ಸೀತೆ ಮತ್ತು ರಾಮ ಲವ್ ಮಾಡುತ್ತಿದ್ದರೂ ಚಾಂದನಿ ಯಾಕೋ ರಾಮ್ನನ್ನು ಬಿಡುವ ಹಾಗೆ ಕಾಣಿಸುತ್ತಿಲ್ಲ. ಮುಂದೇನು?
ಸೀತಾರಾಮ ಸೀರಿಯಲ್ನಲ್ಲಿ ಒಂಥರಾ ಟ್ರಿಯಾಂಗಲ್ ಲವ್ ಸ್ಟೋರಿ ಶುರುವಾಗಿದೆ. ಅತ್ತ ಸೀತೆ ಮತ್ತು ರಾಮ್ ಇಬ್ಬರೂ ಒಬ್ಬರನ್ನೊಬ್ಬರು ಲವ್ ಮಾಡುತ್ತಿದ್ದರೆ, ಇತ್ತ ರಾಮ್ನ ಮಾಜಿ ಪ್ರೇಯಸಿ ಚಾಂದನಿ ಯಾಕೋ ರಾಮ್ನನ್ನು ಬಿಡುವಂತೆ ಕಾಣುತ್ತಿಲ್ಲ. ಸೀತಾ ಮತ್ತು ರಾಮ್ ಪ್ರೀತಿಸುತ್ತಿದ್ದಾರೆ, ತಾನು ಮೋಸ ಮಾಡಿದ ಕಾರಣ ರಾಮ್ ತನ್ನನ್ನು ಮರೆತಿದ್ದಾನೆ ಎಂಬುದು ತಿಳಿದಿದ್ದರೂ ಚಾಂದನಿಗೆ ರಾಮ್ ಬೇಕು. ಸೀತಾ ಮದುವೆಯಾಗಿ ಒಂದು ಮಗುವಿನ ತಾಯಿ ಎಂದು ಗೊತ್ತಾದ ಮೇಲಂತೂ ಅವಳಿಗೆ ಹಾಲು ಕುಡಿದಷ್ಟು ಖುಷಿಯಾಗಿದೆ. ಇದೇ ಕಾರಣಕ್ಕೆ ಸೀತಾಳಿಗೆ ಸಾಧ್ಯವಾಗಲೆಲ್ಲಾ ಟಾಂಟ್ ಕೊಡುತ್ತಲೇ ಇದ್ದಾಳೆ.
ಇದೀಗ ಪ್ರಿಯಾ ಮತ್ತು ಅಶೋಕ್ ಮದುವೆ ಸಂಭ್ರಮ ಶುರುವಾಗಿದೆ. ಮೆಹಂದಿ ಶಾಸ್ತ್ರದ ಸಮಯದಲ್ಲಿ ಚಾಂದನಿ ರಾಮ್ ಹೆಸರಿನಲ್ಲಿ ಮೆಹಂದಿ ಹಾಕಿಸಿಕೊಂಡು ಅದನ್ನು ಸೀತಾಳಿಗೆ ತೋರಿಸಿದ್ದಾಳೆ. ಹೀಗೆ ತೋರಿಸುವಾಗ, ರಾಮ್ ತಾತನಿಗೆ ಹಾರ್ಟ್ ಎಟ್ಯಾಕ್ ಆಗಿರುವುದನ್ನು ಹೇಳಿದ್ದಾಳೆ. ಅದು ತನಗೆ ಗೊತ್ತು ಎಂದು ಸೀತಾ ಹೇಳಿದಾಗ, ಅದಕ್ಕೆ ಕಾರಣ ಸೀತಾಳೆ ಎಂದು ಪರೋಕ್ಷವಾಗಿ ಹೇಳಿದ್ದಾಳೆ. ರಾಮ್ ತಾತನಿಗೆ ಡಿವೋರ್ಸ್ ಆದವಳು, ಒಬ್ಬಳು ಮಗಳು ಇದ್ದವಳನ್ನು ರಾಮ್ ಪ್ರೀತಿಸುತ್ತಾನೆ ಎನ್ನುವ ವಿಷಯ ತಿಳಿದಿದ್ದರಿಂದ ಹಾರ್ಟ್ ಎಟ್ಯಾಕ್ ಆಗಿದೆ ಎಂದಿದ್ದಾಳೆ. ಇದನ್ನು ಕೇಳಿ ಸೀತಾಳಿಗೆ ಶಾಕ್ ಆಗಿದೆ.
ಅದೇ ಇನ್ನೊಂದೆಡೆ ರಾಮ್ ಸೀತಾ ಹೆಸರಿನ ಎಸ್ ಅನ್ನು ಕೈ ಮೇಲೆ ಬರೆಸಿಕೊಂಡಿದ್ದಾನೆ. ಅದನ್ನು ಸೀತಾಳಿಗೆ ತೋರಿಸಿದ್ದಾನೆ. ಸೀತಾ ನಾಚಿಕೊಂಡಿದ್ದಾಳೆ. ಇದನ್ನು ನೋಡಿ ಚಿಕ್ಕಮ್ಮ ಉರಿದುಕೊಂಡಿದ್ದಾಳೆ. ಸೀತಾ ಮತ್ತು ರಾಮ್ ಕಣ್ಣಿನಲ್ಲಿಯೇ ಮಾತನಾಡುವುದನ್ನು ಚಿಕ್ಕಮ್ಮ ಮತ್ತು ಚಾಂದನಿಗೆ ಸಹಿಸಲು ಸಾಧ್ಯವಾಗ್ತಿಲ್ಲ. ಹಾಗೆನೇ ಇನ್ನೊಂದೆಡೆ, ತಾತನ ಎದುರು ಸತ್ಯಜೀತ್, ರಾಮ್ ಯಾರನ್ನು ಇಷ್ಟಪಡುತ್ತಾನೋ ಅವಳನ್ನೇ ಮದುವೆಯಾಗಬೇಕು ಎನ್ನುತ್ತಿದ್ದಾನೆ. ಒಟ್ಟಿನಲ್ಲಿ ಸೀರಿಯಲ್ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ.
ಇದರ ನಡುವೆಯೇ ಸೀತಾಳ ಹಿಂದಿನ ಕಥೆಯೂ ರಹಸ್ಯವಾಗಿಯೇ ಉಳಿದಿದೆ. ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್ನಲ್ಲಿ ಬಿದ್ದಿದ್ದಾರೆ. ಒಂದು ವೇಳೆ ಮದುವೆಯಾದ ಮೇಲೆ ಸೀತಾಳ ಹಿಂದಿನ ಸ್ಟೋರಿ ಗೊತ್ತಾಗಿ ಇಬ್ಬರ ನಡುವೆ ಒಡಕು ಬಂದರೆ ಎನ್ನುವ ಆತಂಕದಲ್ಲಿಯೂ ಅಭಿಮಾನಿಗಳಿದ್ದಾರೆ. ಅದೇ ಇನ್ನೊಂದೆಡೆ ಹಲವರು ಸಿಹಿ, ಸೀತಾಳ ಮಗುವೇ ಅಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಿಹಿಯ ರಹಸ್ಯ ಹೊರಬರಲು ಇನ್ನೂ ಹಲವು ದಿನಗಳು ಕಾಯಬೇಕಿದೆ. ಮತ್ತೊಂದೆಡೆ ಸೀತಾಳಿಗೆ ಪದೇ ಪದೇ ಬರುತ್ತಿರುವ ಸಂದೇಶಗಳು ಅಭಿಮಾನಿಗಳನ್ನು ಚಿಂತೆಗೂಡು ಮಾಡಿದೆ.