‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಪ್ರೇಮ್, ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದಾರೆ. ಆಂಜನೇಯನ ಕುರಿತು ಮಾತನಾಡಿದ್ದಾರೆ ಏನದು?
‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಇದಾಗಲೇ ಹಲವಾರು ಕ್ಷೇತ್ರದ ಸಾಧಕರು ಬಂದು ತಮ್ಮ ಜೀವನದ ಪಯಣದ ಕುರಿತು ಮಾತನಾಡಿದ್ದಾರೆ. ಹಲವರು ಕುತೂಹಲದ ಘಟನೆಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕೆಲ ವಾರಗಳ ಹಿಂದೆ ಸೀಸನ್ 5 ಶುರುವಾಗಿದ್ದು ಇದರಲ್ಲಿ ನಟಿ ರಮ್ಯಾ, ಪ್ರಭುದೇವ, ದತ್ತಣ್ಣ, ಡಾ ಸಿ ಎನ್ ಮಂಜುನಾಥ್, ಗುರುರಾಜ ಕರ್ಜಗಿ, ಸಿಹಿ ಕಹಿ ಚಂದ್ರು, ಅವಿನಾಶ್, ಧನಂಜಯ, ಮಂಡ್ಯ ರಮೇಶ್ ಆಗಮಿಸಿ ಹಲವಾರು ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 12 ಎಪಿಸೋಡ್‌ಗಳು ಪ್ರಸಾರ ಆಗಿವೆ. 13ನೇ ಎಪಿಸೋಡ್ನ ಅಂಗವಾಗಿ ನಿನ್ನೆ ಅಂದರೆ ಮೇ 6ರಂದು ಚಿತ್ರನಟ ಪ್ರೇಮ್ ಅಲಿಯಾಸ್ ನೆನಪಿರಲಿ ಪ್ರೇಮ್ (Nenapirali Prem) ಅವರು ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಹಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಬದುಕಿನ ಪಯಣ, ಪತ್ನಿಯ ಕುರಿತು ಸೇರಿದಂತೆ ಬಾಲ್ಯದ ಸವಿ ನೆನಪುಗಳನ್ನು ಮಾಡಿಕೊಂಡಿದ್ದಾರೆ. 2004 ರಲ್ಲಿ 'ಪ್ರಾಣ' ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿರೋ ಪ್ರೇಮ್ ಕುಮಾರ್, ಅವರು ನೆನಪಿರಲಿ ಪ್ರೇಮ್ ಆದದ್ದು 2005 ರಲ್ಲಿ ಬಿಡುಗಡೆಯಾದ ನೆನಪಿರಲಿ ಚಿತ್ರದ ಮೂಲಕ. ನಂತರ ಅವರು ಭಾರಿ ಖ್ಯಾತಿ ಪಡೆದದ್ದು 2013ರಲ್ಲಿ ಬಿಡುಗಡೆಯಾದ ಚಾರ್ಮಿನಾಲ್ ಚಿತ್ರದ ಮೂಲಕ. ಈ ಚಿತ್ರಕ್ಕೆ ಅವರಿಗೆ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿತು. ನೆನಪಿರಲಿ ಪ್ರೇಮ್ ಅವರು ಕನ್ನಡ ಚಲನಚಿತ್ರಗಳಲ್ಲಿ ಲವ್ಲಿ ಸ್ಟಾರ್ ಎಂದೂ ಖ್ಯಾತಿ ಗಳಿಸಿದ್ದಾರೆ.
