
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಅದ್ಭುತ ಪ್ರತಿಭೆ, ಹಿರಿಯ ನಟ ರಾಜೇಶ್ ನಟರಂಗ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಯಾರಿಗೂ ಗೊತ್ತಿಲ್ಲದ ತಮ್ಮ ವೈಯಕ್ತಿಕ ಬದುಕಿನ ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ವಿಶೇಷವಾಗಿ, ತಾವು ಮದುವೆಯಾಗಲು ಹುಡುಗಿ ಹುಡುಕುತ್ತಿದ್ದ ದಿನಗಳಲ್ಲಿ ಸಮಾಜದಿಂದ ಎದುರಾದ ಅಪಹಾಸ್ಯ ಹಾಗೂ ಅವಮಾನಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ಕಲಾವಿದರನ್ನು ಸಮಾಜ ಹೇಗೆ ನೋಡುತ್ತದೆ ಎಂಬುದನ್ನು ವಿವರಿಸಿದ ರಾಜೇಶ್ ನಟರಂಗ, ಮದುವೆಗೆ ಸಂಬಂಧ ಹುಡುಕುವಾಗ ಅನೇಕರು 'ಬರೀ ಆಕ್ಟಿಂಗ್ ಮಾಡ್ತಾರಲ್ಲ, ಬೇರೇನೂ ಕೆಲಸ ಮಾಡಲ್ವಾ?' ಎಂದು ಹಗುರವಾಗಿ ಮಾತನಾಡುತ್ತಿದ್ದರು. ಒಮ್ಮೆ ಒಬ್ಬರು ನೇರವಾಗಿ ಫೋನ್ ಮಾಡಿ, 'ನೀವು ಒಬ್ಬ ಗುಮಾಸ್ತನಾಗಿದ್ದರೂ (ಕ್ಲರ್ಕ್) ಪರವಾಗಿಲ್ಲ ನಮ್ಮ ಮಗಳನ್ನು ಕೊಡ್ತಿದ್ವಿ, ಆದರೆ ಆಕ್ಟರ್‌ಗೆ ಹೆಣ್ಣು ಹೇಗೆ ಕೊಡೋದು?' ಎಂದಿದ್ದರು. ಅವರ ಆ ಮಾತಿಗೆ ನನಗೆ ತೀವ್ರ ಕೋಪ ಬಂದಿತ್ತು. 'ನಾನು ಕಷ್ಟಪಟ್ಟು ಸಂಪಾದಿಸುತ್ತಿದ್ದ ಹಣದಲ್ಲೇ ಬಡ ಹೆಣ್ಣುಮಗಳೊಬ್ಬಳನ್ನು ದತ್ತು ಪಡೆದು ಓದಿಸುತ್ತಿದ್ದೆ. ನಿಮಗೆ ಇಷ್ಟವಿಲ್ಲದಿದ್ದರೆ ಮದುವೆ ಬೇಡ ಎಂದು ನೇರವಾಗಿ ಹೇಳಿ, ಆದರೆ ಕಲಾವಿದರ ವೃತ್ತಿಯನ್ನು ಹೀಗೆ ಕೀಳಾಗಿ ಕಾಣಬೇಡಿ' ಎಂದು ಅಂದು ಆಕ್ರೋಶದಿಂದಲೇ ಉತ್ತರಿಸಿದ್ದೆ' ಎಂದು ಆ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಸಂದರ್ಶನದಲ್ಲಿ ನಿರೂಪಕಿ 'ನಿಮಗೆ ಅಷ್ಟೊಂದು ಮಹಿಳಾ ಅಭಿಮಾನಿಗಳಿದ್ದರಲ್ಲ, ಅವರಲ್ಲೇ ಯಾರನ್ನಾದರೂ ಮದುವೆಯಾಗಬಹುದಿತ್ತಲ್ವಾ?' ಎಂದು ಕೇಳಿದಾಗ, ರಾಜೇಶ್ ಅವರು ನಗುತ್ತಲೇ ವಾಸ್ತವ ಬಿಚ್ಚಿಟ್ಟಿದ್ದಾರೆ. 