ಮಹಿಯ ಈ ಮಾತುಗಳು ಅತ್ತೆಯನ್ನಷ್ಟೇ ಅಲ್ಲ, ಆಕೆಯ ಗಂಡ, ಭೂಮಿ ಎಲ್ಲರಲ್ಲೂ ಅವಳ ಮೇಲೆ ಪ್ರೀತಿ, ಗೌರವ ಹೆಚ್ಚಿಸಿವೆ.
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್- ಭೂಮಿಕಾ ನಡುವೆ ಪ್ರೀತಿ ದಿನೇ ದಿನೇ ಹೆಚ್ಚೋದನ್ನು ವೀಕ್ಷಕರು ಬಹಳ ಸಂತೋಷದಿಂದ ನೋಡುತ್ತಿದ್ದಾರೆ. ಇದೀಗ ಗೌತಮ್ ದೀವಾನ್ ಹುಟ್ಟುಹಬ್ಬಕ್ಕೆ ಭೂಮಿ ಸರ್ಪ್ರೈಸ್ ಪಾರ್ಟಿ ನೀಡಿದ್ದಾಳೆ, ಒಬ್ಬರೇ ಇದ್ದಾಗ ನೋಡಿ ಎಂದು ವಿಶೇಷ ಉಡುಗೊರೆ ಕೊಟ್ಟಿದ್ದಾಳೆ.. ಈ ಎಲ್ಲವೂ ಪ್ರೇಕ್ಷಕರಿಗೆ ಖುಷಿ ಕೊಟ್ಟಿವೆ. ಆದರೆ, ಈ ಮಧ್ಯೆ ಕಬಾಬ್ ಮೆ ಹಡ್ಡಿ ಅನ್ನೋ ಹಾಗೆ ಎಡವಟ್ಟು ಮಾಡಿದ್ದು ಭೂಮಿ ತಾಯಿ ಮಂದಾಕಿನಿ.
ಅಳಿಯಂದಿರಿಗೆ ಹುಟ್ಟುಹಬ್ಬಕ್ಕೆ ಬಂಗಾರದ ಸರ ಎಂದು ದಪ್ಪನೆಯ ಸರವೊಂದನ್ನು ಪಾರ್ಟಿಗೆ ಬಂದವರ ಎದುರು ಮಂದಾಕಿನಿ ಗೌತಮ್ ಕತ್ತಿಗೆ ಹಾಕಿದ್ದಾರೆ. ಆದರೆ, ಅದು ನಿಜವಾಗಿಯೂ ಗೋಲ್ಡ್ ಆಗಿರದೆ ರೋಲ್ಡ್ ಗೋಲ್ಡ್ ಎಂಬುದನ್ನು ನಂತರದಲ್ಲಿ ಮಗಳಿಗೆ ತಿಳಿಸುತ್ತಾಳೆ. ಈ ಸಂದರ್ಭದಲ್ಲಿ ಭೂಮಿಯೊಂದಿಗೆ ಪ್ರೇಕ್ಷಕರೂ ಮಂದಾಕಿನಿ ಮಾಡಿದ ತಪ್ಪಿಗೆ ಪರಿತಪಿಸಿದ್ದಾರೆ. ಏನೂ ಕೊಡದಿದ್ದರೂ ಆಗುತ್ತಿತ್ತು ಎಂದುಕೊಂಡಿದ್ದಾರೆ.
ಅಷ್ಟರಲ್ಲಿ ಪಾರ್ಟಿಯಲ್ಲಿ ಶಾಕುಂತಲಾ ಸ್ನೇಹಿತರೆಲ್ಲ ಸರದ ಬಗ್ಗೆಯೇ ಚರ್ಚೆ ಆರಂಭಿಸಿದ್ದಾರೆ. ಎಲ್ಲಿ ಕೊಂಡಿದ್ದೆಂದು ಕೇಳಿ ಆ ಅಂಗಡಿಗೇ ಕರೆ ಮಾಡಿ ವಿಚಾರಿಸಿದ್ದಾರೆ. ಕಡೆಗೊಬ್ಬ ಮಹಿಳೆ, ಪಾರ್ಟಿಯಲ್ಲಿ ಎಲ್ಲರೆದುರು ಶಾಕುಂತಲಾ ಎದುರು ಬಂದು ಆ ಅಂಗಡಿಯಲ್ಲಿ ಈ ಸರವೇ ಇರಲಿಲ್ಲವಂತೆ, ಅದು ರೋಲ್ಡ್ ಗೋಲ್ಡ್ ಎಂದು ಹೇಳಿದ್ದಾರೆ.
