ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'ಅಡಾಲಸೆನ್ಸ್' ವೆಬ್ ಸರಣಿಯು 13 ವರ್ಷದ ಬಾಲಕನೊಬ್ಬನ ಕೊಲೆ ಆರೋಪದ ಸುತ್ತ ತೆರೆದುಕೊಳ್ಳುತ್ತದೆ.
ಇವತ್ತು ಇಡೀ ಜಗತ್ತಿನ ನಾಲಗೆಯಲ್ಲಿ ನಲಿದಾಡುತ್ತಿರುವ ಹೆಸರು ‘ಅಡಾಲಸೆನ್ಸ್’. ಭಾರತ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಮಾರ್ಚ್ 13ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ 4 ಎಪಿಸೋಡ್‌ಗಳ ವೆಬ್ ಸರಣಿ ಬೆಚ್ಚಿ ಬೀಳಿಸಿದೆ, ಕಾಡುತ್ತಿದೆ, ಯೋಚನೆಗೀಡು ಮಾಡಿದೆ. ಹಾಗಾಗಿಯೇ ಟ್ರೆಂಡಲ್ಲಿದೆ. ಫಿಲಿಪ್ ಬರಂತಿನಿ ನಿರ್ದೇಶನದ, ಸ್ಟಿಫನ್ ಗ್ರಹಾಂ ಹಾಗೂ ಜ್ಯಾಕ್ ಥಾರ್ನ್ ರಚನೆಯ ಈ ಸೀರೀಸ್ ಪ್ರಸಾರ ಆರಂಭಿಸಿದ ಎರಡೇ ವಾರಗಳಲ್ಲೇ 66.35 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಗಳಿಸಿದೆ. 71 ದೇಶಗಳಲ್ಲಿ ನಂಬರ್ ಸ್ಥಾನಕ್ಕೇರಿದೆ. ಹೀಗೆ ಎಲ್ಲರ ಗಮನ ಸೆಳೆಯುವ ಮೂಲಕ ಸಾಕಷ್ಟು ಚರ್ಚೆ ಹುಟ್ಟು ಹಾಕಿರುವ ಈ ವೆಬ್ ಸರಣಿಯ ಕೇಂದ್ರ ಪಾತ್ರಧಾರಿ 13 ವರ್ಷದ ಬಾಲಕ.
ಅಡಾಲಸೆನ್ಸ್ ಕತೆ ಏನು?
ಆತನ ವಯಸ್ಸು ಕೇವಲ 13 ವರ್ಷ. ಹೆಸರು ಜೇಮಿ ಮಿಲ್ಲರ್. ಆತ ಇನ್ನೂ ಹಾಸಿಗೆಯಲ್ಲೇ ಇದ್ದಾನೆ. ಹೊರಗೆ ಪೊಲೀಸ್ ವಾಹನಗಳ, ವಾಕಿ-ಟಾಕಿಗಳ ಸದ್ದು. ಮನೆಯೊಂದರ ಬಾಗಿಲು ದೂಡಿಕೊಂಡು ಶಸ್ತ್ರ ಸಜ್ಜಿತರಾದ ಹತ್ತಾರು ಮಂದಿ ಪೊಲೀಸರು ಆ ಮನೆಯನ್ನು ಸುತ್ತುವರಿದು ಇನ್ನೂ ನಿದ್ದೆಯಿಂದ ಎದ್ದೇ ಇರದ ಬಾಲಕ ಜೇಮಿ ಮಿಲ್ಲರ್‌ನನ್ನು ಬಂಧಿಸುತ್ತಾರೆ. ತನ್ನ ಶಾಲೆಯ ಸಹಪಾಠಿಯಾಗಿರುವ ಕೇಟಿ ಲಿಯೊನಾರ್ಡ್‌ಳನ್ನು ಕೊಲೆ ಮಾಡಿದ್ದಾನೆಂಬುದು ಜೇಮಿ ಮಿಲ್ಲರ್ ಮೇಲಿರುವ ಆರೋಪ.
ತನಿಖೆ ಶುರುವಾಗುತ್ತದೆ. ಜೇಮಿ ಮತ್ತು ಕೇಟಿ ನಡುವಿನ ಆನ್‌ಲೈನ್ ಜಗಳ, ಕೇಟಿ ಹತ್ಯೆಯಾದ ರಾತ್ರಿ ಜೇಮಿ ಮತ್ತು ಕೇಟಿ ಇಬ್ಬರು ಭೇಟಿ ಮಾಡಿದ್ದು, ಜಗಳ ಮಾಡಿಕೊಂಡಿದ್ದು... ಹೀಗೆ ಒಂದೊಂದೇ ವಿಷಯ ಆಚೆ ಬರುತ್ತಾ ಹೋಗುತ್ತದೆ.
