‘ಬಾಡಿಗೆ ತಾಯ್ತನ’ದಿಂದ ಮಗು: ವೃದ್ಧ ದಂಪತಿಯಿಂದ ಹೈಕೋರ್ಟ್‌ಗೆ ಮೊರೆ

Published : Dec 23, 2025, 07:38 AM IST
Karnataka High Court

ಸಾರಾಂಶ

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ತಮಗೆ ಅನುಮತಿ ನಿರಾಕರಿಸಿ ರಾಜ್ಯ ಅನುಮೋದಿತ (ಅಪ್ರೋಪ್ರಿಯಟ್‌) ಪ್ರಾಧಿಕಾರವು 2025ರ ನ.29ರಂದು ಹೊರಡಿಸಿದ ಆದೇಶ ರದ್ದು ಕೋರಿ ವೃದ್ಧ ದಂಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವೆಂಕಟೇಶ್‌ ಕಲಿಪಿ

ಬೆಂಗಳೂರು (ಡಿ.23): ಏಕೈಕ ಪುತ್ರನನ್ನು ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿರುವ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಕಾನೂನು ಅಡ್ಡಿಯಾಗುತ್ತಿರುವುದನ್ನು ಗಮನಿಸಿರುವ ಹೈಕೋರ್ಟ್, ಈ ಪ್ರಕರಣವನ್ನು ಕಾಯ್ದೆ-ಕಾನೂನು ಅಡಿ ಅಲ್ಲ, ಮಾನವೀಯತೆಯಿಂದ ನೋಡುವ ಪ್ರಕರಣವೆಂದು ಅಭಿಪ್ರಾಯಪಟ್ಟು, ಅರ್ಜಿದಾರರ ಮನವಿಗೆ ಸ್ಪಂದಿಸಲು ಸೂಚಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ತಮಗೆ ಅನುಮತಿ ನಿರಾಕರಿಸಿ ರಾಜ್ಯ ಅನುಮೋದಿತ (ಅಪ್ರೋಪ್ರಿಯಟ್‌) ಪ್ರಾಧಿಕಾರವು 2025ರ ನ.29ರಂದು ಹೊರಡಿಸಿದ ಆದೇಶ ರದ್ದು ಕೋರಿ ವೃದ್ಧ ದಂಪತಿ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಾನೂನು ಮತ್ತು ನ್ಯಾಯ ಇಲಾಖೆ ಮತ್ತು ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ-2021ರ ಅಡಿಯಲ್ಲಿ ಸ್ಥಾಪನೆಯಾಗಿರುವ ರಾಜ್ಯ ಅನುಮೋದಿತ ಪ್ರಾಧಿಕಾರವನ್ನು ಪ್ರತಿವಾದಿಗಳನ್ನಾಗಿ ಮಾಡಿದೆ.

ಏಕೈಕ ಪುತ್ರ ನಿಧನ: 2025ರ ಅ.15ರಂದು ಬ್ರೈನ್‌ ಟ್ಯೂಮರ್‌ನಿಂದ ನಮಗಿದ್ದ 32 ವರ್ಷದ ಏಕೈಕ ಪುತ್ರ ಕಣ್ಣುಮುಚ್ಚಿದ. ಪತಿಯ ಸಹೋದರ ಸಹ ಅವಿವಾಹಿತ. ಇದರಿಂದ ನಮ್ಮ ಕುಟುಂಬದಲ್ಲಿ ಮಕ್ಕಳಿಲ್ಲದಂತಾಗಿದೆ. ಸದ್ಯ ನಮಗೆ 60 ವರ್ಷ (ಪತ್ನಿಗೆ 62, ಪತಿಗೆ 61) ದಾಟಿದೆ. ಆದರೆ, ಮತ್ತೊಂದು ಮಗು ಪಡೆಯುವ ಹಂಬಲ ನಮ್ಮಲ್ಲಿ ಮೂಡಿದೆ ಎಂದು ಅರ್ಜಿದಾರರು ವಿವರಿಸಿದ್ದಾರೆ.

ಮಗು ಪಡೆಯಲು ಬಾಡಿಗೆ ತಾಯ್ತನ ದಾರಿ: ‘ಈ ವಯಸ್ಸಿನಲ್ಲಿ ಮಗು ಪಡೆಯಲಿರುವ ಸಾಧ್ಯತೆ ಅರಿಯಲು ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗಿದ್ದೆವು. ತಪಾಸಣೆ ನಡೆಸಿದ ವೈದ್ಯರು, ಪತ್ನಿ ಮುಟ್ಟು ನಿಲ್ಲುವ ವಯಸ್ಸು ತಲುಪಿದ್ದಾರೆ. ಹಾಗಾಗಿ, ದಾನಿ ಮೊಟ್ಟೆಗಳೊಂದಿಗೆ ಬಾಡಿಗೆ ತಾಯ್ತನ ಮೂಲಕ (ಸರೋಗಸಿ ಚಿಕಿತ್ಸೆಗೆ ಒಳಗಾಗಲು) ಮಗು ಪಡೆಯಲು ಸಲಹೆ ನೀಡಿ ಪ್ರಮಾಣ ಪತ್ರ ವಿತರಿಸಿದ್ದಾರೆ. ಸರೋಗಸಿ ಚಿಕಿತ್ಸೆ ಪಡೆಯಲು ಪ್ರತಿವಾದಿಗಳ ಅಥವಾ ನ್ಯಾಯಾಲಯದ ಅನುಮತಿ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

