ಮೊಬೈಲ್ ರಿವ್ಯೂ | Honor 10 Lite: ಆಹಾಹಾ... ಎಂಥ ಫೋನ್ ಮಾರಾಯ್ರೆ!

By Web Desk  |  First Published Feb 2, 2019, 7:15 PM IST

ಕೈಯಲ್ಲಿ ಹಿಡಿದರೆ ಎದುರಿಗಿದ್ದವರ ಗಮನ ಆಕಡೆಯೇ ಹೋಗುವಂತಹ ಆಕರ್ಷಕ ಬಣ್ಣದ, ಸ್ವಲ್ಪ ಬಾಗಿ ಬಳುಕಿದಂತೆ ಇದ್ದು ಹಿಡಿದುಕೊಳ್ಳಲು ಕಂಫರ್ಟ್ ಅನ್ನಿಸುವ ಆಕಾರದ ಹೊಸ ಮೊಬೈಲ್ ಬಂದಿದೆ. ಹೆಸರು Honor 10 Lite. 


ಹದಿನೈದು ಸಾವಿರ ಒಳಗಿನ ಬೆಲೆಯ ಸೆಗ್ಮೆಂಟಿನ ಮೊಬೈಲ್‌ಗಳಿಗೆ ಸ್ಪರ್ಧೆಯೊಡ್ಡುವಂತೆ ಇರುವ ಈ ಮೊಬೈಲ್ ಬೆಲೆ ರೂ. 13999. 4 GB RAM, 64 GB ಸ್ಟೋರೇಜ್. 

ತಿದ್ದಿ ತೀಡುವ ಗುರು ಕ್ಯಾಮೆರಾ:
ಎಂಥಾ ಮೊಬೈಲೇ ಇದ್ದರೂ ನಾವು ರಪಕ್ಕ ನೋಡುವುದು ಕ್ಯಾಮೆರಾ. ಈ ಮೊಬೈಲ್‌ನ ಫ್ರಂಟ್ ಕ್ಯಾಮೆರಾ 24 ಪಿಕ್ಸೆಲ್. ಸಕತ್ ಸೆಲ್ಫೀ ಬರಬೇಕು ಅನ್ನುವುದು ಇದರ ಉದ್ದೇಶ. ಅದಕ್ಕೆ ತಕ್ಕಂತೆ ಕ್ಯಾಮೆರಾದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಪೋರ್ಟ್ ಇದೆ. ಸ್ವಲ್ಪ ಕತ್ತಲಿದ್ದರೂ ಆ ಕತ್ತಲೆಯನ್ನು ಒರೆಸಿ ಮುಖವನ್ನು ಬೆಳದಿಂಗಳ ಚಂದ್ರನಂತೆ ಕಾಣಿಸುವಂತಹ ಎಲ್ಲಾ ಪ್ರಯತ್ನವನ್ನೂ ಈ ಕ್ಯಾಮೆರಾ ಮಾಡುತ್ತದೆ. ತಿದ್ದಿ ತೀಡಿದ ಮುಖಾರವಿಂದವನ್ನು ಸ್ಟೇಟಸ್ ಹಾಕುವವರಿಗೆ ಇದೊಳ್ಳೆ ಆಯ್ಕೆ. ಪ್ರೈಮರಿ ಕ್ಯಾಮೆರಾ 13 ಮೆಗಾ ಪಿಕ್ಸೆಲ್, ಜತೆಗೆ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಇದೆ.

Latest Videos

undefined

ಇದನ್ನೂ ಓದಿ: ಜಿಯೋನಿಂದ 10GB ಉಚಿತ ಡೇಟಾ! ಯಾರಿಗುಂಟು? ಯಾರಿಗಿಲ್ಲ?

ಪೋರ್ಟ್ರೇಟ್ ಮೋಡ್, ಪನೋರಮಾ ಮೋಡ್ ಇದೆಲ್ಲಾ ಮಾಮೂಲು. ನೈಟ್ ಮೋಡ್ ಅಂತ ಒಂದಿದೆ. ರಾತ್ರಿ ಫೋಟೋಗಳನ್ನು ಚೆಂದ ತೆಗೆಯಬಹುದು ಅಂತ ಕಂಪನಿ  ಹೇಳುತ್ತಾದರೂ ಮೊಬೈಲ್ ಗಟ್ಟಿ ಹಿಡಿದುಕೊಂಡು ಸ್ವಲ್ಪ ಹೊತ್ತು ನಿಂತುಕೊಳ್ಳಬೇಕು. ಕೈ ಅಲುಗಾಡಿದರೆ ಗೋವಿಂದ. ಎಷ್ಟೇ ಸರಿಯಾಗಿ ಹಿಡಿದುಕೊಂಡರೂ ಫೋಟೋ ಸರಿ ಬರುವುದು ದೈವೇಚ್ಛೆ. ಎಐ ಫೀಚರ್ ಇದ್ದರೂ ಎಐ ಇಲ್ಲದೇ ತೆಗೆದ ಫೋಟೋಗಳೇ ಚೆಂದ. ಬೆಲೆ ತಕ್ಕಂತೆ ಕ್ಯಾಮೆರಾ ಇದೆ. ಕ್ಯಾಮೆರಾ ತಕ್ಕಂತೆ ಮೊಬೈಲ್ ಬೆಲೆ.