ಈ ವೆಬ್ ಸರಣಿ ಜನಪ್ರಿಯತೆಗೆ ಕಾರಣಗಳೇನು?
ಸಾಮಾಜಿಕ ಜಾಲತಾಣಗಳು, ಮೊಬೈಲ್‌ಗಳು ಮಕ್ಕಳಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಕೇಳುತ್ತಾ ಪ್ರಸ್ತುತ ವ್ಯವಸ್ಥೆಯ ಕನ್ನಡಿಯಾಗಿ ‘ಅಡಾಲಸೆನ್ಸ್’ ತೆರೆದುಕೊಳ್ಳುತ್ತದೆ. ಪಬ್‌ಜಿ ಗೇಮ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್, ಲೈಕ್ ವಿಚಾರಗಳಿಗೆ ಕೊಲೆಗಳಾಗಿದ್ದು, ಈ ಹದಿಹರೆಯದ ಬಾಲಕ-ಬಾಲಕಿಯರು ಬಳಸುವ ಇಮೋಜಿಗಳ ಅರ್ಥಗಳು, ಅದರಿಂದ ಉಂಟಾಗುವ ಅನಾಹುತಗಳು... ಹೀಗೆ ನಾವು ಈಗಾಗಲೇ ನೋಡಿದ ಮತ್ತು ಕೇಳಿದ ನೈಜ ಘಟನೆಗಳಿಗೆ ಈ ವೆಬ್ ಸರಣಿ ಮುಖಾಮುಖಿ ಆಗುತ್ತದೆ.
ಇದು ಬರೀ ಕ್ರೈಮ್ ಕತೆಯಲ್ಲ
ಕ್ರೈಮ್ ಹೇಗೆ ನಡೆಯಿತು ಎನ್ನುವುದೊಂದೇ ‘ಅಡಾಲಸೆನ್ಸ್’ ಕತೆಯಲ್ಲ. ಅಲ್ಲದೆ ಇದು ಹದಿಹರೆಯದ ಬಾಲಕನ ಕ್ರೈಮ್ ಕತೆಯಾಗಿದ್ದರೆ ಈ ಮಟ್ಟಿಗೆ ಜನಪ್ರಿಯತೆ ಆಗುತ್ತಿರಲಿಲ್ಲವೇನೋ! ಫ್ಯಾಮಿಲಿ ಎಮೋಷನ್, ತನಿಖೆ ಇತ್ಯಾದಿಗಳ ಜತೆಗೆ ಈಗಿನ ಮಕ್ಕಳು ಡಿಜಿಟಲ್ ಲೋಕದಲ್ಲಿ ಏನು ಮಾಡುತ್ತಿದ್ದಾರೆ, ಎಂಥವರು ಇವರನ್ನು ಪ್ರಭಾವಿಸುತ್ತಿದ್ದಾರೆ, ಪುಸ್ತಕ, ಆಟ-ಪಾಠಗಳ ಜತೆಗೆ ಬೆಳೆಯಬೇಕಾದ ಮಕ್ಕಳು ಸೋಷಿಯಲ್ ಮೀಡಿಯಾಗಳ ಜತೆಗೆ ಬೆಳೆಯುತ್ತಿದ್ದು, ಇದರಿಂದ ಎಂಥ ಅನಾಹುತಗಳಿಗೆ ದಾರಿ ಆಗುತ್ತಿದೆ, ಸ್ಮಾರ್ಟ್ ಜಗತ್ತು ಅಷ್ಟೇ ಸಲೀಸಾಗಿ ಮಕ್ಕಳನ್ನು ಯಾವ ದಾರಿಯಲ್ಲಿ ಕರೆದುಕೊಂಡು ಹೋಗುತ್ತಿದೆ... ಹೀಗೆ ಹಲವು ಪ್ರಶ್ನೆಗಳನ್ನು ಈ ವೆಬ್ ಸರಣಿ ನೋಡುಗರ ಮುಂದಿಡುತ್ತದೆ. ಈ ಕಾರಣಕ್ಕೆ ಮಕ್ಕಳ ಕೈಗೆ ಮೊಬೈಲ್, ಕಂಪ್ಯೂಟರ್ ಕೊಟ್ಟಿರುವ ಪ್ರತಿಯೊಬ್ಬ ಪೋಷಕರ ಮನಕ್ಕೆ ಈ ವೆಬ್ ಸರಣಿ ತಣ್ಣಗೆ ಇಳಿಯುತ್ತಿದೆ.
