
ಮೋಹನ ಹಂಡ್ರಂಗಿ
ಬೆಂಗಳೂರು (ಡಿ.23): ರಾಜ್ಯ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿಗಳ ಪೈಕಿ ಒಂದಾದ ‘ಯುವ ನಿಧಿ’ ಯೋಜನೆಯಡಿ 3.62 ಲಕ್ಷ ಮಂದಿ ನಿರುದ್ಯೋಗಿ ಫಲಾನುಭವಿಗಳು ನೋಂದಣಿಯಾಗಿದ್ದು, ಇವರ ಪೈಕಿ 2,326 ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲಿ 2025 ಡಿ.1ರ ಅಂತ್ಯದವರೆಗೆ 3.55 ಲಕ್ಷ ಪದವೀಧರರು ಮತ್ತು 6,804 ಡಿಪ್ಲೊಮಾ ಪದವೀಧರರು ಸೇರಿ ಒಟ್ಟು 3.62 ಲಕ್ಷ ಮಂದಿ ನಿರುದ್ಯೋಗಿಗಳು ಯುವ ನಿಧಿ ಯೋಜನೆಯಡಿ ನೋಂದಣಿಯಾಗಿದ್ದಾರೆ.
ಯುವ ನಿಧಿ ಯೋಜನೆಗೆ ಪೂರಕವಾಗಿ ಉದ್ಯೋಗಾವಕಾಶ ಹೆಚ್ಚಿಸಲು ರಾಜ್ಯ ಸರ್ಕಾರ ಆರಂಭಿಸಿದ ನಿರುದ್ಯೋಗ ಭತ್ಯೆ ಜತೆಗೆ ಉಚಿತ ಕೌಶಲ್ಯ ತರಬೇತಿ ಕಲ್ಪಿಸುವ ‘ಯುವ ನಿಧಿ ಪ್ಲಸ್’ ಕಾರ್ಯಕ್ರಮದಡಿ 17,715 ಮಂದಿ ಕೌಶಲ್ಯ ತರಬೇತಿ ಪಡೆದುಕೊಂಡಿದ್ದಾರೆ. ಈ ಪೈಕಿ 2,326 ಮಂದಿ ಉದ್ಯೋಗ ಪಡೆದುಕೊಳ್ಳಲು ಸಫಲರಾಗಿದ್ದಾರೆ. ಹೀಗಾಗಿ ಅವರನ್ನು ಯೋಜನೆಯಿಂದ ಕೈಬಿಡಲಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳೇ ಹೇಳುತ್ತಿವೆ.
ಏನಿದು ಯುವ ನಿಧಿ ಯೋಜನೆ?: ರಾಜ್ಯ ಸರ್ಕಾರ 2022ರ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದ್ದ ಪಂಚ ಗ್ಯಾರಂಟಿಗಳ ಪೈಕಿ ಯುವ ನಿಧಿ ಯೋಜನೆಯೂ ಒಂದು. ಪದವಿ ಮತ್ತು ಡಿಪ್ಲೊಮಾ ಪದವೀಧರ ಕನ್ನಡಿಗ ನಿರುದ್ಯೋಗಿಗಳಿಗೆ ಆರ್ಥಿಕ ನೆರವು ನೀಡುವುದು ಯೋಜನೆಯ ಮುಖ್ಯ ಉದ್ದೇಶ. ಅಂದರೆ, 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿ ಆರು ತಿಂಗಳಾದರೂ ಕೆಲಸ ಸಿಗದ ನಿರುದ್ಯೋಗಿ ಕನ್ನಡಿಗ ಯುವಕರಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ.
ಪದವೀಧರರಿಗೆ ಮಾಸಿಕ 3000 ರು. ಮತ್ತು ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರು. ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಗರಿಷ್ಠ 2 ವರ್ಷ ಅಥವಾ ಉದ್ಯೋಗ ಸಿಗುವವರೆಗೆ ಅಥವಾ ಇವೆರಡರಲ್ಲಿ ಯಾವುದು ಮೊದಲು ಬರುವುದೋ ಅಲ್ಲಿವರೆಗೂ ಈ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಭತ್ಯೆ ಪಡೆಯುವ ಅವಧಿಯಲ್ಲಿ ಫಲಾನುಭವಿಗಳು ಉದ್ಯೋಗ ಸಿಕ್ಕಿದೆಯೋ, ಇಲ್ಲವೋ ಎಂದು ಪ್ರತಿ ತಿಂಗಳಿಗೊಮ್ಮೆ ಘೋಷಣೆ ಮಾಡಿಕೊಳ್ಳಬೇಕು, ತಪ್ಪಿದಲ್ಲಿ ದಂಡ ವಿಧಿಸಲಾಗುತ್ತದೆ.
ರಾಜ್ಯದಲ್ಲಿ ಬೆಳಗಾವಿ ಟಾಪ್: ಈ ಯುವ ನಿಧಿ ಯೋಜನೆಯಡಿ ರಾಜ್ಯದ 31 ಜಿಲ್ಲೆಗಳ ಪೈಕಿ ಅತಿ ಹೆಚ್ಚು ಫಲಾನುಭವಿಗಳು ಬೆಳಗಾವಿ ಜಿಲ್ಲೆಯಲ್ಲಿದ್ದಾರೆ. ಅಂದರೆ, 43,547 ಮಂದಿ ಪದವೀಧರರು ಹಾಗೂ 657 ಮಂದಿ ಡಿಪ್ಲೊಮಾ ಪದವೀಧರರು ಸೇರಿ ಒಟ್ಟು 44,204 ಮಂದಿ ಫಲಾನುಭವಿಗಳಿದ್ದಾರೆ. ನಂತರದ ಸ್ಥಾನದಲ್ಲಿ ವಿಜಯಪುರ ಜಿಲ್ಲೆ 22,389, ಕಲಬುರಗಿ 21,100, ರಾಯಚೂರು 21,678, ಬೆಂಗಳೂರು ನಗರ 18,748, ಬಾಗಲಕೋಟೆ 21,691, ಮೈಸೂರು 14,732, ಬೀದರ್ 13,960 ಮಂದಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ದಾವಣಗೆರೆ, ಧಾರವಾಡ, ಕೊಪ್ಪಳ, ಶಿವಮೊಗ್ಗ, ತುಮಕೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 10 ಸಾವಿರಕ್ಕಿಂತಲೂ ಹೆಚ್ಚಿನ ಫಲಾನುಭವಿಗಳಿದ್ದಾರೆ.
ಯುವ ನಿಧಿ ಯೋಜನೆಯ ಯುವ ನಿಧಿ ಪ್ಲಸ್ ಕಾರ್ಯಕ್ರಮದಡಿ ಉಚಿತ ಕೌಶಲ್ಯ ತರಬೇತಿ ಪಡೆದು ಉದ್ಯೋಗ ಪಡೆದುಕೊಂಡ 2,326 ಮಂದಿ ಪೈಕಿ ಅತಿ ಹೆಚ್ಚು ಫಲಾನುಭವಿಗಳು ದಕ್ಷಿಣ ಕನ್ನಡ ಜಿಲ್ಲೆಯವರು. ಜಿಲ್ಲೆಯಲ್ಲಿ 463 ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಮೈಸೂರು 329, ಮಂಡ್ಯ 223, ಹಾಸನ 197, ಬೆಂಗಳೂರು ನಗರ 191 ಮಂದಿ ನಿರುದ್ಯೋಗಿಗಳು ಉದ್ಯೋಗ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