50 ವರ್ಷ ದಾಟಿರುವುದೇ ಅಡ್ಡಿ: ‘ವೈದ್ಯರ ಸಲಹೆಯಂತೆ 2025ರ ನ.13ರಂದು ಸರೋಗಸಿ ಚಿಕಿತ್ಸೆಗೆ ಒಳಗಾಗಲು ಅನುಮತಿ ಕೋರಿ ಸೂಕ್ತ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದೆವು. ಆದರೆ, ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ ಸೆಕ್ಷನ್‌ 4 ಅಡಿ ನಿಗದಿಪಡಿಸಿರುವ ವಯೋಮಿತಿ 50 ವರ್ಷ ಮೀರಿರುವ ಕಾರಣಕ್ಕೆ ಬಾಡಿಗೆ ತಾಯ್ತತನದಿಂದ ಮಗು ಪಡೆಯಲು ನಾವು ಅರ್ಹರಲ್ಲ ಎಂದು ತಿಳಿಸಿ ಅನುಮತಿ ನೀಡಲು ಪ್ರಾಧಿಕಾರ ನಿರಾಕರಿಸಿದೆ. ಸರೋಗಸಿ ಚಿಕಿತ್ಸೆಗೆ ಒಳಗಾಗಲು ಅನುಮತಿ ನೀಡದಿದ್ದರೆ ನಮ್ಮ ಕುಟುಂಬಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗಲಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ವಯೋಮಿತಿ ಮೀರಿದ್ದರೂ ಮಗು ಆರೈಕೆಗೆ ಮತ್ತು ಉತ್ತಮ ಭವಿಷ್ಯ ರೂಪಿಸಲು ನಾವು ದೈಹಿಕ, ವೈದ್ಯಕೀಯ ಮತ್ತು ಆರ್ಥಿಕವಾಗಿ ಸದೃಢರಾಗಿದ್ದೇವೆ. ವಾರ್ಷಿಕ 48 ಲಕ್ಷ ರು. ವರಮಾನ ಗಳಿಸುತ್ತಿದ್ದು, ಕೋಟ್ಯಂತರ ಹಣವಿದೆ. ಭವಿಷ್ಯದ ದೃಷ್ಟಿಯಿಂದ ಹುಟ್ಟುವ ಮಗುವಿನ ಹೆಸರಿನಲ್ಲಿ ನ್ಯಾಯಾಲಯ ಅಥವಾ ಸರ್ಕಾರ ಸೂಚಿಸುವ ಹಣ ಠೇವಣಿ ಇಡಲು ಸಿದ್ಧರಿದ್ದೇವೆ. ಇದರಿಂದ ಬಾಡಿಗೆ ತಾಯ್ತತನದಿಂದ ಮಗು ಪಡೆಯಲು ತಮಗೆ ಅನುಮತಿ ನೀಡಲು ಪ್ರತಿವಾದಿಗಳಿಗೆ ಸೂಚಿಸುವಂತೆ ಅರ್ಜಿದಾರರು ಹೈಕೋರ್ಟ್‌ಗೆ ಕೋರಿದ್ದಾರೆ.

ಕಾಯ್ದೆಯಡಿ ಪರಿಗಣಿಸುವ ಪ್ರಕರಣವಲ್ಲ: ಕೋರ್ಟ್

ಅರ್ಜಿ ವಿಚಾರಣೆ ವೇಳೆ ಪ್ರತಿವಾದಿಗಳ ಪರ ವಕೀಲರು, 2022ರಲ್ಲಿ ಜಾರಿಗೆ ಬಂದಿರುವ ಸರೋಗಸಿ (ನಿಯಂತ್ರಣ) ಕಾಯ್ದೆ ಸೆಕ್ಷನ್‌ 4 ಅಡಿ (ಬಾಡಿಗೆ ತಾಯ್ತನ) ಸರೋಗಸಿ ಚಿಕಿತ್ಸೆಗೆ ಒಳಗಾಗಲು ವಯೊಮಿತಿ 50 ವರ್ಷ. ಅರ್ಜಿದಾರರಿಗೆ 60 ವರ್ಷವಾಗಿದೆ. ಹಾಗಾಗಿ, ಕಾಯ್ದೆಯಲ್ಲಿ ಅವಕಾಶವಿಲ್ಲದ ಸಂದರ್ಭದಲ್ಲಿ ಅರ್ಜಿದಾರರ ಮನವಿ ಪರಿಗಣಿಸಲಾಗದು ಎಂದು ಆಕ್ಷೇಪಿಸಿದರು. ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ‘ಇದು ಕಾಯ್ದೆ, ಕಾನೂನಡಿ ಪರಿಗಣಿಸುವ ಪ್ರಕರಣವಲ್ಲ. ಮಾನವೀಯತೆಯಿಂದ ಕಾಣಬೇಕಾದ ಪ್ರಕರಣ. ಮೊದಲು ನೋಟಿಸ್‌ ಸ್ವೀಕರಿಸಿ ಅರ್ಜಿಗೆ ನಿಮ್ಮ ಆಕ್ಷೇಪಣೆ ಸಲ್ಲಿಸಿ. ನಂತರ ಕಾನೂನಿನ ಅವಕಾಶಗಳನ್ನು ನೋಡೋಣ’ ಪ್ರತಿವಾದಿ ವಕೀಲರಿಗೆ ಸೂಚಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜನರ ಬಾಯಿ ಮುಚ್ಚಿಸಲು ದ್ವೇಷ ಭಾಷಣ ಮಸೂದೆ ಜಾರಿ: ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರಲ್ಹಾದ್‌ ಜೋಶಿ ಕಿಡಿ
ನದಿ ಜೋಡಣೆ-ನೀರಾವರಿ ಚರ್ಚೆಗೆ ಡಿ.ಕೆ.ಶಿವಕುಮಾರ್‌ ದೆಹಲಿಗೆ: ಎಐಸಿಸಿ ನಾಯಕರ ಭೇಟಿ ಸಾಧ್ಯತೆ