ಕನ್ನಡ ಕಿರುತೆರೆಯಲ್ಲಿ ʼಸೀತೆʼಯಾಗಿ ಮೆರೆದ ನಟಿ ಶರ್ಮಿಳಾ ಚಂದ್ರಶೇಖರ್ ಅವರು ಈಗ ಚಾಲೆಂಜಿಂಗ್ ಆಗಿರುವಂತಹ ಹೊಸ ಪಾತ್ರದ ನಿರೀಕ್ಷೆಯಲ್ಲಿದ್ದಾರೆ. ಶರ್ಮಿಳಾ ಚಂದ್ರಶೇಖರ್ ಅವರು ಸೀತೆ ಧಾರಾವಾಹಿಗೆ ಆಯ್ಕೆ ಆಗಿದ್ದೇ ರೋಚಕ ಕತೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ʼಸೀತೆʼ ಅತಿ ಹೆಚ್ಚು ಮನ್ನಣೆ ಗಳಿಸಿದ ಸೀರಿಯಲ್. ಸೀತೆಯಾಗಿ ನಟಿ ಶರ್ಮಿಳಾ ಚಂದ್ರಶೇಖರ್ ಅವರು ವೀಕ್ಷಕರಿಂದ ಚಪ್ಪಾಳೆ ಗಳಿಸಿದ್ದರು. ಈ ಸೀರಿಯಲ್‌ನಲ್ಲಿ ನಟಿಸುವಾಗ ಅವರಿಗೆ ಸಿಹಿ-ಕಹಿ ಅನುಭವ ಕೂಡ ಆಗಿತ್ತಂತೆ. ಈ ಬಗ್ಗೆ ಅವರು ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಸೀತೆ ಪಾತ್ರಕ್ಕೆ ಆಯ್ಕೆ ಆಗಿದ್ದು ಹೇಗೆ?
“ನಾನು ನಮ್ಮಮ್ಮ ಶಾರದೆ ಧಾರಾವಾಹಿಯಲ್ಲಿ ನಟಿಸಬೇಕಿತ್ತು. ಆಗಲೇ ನನಗೆ ಸೀತೆ ಧಾರಾವಾಹಿ ಅವಕಾಶ ಸಿಗ್ತು. ಸೀತೆ ಧಾರಾವಾಹಿಯಲ್ಲಿ ನನಗೆ ಊರ್ಮಿಳಾ ಪಾತ್ರಕ್ಕೆ ಆಡಿಷನ್ ಕೊಡಲು ಹೇಳಿದ್ದರು. ಆಡಿಷನ್ ಕೊಟ್ಟ ಬಳಿಕ ಏನಾಯ್ತೋ ಏನೋ ನೀವು ಸೀತೆ ಪಾತ್ರ ಮಾಡಿ ಎಂದರು. ಸೀತೆ ಪಾತ್ರಕ್ಕೆ ಬೇರೆ ಹುಡುಗಿಯ ಆಯ್ಕೆ ಆಗಿತ್ತು. ಆದರೆ ಅವಳಿಗಿಂತ ನಾನು ಚೆನ್ನಾಗಿ ಕಾಣಿಸ್ತೀನಿ ಅಂತಲೋ ಗೊತ್ತಿಲ್ಲ ನನ್ನನ್ನು ಆಯ್ಕೆ ಮಾಡಿದರು. ಅಷ್ಟೇ ಅಲ್ಲದೆ ನನ್ನ ಹಾಗೂ ಇನ್ನೊಂದು ಹುಡುಗಿಯಲ್ಲಿ ಯಾರು ಸೀತೆಯಾಗಿ ಚೆನ್ನಾಗಿ ಕಾಣಿಸ್ತಾರೆ ಅಂತ ವಾಹಿನಿಯಲ್ಲಿದ್ದವರಲ್ಲಿ ವೋಟ್ ಹಾಕಿಸಿ ಆಯ್ಕೆ ಮಾಡಿದ್ದರಂತೆ. ನನಗೆ ಹೆಚ್ಚು ಮತ ಸಿಕ್ಕಿ ನಾನು ಸೀತೆಯಾಗಿ ಆಯ್ಕೆ ಆದೆ. ನಿಜಕ್ಕೂ ಇನ್ನೊಂದು ಹುಡುಗಿ ಯಾರು ಅಂತ ನನಗೆ ಗೊತ್ತಿಲ್ಲ” ಎಂದು ಶರ್ಮಿಳಾ ಚಂದ್ರಶೇಖರ್ ಅವರು ಹೇಳಿದ್ದಾರೆ.
