ಪುಟ್ಟಕ್ಕನಿಗಿಂದು ಹುಟ್ಟುಹಬ್ಬದ ಸಂಭ್ರಮ: ರಾಷ್ಟ್ರೀಯ ಕಲಾವಿದೆಯಾಗಿ ಮಿಂಚಬೇಕಿದ್ದ ನಟಿಗೆ ಸಿಕ್ಕಿಲ್ಲವೇ ಅವಕಾಶ?

By Suchethana D  |  First Published May 10, 2024, 11:49 AM IST

ನಟಿ ಉಮಾಶ್ರೀಯವರಿಗೆ ಇಂದು 57ನೇ ಹುಟ್ಟುಹಬ್ಬದ ಸಂಭ್ರಮ. ಪರಕಾಯ ಪ್ರವೇಶ ಮಾಡಿ ಅದ್ಭುತವಾಗಿ ನಟಿಸುವ ನಟಿಗೆ ಸಿಕ್ಕಿಲ್ಲವೇ ಸರಿಯಾದ ಅವಕಾಶ?
 


ಅಲ್ಲಿ ಮಗಳ ಚಿತೆ ಉರಿಯುತ್ತಿದೆ. ಇತ್ತ ಅಮ್ಮನ ರೋಧನೆ ಮುಗಿಲುಮುಟ್ಟಿದೆ. ಅದೂ ತನ್ನಿಂದಲೇ ಮಗಳು ಸಾವನ್ನಪ್ಪಿದ್ದಾಳೆ ಎಂದು ಆ ಅಮ್ಮನಿಗೆ ಅನಿಸಿದಾಗ ಆಕೆಯ ವೇದನೆ ಅದೆಷ್ಟು ಇರಬಹುದು? ಸಿನಿಮಾ ಹಾಗೂ ಸೀರಿಯಲ್​ಗಳಲ್ಲಿ ಇಂಥ ಒಂದು ದೃಶ್ಯದ ಆ್ಯಕ್ಟಿಂಗ್​ ಮಾಡಿರುವ ಹಲವು ಕಲಾವಿದರು ಇರಬಹುದು, ಕೆಲವರದ್ದು ಅದ್ಭುತ ನಟನೆಯೂ ಆಗಿದೆ. ಆದರೆ ಮೊನ್ನೆಯಷ್ಟೇ ಪುಟ್ಟಕ್ಕನ ಮಕ್ಕಳು ಸೀರಿಯಲ್​ನ ಪುಟ್ಟಕ್ಕನ ಈ ಅಮೋಘ ಅಭಿನಯಕ್ಕೆ ಮನಸೋಲದವರೇ ಇಲ್ಲ. ಇದು ಸೀರಿಯಲ್​ ಎಂದು ತಿಳಿದಿದ್ದರೂ ಕಣ್ಣೀರು ಹಾಕಿದವರು ಅದೆಷ್ಟೋ ಮಂದಿ, ಅದರಲ್ಲಿಯೂ ಮಹಿಳೆಯರಂತೂ ಅಕ್ಷರಶಃ ಕಣ್ಣೀರಾಗಿ ಬಿಟ್ಟಿದ್ದರು. ಇದೊಂದು ನಟನೆ ಎನ್ನುವುದನ್ನೂ ಮರೆತು ಕಣ್ಣೀರಾಗಿದ್ದು ನೋಡಿದರೆ ಆ ನಟನೆ ಯಾವ ರೀತಿ ಇರಬಹುದು ಎಂದು ತಿಳಿಯಬಹುದು. ಅವರೇ ಉಮಾಶ್ರೀ. ಉಮಾಶ್ರೀಯವರ ನಟನೆಗೆ ಅವರೇ ಸಾಟಿ ಎನ್ನುವಷ್ಟರ ಮಟ್ಟಿಗೆ ಅವರ ನಟನೆ ಇರುತ್ತದೆ. ಇಂತಿಪ್ಪ ನಟಿಗೆ ಇಂದು (ಮೇ 10) ಹುಟ್ಟುಹಬ್ಬದ ಸಂಭ್ರಮ. ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ರಿಲೀಸ್​ ಮಾಡಿದೆ. 