'ಅಭಿಮಾನಿಗಳು ಯಾರೂ ಹೆಂಡತಿಯಾಗಲು ಸಾಧ್ಯವಿಲ್ಲ. ಅಭಿಮಾನಿಗಳಿಗೆ ನಮ್ಮಲ್ಲಿನ ಯಾವುದೋ ಒಂದು ಅಂಶ ಅಥವಾ ಆನ್‌ಸ್ಕ್ರೀನ್ ಇಮೇಜ್ ಇಷ್ಟವಾಗಿರುತ್ತದೆ. ಆದರೆ, ದಿನದ 24 ಗಂಟೆಯೂ ನಾಲ್ಕು ಗೋಡೆಗಳ ಮಧ್ಯೆ ನಮ್ಮ ನಿಜವಾದ ವ್ಯಕ್ತಿತ್ವ ಹಾಗೂ ಕೋಪ-ತಾಪಗಳನ್ನು ಸಹಿಸಿಕೊಂಡು ಬಾಳುವುದು ಅಷ್ಟು ಸುಲಭವಲ್ಲ' ಎಂದು ಅವರು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಸತತವಾಗಿ ಎದುರಾದ ಇಂತಹ ಅವಮಾನಗಳಿಂದ ರೋಸಿಹೋಗಿದ್ದ ರಾಜೇಶ್ ನಟರಂಗ, ಒಂದು ಹಂತದಲ್ಲಿ 'ನನಗೆ ಮದುವೆಯೇ ಬೇಡ' ಎಂದು ಗಟ್ಟಿ ನಿರ್ಧಾರ ಮಾಡಿಬಿಟ್ಟಿದ್ದರಂತೆ. ಅವರ ಸ್ನೇಹಿತರ ವಲಯದಲ್ಲೂ ಬಹುತೇಕರು ಬ್ರಹ್ಮಚಾರಿಗಳಾಗಿದ್ದರು. ಇನ್ನು ಮದುವೆಯಾಗಿದ್ದವರು 'ಮದುವೆ ಸಹವಾಸವೇ ಬೇಡ' ಎಂದು ಹೆದರಿಸುತ್ತಿದ್ದರಿಂದ ಅವರು ಸಂಪೂರ್ಣವಾಗಿ ಮದುವೆ ಯೋಚನೆಯನ್ನೇ ಕೈಬಿಟ್ಟಿದ್ದರು.
ಇನ್ನು ಮದುವೆ ಉಸಾಬರಿಯೇ ಬೇಡ ಎಂದು ದೂರ ಉಳಿಯಲು ನಿರ್ಧರಿಸಿದ್ದ ಸಂದರ್ಭದಲ್ಲೇ, ಕುಟುಂಬದ ಕಡೆಯಿಂದ "ಇನ್ನೊಂದು ಕೊನೆಯ ಪ್ರಪೋಸಲ್ ಇದೆ, ಈ ಹುಡುಗಿಯನ್ನು ನೋಡು" ಎಂಬ ಮಾತು ಬಂತು. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿ ಆ ಹುಡುಗಿಯನ್ನು ನೋಡಲು ಹೋದ ರಾಜೇಶ್, ಅಂತಿಮವಾಗಿ ಅವರನ್ನೇ ತಮ್ಮ ಧರ್ಮಪತ್ನಿಯನ್ನಾಗಿ ಸ್ವೀಕರಿಸಿದರು. ಆ ಮೂಲಕ ಸಮಾಜದ ಕುಹಕ ಮಾತುಗಳನ್ನು ದಾಟಿ ಇಂದು ಸುಖೀ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಕಲಾವಿದರ ಬದುಕಿನ ಗ್ಲಾಮರ್‌ನ ಹಿಂದೆ ಇಂತಹ ಕಹಿ ವಾಸ್ತವಗಳೂ ಇರುತ್ತವೆ ಎಂಬುದಕ್ಕೆ ರಾಜೇಶ್ ನಟರಂಗ ಅವರ ಈ ಮಾತುಗಳು ಕನ್ನಡಿ ಹಿಡಿದಂತಿವೆ.
ಕೇವಲ ಧಾರಾವಾಹಿಯಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂಬರ್ 1’ನಲ್ಲಿ ರಾಜೇಶ್ ನಟರಂಗ ಅವರು ತೀರ್ಪುಗಾರರಾಗಿ (Judge) ಕಾಣಿಸಿಕೊಂಡು ಗಮನ ಸೆಳೆದಿದ್ದರು. ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡುತ್ತಾ, ತಮ್ಮ ತೂಕಬದ್ಧ ಮಾತುಗಳಿಂದ ಶೋನ ಮೆರುಗನ್ನು ಹೆಚ್ಚಿಸಿದ್ದರು. ಒಟ್ಟಿನಲ್ಲಿ, ಸಿನಿಮಾಗಳ ಜೊತೆ ಜೊತೆಗೆ ಕಿರುತೆರೆಯಲ್ಲೂ ರಾಜೇಶ್ ನಟರಂಗ ಅವರ ಯಶಸ್ಸಿನ ಓಟ ಜೋರಾಗಿಯೇ ಮುಂದುವರಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.