ಅಣ್ಣಯ್ಯ ಸೀರಿಯಲ್ನ ಪಾರು ಮತ್ತು ಶಿವು ಲವ್ಸ್ಟೋರಿಯ ಪ್ರೊಮೋ ಬಿಡುಗಡೆಯಾಗುತ್ತಲೇ ಸೀರಿಯಲ್ ಪ್ರೇಮಿಗಳು ನಿರ್ದೇಶಕರಿಗೆ ಮಾಡ್ತಿರೋ ಪಾಠ ಏನು?
ಒಂದು ದೃಶ್ಯ, ಒಂದು ಡೈಲಾಗ್, ಒಂದು ಹಾಡು ಹಿಟ್ ಆಯ್ತು ಎಂದ್ರೆ ಸಾಕು... ಸಾಲು ಸಾಲು ಸಿನಿಮಾಗಳು, ಸೀರಿಯಲ್ಗಳು ಅದೇ ಸಿದ್ಧಸೂತ್ರ ಅಳವಡಿಸಿಕೊಂಡು ಬಂದ್ಬಿಡ್ತಾವೆ. ಅದು ಎಷ್ಟರಮಟ್ಟಿಗೆ ಎಂದರೆ ವ್ಹಾವ್ಹಾ ಎಂದು ಮೊದಲಿಗೆ ಶಿಳ್ಳೆ ಹೊಡೆದವರೇ ಅದೇ ರೀತಿಯದ್ದನ್ನು ಪದೇ ಪದೇ ನೋಡಿ ಥೂ ಎನ್ನುವಷ್ಟು ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮಾಡಿಬಿಡುವುದು ಬಹಳ ಹಿಂದಿನಿಂದಲೂ ನಡೆದೇ ಬಂದಿದೆ. ಯಾವುದೋ ಸಿನಿಮಾದಲ್ಲಿ ಒಂದು ಹಾಡಿನ ಲಿರಿಕ್ಸ್ ಸಕತ್ ಹಿಟ್ ಆಯಿತು ಎಂದರೆ, ಅದನ್ನೇ ಪುನಃ ಪುನಃ ಬಳಸುವುದು, ಯಾವುದೋ ಡೈಲಾಗ್ ಹಿಟ್ ಆದ್ರೆ, ಮತ್ತೊಂದು ಸಿನಿಮಾದಲ್ಲಿ ಅದನ್ನೇ ತುರುಕುವುದು, ಯಾವುದೋ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿ ಸಿನಿಮಾ ಬ್ಲಾಕ್ಬಸ್ಟರ್ ಆದ್ರೆ, ಅದೇ ಕಥೆಯಲ್ಲಿ ಸ್ವಲ್ಪ ಆಚೀಚೆ ಮಾಡಿ ಮತ್ತೊಂದು ಸಿನಿಮಾ ಮಾಡುವುದು... ಇವೆಲ್ಲಾ ನಡೆಯುತ್ತಲೇ ಇದೆ.
ಇದು ಸಿನಿಮಾ ಮಾತ್ರವಲ್ದೇ ಸೀರಿಯಲ್ಗೂ ಅನ್ವಯ ಆಗ್ತಿದೆ. ಒಬ್ಬ ಮುಗ್ಧದ ನಾಯಕಿ, ಒಬ್ಬ ವಿಲನ್ ಮಲತಾಯಿ... ಇದಂತೂ ಈಗ ಯಾವ ಚಾನೆಲ್ ಹಾಕಿದರೂ ಬದಲಾಗೋದೇ ಇಲ್ಲ. ಅವರಿಬ್ಬರ ನಡುವೆಯೇ ಕಥೆ ಐದಾರು ವರ್ಷ ಎಳೆದಾಡುತ್ತಲೇ ಇರುತ್ತದೆ. ಆ ವಿಲನ್ಗೆ ಕೊನೆಯಲ್ಲಿ ಹೇಗೆ ಬುದ್ಧಿ ಬರುತ್ತೆ ಎನ್ನುವುದಷ್ಟೇ ವಿಷಯ ಇರೋದು ಬಿಟ್ಟರೆ, ಕಥೆಗಳು ಕೂಡ ಒಂದೇ ರೀತಿ ಇರುತ್ತದೆ. ಇನ್ನು ವಿಲನ್ಗಳು ಸೊಸೆಯಂದಿರನ್ನು ಕೊಲ್ಲಲು, ಅವರ ಹೊಟ್ಟೆಯಲ್ಲಿ ಇರುವ ಮಗುವನ್ನು ಸಾಯಿಸಲು ಮಾಡುವ ತಂತ್ರಗಳೋ ಎಲ್ಲಾ ಸೀರಿಯಲ್ಗಳಲ್ಲಿಯೂ ಸೇಮ್ ಟು ಸೇಮ್. ಪಾನೀಯದಲ್ಲಿ ವಿಷ ಬೆರೆಸುವುದು, ಮತ್ತೊಬ್ಬಳು ಬಂದು ಅದನ್ನು ತಡೆಯುವುದು, ಮೆಟ್ಟಿಲಿಗೆ ಎಣ್ಣೆ ಹಾಕಿ ಜಾರಿಸುವುದು, ಕರೆಂಟ್ ಶಾಕ್ ತಗಲುವಂತೆ ಮಾಡುವುದು... ಇವೆಲ್ಲಾ ಆಗುತ್ತಿದ್ದರೂ ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ ತನ್ನ ಮಲತಾಯಿ ಎಂಥವಳು ಎಂದು ತಿಳಿಯದೇ ಇರುವ ಮುಗ್ಧ ನಾಯಕ! ಆದರೂ ವೀಕ್ಷಕರು ಸೀರಿಯಲ್ಗಳನ್ನು ನೋಡುತ್ತಾರೆ ಎನ್ನುವ ಭರವಸೆ ನಿರ್ದೇಶಕರಿಗೆ!
