ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ಯಾರನ್ನೂ ಸೆಳೆಯುತ್ತಿಲ್ಲವೇ? ಈ ಕಾರಣಗಳಿರಬಹುದು...

By Web Desk  |  First Published Jun 23, 2019, 1:15 PM IST

ಔದ್ಯೋಗಿಕ ಸಂಪರ್ಕ ಜಾಲತಾಣ ಲಿಂಕ್ಡ್ಇನ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದೀರಾದರೂ, ಅದರಿಂದ ಇದುವರೆಗೂ ಯಾವ ಲಾಭವೂ ಆಗಿಲ್ಲವೆಂದಾದರೆ ಬಹುಶಃ ನಿಮ್ಮ ಪ್ರೊಫೈಲ್‌ನಲ್ಲಿ ಏನೋ ಕೊರತೆಯಿರಬಹುದು. ಅಥವಾ ನಿಮಗದನ್ನು ಸರಿಯಾಗಿ ಬಳಸಿಕೊಳ್ಳಲು ಬರದೇ ಇರಬಹುದು. 


ಕೇವಲ ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ನೋಡಿ ರಿಕ್ರೂಟರ್ಸ್ ನಿಮ್ಮನ್ನು ಕೆಲಸಕ್ಕೆ ಕರೆಯಬೇಕೆಂದು ಬಯಸುತ್ತಿದ್ದೀರಾ? ಹೌದು ಎಂಬುದೇ ನಿಮ್ಮ ಉತ್ತರ ಆಗಿದ್ದಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡುವಾಗಲೇ ಸ್ವಲ್ಪ ಜಾಗರೂಕರಾಗಿ, ಆಸಕ್ತಿಯಿಂದ ಶುರು ಮಾಡಬೇಕು. ಓದುವವರಿಗೆ ನಿಮ್ಮ ಅನುಪಸ್ಥಿತಿಯಲ್ಲೂ ಉದ್ಯೋಗ ಸಂಬಂಧಿ ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರಕುವಂತಿರಬೇಕು. ಹಲವು ಸಮಯದಿಂದ ಲಿಂಕ್ಡ್ಇನ್ ಪ್ರೊಫೈಲ್ ನೆನೆಗುದಿಗೆ ಬಿದ್ದಿದ್ದರೆ ಅದನ್ನು ಈಗಲೇ ಕೈಗೆತ್ತಿಕೊಂಡು ಅಪ್ಡೇಟ್ ಮಾಡಿ. 

ಹೆಚ್ಚು ಮೊಬೈಲ್‌ ನೋಡಿದ್ರೆ ಕೋಡು ಬರುತ್ತೆ!: ಹೇಗೆ? ಯಾಕೆ? ಇಲ್ಲಿದೆ ಉತ್ತರ

ಏನಿದು ಲಿಂಕ್ಡ್ಇನ್ ?

Tap to resize

Latest Videos

undefined

ಲಿಂಕ್ಡ್ಇನ್ ನಿಮ್ಮನ್ನು ಉದ್ಯೋಗದ ಆಧಾರದ ಮೇಲೆ ಬ್ಯುಸಿನೆಸ್ ಪ್ರೊಫೆಷನಲ್ಸ್ ಹಾಗೂ ಉದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸಲು ನೆರವಾಗುವ ಜಾಲತಾಣ. ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನೀವು ಜನರನ್ನು ಗೆಳೆಯರನ್ನಾಗಿಸಿಕೊಳ್ಳುತ್ತೀರಿ. ಆದರೆ, ಇದು ಕರಿಯರ್ ಸಂಬಂಧಿ ಸಂಪರ್ಕಗಳನ್ನು ಒದಗಿಸಿಕೊಡುತ್ತದೆ. ಇಲ್ಲಿ ನೀವು ಎಷ್ಟು ಮಂದಿಯೊಂದಿಗೆ ಸಂಪರ್ಕದಲ್ಲಿದ್ದೀರಾ ಎಂಬುದಕ್ಕಿಂತ ಯಾರೊಂದಿಗೆ ಸಂಪರ್ಕ ಸಾಧಿಸಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಇದು ನಿಮ್ಮ ಔದ್ಯೋಗಿಕ ಬದುಕಿಗೆ ದಾರಿದೀಪವಾಗಬಲ್ಲದು. 

ಪ್ರೊಫೈಲ್ ಹೀಗಿರಲಿ

1. ಪ್ರೊಫೈಲ್ ಶೇ.100ರಷ್ಟು ಪೂರ್ತಿಯಾಗಿರಲಿ. ಓದುವವರ ದೃಷ್ಟಿಯಿಂದಲೇ ಪ್ರೊಫೈಲ್ ಬರೆಯುತ್ತಾ ಹೋಗಿ. ಸಾಮಾನ್ಯವಾಗಿ ಜನರು ಒಂದೈದು ನಿಮಿಷದಲ್ಲಿ ಫ್ರೊಫೈಲ್ ಕ್ರಿಯೇಟ್ ಮಾಡುವ ಅರ್ಜೆನ್ಸಿಯಲ್ಲಿ ಕೆಲಸ ಮಾಡುತ್ತಾರೆ. ಆದರೆ ಹಾಗೆ ಮಾಡಲು ಇದೇನು ನಿಮ್ಮ ಪ್ರೊಫೈಲ್ ಅಲ್ಲ. ಕರಿಯರ್‌ಗೆ ಸಂಬಂಧಿಸಿದ್ದು. ಇದಕ್ಕಾಗಿ ಒಂದೆರಡು ಗಂಟೆಗೂ ಹೆಚ್ಚು ಕಾಲ ಮೀಸಲಿಟ್ಟರೂ ಸರಿ, ನಿಮ್ಮಿಂದ ಸಾಧ್ಯವಾದಷ್ಟು ಉತ್ತಮ ಪ್ರೊಫೈಲ್ ರೆಡಿ ಮಾಡಿ. ಬೇಕಾದ ಎಲ್ಲ ವಿವರವನ್ನೂ ತುಂಬಿಸಿ. ನಂತರ ಅದನ್ನು ನಿಮ್ಮ ಪ್ರೊಫೈಲ್‌ಗೆ ಸೇರಿಸಿ. ನಿಮ್ಮ ಪ್ರೊಫೈಲ್ ಶೇ.100ರಷ್ಟು ಪೂರ್ತಿಯಿದ್ದರೆ, ಅದು ಸರ್ಚ್‌ನಲ್ಲಿ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. 

ರೇಪ್‌ನಂಥ ಘಟನೆ ನಡೆದರೆ ಸಂಬಂಧಿ ಎಚ್ಚರಿಸೋ ರಿಸ್ಟ್ ಬ್ಯಾಂಡ್!

2. ನಿಮ್ಮ ರೆಸ್ಯೂಮೆಯಂತೆ ಲಿಂಕ್ಡ್ಇನ್ ಪ್ರೊಫೈಲನ್ನೂ ಆಗಾಗ ಅಪ್ಡೇಟ್ ಮಾಡುವುದು ಅಗತ್ಯ. ಸಣ್ಣ ಸಣ್ಣ ವಿವರಗಳನ್ನು ತುಂಬುವುದು ಮುಖ್ಯ. ನೀವು ಯಾವ ರೀತಿಯ ಕೆಲಸ ಬಯಸುತ್ತೀರಿ ಎಂಬುದರ ಜೊತೆಗೆ, ಎಲ್ಲಿ, ಯಾವ ಡಿವಿಶನ್‌ನಲ್ಲಿ ಕೆಲಸ ಮಾಡಬಯಸುತ್ತೀರೆಂಬ ಸ್ಪಷ್ಟತೆ ನೀಡುವುದೂ ಮುಖ್ಯ. ಸಧ್ಯ ಎಲ್ಲಿ ಯಾವ ಕೆಲಸದಲ್ಲಿದ್ದೀರ ಎಂಬುದು ವಿವರ ಸಹಿತವಿರುವುದು ಒಳ್ಳೆಯದು. ಇದಕ್ಕೂ ಮುಂಚಿನ ಎರಡು ಪೊಸಿಶನ್‌ಗಳನ್ನೂ ಮೆನ್ಷನ್ ಮಾಡಿ. ಇನ್ನು ಶಿಕ್ಷಣದ ಕುರಿತು ಸಂಪೂರ್ಣ ವಿವರಣೆ ಅಗತ್ಯ. ನೀವು ಕೆಲಸಕ್ಕೆ ಸೇರಿ ಎಷ್ಟೇ ವರ್ಷಗಳ ಅನುಭವವಿದ್ದರೂ ರಿಕ್ರೂಟರ್ಸ್ ನಿಮ್ಮ ಶಿಕ್ಷಣದ ಮಟ್ಟವನ್ನು ನೋಡಿಯೇ ನೋಡುತ್ತಾರೆ. ಶಿಕ್ಷಣವು ಎಲ್ಲ ಉದ್ಯೋಗಕ್ಕೂ ಮುಖ್ಯವಾಗುತ್ತದೆ. 

3. ಲಿಂಕ್ಡ್ಇನ್‌ನಲ್ಲಿ 50 ಕೌಶಲಗಳನ್ನು ಫಿಲ್ ಮಾಡಲು ಅವಕಾಶವಿರುತ್ತದೆ. ಅವುಗಳಲ್ಲಿ 3 ಹೈಲೈಟ್ ಆಗುತ್ತದೆ. ಹೀಗಾಗಿ, ಕನಿಷ್ಠ 3 ಕೌಶಲಗಳನ್ನು ತಿಳಿಸುವುದು ಬಹಳ ಮುಖ್ಯ. ಬುದ್ಧಿವಂತಿಕೆಯಿಂದ ನಿಮ್ಮ ಕೌಶಲಗಳನ್ನು ತಿಳಿಸಿ. ಈ ನಿಮ್ಮ ಕೌಶಲಗಳು ಹೇಗೆ ಉದ್ಯೋಗಕ್ಕೆ ಸಹಾಯಕವಾಗಿವೆ ಎಂಬುದನ್ನು ವಿವರಿಸುವುದು ಕೂಡಾ ಮುಖ್ಯವಾಗುತ್ತದೆ. 

4. ರೆಸ್ಯೂಮೆ ಪುಟ್ಟದಾಗಿ ನಿಮ್ಮ ಬಗ್ಗೆ ಹೇಳುತ್ತದೆ. ಆದರೆ, ಲಿಂಕ್ಡ್ಇನ್ ವಿವರವಾಗಿ ನಿಮ್ಮ ವೃತ್ತಿ ವೃತ್ತಾಂತ ಹೇಳುತ್ತದೆ. ಇದಕ್ಕೆ ರೆಸ್ಯೂಮೆಗಿಂತ ಓದುಗರು ಕೂಡಾ ಹೆಚ್ಚು. ನಿಮಗೆ ಗೊತ್ತಿಲ್ಲದ ಜನರು ಕೂಡಾ ನಿಮ್ಮ ಪ್ರೊಫೈಲ್ ನೋಡುತ್ತಿರುತ್ತಾರೆ. ಹೀಗಾಗಿ, ಬಹಳ ತಾಳ್ಮೆಯಿಂದ, ಎಲ್ಲ ಆಯಾಮಗಳನ್ನು ಯೋಚಿಸಿ ಪ್ರೊಫೈಲ್ ತಯಾರು ಮಾಡಿ. ಹಾಗಂತ ಸುಳ್ಳುಪೊಳ್ಳುಗಳನ್ನು ತುಂಬಬೇಡಿ. ಭಾಷೆ ಪೂರ್ಣ ಪ್ರೊಫೆಶನಲ್ ಆಗಿರಬೇಕೆಂದೇನಿಲ್ಲ. 

5. ನಿಮಗೆ ಇಷ್ಟವೋ ಕಷ್ಟವೋ, ಈ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರೂ ವಿಶ್ಯುಯಲೀ ಯೋಚಿಸುತ್ತಾರೆ. ನಿಮ್ಮ ವೃತ್ತಿಗೆ ಹೊಂದುವಂಥ ಉತ್ತಮ ಪ್ರೊಫೈಲ್ ಪಿಕ್ಚರ್ ಹಾಕುವುದು ಅತ್ಯಗತ್ಯ. ಫೋಟೋ ಇದ್ದರೆ ಸರ್ಚ್‌ನಲ್ಲಿ ಫೋಟೋ ಇರದ ಪ್ರೊಫೈಲ್‌ಗಿಂತ 7 ಪಟ್ಟು ಹೆಚ್ಚು ನಿಮ್ಮ ಪ್ರೊಫೈಲ್ ಕಾಣಿಸುವ ಸಾಧ್ಯತೆ ಇರುತ್ತದೆ. ಫೋಟೋದಿಂದ ಸೆಕೆಂಡ್‌ಗಳಲ್ಲಿ ಇನ್ನೊಬ್ಬರ ಮನದಲ್ಲಿ ಇಂಪ್ರೆಶನ್ ಹುಟ್ಟುಹಾಕಬಹುದು. ಹೀಗಾಗಿ, ಫೋಟೋ ಆಯ್ಕೆಯಲ್ಲಿ ಜಾಗೃತೆ ವಹಿಸಿ. ಪ್ರೊಫೆಶನಲ್ ಆಗಿ ತಯಾರಾಗಿರುವ, ಸ್ಮೈಲ್ ಮಾಡುತ್ತಿರುವ ಗುಣಮಟ್ಟದ ಫೋಟೋ ಉತ್ತಮ. ಅತಿಯಾದ ಬಣ್ಣ ಹಾಗೂ ಫ್ರಿಂಟೆಡ್ ಬ್ಯಾಕ್‌ಗ್ರೌಂಡ್‌ಗಳಿರುವ ಫೋಟೋಗಳು ಬೇಡವೇ ಬೇಡ. ನೋಟವೂ ಕ್ಯಾಮೆರಾದೆಡೆಯೇ ಇರಬೇಕು. ಓರೆನೋಟದಿಂದ ಇಂಪ್ರೆಸ್ ಮಾಡಲು ಇದೇನು ಮ್ಯಾಟ್ರಿಮೋನಿಯಲ್ ಸೈಟ್ ಅಲ್ಲ ಎಂಬುದು ನೆನಪಿರಲಿ.

ಮೊಬೈಲ್ ಕಳ್ಳರ ಆಟಕ್ಕೆ ಬ್ರೇಕ್ ಹಾಕಲು ಕೇಂದ್ರದ ಹೊಸ ಪ್ಲ್ಯಾನ್ 

6. ಅತ್ಯುತ್ತಮವಾದ ಹೆಡ್‌ಲೈನ್ ಕೊಡುವುದನ್ನು ಮರೆಯಬೇಡಿ. ಏಕೆಂದರೆ ರಿಕ್ರೂಟರ್ಸ್ ಮೊದಲು ಓದುವುದೇ ಅದನ್ನು. ಇನ್ನು ಸಮ್ಮರಿ ಸೆಕ್ಷನ್‌ನಲ್ಲಿ ನಿಮ್ಮ ದೊಡ್ಡ ಸಾಧನೆಗಳ ಬಗ್ಗೆ ಬರೆಯಿರಿ. ಆರಂಭದಲ್ಲಿ ಕನಿಷ್ಠ 50 ಜನರೊಂದಿಗೆ ಸಂಪರ್ಕ ಸಾಧಿಸಿ. ಪ್ರೊಫೈಲ್ ವಿಷಯದಲ್ಲಿ ಆ್ಯಕ್ಟಿವ್ ಆಗಿರಿ. ಅಗತ್ಯ ಬಿದ್ದಾಗೆಲ್ಲ ಅಪ್ಡೇಟ್ ಮಾಡುತ್ತಲೇ ಇರಿ. ಬ್ಯಾಕ್‌ಗ್ರೌಂಡ್ ಫೋಟೋಗೆ ನಿಮ್ಮ ನಗರದ ಅಥವಾ ಈಗ ಉದ್ಯೋಗ ನಿರ್ವಹಿಸುತ್ತಿರುವ ಸಂಸ್ಥೆಯ ಲೋಗೋ ಹಾಕಿ. 

click me!