ಬ್ಯಾಟರಿ ಮೇಲೆ ಪ್ರೇಮ:
Honor 10 Liteನ ಪ್ಲಸ್ ಪಾಯಿಂಟು ಬ್ಯಾಟರಿ. 3400 mAh ಸಾಮರ್ಥ್ಯ ಇದೆ. ಮೀಡಿಯಂ ಸೆಟ್ಟಿಂಗ್‌ನಲ್ಲಿ ಪಬ್‌ಜಿ ಅರ್ಧ ಗಂಟೆ ಆಡಿದರೆ 13 ಪರ್ಸೆಂಟ್ ಬ್ಯಾಟರಿ ಖಾಲಿಯಾಗುತ್ತದೆ. ವೀಡಿಯೋ ನೋಡಿದರೂ ಹೆಚ್ಚೇನೂ ಕಿರಿಕ್ ಇಲ್ಲ. ಮೊಬೈಲ್ ಕಡಿಮೆ ಬಳಸಿಕೊಳ್ಳುವವರಿಗಂತೂ ಇದು ಬೆಸ್ಟು ಫ್ರೆಂಡು. ಯಾವ ಹೊತ್ತಿಗೆ ಕರೆದು ಟೈಂ ನೋಡಿದರೂ ಬ್ಯಾಟರಿ ಕಡ್ಡಿಗಳು ಅಲ್ಲಾಡಿರುವುದಿಲ್ಲ. ಆದರೆ ಸಾಮಾನ್ಯ ಚಾರ್ಜರ್ ಇರುವುದರಿಂದ ಚಾರ್ಜ್ ಮಾಡುವುದಕ್ಕೆ ತಾಳ್ಮೆ ಬೇಕು. ಟೈಪ್ ಸಿ ಚಾರ್ಜರ್ ಬಳಸುವವರಿಗೆ ಈ ಚಾರ್ಜರ್ ಒಗ್ಗದ ಪ್ರೇಮಿ.

ಇಂಟರೆಸ್ಟಿಂಗ್ ಅಂದ್ರೆ ಇದರ ದೇಹದ ವಿಚಾರ. ಸಿಕ್ಸ್ ಪ್ಯಾಕ್ ಮಾಡಿ ದೇಹವನ್ನು ಸ್ಟೀಲ್ ಥರ ಮಾಡಿಕೊಳ್ಳುವ ಈ ಕಾಲದಲ್ಲಿ ಹಾನರ್ ಮಾತ್ರ ಮೆಟಲ್ ಬಾಡಿ ನೀಡದೆ ಫೈಬರ್‌ಗೆ ಮೊರೆ ಹೋಗಿದೆ. ಆದರೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಬ್ಯಾಕ್ ಪ್ಯಾನೆಲ್‌ನಲ್ಲೇ ಏಳು ಲೇಯರ್ ಇದೆ ಅನ್ನುತ್ತದೆ ಕಂಪನಿ. ಪವರ್ ಮತ್ತು ಸ್ಟೈಲ್ ಎರಡೂ ಸಕತ್ ಅನ್ನಿಸುವುದರಿಂದ ಡಿಸೈನ್ ಯಂಗ್‌ಸ್ಟರ್‌ಗಳು ಹೊಸ ಹೇರ್‌ಸ್ಟೈಲ್ ಮಾಡಿಕೊಂಡಂತೆ ಥಟ್ ಅಂತ ಗಮನ ಸೆಳೆಯುತ್ತದೆ.

ಇದನ್ನೂ ಓದಿ: ಫೇಸ್‌ಬುಕ್‌ ಬಳಕೆದಾರರೇ ಗಮನಿಸಿ : ನಿಮ್ಮ ಅಕೌಂಟ್ ರದ್ದಾಗಬಹುದು

ಹತ್ತರಲ್ಲಿ ಎಂಟು ಸ್ಟಾರ್:
6.21 ಇಂಚಿನ ಡಿಸ್‌ಪ್ಲೈ ಇದರ ಲಕ್ಷಣ ಹೆಚ್ಚಿಸಿದೆ. ಡ್ಯೂ ಡ್ರಾಪ್ ನಾಚ್ ಇದರ ವಿಶೇಷತೆ. ಮೊಬೈಲ್ ಕೈಯಲ್ಲಿ ಹಿಡಿದುಕೊಂಡರೆ ಡಿಸ್‌ಪ್ಲೇ ಪೂರ್ತಿ ಭಾಗ ಕಾಣಿಸುತ್ತದೆ. ಅನವಶ್ಯಕ ಖಾಲಿ ಜಾಗಗಳಿಲ್ಲ. ಸಿನಿಮಾ ನೋಡೋಕೆ, ವೀಡಿಯೋ ನೋಡಿದರೆ ತೃಪ್ತಿ. ಆಕ್ಟಾ ಕೋರ್ ಪ್ರೊಸೆಸರ್, ಹಾನರ್ ಕಂಪನಿಯ ಸ್ವಂತದ ಕಿರಿನ್ 710 ಚಿಪ್‌ಸೆಟ್ ಈ ಮೊಬೈಲ್‌ನ ಶಕ್ತಿ. ನಮಗೆ ರಿವ್ಯೆಗೆ ಸಿಕ್ಕಿದ್ದು 4 ಜಿಬಿ RAM ಸಾಮರ್ಥ್ಯದ ಮೊಬೈಲ್. 6 GB RAM ಸಾಮರ್ಥ್ಯದ ಮೊಬೈಲ್ ಕೂಡ ಇದೆ. ಬೆಲೆ ಜಾಸ್ತಿ. ರೂ.17999.

Honor 10 Lite ಕೈಯಲ್ಲಿದ್ದರೆ ನೋಡಲು ಚೆಂದ. ಬಳಸುತ್ತಿದ್ದರೆ ಬೇಜಾರಂತೂ ಇಲ್ಲ. ನಮ್ಮ ರೇಟಿಂಗ್ ಹತ್ತರಲ್ಲಿ ಎಂಟು ಸ್ಟಾರ್.

click me!