ಸೀರಿಯಲ್ ಬಿಟ್ಟು ಹಿಮಾಲಯದತ್ತ ಭಾಗ್ಯಲಕ್ಷ್ಮಿ! ಫ್ಯಾನ್ಸ್ ಶಾಕ್- ಕಾರಣ ತೆರೆದಿಟ್ಟ ನಟಿ ಸುಷ್ಮಾ
ಅದಿರಲಿ. ಇದೀಗ ರೊಮಾನ್ಸ್ ವಿಷಯಕ್ಕೆ ಬರುವುದಾದರೆ, ಮದುವೆಯಾದರೂ ಪತಿ-ಪತ್ನಿ ಸಂಸಾರ ನಡೆಸದೇ ಇರುವುದು ಬಹುತೇಕ ಸೀರಿಯಲ್ಗಳ ವಸ್ತುವಾಗಿಬಿಟ್ಟಿದೆ. ಅವರ ಮಧ್ಯೆ ಪ್ರೀತಿ ಸುಳಿಯಲು ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದ ಸಿನಿಮಾದಲ್ಲಿ ಇದ್ದಂತೆ ಆ ರೂಮಿನಲ್ಲಿ ಜಿರಳೆ ತರಿಸುವುದು, ಅದನ್ನು ನೋಡಿ ನಾಯಕಿ ನಾಯಕನನ್ನು ತಬ್ಬಿಕೊಳ್ಳುವುದು ಇಲ್ಲವೇ ನಾಯಕಿ ಮೇಲೆ ಏನನ್ನೋ ಹುಡುಕಲು, ತೆಗೆಯಲು ಹತ್ತುವುದು ಕೈಜಾರಿ ಬಿದ್ದಾಗ ನಾಯಕ ಬಂದು ಆಕೆಯನ್ನು ತಬ್ಬಿಕೊಳ್ಳುವುದು, ಕಾಕತಾಳೀಯ ಎಂಬಂತೆ ಮಂಚವೂ ಅಲ್ಲಿಯೇ ಇರುವುದು, ಮಂಚ ಇಲ್ಲದಿದ್ದರೆ ನಾಯಕನ ಕೈಮೇಲೆ ನಾಯಕಿ ಬಿದ್ದು ಪರಸ್ಪರ ರೊಮಾಂಟಿಕ್ ಮೂಡ್ಗೆ ಹೋಗುವುದು... ಇವಿಷ್ಟೇ ಸದ್ಯ ಸೀರಿಯಲ್‌ನಲ್ಲಿ ಕಾಣಸಿಗುತ್ತಿದೆ.
ಇದೀಗ, ಅಣ್ಣಯ್ಯ ಸೀರಿಯಲ್ನಲ್ಲಿಯೂ ಅದೇ ದೃಶ್ಯವನ್ನು ಮತ್ತೆ ತುರುಕಿರುವ ಕಾರಣ, ಸೀರಿಯಲ್ ಪ್ರೇಮಿಗಳು ಸ್ವಲ್ಪ ಕೋಪಗೊಂಡಿದ್ದಾರೆ. ಇಲ್ಲಿಯೂ ಮದ್ವೆಯಾದರೂ ಗಂಡ-ಹೆಂಡತಿ ದೈಹಿಕವಾಗಿ ಬೇರೆ ಬೇರೆಯಾಗಿದ್ದಾರೆ. ಇದೀಗ ನಾಯಕಿ ಪಾರುಗೆ, ನಾಯಕ ಅರ್ಥಾತ್ ಗಂಡ ಶಿವು ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಆದರೆ ಶಿವುಗೆ ಇದು ಗೊತ್ತಾಗ್ತಿಲ್ಲ. ಇಲ್ಲಿಯೂ ಪಾರು ಅದೇನೋ ಮೇಲೆ ತೆಗೆಯಲು ಹೋಗಿ ಬಿದ್ದಿದ್ದಾಳೆ. ಶಿವು ಬಂದು ಹಿಡಿದಿದ್ದಾನೆ. ಅಲ್ಲಿಯೇ ಇರೋ ಮಂಚದ ಮೇಲೆ ಇಬ್ಬರೂ ಬಿದ್ದಿದ್ದಾರೆ. ಇದರ ಪ್ರೊಮೋ ವೈರಲ್ ಆಗುತ್ತಲೇ, ಕೆಲವು ನೆಟ್ಟಿಗರು ಪ್ಲೀಸ್ ರೊಮಾನ್ಸ್ ವಿಷ್ಯದಲ್ಲಿ ಅಪ್ಡೇಟ್ ಆಗಿ ಡೈರೆಕ್ಟರ್ ಸಾಹೇಬ್ರೇ. ಪದೇ ಪದೇ ಅದನ್ನೇ ತೋರಿಸ್ತೀರಲ್ಲ ಎಂದು ನೋವು ಹೊರಹಾಕಿದ್ದಾರೆ! ಒಂದೋ ಅವನ ಮೇಲೆ ಅವಳು ಬೀಳೋದು ಇಲ್ಲವೇ ಇವಳ ಮೇಲೆ ಇವನು ಬೀಳೋದು ಅದೇ ಆಗೋಯ್ತಲ್ಲ ಎನ್ನುತ್ತಿದ್ದಾರೆ.
ಮಗುವಿನ ನಾಮಕರಣದ ವಿಡಿಯೋ ಶೇರ್ ಮಾಡಿದ ಸೀತಾರಾಮ ಸೀತಾ: ಫ್ಯಾನ್ಸ್ ಫುಲ್ ಶಾಕ್!