ಕತ್ತಲಲ್ಲೂ ಬೆಳಕಿನ ಭರವಸೆ
ತಪ್ಪು ಮಾಡಿ ಕಾನೂನು ಕಟಕಟೆಗೇರಿದರೆ ಬದುಕೇ ನಾಶ, ಆ ಕಟಕಟೆಯಿಂದ ಮನುಷ್ಯರಾಗಿಯಂತೂ ಮರಳಿ ಬರಲು ಸಾಧ್ಯವಿಲ್ಲ ಎಂದು ಮಾತನಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಅಪರಾಧಿಯನ್ನು ಹೀಗೂ ನಡೆಸಿಕೊಳ್ಳಬಹುದೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಈ ವೆಬ್ ಸರಣಿ ಮೂಡಿ ಬಂದಿದೆ. ಅದರಲ್ಲೂ ಬಾಲಾಪರಾಧಿಗಳನ್ನು ನಡೆಸಿಕೊಂಡ ರೀತಿ, ಅಪರಾಧಿಗಳನ್ನೂ ಕೂಡ ಸಾಮಾನ್ಯ ಮನುಷ್ಯರಂತೆ ಕಾಣುವುದು, ಅಪರಾಧಕ್ಕೆ ಶಿಕ್ಷೆ ಕೊಡಬೇಕು ಎನ್ನುವುದಕ್ಕಿಂತ ಮೊದಲು ಆ ಅಪರಾಧಕ್ಕೆ ಕಾರಣ ಏನು, ಅದರ ಮೂಲ ಎಲ್ಲಿಯದ್ದು ಎಂದು ಕೆದಕುವ ಮೂಲಕ ಕತ್ತಲ ಕೋಣೆಯಲ್ಲೂ ಭವಿಷ್ಯ ರೂಪಿಸುವ ವ್ಯವಸ್ಥೆಯೊಂದು ಉಸಿರಾಡುತ್ತಿರುವ ಭರವಸೆ ಸಿಗುತ್ತದೆ.
ಈ ಸರಣಿಯ ಕುರಿತು ಕಥೆಗಾರ್ತಿ ದೀಪಾ ಹಿರೇಗುತ್ತಿಯವರು, ‘ಹದಿಹರೆಯದ ಮಕ್ಕಳ ಪಾಲಕರು ಈ ಸೀರಿಸನ್ನು ದಯವಿಟ್ಟು ನೋಡಿ. ಶಾಲಾ, ಕಾಲೇಜು ಶಿಕ್ಷಕರು ಕೂಡ ಕಡ್ಡಾಯವಾಗಿ ನೋಡಿ. ಒಂದಿಷ್ಟು ಹೊಗಳಿಕೆ, ಪುಟ್ಟ ಗುರುತಿಸುವಿಕೆಗೆ, ಹಿಡಿ ಪ್ರೀತಿಗೆ ಕಾದಿರುವ ಜೇಮಿಯಂತಹ ಮಕ್ಕಳು ದಾರಿ ತಪ್ಪುವ ಮುನ್ನ ಅವರನ್ನು ಹಾದುಕೊಳ್ಳುವ ಜವಾಬ್ದಾರಿ ಕುಟುಂಬ, ಶಾಲೆ, ಸಮಾಜ ಎಲ್ಲರದ್ದೂ ಆಗಿದೆ’ ಎಂದು ಬರೆದಿದ್ದಾರೆ.