ತೆಲುಗು ಕಿರುತೆರೆಯಲ್ಲಿ ಕನ್ನಡಿಗರಿಗೆ ಭಾರಿ ಡಿಮ್ಯಾಂಡ್! ಹೊಸ ಸೀರಿಯಲ್’ನಲ್ಲಿ ಜೋಡಿಯಾದ ಚಂದು ಗೌಡ -ತನ್ವಿಯಾ
ಜೀನ್ಸ್ ಪ್ಯಾಂಟ್ ಹಾಕ್ಲಿಲ್ಲ..!
“ಸೀತೆ ಧಾರಾವಾಹಿಯಲ್ಲಿ ನಟಿಸುವಾಗ ನನಗೆ ಹದಿನೆಂಟು ವರ್ಷ ವಯಸ್ಸು. ಸೀತೆ ಸೀರಿಯಲ್ ಡೈರೆಕ್ಟರ್, ಪ್ರೊಡಕ್ಷನ್ ಎಲ್ಲವೂ ಹಿಂದಿ ಟೀಂ ಆಗಿತ್ತು. ಆಗ ಕಾಡಿನಲ್ಲಿ ಶೂಟಿಂಗ್ ಆಗುವಾಗ ಮಾತ್ರ ಚಪ್ಪಲಿ ಹಾಕಿ ಹೋಗುತ್ತಿದ್ದೆ ಅಷ್ಟೇ. ಉಳಿದಂತೆ ನಾನು ಸೀತೆ ಕಾಸ್ಟ್ಯೂಮ್ ಹಾಕಿದಾಗ ಚಪ್ಪಲಿ ಹಾಕುತ್ತಿರಲಿಲ್ಲ. ಇನ್ನು ನಾಲ್ಕು ವರ್ಷಗಳ ಕಾಲ ನಾನು ಮಾಂಸಾಹಾರ ತಿನ್ನಲೇ ಇಲ್ಲ. ಅಷ್ಟೇ ಅಲ್ಲದೆ ನಮ್ಮ ಮನೆಯಲ್ಲಿಯೂ ಕೂಡ ಮಾಂಸಾಹಾರ ಮಾಡಲೂ ಇಲ್ಲ, ತಿನ್ನಲೇ ಇಲ್ಲ. ಒಮ್ಮೆ ಟೇಲರಿಂಗ್ ಶಾಪ್‌ಗೆ ಹೋದಾಗ ನಾನು ಜೀನ್ಸ್ ಪ್ಯಾಂಟ್ ಹಾಕಿ ಹೋಗಿದ್ದೆ. ಆಗ ಒಬ್ಬರು ಸಿಕ್ಕಿ ಸೀತೆ ಧಾರಾವಾಹಿಯಲ್ಲಿ ಹಾಗೆ ಇದ್ದೀರಾ, ಈಗ ಹೀಗೆ ಅಂತ ಹೇಳಿದ್ರು. ನನಗೆ ಆಗ ತುಂಬ ಬೇಸರ ಆಯ್ತು. ಹೀಗಾಗಿ ನಾಲ್ಕು ವರ್ಷ ಸೀತೆ ಧಾರಾವಾಹಿ ಮುಗಿಯುವವರೆಗೂ ನಾನು ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಲೇ ಇಲ್ಲ” ಎಂದು ಶರ್ಮಿಳಾ ಚಂದ್ರಶೇಖರ್ ಅವರು ಹೇಳಿದ್ದಾರೆ.
