
ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಅವರು ( Actor Dileep Raj ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೇ 13ರಂದು ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಆಮೇಲೆ ಆಸ್ಪತ್ರೆ ದಾಖಲಿಸುವ ವೇಳೆಗೆ ನಿಧನರಾಗಿದ್ದರು. ಪತಿಯ ಅಗಲಿಕೆ ಕಂಡು, ಪತ್ನಿ ಶ್ರೀವಿದ್ಯಾ ಅವರು ಪತಿಯ ಶವದ ಮುಂದೆ ಗೋಳಾಡಿದ ದೃಶ್ಯ ಕಂಡು ಎಲ್ಲರ ಕಣ್ಣಾಲೆ ಒದ್ದೆಯಾಗಿತ್ತು. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಮೊದಲ ಪೋಸ್ಟ್ ಹಂಚಿಕೊಂಡಿದ್ದಾರೆ.
“ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ. ದಿಲೀಪ್ ಅವರು ಕಲೆ, ಸಿನಿಮಾ ಮತ್ತು ಇನ್ನು ಮುಂದೆ ನಾವು ಕಾಣುವ ಪ್ರತಿಯೊಂದು ಕರುಣೆಯ ಕೆಲಸದ ರೂಪದಲ್ಲಿ ನಮ್ಮ ನಡುವೆಯೇ ಇರುತ್ತಾರೆ. ಅವರು ಶಾಂತಿಯಿಂದ ಇರಲಿ ಎಂದು ನಾನು ಅವರನ್ನು ಕಳುಹಿಸಿಕೊಡಲು ನಿರ್ಧರಿಸಿದ್ದೇನೆ. ಆದರೆ ಒಂದು ವಿಷಯವಂತೂ ಖಚಿತ - ಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗಲಾರದು” ಎಂದು ಶ್ರೀವಿದ್ಯಾ ರಾಜ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ವರ್ಷ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ. ಇದಕ್ಕೆ ಒಳ್ಳೆಯ ಗಿಫ್ಟ್ ಕೊಟ್ಟರು. ದಿಲೀಪ್ ಇಲ್ಲದೆ ನಾನು ಇರೋಕೆ ಆಗೋದಿಲ್ಲ, ನಾನು ಅವನ ಜೊತೆ ಇರ್ತೀನಿ. ನಮಗೆಲ್ಲ ನೋವು ಕೊಟ್ಟು ಅವನು ನಗುತ್ತ ಹೋದ ಎಂದು ಪತ್ನಿ ಶ್ರೀವಿದ್ಯಾ ಅವರು ದಿಲೀಪ್ ಅಂತ್ಯಕ್ರಿಯೆ ವೇಳೆ ಕಣ್ಣೀರು ಹಾಕುತ್ತಿದ್ದರು. ದಿಲೀಪ್ ಪಾರ್ಥಿವ ಶರೀರದ ದರ್ಶನ ಪಡೆಯಲು ಬಂದವರೆಲ್ಲರೂ ಶ್ರೀವಿದ್ಯಾ ಅವರು ಹೇಗೆ ಇರ್ತಾರೋ ಏನೋ, ಅವರ ಕಣ್ಣೀರು ನೋಡೋಕೆ ಆಗ್ತಿಲ್ಲ ಎಂದು ಹೇಳುತ್ತಲೇ ಇದ್ದರು.
ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಜೀವನದ ಉದ್ದೇಶ, ಪ್ಲ್ಯಾನ್ ಎಂದು ಕೇಳಲಾಗಿತ್ತು. ಆಗ ದಿಲೀಪ್ ರಾಜ್ ಅವರು, “ಶ್ರೀವಿದ್ಯಾ ರಾಜ್ ಅವರನ್ನು ಖುಷಿಯಾಗಿ ಇಡೋದು ನನ್ನ ಜೀವನದ ಉದ್ದೇಶ, ಅವರು ಚೆನ್ನಾಗಿದ್ದರೆ ನಾನು ಚೆನ್ನಾಗಿರುವೆ” ಎಂದು ಹೇಳಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ.
ಶ್ರೀವಿದ್ಯಾ ರಾಜ್ ಹಾಗೂ ದಿಲೀಪ್ ರಾಜ್ ಅವರು ಎರಡು ದೇಹ, ಒಂದೇ ಜೀವದಂತೆ ಇದ್ದರು. ಕಾಲೇಜಿನಲ್ಲಿದ್ದಾಗಲೇ ಪ್ರೀತಿಸಿದ್ದ ಈ ಜೋಡಿ, ಆಮೇಲೆ ಮದುವೆಯಾಗಿತ್ತು. HR ಆಗಿ 18 ವರ್ಷ ಕೆಲಸ ಮಾಡಿದ್ದ ಶ್ರೀವಿದ್ಯಾ ಅವರು, ಆಮೇಲೆ ಪತಿಯ ಜೊತೆಗೆ ಧಾರಾವಾಹಿ ನಿರ್ಮಾಣಕ್ಕೆ ಇಳಿದರು. ಪತ್ನಿಯ ಸಪೋರ್ಟ್‌ನಿಂದಲೇ ನಾನು ಪ್ರೊಡಕ್ಷನ್ ಹೌಸ್ ನಡೆಸುತ್ತಿದ್ದೇನೆ ಎಂದು ದಿಲೀಪ್ ರಾಜ್ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.