ಇನ್ನೆರಡು ವರ್ಷದಲ್ಲಿ 175 ಕಿ.ಮೀ ಮೆಟ್ರೋ ಸೇವೆ ಜನರಿಗೆ ಲಭ್ಯ : ಡಿ.ಕೆ.ಶಿವಕುಮಾರ್

Sujatha NR   | Kannada Prabha
Published : Dec 23, 2025, 07:50 AM IST
Namma Metro

ಸಾರಾಂಶ

ಮೆಟ್ರೋ ಮೂರನೇ ಹಂತದ ಯೋಜನೆಗೆ ಜನವರಿಯಲ್ಲಿ ಟೆಂಡರ್‌ ಕರೆಯಲಿದ್ದೇವೆ. ಮುಂದಿನ ಎರಡು ವರ್ಷದಲ್ಲಿ 50 ಕಿ.ಮೀ ಡಬಲ್‌ ಡೆಕ್ಕರ್‌ (ರಸ್ತೆ ಕಂ ಮೆಟ್ರೋ) ಸೇರಿದಂತೆ ಬೆಂಗಳೂರಲ್ಲಿ ಒಟ್ಟು 175 ಕಿ.ಮೀ ಮೆಟ್ರೋ ಇರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬೆಂಗಳೂರು : ಮೆಟ್ರೋ ಮೂರನೇ ಹಂತದ ಯೋಜನೆಗೆ ಜನವರಿಯಲ್ಲಿ ಟೆಂಡರ್‌ ಕರೆಯಲಿದ್ದೇವೆ. ಮುಂದಿನ ಎರಡು ವರ್ಷದಲ್ಲಿ 50 ಕಿ.ಮೀ ಡಬಲ್‌ ಡೆಕ್ಕರ್‌ (ರಸ್ತೆ ಕಂ ಮೆಟ್ರೋ) ಸೇರಿದಂತೆ ಬೆಂಗಳೂರಲ್ಲಿ ಒಟ್ಟು 175 ಕಿ.ಮೀ ಮೆಟ್ರೋ ಇರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸೋಮವಾರ ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ನಮ್ಮ ಮೆಟ್ರೋ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪ್ರಸ್ತುತ ನೇರಳೆ, ಹಸಿರು ಹಾಗೂ ಹಳದಿ ಮಾರ್ಗ ಸೇರಿ 96 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸುತ್ತಿದೆ. ಮುಂದಿನ ವರ್ಷ (2026ರಲ್ಲಿ) ಗುಲಾಬಿ ಮಾರ್ಗ ಸೇರಿ 41 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಕಾರ್ಯಾರಂಭ ಮಾಡಲಾಗುವುದು. 2027ರ ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಮಾರ್ಗ ಸೇರಿದಂತೆ 38 ಕಿಮೀ ಉದ್ದದ ಮಾರ್ಗ ಆರಂಭ ಮಾಡಲಾಗುವುದು. ಆ ಮೂಲಕ ಬೆಂಗಳೂರಿನಲ್ಲಿ ಒಟ್ಟೂ 175 ಕಿ.ಮೀ ಉದ್ದದ ಮಾರ್ಗ ಕಾರ್ಯನಿರ್ವಹಿಸಲಿದೆ ಎಂದರು.

ಇದರ ಹೊರತಾಗಿ ಮಾಗಡಿ ರಸ್ತೆಯಲ್ಲಿ ತಾವರಕೆರೆವರೆಗೆ, ಹೊಸಕೋಟೆ, ಬಿಡದಿ, ನೆಲಮಂಗಲದವರೆಗೆ ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಒಂದು ಕಡೆ ಯೋಜನೆ ಕೈಗೆತ್ತಿಕೊಂಡಿದ್ದು, ಉಳಿದ ಕಡೆಗಳಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

3ನೇ ಹಂತಕ್ಕೆ ಟೆಂಡರ್‌:

