯ ಹೊರಗೂ ಸಾಕಷ್ಟು ಸದ್ದು ಮಾಡಿತ್ತು. ಅಷ್ಟೇ ಅಲ್ಲ, ವಾರಾಂತ್ಯದಲ್ಲಿ ಕಿಚ್ಚನ ಪಂಚಾಯ್ತಿಯಲ್ಲಿಯೂ ಈ ವಿಷಯ ಚರ್ಚೆಗೊಳಗಾಗಿತ್ತು. ಸುದೀಪ್ ಅವರು ಆ ವಾರದ ಕಿಚ್ಚನ ಚಪ್ಪಾಳೆಯನ್ನು ‘ಬಳೆ’ಗೇ ಕೊಟ್ಟಿದ್ದರು. ಇದು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗಿತ್ತು. ಕೆಲವು ವಾರಗಳ ನಂತರ ಸಂಗೀತಾ, ತಮ್ಮ ಕಂಪರ್ಟ್‌ ಜೋನನ್ನು ಬಿಡಲು ನಿರ್ಧರಿಸಿ ವಿನಯ್ ತಂಡ ಸೇರಿಕೊಂಡರು. ಆಗ ವಿನಯ್ ಜೊತೆಗೆ ಚೆನ್ನಾಗಿಯೇ ಇದ್ದರು. ಆದರೆ ಮುಂದೆ ಅವರ ತಂಡದಿಂದ ಹೊರಬಿದ್ದಾಗ ಸಂಗೀತಾ ಜೊತೆಗಿನ ಘರ್ಷಣೆ ಮತ್ತೆ ಮುಂದುವರಿದಿತ್ತು. ಮುಂದೆ ರಕ್ಕಸರು, ಗಂಧರ್ವರು ಟಾಸ್ಕ್‌ನಲ್ಲಿಯೂ ವಿನಯ್ ಸಂಗೀತಾ ನಡುವೆ ಘರ್ಷಣೆ ಉಂಟಾಗಿತ್ತು. ಹೀಗೆ ಪದೇ ಪದೇ ಜಗಳವಾಡಿಕೊಳ್ಳುತ್ತಲೇ ಇದ್ದ ವಿನಯ್ ಮತ್ತು ಸಂಗೀತ  ಯಾವತ್ತೂ ಸರಿಹೋಗುವುದಿಲ್ಲವೇನೋ ಅನಿಸುವಂತಿತ್ತು. ಆದರೆ ಶೈನ್ ಮತ್ತು ಶುಭಾ ಮನೆಯೊಳಗೆ ಬಂದಹೋದ ಮೇಲೆ ವಿನಯ್ ಬದಲಾದರು. ಅವರ ಅಗ್ರೆಶನ್ ಗಮನಾರ್ಹವಾಗಿ ಕಡಿಮೆಯಾಯಿತು. ಸಂಗೀತಾ ಜೊತೆಗಿನ ಸಂಬಂಧವೂ ಸಾಕಷ್ಟು ಸುಧಾರಿಸಿತು.  ಕಳೆದ ಕೆಲವು ವಾರಗಳಲ್ಲಿ ಅವರಿಬ್ಬರೂ ಉತ್ತಮ ಸ್ನೇಹಿತರು ಎನ್ನುವಷ್ಟು ಹತ್ತಿರವಾಗಿದ್ದಾರೆ. ಪರಸ್ಪರ ಬೆನ್ನು ತಟ್ಟಿಕೊಂಡಿದ್ದಾರೆ. 

