
ಬೆಂಗಳೂರು (ಸೆ.6): ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಶ್ರಾವಣಿ ಸುಬ್ರಹ್ಮಣ್ಯ' ತನ್ನ ಪ್ರಸಾರವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದು, ಈ ಧಾರಾವಾಹಿಯ ಮುಖ್ಯ ಶೀರ್ಷಿಕೆ ಪಾತ್ರಧಾರಿಯಾಗಿದ್ದ ನಟಿ ಆಸಿಯಾ ಫಿರ್ದೋಸ್ (Asiya Firdose) ತಮ್ಮ 'ಶ್ರಾವಣಿ' ಪಾತ್ರಕ್ಕೆ ಅತ್ಯಂತ ಭಾವನಾತ್ಮಕವಾಗಿ ವಿದಾಯ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಶ್ರಾವಣಿಯಾಗಿ ಸಾಗಿದ ತಮ್ಮ ಪಯಣವನ್ನು ನೆನಪಿಸಿಕೊಂಡಿರುವ ಆಸಿಯಾ, ಈ ಸುಂದರ ಅನುಭವವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನನ್ನೊಳಗಿರುವ 'ಶ್ರಾವಣಿ'ಯನ್ನು ಎಂದಿಗೂ ದೂರ ಕಳುಹಿಸಲು ನನಗೆ ಇಷ್ಟವಿರಲಿಲ್ಲ. ಹಲವು ಹಂತಗಳಲ್ಲಿ ನನ್ನನ್ನು ನಾನು ಕಂಡುಕೊಳ್ಳಲು ಮತ್ತು ಮರಳಿ ಪಡೆಯಲು ಈ ಪಾತ್ರ ನನಗೆ ಸಹಾಯ ಮಾಡಿದೆ," ಎಂದು ಅವರು ಬರೆದುಕೊಂಡಿದ್ದಾರೆ.
ವಿದಾಯ ಹೇಳುವ ಕುರಿತು ಮನಬಿಚ್ಚಿ ಮಾತನಾಡಿರುವ ಆಸಿಯಾ, "ನನಗೆ ಗುಡ್‌ಬೈ (ವಿದಾಯ) ಹೇಳುವುದು ಎಂದರೆ ಅಷ್ಟಾಗಿ ಇಷ್ಟವಿಲ್ಲ. ಆದರೆ ಮುಕ್ತಾಯ ಎನ್ನುವುದು ಜೀವನದ ನಿಯಮ. ಕಿರುತೆರೆ ಧಾರಾವಾಹಿಯಲ್ಲಿ ಕೆಲಸ ಮಾಡುವುದು ಒಂದು ವಿಶಿಷ್ಟ ಅನುಭವ. ಕಾಲಕ್ರಮೇಣ ನಟಿಸುವ ಪಾತ್ರ ಹಾಗೂ ಧಾರಾವಾಹಿಯ ಜೊತೆಗಿರುವ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಸವಿನೆನಪಾಗಿ ಬಿಡುತ್ತಾರೆ. ಈ 'ಶ್ರಾವಣಿ' ಪಾತ್ರವನ್ನು ನಾನು ಎಂದೆಂದಿಗೂ ನನ್ನ ಹೃದಯದಲ್ಲಿ ಜೋಪಾನವಾಗಿಟ್ಟುಕೊಳ್ಳುತ್ತೇನೆ," ಎಂದು ಬರೆದಿದ್ದಾರೆ. ಅಲ್ಲದೆ, ಶ್ರಾವಣಿಯ ಪಯಣದಲ್ಲಿ ತಮ್ಮ ಮೇಲೆ ಪ್ರೀತಿ ವಾತ್ಸಲ್ಯ ಮಳೆಗರೆದ ಪ್ರೇಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ನಟಿ ಆಸಿಯಾ ಫಿರ್ದೋಸ್ 'ಶ್ರಾವಣಿ' ಪಾತ್ರಕ್ಕೆ ವಿದಾಯ ಹೇಳಿರುವ ಸಮಯ ಈಗ ಕಿರುತೆರೆ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇಂದಿನಿಂದ ಆರಂಭವಾಗಲಿರುವ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ - ಸೀಸನ್ 13'ಕ್ಕೆ (Bigg Boss Kannada 13) ಸೆಲೆಬ್ರಿಟಿ ಸ್ಪರ್ಧಿಯಾಗಿ ಆಸಿಯಾ ಫಿರ್ದೋಸ್ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿಗಳು ಬಲವಾಗಿ ಹರಿದಾಡುತ್ತಿವೆ.
'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ಮುಕ್ತಾಯ ಹಾಗೂ ಬಿಗ್ ಬಾಸ್ ಹೊಸ ಸೀಸನ್‌ನ ಪ್ರೋಮೊಗಳು ಹೊರಬಂದ ಬೆನ್ನಲ್ಲೇ ಈ ಗಾಸಿಪ್‌ಗಳಿಗೆ ಮತ್ತಷ್ಟು ಬಲ ಬಂದಿದೆ. ಆಯೋಜಕರು ಸ್ಪರ್ಧಿಗಳ ಪಟ್ಟಿಯನ್ನು ಗೌಪ್ಯವಾಗಿಟ್ಟಿದ್ದರೂ, ಕಿರುತೆರೆ ಮೂಲಗಳು ಹಾಗೂ ಪ್ರೋಮೊ ಕ್ಲೂಗಳ ಪ್ರಕಾರ ಆಸಿಯಾ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಈ ಹಿಂದೆ 'ಕನ್ಯಾಕುಮಾರಿ' ಹಾಗೂ ಇತ್ತೀಚಿನ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಗಳ ಮೂಲಕ ಕನ್ನಡ ಗೃಹಿಣಿಯರ ನೆಚ್ಚಿನ ನಟಿಯಾಗಿ ಗುರುತಿಸಿಕೊಂಡಿರುವ ಆಸಿಯಾ, ಬಿಗ್ ಬಾಸ್ ಮನೆ ಪ್ರವೇಶಿಸಿದರೆ ತಮ್ಮ ಅಪಾರ ಕಿರುತೆರೆ ಅನುಭವ ಹಾಗೂ ಜನಪ್ರಿಯತೆಯೊಂದಿಗೆ ದೊಡ್ಮನೆ ಅಂಗಳದಲ್ಲೂ ಗಮನ ಸೆಳೆಯಲಿದ್ದಾರೆ. ಶ್ರಾವಣಿಯ ಅಧ್ಯಾಯ ಮುಗಿಸಿರುವ ಆಸಿಯಾ, ಬಿಗ್ ಬಾಸ್ ಮೂಲಕ ಹೊಸ ಪಯಣ ಆರಂಭಿಸಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.