ಮುಂದಿನ ತಿಂಗಳು ಜನವರಿಯಲ್ಲಿ ಮೆಟ್ರೋ 3ನೇ ಹಂತದ ಯೋಜನೆಯಲ್ಲಿ ಎಲಿವೇಟೆಡ್ ಕಾರಿಡಾರ್ (ಡಬಲ್ ಡೆಕ್ಕರ್) ಸೇರಿದಂತೆ ಸುಮಾರು 100 ಕಿಮೀ ಉದ್ದದ ಮೆಟ್ರೋ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ಸಂಚಾರ ದಟ್ಟಣೆ ನಿಯಂತ್ರಿಸಿ ಜನರ ಪ್ರಯಾಣಕ್ಕೆ ಅನುಕೂಲವಾಗಲು ಕಾಮಗಾರಿ ವೇಗವಾಗಿ ನಡೆಸುತ್ತಿದೆ. ಮೆಟ್ರೋ ನಿಲ್ದಾಣಗಳ ಬಳಿ ಹೆಚ್ಚಿನ ಜಮೀನು ಸ್ವಾಧೀನಪಡಿಸಿಕೊಂಡು ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ. ವಾಹನ ನಿಲುಗಡೆಗೂ ಅವಕಾಶ ಕಲ್ಪಿಸಬೇಕಿದೆ ಎಂದರು.

ಮೂರನೇ ಹಂತದ ಯೋಜನೆ ₹25,311 ಕೋಟಿ ವೆಚ್ಚದ ಕಾಮಗಾರಿಗೆ ಜನವರಿಯಲ್ಲಿ ಟೆಂಡರ್‌ ಕರೆಯಲಾಗುವುದು. ಜೈಕಾದಿಂದ ₹ 15,600 ಕೋಟಿ ಸಾಲ ಮಾಡಲಾಗುತ್ತಿದೆ. ಉಳಿದಂತೆ ಎಲಿವೇಟೆಡ್ ಕಾರಿಡಾರ್‌ಗೆ 9,700 ಕೋಟಿ ರು. ಮೊತ್ತದ ಟೆಂಡರ್ ಅನ್ನು ಜನವರಿಯಲ್ಲಿ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.

50 ಕಿಮೀ ಡಬಲ್‌ ಡೆಕ್ಕರ್‌:

ಈ ಹಿಂದೆ ನಾವು ಹಳದಿ ಮಾರ್ಗದಲ್ಲಿ 6 ಕಿ.ಮೀ ಡಬಲ್‌ ಡೆಕ್ಕರ್‌ ಮಾಡಿದ್ದೇವೆ. 3ನೇ ಹಂತದ ಮೆಟ್ರೋದಲ್ಲಿ 43 ಕಿ.ಮೀ ಡಬಲ್‌ ಡೆಕ್ಕರ್‌ ಇರಲಿದೆ. ಒಟ್ಟಾರೆ 50 ಕಿ.ಮೀ ರಸ್ತೆ ಕಂ ಮೆಟ್ರೋದ ಎಲಿವೇಟೆಡ್‌ ಕಾರಿಡಾರ್‌ ಇರಲಿದ್ದು ದೇಶದಲ್ಲೇ ಮೊದಲು ಇಷ್ಟು ಉದ್ದದ ಡಬಲ್‌ಡೆಕ್ಕರ್‌ ನಿರ್ಮಾಣ ಆಗುತ್ತಿದೆ. ಇನ್ನು, ಹೊಸಹಳ್ಳಿಯಿಂದ ಕಡಬಗೆರೆವರೆಗೆ ಕಿತ್ತಳೆ ಮೆಟ್ರೋ ಮಾರ್ಗವನ್ನು ತಾವರೆಕೆರೆವರೆಗೆ ಕೊಂಡೊಯ್ಯುವ ಯೋಚನೆಯೂ ಇದೆ. ಅಲ್ಲಿ ನಿಲ್ದಾಣಕ್ಕೆ ಜಾಗ ಹುಡುಕುತ್ತಿದ್ದೇವೆ. ಹಾಸನದಿಂದ ಬರುವ ಜನರು ಈ ಮಾರ್ಗವಾಗಿ ಬರುವುದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