ಇದನ್ನೂ ಓದಿ: ನೀನು ಎಲ್ಲೂ ನಮಗೆ ಮುಖ ತೋರಿಸಲಾಗದಂತೆ ಮಾಡ್ಬಿಟ್ಟೆ: ನಟನ ಮುಂದೆ ಗೋಳಾಡಿದ ಅಮ್ಮ
ಮತ್ತೊಬ್ಬ ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ಅವರು, ‘ಹತ್ತು ವರ್ಷಕ್ಕೇ ಋತುಮತಿಯಾಗುತ್ತಿರುವ ಹುಡುಗಿಯರು ಎದೆ ಫ್ಲಾಟ್ ಆಗಿದೆ ಅಂತ ಚಿಂತಿಸುತ್ತಿರುವುದು, ದ್ವನಿ ಕೂಡ ಒಡೆದಿರದ ಗೊಂಬೆಯಂತಹ ಬಾಲಕ ತಾನು ಅಗ್ಲಿ ಆಗಿದ್ದೇನೆ ಎಂದು ಕೀಳರಿಮೆ ಅನುಭವಿಸುವುದನ್ನು ನೋಡಿದರೆ ಸಂಕಟವಾಗುತ್ತದೆ. ಪೋಷಕರನ್ನು, ಶಿಕ್ಷಕರನ್ನು, ಸಂಬಂಧಿಗಳನ್ನು ಮೆಚ್ಚಿಸಲು ಹಾಡು ಹೇಳುವುದು, ಕ್ರಿಕೆಟ್ ಆಡುವುದು, ಚೆನ್ನಾಗಿ ಓದುವುದು ಮಾಡಬೇಕಾದ ವಯಸ್ಸಿನ ಈ ಮಕ್ಕಳು ಇಂಟರ್‌ನೆಟ್‌ನಲ್ಲಿ ಏನನ್ನು ನೋಡುತ್ತಿದ್ದಾರೆ, ಹೇಗೆ bullying ಮಾಡ್ತಿದ್ದಾರೆ, ಹೇಗೆ ತಮ್ಮ ಆತ್ಮ ವಿಶ್ವಾಸವನ್ನೇ ಕಳಕೊಳ್ಳುತ್ತಿದ್ದಾರೆ ಅಂತ ನೋಡಿದರೆ ತಲೆ ಕೆಡುತ್ತದೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳೊಂದಿಗೆ ನೋಡಲೇಬೇಕಾದ ಸರಣಿ ಇದು’ ಎನ್ನುತ್ತಾರೆ.
ವಿರೋಧವೂ ಇದೆ
ಒಬ್ಬ ಬಾಲಾಪರಾಧಿಯನ್ನು ತುಂಬಾ ಸೂಕ್ಷ್ಮವಾಗಿ ಅಥವಾ ಜೋಪಾನವಾಗಿ ನೋಡಿಕೊಳ್ಳುವಂತೆ ವೆಬ್ ಸರಣಿಯಲ್ಲಿ ತೋರಿಸಲಾಗಿದೆ. ಹಾಗಾದರೆ ಆರೋಪಿತರ ಪಾಲಿಗೆ ಕಾನೂನಿನ ಕಟಕಟೆಗಳು ಈ ಮಟ್ಟಿಗೆ ಡೆಮಾಕ್ರಾಟಿಕ್ ಆಗಿವೆಯೇ, ಆ ಮಟ್ಟಿಗಿನ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಜೈಲು ಗೋಡೆಗಳು ರೂಢಿಸಿಕೊಂಡಿವೆಯೇ ಎನ್ನುವ ಅನುಮಾನದ ಪ್ರಶ್ನೆಗಳು ಈ ವೆಬ್ ಸರಣಿ ಹುಟ್ಟು ಹಾಕಿದೆ. ಹೇಳಿ ಕೇಳಿ ಇದು ಬ್ರಿಟಿಷ್ ಕ್ರೈಮ್ ಡ್ರಾಮಾ. ಹೀಗಾಗಿ ತಾವು ಎಷ್ಟು ಪ್ರಜಾಸತ್ತಾತ್ಮಕವಾಗಿದ್ದೇವೆ ಎಂದು ಬ್ರಿಟಿಷ್ ವ್ಯವಸ್ಥೆ ತಮ್ಮನ್ನು ಬಿಂಬಿಸಿಕೊಳ್ಳುವ ಆಯುಧ ಕೂಡ ಈ ವೆಬ್ ಸರಣಿ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.
ಇದನ್ನೂ ಓದಿ: ಪ್ರತಿದಿನ ಭೀಕರ ಸಾವು, ಶವದ ಮೇಲೆ ಭಯಾನಕ ಹುಳುಗಳು; ನೋಡುಗರನ್ನು ಸೈಕಾಗಿಸಿದ ಥ್ರಿಲ್ಲರ್ ವೆಬ್ ಸಿರೀಸ್