ಅಂದಹಾಗೆ ಉಮಾಶ್ರೀಯವರು, ಯಾವುದೇ  ಪಾತ್ರಕ್ಕೂ   ಜೀವ ತುಂಬುವ ಶೈಲಿ ಶ್ಲಾಘನೀಯ. ತಮ್ಮೆಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದ್ದಾರೆ. ಅವರು ಮಾಡುವ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ. ಅಂದಹಾಗೆ ಉಮಾಶ್ರೀ ಅವರಿಗೆ ಇದೀಗ 67 ವರ್ಷ ವಯಸ್ಸು.  ರಂಗಭೂಮಿ ಮತ್ತು ಚಲನಚಿತ್ರರಂಗಗಳಲ್ಲಿ ಛಾಪು ಮೂಡಿಸಿರುವ  ಪ್ರತಿಭಾನ್ವಿತ ಅಭಿನೇತ್ರಿಯಾಗಿದ್ದಾರೆ ಇವರು. ನಟಿಯ ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಚಿತ್ರಪ್ರಿಯರ  ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ  ಕಣ್ಣುಗಳಲ್ಲಿಯೇ  ತುಂಬಿಕೊಡುತ್ತಾರೆ. ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ.   325 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸತತ ಐದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದ ಏಕೈಕ ಕನ್ನಡ ನಟಿ ಎನಿಸಿದ್ದಾರೆ. 

Tap to resize

Latest Videos

ಹಾಗೆ ನೋಡಿದರೆ ಉಮಾಶ್ರೀಯವರು ಇಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಳ್ಳಬೇಕಿತ್ತು. ಅಭಿನಯದಿಂದಲೇ ಮೋಡಿ ಮಾಡುತ್ತಿದ್ದರೂ, ಸಿನಿಮಾಗಳಲ್ಲಿ ಇವರಿಗೆ ಸಿಕ್ಕಿದ್ದು ಬೇರೆಯದ್ದೇ ರೀತಿಯ ಪಾತ್ರ. ಚಿಕ್ಕಪುಟ್ಟ ಪಾತ್ರ ಮಾಡಿದರೂ ಅದರಲ್ಲಿಯೂ ಜೀವಂತಿಕೆ ತುಂಬುತ್ತಿದ್ದರೂ, ಇವರ ನಿಜವಾದ ಪ್ರತಿಭೆಯನ್ನು ನಿರ್ದೇಶಕರು ಗುರುತಿಸಿಯೇ ಇಲ್ಲವೆನ್ನುವ ಕೊರಗು ಅವರ ಅಭಿಮಾನಿಗಳದ್ದು. ಒಂದು ವೇಳೆ ಇವರ ನಿಜವಾದ ಪ್ರತಿಭೆಯನ್ನು ಸರಿಯಾದ ಸಮಯದಲ್ಲಿ ಗುರುತಿಸಿದ್ದೇ ಆದರೆ ಅವರಿಂದು ರಾಜ್ಯಕ್ಕೆ ಸೀಮಿತವಾಗುತ್ತಿರಲಿಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಳ್ಳುತ್ತಿದ್ದರು ಎನ್ನುತ್ತಾರೆ ಅಭಿಮಾನಿಗಳು. ಇದಕ್ಕೆ ಇವರ ಗುಲಾಬಿ ಟಾಕೀಸ್​ ಚಿತ್ರವೇ ಸಾಕ್ಷಿ. ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಮತ್ತು ಓಶಿಯಾನ್ಸ್ ಅಂತರರಾಷ್ಟ್ರೀಯ ಕಲಾಭಿಮಾನಿಗಳ ಪ್ರಶಸ್ತಿಯನ್ನು ಈ ಚಿತ್ರ ನಟಿಗೆ ತಂದುಕೊಟ್ಟಿದೆ.  ಇಂಥ ಕೆಲವೇ ಕೆಲವು ಚಿತ್ರಗಳು ಉಮಾಶ್ರೀ ಅವರ ಪಾಲಿಗೆ ಬಂದಿದೆ ಎನ್ನುವುದೂ ಅಷ್ಟೇ ಸತ್ಯ. 

ಚೆಂದ ನೋಡಿ ಮರುಳಾಗಿ ಮದ್ವೆಯಾಗ್ಬಿಟ್ರಾ ಉಮಾಶ್ರೀ; ಯಾಕೆ ಎರಡು ತಿಂಗಳ ಬಸುರಿನ್ನ ಬಿಟ್ಟೋದ ಗಂಡ..?!

ಪುಟ್ಟಕ್ಕನ ಸಂಸಾರದಂತೆಯೇ ನಿಜ ಜೀವನದಲ್ಲಿಯೂ ಸಾಕಷ್ಟು ನೋವು ಅನುಭವಿಸಿದವರು ಉಮಾಶ್ರೀ. ಮಾಜಿ ಸಚಿವೆಯೂ ಆಗಿರುವ ಉಮಾಶ್ರೀ, ಅವರೇ ಹಿಂದೊಮ್ಮೆ  ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಭಾವುಕರಾಗಿ ಮಾತನಾಡಿದ್ದರು.'ಸತ್ತಾಗ ಗಂಡು ಮಕ್ಕಳು ತಲಗೊಳ್ಳಿ ಇಟ್ಟರೆ ಮೋಕ್ಷ ಅಂತ ಕೆಲವರು ಹೇಳ್ತಾರೆ. ನಾನು ಎಂಟು ತಿಂಗಳು ಮಗು ಆಗಿದ್ದಾಗ ತಂದೆ-ತಾಯಿ ಇರಲಿಲ್ಲ. ಕಡು ಬಡತನ. ಆಗ ಯಾರೋ ನನ್ನ ಸಾಕಿದ್ದರು. ಅವರಿಗೆ ಒಬ್ಬಳೇ ಮಗಳಾಗಿದ್ದೆ. ಹೇಗೋ ಬೆಳೆಸಿ ಮದುವೆ ಮಾಡಿದರು. ನನಗೆ ಎರಡು ಮಕ್ಕಳಾಗಿ ವಿಚ್ಛೇದನವೂ ಆಯಿತು.  ಎಷ್ಟೇ ಕಷ್ಟ ಬರಲಿ, ಅವರನ್ನು ನಾನು ದುಡಿದು ಚೆನ್ನಾಗಿ ನೋಡಿಕೊಂಡೆ. ಅವರಿಗೆ ಏನೇ ರೋಗ ಬಂದರೂ ನಾನೇ ನೋಡಿಕೊಂಡೆ. ನನ್ನ ಹೆತ್ತವರನ್ನು ಮಣ್ಣಿಗೆ ಹಾಕಿದವಳು ನಾನು. ಆ ತಾಕತ್ತು ಹೆಣ್ಣಿಗಿದೆ' ಎನ್ನುವ ಮೂಲಕ ಹೆಣ್ಣಿನ ಶಕ್ತಿಯನ್ನು ತೋರಿಸಿಕೊಟ್ಟವರು ಉಮಾಶ್ರೀ. 

ರಾಜಕೀಯದಲ್ಲಿ ಸಕ್ರಿಯವಾಗಿರುವ ಇವರು ಕರ್ನಾಟಕ ರಾಜ್ಯ ಸರ್ಕಾರದ ಶಾಸನ ಸಭೆಯ ಸದಸ್ಯರಾಗಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಇತರ ಹಿಂದುಳಿದ ವರ್ಗ ಇಲಾಖೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2013 ರಲ್ಲಿ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದರು.
ಸವತಿ ರಾಜಿಗೇ ಮೇಕಪ್​ ಮಾಡೋದಾ ಪುಟ್ಟಕ್ಕ? ವಿಡಿಯೋ ನೋಡಿ ಹುಷಾರ್​ ಕಣವ್ವೋ ಎಂದ ಅಭಿಮಾನಿಗಳು!

click me!