ನಗರದಲ್ಲಿ ಮೆಟ್ರೋ ಮಾರ್ಗ ಹೆಚ್ಚಿಸಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸರ್ಕಾರ ಬದ್ಧವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಳದಿ ಮಾರ್ಗ ಆರಂಭಿಸಲಾಗಿದ್ದು, 24 ಕಿಮೀ ಉದ್ದದ ಮೆಟ್ರೋ ಸಂಚಾರ ಆರಂಭಿಸಿದ್ದೇವೆ. ಹಳದಿ ಮಾರ್ಗದಲ್ಲಿ ನಿತ್ಯ 1 ಲಕ್ಷ ಜನ ಸಂಚರಿಸುತ್ತಿದ್ದಾರೆ. ಇದರಿಂದ ಶೇ. 30 ದಟ್ಟಣೆ ಕಡಿಮೆಯಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ ಎಂದು ತಿಳಿಸಿದರು.

ಟನಲ್‌ ರಸ್ತೆ: ಟನಲ್ ರಸ್ತೆ ಟೆಂಡರ್ ಗೆ ಅದಾನಿ ಕಂಪನಿ ಕಡಿಮೆ ಬಿಡ್ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿ ಬಂದಿಲ್ಲ. ಯೋಜನೆಗಾಗಿ ನಾವು ಯಾರಿಗೂ ಹಣ ನೀಡುವುದಿಲ್ಲ. ಅವರೇ ಹಣ ಬಂಡವಾಳ ಹಾಕಿ ಮಾಡಬೇಕು ಎಂದರು.

ಲಿಫ್ಟ್‌ನಲ್ಲಿ ಸಿಕ್ಕಿಬಿದ್ರು!

ಪ್ರಗತಿ ಪರಿಶೀಲನೆಗೆ ಬಂದಿದ್ದ ಡಿ.ಕೆ. ಶಿವಕುಮಾರ್ ಅವರು ಬಿಎಂಆರ್‌ಸಿಎಲ್‌ ಕಚೇರಿಗೆ ಲಿಫ್ಟ್‌ನಲ್ಲಿ ಮೇಲೆ ಬರುವಾಗ ವಿದ್ಯುತ್‌ ಕಡಿತಗೊಂಡು ಕೆಲ ಕ್ಷಣ ಒಳಗೆ ಸಿಲುಕುವಂತಾಯಿತು. ವಿದ್ಯುತ್‌ ಕಡಿತಗೊಂಡಿದ್ದರಿಂದ ಬಾಗಿಲು ತೆರೆದುಕೊಳ್ಳಲಿಲ್ಲ. ಸುಮಾರು 20 ಸೆಕೆಂಡ್‌ ಡಿಸಿಎಂ ಒಳಗೆ ಸಿಲುಕಿದ್ದರು. ತಕ್ಷಣ ಸಿಬ್ಬಂದಿ ಬಂದು ಬಾಗಿಲು ತೆರೆದರು. ಹೊರಬಂದ ಉಪಮುಖ್ಯಮಂತ್ರಿಯವರು ‘ನೀವು ನೋಡಲಿ ಅಂತ ಸ್ಟ್ರಕ್‌ ಆಗಿಬಿಡ್ತು’ ಎಂದು ಮಾಧ್ಯಮದವರತ್ತ ನಗೆ ಬೀರಿ ಸಭೆಯತ್ತ ಹೆಜ್ಜೆ ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ಬಾಡಿಗೆ ತಾಯ್ತನ’ದಿಂದ ಮಗು: ವೃದ್ಧ ದಂಪತಿಯಿಂದ ಹೈಕೋರ್ಟ್‌ಗೆ ಮೊರೆ
ಜನರ ಬಾಯಿ ಮುಚ್ಚಿಸಲು ದ್ವೇಷ ಭಾಷಣ ಮಸೂದೆ ಜಾರಿ: ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರಲ್ಹಾದ್‌ ಜೋಶಿ ಕಿಡಿ