ಗೊಂಬೆ ಮನೆಗೆ ಲಕ್ಷ್ಮಿಯ ಆಗಮನ, ಹೆಣ್ಣು ಮಗುವಿಗೆ ಜನ್ಮ ನೀಡಿದ ನೇಹಾ ಗೌಡ
ಸೀತೆ ನನಗೆ ಇಷ್ಟವಾದ ಪ್ರಾಜೆಕ್ಟ್!
“ಒಮ್ಮೆ ಎಂಭತ್ತು ವರ್ಷದ ಅಜ್ಜಿ ನನ್ನ ಕಾಲಿಗೆ ಬಿದ್ದಿದ್ದರು. ನನ್ನ ಸೀತೆ ಪಾತ್ರವನ್ನು ಅವರು ರಿಯಲ್ ಆಗಿ ತಗೊಂಡಿದ್ರು. ಸೀತೆ ಧಾರಾವಾಹಿಯಿಂದ ನಾವು ಕಲಿಯೋದು ತುಂಬ ಇದೆ. ಸೀತೆ ಧಾರಾವಾಹಿ ಸ್ಕ್ರಿಪ್ಟ್ ಎಲ್ಲವೂ ನಮಗೆ ಮೊದಲೇ ಗೊತ್ತಿರುತ್ತದೆ, ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಸೀತೆ ಎಷ್ಟು ಕಷ್ಟಪಟ್ಟಳು? ಏನೆಲ್ಲ ಅನುಭವಿಸಿದಳು ಅಂತ ನೋಡಿದರೆ ತುಂಬ ಬೇಸರ ಆಗುತ್ತದೆ. ಗಂಡನಿಗೋಸ್ಕರ ಅವಳು ಕಾಡಿಗೆ ಹೋಗುತ್ತಾಳೆ, ತಾನು ಪವಿತ್ರ ಅಂತ ತೋರಿಸಿಕೊಳ್ಳಲು ಅಗ್ನಿಗೆ ಹಾರುತ್ತಾಳೆ. ನಿಜಕ್ಕೂ ನನಗೆ ಇದು ತುಂಬ ಇಷ್ಟವಾದ ಪ್ರಾಜೆಕ್ಟ್” ಎಂದು ಶರ್ಮಿಳಾ ಚಂದ್ರಶೇಖರ್ ಅವರು ಹೇಳಿದ್ದಾರೆ.
ಚಾಲೆಂಜಿಂಗ್ ಪಾತ್ರದ ನಿರೀಕ್ಷೆಯಲ್ಲಿ ಶರ್ಮಿಳಾ!
ಅಂದಹಾಗೆ ಶರ್ಮಿಳಾ ಚಂದ್ರಶೇಖರ್ ಅವರು ʼಪತ್ತೆದಾರಿ ಪ್ರತಿಭಾʼ, ʼಅಂತರಪಟʼ, ʼಪರಿಣಯʼ, ʼಪಲ್ಲವಿ ಅನುಪಲ್ಲವಿʼ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ʼಅಂತರಪಟʼ ಧಾರಾವಾಹಿಯಲ್ಲಿ ಅವರು ಅಮಲಾ ಪಾತ್ರ ಮಾಡಿದ್ದರು. ಈ ಪಾತ್ರ ನೆಗೆಟಿವ್ ಆಗಿದ್ದು, ಸಾಕಷ್ಟು ಜನರಿಂದ ಮೆಚ್ಚುಗೆ ಗಳಿಸಿದ್ದರು. ಸದ್ಯ ಶರ್ಮಿಳಾ ಚಂದ್ರಶೇಖರ್ ಅವರು ಚಾಲೆಂಜ್ ಆಗಿರುವ ಪಾತ್ರಕ್ಕೋಸ್ಕರ ಕಾಯುತ್ತಿದ್ದಾರೆ.