ತಮ್ಮ ಬಾಲ್ಯದಲ್ಲಿ ಆಂಜನೇಯನನ್ನು ಮೈಮೇಲೆ ಬರಿಸಿಕೊಳ್ಳಲು ತಾವು ಮಾಡಿದ ಕಿತಾಪತಿಯ ಘಟನೆಯನ್ನು ವೀಕೆಂಡ್ ವಿತ್ ರಮೇಶ್ನಲ್ಲಿ ನಟ ಪ್ರೇಮ್ ಹೇಳಿಕೊಂಡಿದ್ದಾರೆ. ಬಹುತೇಕ ಪ್ರತಿಯೊಬ್ಬರೂ ಬಾಲ್ಯದಲ್ಲಿ (Childhood) ತುಂಟಾಟ ಮಾಡುತ್ತಾರೆ. ಅದೇ ರೀತಿ ತುಂಟನಾಗಿದ್ದ ಪ್ರೇಮ್ ಆಂಜನೇಯನನ್ನು ನೋಡಲು ಮಾಡಿದ ಎಡವಟ್ಟಿನಲ್ಲಿ ಹೇಗೆ ಮನೆಯಲ್ಲಿ ಬೈಸಿಕೊಂಡೆ ಎಂಬ ಕುತೂಹಲದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಅಸಲಿಗೆ ಪ್ರೇಮ್ ಅವರ ಮಧ್ಯಮ ಕುಟುಂಬದಿಂದ ಬಂದವರು. ಅವರ ಮನೆಯ ಕುಲಕಸುಬು ನೇಕಾರಿಕೆ. ನಟನೆಯ ಬಗ್ಗೆ ಅಪಾರ ಆಸಕ್ತಿ ಇದ್ದ ಪ್ರೇಮ್ ಅವರು ಮೊದಲಿಗೆ ಕುಲಕಸಬಿನನ್ನೇ ಮಾಡುತ್ತಿದ್ದರು. ಎಸ್‌ಎಸ್‌ಎಲ್ ಮುಗಿಯುವ ವೇಳೆ ಪ್ರೇಮ್ ಅವರು ಮಗ್ಗದಲ್ಲಿ ನೇಯುವ ಕಲೆ ಕಲಿತುಬಿಟ್ಟಿದ್ದರಂತೆ. 'ನಾನು ಏಳನೇ ಕ್ಲಾಸ್ ಓದುತ್ತಿದ್ದಾಗ, ನಮ್ಮ ಮನೆ ಬಳಿಯೇ ಟೊರಿನೋ ಫ್ಯಾಕ್ಟರಿ ಇತ್ತು. ಅಲ್ಲಿ ಕೆಲಸಕ್ಕೆ ಸೇರಿಕೊಂಡೆ. ಟೊರಿನೋ ಟ್ರೇಗಳನ್ನ ಬೇಕರಿ, ಹೋಟೆಲ್‌ಗಳಿಗೆ ಸಪ್ಲೈ ಮಾಡುತ್ತಿದ್ದೆ. ಆಗ ದಿನಕ್ಕೆ 7.50 ರೂಪಾಯಿ ಸಂಬಳ ತೆಗೆದುಕೊಂಡಿದ್ದೆ’ ಎಂದು ಹಳೇ ದಿನಗಳನ್ನ ಪ್ರೇಮ್ ನೆನಪಿಸಿಕೊಂಡಿದ್ದಾರೆ. ನಂತರ ಕಿರುತೆರೆಯಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಪದಾರ್ಪಣೆ ಮಾಡಿ, ಧಾರಾವಾಹಿಗಳಲ್ಲಿ ನಟಿಸಲು ತೊಡಗಿದರು. ನಂತರ ಅವರು ‘ಪ್ರಾಣ’ ಚಿತ್ರದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು. ಇದು ಹೊಸಬರ ತಂಡವಾಗಿತ್ತು. ನಿರ್ದೇಶಕ ಪ್ರಕಾಶ್, ಸಂಗೀತ ಸಂಯೋಜಕ ಆಲ್ವಿನ್ (Alwin) ಮತ್ತು ನಟಿ ಪ್ರೀತಿ ಪ್ರೇಮ್ ಜೊತೆಗೆ ಎಲ್ಲರೂ ಹೊಸಬರೇ ಎನ್ನುವುದು ವಿಶೇಷ.