ಭಾವುಕ-ಸ್ನೇಹಪರ ವಿನಯ್: ವಿನಯ್ ಅವರ ಅಗ್ರೆಶನ್ ‘ವಿಲನ್’ ಮುಖದ ಹಿಂದೆ ಒಬ್ಬ ಸ್ನೇಹಪರ ವ್ಯಕ್ತಿಯಿದ್ದಾನೆ. ಪ್ರೀತಿಗೆ ಕರಗುವ, ಸ್ನೇಹಕ್ಕೆ ನಿಲ್ಲುವ ಮಗುಮನಸ್ಸಿನ ಮುಗ್ಧನಿದ್ದಾನೆ ಎಂಬುದೂ ಬಿಗ್‌ಬಾಸ್ ಮನೆಯೊಳಗೆ ಹಲವು ಸಲ ಸಾಬೀತಾಗಿದೆ.  ಹೆಂಡತಿ ಮತ್ತು ಮಗುವನ್ನು ನೆನೆಸಿಕೊಂಡಾಗೆಲ್ಲ ವಿನಯ್ ಕಣ್ಣುಗಳಲ್ಲಿ ನೀರು ಒಸರಿದೆ. ವೈಲ್ಡ್ ಕಾರ್ಡ ಎಂಟ್ರಿಯಲ್ಲಿ ಬಂದ ಪವಿ, ‘ಹೊರಗೆ ನಿಮ್ಮ ಹೆಂಡತಿ, ಮಗ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದ್ದು ಕೇಳಿ ವಿನಯ್ ಬಾತ್‌ರೂಮಿನಲ್ಲಿ ಹೋಗಿ ಬಿಕ್ಕಿಬಿಕ್ಕಿ ಅತ್ತಿದ್ದರು.   ಅದರಾಚೆಗೆ ಅವರು ಎಂದಿಗೂ ತಮ್ಮ ಸ್ನೇಹಿತರನ್ನು ಬಿಟ್ಟುಕೊಟ್ಟಿಲ್ಲ. ಮನೆಯೊಳಗೇ ಗೆಳೆಯರಾದ ಮೈಕಲ್, ನಮ್ರತಾ, ಸ್ನೇಹಿತ್, ರಕ್ಷಕ್ ಇವರಾರೂ ವಿನಯ್ ಬಗ್ಗೆ ಯಾವತ್ತೂ ಕೆಟ್ಟ ಮಾತುಗಳಾಡಿಲ್ಲ. 

ಕೆಲವೇ ದಿನಗಳ ಕಾಲ ಮನೆಯೊಳಗಿದ್ದು ವಿನಯ್ ಜೊತೆಗೆ ಒಡನಾಡಿದ ಪವಿ ಕೂಡ, ‘ವಿನಯ್ ಹೊರಗೆ ಕಂಡ ಹಾಗೆ ಇಲ್ಲ. ಅವರು ತುಂಬ ಒಳ್ಳೆಯವರು’ ಎಂದೇ ಹೇಳಿದ್ದರು. ನಮ್ರತಾ, ‘ನನಗೊಬ್ಬ ಅಣ್ಣ ಇಲ್ಲ ಎಂಬ ಕೊರತೆಯನ್ನು ವಿನಯ್ ನೀಗಿಸಿದ್ದಾರೆ’ ಎಂದು ಹೇಳಿದ್ದಾರೆ. ಮೈಕಲ್, ‘ವಿನಯ್ ನನ್ ಪ್ರೀತಿಯ ಮಗ’ ಎಂದು ಹೇಳಿ ಹೊರಗೆ ಹೋಗುವಾಗ ವಿಶೇಷಾಧಿಕಾರವನ್ನು ವಿನಯ್‌ ಅವರಿಗೇ ಕೊಟ್ಟು ಹೋಗಿದ್ದರು. ಸ್ನೇಹಿತ್‌ ಮರಳಿ ಮನೆಗೆ ಬಂದಾಗ ವಿನಯ್ ಗೆಲ್ಲಲೆಂದು ಪೂಜೆ ಮಾಡಿಸಿಕೊಂಡು ಬಂದ ತಾಯತ ಕೊಟ್ಟಿದ್ದರು. ‘ಬೃಂದಾವನ’ ಧಾರಾವಾಹಿ ತಂಡ ಬಿಗ್‌ಬಾಸ್ ಮನೆಯೊಳಗೆ ಬಂದಿದ್ದಾಗ ತಮ್ಮ ಮಗನನ್ನು ನೆನಪಿಸಿಕೊಂಡು ವಿನಯ್ ಕಣ್ಣೀರಾಗಿದ್ದರು. ವಿನಯ್ ಪತ್ನಿ ಅಕ್ಷತಾ ಬಿಗ್‌ಬಾಸ್ ಮನೆಗೆ ಭೇಟಿ ಕೊಟ್ಟಾಗ ವಿನಯ್ ಅಕ್ಷರಶಃ ಮಗುವಿನಂತಾಗಿಬಿಟ್ಟಿದ್ದರು. ಅವರ ಮಗನನ್ನು ಕಂಡು ಖುಷಿಯಿಂದ ಕುಣಿದಾಡಿದ್ದರು. ತಾವು ಅಕ್ಷತಾ ಅವರನ್ನು ನೋಡಿದ್ದು, ಮೆಚ್ಚಿದ್ದನ್ನು ನೆನಪಿಸಿಕೊಂಡು ಇಬ್ಬರೂ ಭಾವುಕರಾಗಿದ್ದರು.

ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ತುಕಾಲಿ ಸಂತೋಷ್‌: ಚಾಣಾಕ್ಷ ತಂತ್ರ ಮನರಂಜನೆಯ ಮಂತ್ರ ತುಕಾಲಿ ಬಗ್ಗೆ ನಿಮಗೆಷ್ಟು ಗೊತ್ತು?

ಈ ಸೀಸನ್‌ನಲ್ಲಿ ಅರ್ಧದಾರಿಯನ್ನು ವಿಲನ್ ಆಗಿಯೇ ಕ್ರಮಿಸಿರುವ ವಿನಯ್ ಕೊನೆಯ ದಿನಗಳಲ್ಲಿ ಸಂಪೂರ್ಣ ಬದಲಾಗಿಬಿಟ್ಟಿದ್ದರು. ಮನಸಲ್ಲಿನ ಎಲ್ಲ ಕಹಿಗಳನ್ನೂ ಹೊರಹಾಕಿ ಎಲ್ಲರ ಕಡೆಗೂ ಸ್ನೇಹದ ಹಸ್ತ ಚಾಚಿದ್ದರು. ‘ಯಾವತ್ತೂ ಇವರ ಜೊತೆ ಸ್ನೇಹ ಬಯಸುವುದಿಲ್ಲ’ ಎಂದು ಉರಿದುಕೊಂಡು ಹೇಳಿದ್ದ ಸಂಗೀತಾ ಅವರ ಕಡೆಗೂ ಸ್ನೇಹದ ಹಸ್ತ ಚಾಚಿದ್ದರು. ‘ನಿಮ್ಮ ಆಸೆ ಏನು ಹೇಳಿ’ ಎಂಬ ಬಿಗ್ ಬಾಸ್ ಪ್ರಶ್ನೆಗೆ, ‘ಮನೆಯ ಎಲ್ಲ ಸದಸ್ಯರೂ ಒಟ್ಟಿಗೇ ಕೂತು ಡಿನ್ನರ್ ಮಾಡಬೇಕು’ ಎಂದು ಹೇಳಿದ್ದರು. ಬಿಗ್‌ಬಾಸ್‌ ಈ ಸೀಸನ್‌ನ ಆರಂಭದಲ್ಲಿದ್ದ ಕೋಪಿಷ್ಠ ‘ವಿಲನ್’ ವಿನಯ್ ಮಾಯವಾಗಿ ಪ್ರಬುದ್ಧ, ಸ್ನೇಹಪರ, ಮೃದುಹೃದಯಿ, ಭಾವುಕ ‘ಹೀರೊ’ ವಿನಯ್‌ ಜನರ ಮನಸಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ. ವಿಲನ್ ಟೊ ಹೀರೊ ಎಂದು ವಿನಯ್ ಅವರ ಈ ಜರ್ನಿಯನ್ನು ನಿಸ್ಸಂಶಯವಾಗಿ ಕರೆಯಬಹುದು. ವಿನಯ್ ಅವರ ಈ ಪ್ರಯಾಣದ ಹಲವು ಮುಖ್ಯಘಟ್ಟಗಳನ್ನು, ಸ್ಮರಣೀಯ ಗಳಿಗೆಗಳನ್ನು ಜಿಯೊಸಿನಿಮಾದಲ್ಲಿ ಉಚಿತವಾಗಿ ನೋಡಬಹುದು.

click me!