ಇದೀಗ ಭೂಮಿ, ಆಕೆಯ ತಾಯಿ ಪೇಚಾಟಕ್ಕೆ ಸಿಲುಕಿರುವಾಗಲೇ, ಅವರ ಪರವಾಗಿ ಸಹಾಯಕ್ಕೆ ಬಂದಿದ್ದಾಳೆ ಮಹಿ. ಮೊದಲೆಲ್ಲ ಕೆಟ್ಟವಳು, ಹಟಮಾರಿ, ಅಹಂಕಾರಿಯಂತಿರುತ್ತಿದ್ದ ಮಹಿ ಇದೀಗ ಮಧ್ಯಮ ವರ್ಗದ ಮನೆಗೆ ಸೊಸೆಯಾಗಿ ಹೋಗಿ ಅಲ್ಲಿ ಹೊಂದಿಕೊಳ್ಳುತ್ತಿರುವ ರೀತಿ ಎಲ್ಲರಿಗೂ ಖುಷಿ ಕೊಟ್ಟಿದೆ. ಅದರಲ್ಲೂ ಇದೀಗ ಮಹಿ ಅತ್ತೆಯ ಪರವಾಗಿ 'ಆ ರೋಲ್ಡ್ ಗೋಲ್ಡ್ ಸರ ತಂದಿದ್ದು ನಾನೇ, ಅತ್ತೆಗೆ ವಿಷಯ ಗೊತ್ತಿಲ್ಲ' ಎಂದು ಎಲ್ಲರೆದುರು ಹೇಳುತ್ತಿದ್ದಂತೇ ಜನ, 'ಅಬ್ಬಬ್ಬಾ, ಇಂಥ ಸೊಸೆ ಇದ್ರೆ ಕುಟುಂಬ ಆನಂದ ಸಾಗರ' ಎನ್ನುತ್ತಿದ್ದಾರೆ. ಸಾಲದೆಂಬಂತೆ ಮಹಿ, 'ತಂದಿದ್ದು ನಾನು, ಕೊಟ್ಟಿದ್ದು ನಮ್ಮತ್ತೆ, ಹಾಕ್ಕೊಂಡಿದ್ದು ನಮ್ಮಣ್ಣ, ನಮ್ಮನೆ ವಿಷ್ಯ, ನೀವ್ಯಾಕ್ರೀ ತನಿಖೆ ಮಾಡ್ತಿದೀರಾ? ಗೆಸ್ಟ್ ಆಗಿ ಬಂದೋರು ಗೆಸ್ಟ್ ಆಗಿ ಹೋಗಿ' ಎಂದು ತಾಯಿಯ ಸ್ನೇಹಿತೆಯರಿಗೆ ಜಾಡಿಸಿ ಕೊಡ್ತಿದ್ರೆ 'ಕೊಡ್ರೀ ಬೆಸ್ಟ್ ಸೊಸೆ ಅವಾರ್ಡು ಈಕೆಗೆ' ಅಂತಿದಾರೆ ಜನ.
ಮಹಿಯ ಈ ಮಾತುಗಳು ಅತ್ತೆಯನ್ನಷ್ಟೇ ಅಲ್ಲ, ಆಕೆಯ ಗಂಡ, ಭೂಮಿ ಎಲ್ಲರಲ್ಲೂ ಅವಳ ಮೇಲೆ ಪ್ರೀತಿ, ಗೌರವ ಹೆಚ್ಚಿಸಿವೆ. ಸೊಸೆಯರು ಯಾವಾಗ ಅತ್ತೆ ಮನೆಯನ್ನು ತಮ್ಮನೆ ಅಂದುಕೊಂಡು, ಅತ್ತೆ ಮರ್ಯಾದಿನ್ನ ತಮ್ಮದೇ ಅಂದುಕೊಳ್ತಾರೋ, ಆಗ ಅತ್ತೆನೂ ಸೊಸೆನ್ನ ಮಗಳಾಗಿ ಕಾಣ್ತಾಳೆ. ಇದು ಇಬ್ರೂ ಕಡೆಯಿಂದನೂ ಆಗ್ಬೇಕು. ಧಾರಾವಾಹಿಗಳು ಹೀಗೆ ಮನೆ ಒಂದಾಗೋದನ್ನು ತೋರಿಸಬೇಕು, ಮನೆ ಒಡೆಯೋದಲ್ಲ ಎಂಬುದು ಪ್ರೇಕ್ಷಕರ ಆಂಬೋಣ. ನೀವೇನಂತೀರಾ?