ಇಂಗ್ಲಿಷ್ ಬರದೆ ಅವಮಾನ ಎದುರಿಸಿದ್ದ ಅವಿನಾಶ್; ರಿವೇಂಜ್ ತೆಗೆದುಕೊಂಡಿದ್ದು ಹೇಗೆಂದು ಬಹಿರಂಗ ಪಡಿಸಿದ ನಟ
ಇಂತಿಪ್ಪ ಪ್ರೇಮ್ ಒಮ್ಮೆ ಬಾಲ್ಯದಲ್ಲಿ ಆಂಜನೇಯನನ್ನು (Anjaneya) ನೋಡಬೇಕೆಂದರೆ ಏನು ಮಾಡಬೇಕು ಎಂಬ ಪ್ರಶ್ನೆ ಕಾಡಿತ್ತಂತೆ. ಆಗ ಯಾರೋ ಒಬ್ಬ ತರ್ಲೆ ಹುಡುಗ 108 ಸಲ ಹಣೆಯನ್ನು ಉಗುರಿನಿಂದ ಕೆರೆದುಕೊಳ್ಳಬೇಕು ಎಂದಿದ್ದನಂತೆ. ಅದನ್ನೇ ನಂಬಿದ್ದ ಪ್ರೇಮ್. ಹಣೆಯನ್ನು 108 ಸಲ ಉಗುರಿನಿಂದ ಕೆರೆದುಕೊಂಡಿದ್ದರಂತೆ. ನಂತರ ಆಗುವುದೇನು? ಜೋರಾಗಿ ಗಾಯವಾಗಿ ನೋವಿನಿಂದ ಚೀರಾಡಿದ್ದೆ ಎಂದಿದ್ದಾರೆ. ಮಗನ ಅವಸ್ಥೆ ನೋಡಿ ಕಂಗಾಲಾಗಿ ಹೋದ ಅಪ್ಪ-ಅಮ್ಮ ತಮ್ಮನ್ನು ನೋಡಿ ಅತ್ತಿದ್ದರು ಎಂದು ಪ್ರೇಮ್ ನೆನಪಿಸಿಕೊಂಡಿದ್ದಾರೆ. ಚಿಕ್ಕ ಗಾಯವಾದರೂ ಅಪ್ಪ-ಅಮ್ಮ ಸಹಿಸಿಕೊಳ್ಳುತ್ತಿರಲಿಲ್ಲ. ಆದರೆ ಇದು ಸ್ವಲ್ಪ ಗಂಭೀರವೇ ಆಗಿತ್ತು. ಅಮ್ಮ ಕಣ್ಣೀರು ಹಾಕಿದರೆ, ಅಪ್ಪ ಅಂತೂ ಸಿಕ್ಕಾಪಟ್ಟೆ ಬೈದರು ಎಂದಿದ್ದಾರೆ ಪ್ರೇಮ್. ಆಂಜನೇಯ ಕಾಣಿಸಲಿಲ್ಲ, ಆದರೆ ಉದ್ದನೆಯ ಗಾಯವಾಗಿ ಬೈಸಿಕೊಳ್ಳಬೇಕಾಯ್ತು. ಏನೇನೋ ಔಷಧ ಹಚ್ಚಿ ಗಾಯ ಗುಣ ಮಾಡಿದ್ದರು ಎಂದು ಅಂದಿನ ದಿನಗಳನ್ನು ನಟ ನೆನಪಿಸಿಕೊಂಡರು.
ಕನ್ನಡಿಗರ ಮನ ಗೆದ್ದ ಡಾಲಿ ಧನಂಜಯ್ 'ವೀಕೆಂಡ್ ವಿತ್ ರಮೇಶ್' ಎಪಿಸೋಡ್‌ಗೆ ಸಿಕ್ಕ ಟಿವಿಆರ್ ಎಷ್ಟು?
ತಮ್ಮ ಕುಟುಂಬದ ಬಗ್ಗೆ ಇದೇ ಸಮಯದಲ್ಲಿ ಹೇಳಿಕೊಂಡಿರುವ ನಟ ಪ್ರೇಮ್, ತಮಗೆ ಹೇಗೆ ಚಿತ್ರದ ನಂಟು ಬೆಳೆಯಿತು ಎಂದೂ ಹೇಳಿದ್ದಾರೆ. ಹೆಚ್ಚಾಗಿ ಅಪ್ಪ ಅಮ್ಮ ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದರೆ ನಮ್ಮ ಅಪ್ಪ ಅಮ್ಮ ಸಮೀಪವಿದ್ದ ಪಲ್ಲವಿ ಥಿಯೇಟರ್‌ಗೆ (Pallavi Theator) ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿಂದಲೇ ಚಿತ್ರದ ಹುಚ್ಚು ಶುರುವಾದದ್ದು ಎಂದರು. ತಮ್ಮ ಇಬ್ಬರು ತಂಗಿಯರ ಬಗ್ಗೆಯೂ ಇದೇ ವೇಳೆ ಪ್ರೇಮ್ ಹೇಳಿದ್ದಾರೆ. ನಮ್ಮ ಮನೆಯ ಏರಿಯಾ ಸರಿ ಇರಲಿಲ್ಲ. ಅದಕ್ಕಾಗಿ ತಂಗಿಯಂದಿರ ಮೇಲೆ ಯಾವಾಗಲೂ ನಿಗಾ ಇಡುತ್ತಿದ್ದೆ ಎಂದ ಪ್ರೇಮ್, ತಂಗಿಯಂದಿರು ಅತ್ತ ಇತ್ತ ನೋಡದೇ ಶಾಲೆಯಿಂದ ನೇರವಾಗಿ ಮನೆಗೆ ಬರಬೇಕು ಎಂದು ಆರ್ಡರ್ ಮಾಡುತ್ತಿದ್ದೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ.