ರಾಜ್ಯ ಸರ್ಕಾರದಿಂದ ಚಿತ್ರದುರ್ಗದ ಹಲವು ಶತಮಾನಗಳ ವರ್ಷ ಇತಿಹಾಸ ಹೊಂದಿರುವ ಮುರುಘಾ ಮಠಕ್ಕೆ ನೇಮಕ ಮಾಡಲಾಗಿರುವ ಆಡಳಿತಾಧಿಕಾರಿ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಮುರುಘಾಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಸವಪ್ರಭು ಶ್ರೀಗಳು ಮನವಿ ಮಾಡಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಡಿ.20): ರಾಜ್ಯ ಸರ್ಕಾರದಿಂದ ಚಿತ್ರದುರ್ಗದ ಹಲವು ಶತಮಾನಗಳ ವರ್ಷ ಇತಿಹಾಸ ಹೊಂದಿರುವ ಮುರುಘಾ ಮಠಕ್ಕೆ ನೇಮಕ ಮಾಡಲಾಗಿರುವ ಆಡಳಿತಾಧಿಕಾರಿ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೈ ಮುಗಿದು ಮನವಿ ಮಾಡುತ್ತೇನೆ ಎಂದು ಮುರುಘಾಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಸವಪ್ರಭು ಶ್ರೀಗಳು ಮನವಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲಾಧಿಕಾರಿ ದ್ಯವ್ಯ ಪ್ರಭು ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನು ಆಧರಿಸಿ ಸರ್ಕಾರದಿಂದ ಕಳೆದ ವಾರ ಮುರುಘಾ ಮಠಕ್ಕೆ ಸಾರ್ವಜನಿಕ ಆಸ್ತಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ಬಗ್ಗೆ ಮುರುಘಾಮಠದಲ್ಲಿ ಇಂದು ವಿವಿಧ ಮಠಗಳ 'ಮಠಾಧೀಶರ ಸಮಾಗಮ' ಸಭೆ ನಡೆಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ, ಮುರುಘಾಮಠದ ಉಸ್ತುವಾರಿ ಬಸವಪ್ರಭು ಶ್ರೀಗಳು, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕೈಮುಗಿದು ಮನವಿ ಮಾಡುತ್ತೇವೆ. ಮಠಕ್ಕೆ ಆಡಳಿತಾಧಿಕಾರಿ ನೇಮಕ ಆದೇಶ ರದ್ದುಗೊಳಿಸಿ ಎಂದು ಹೇಳಿದರು.
ಮುರುಘಾ ಶ್ರೀ ವಿರುದ್ಧ ಪಿತೂರಿ: ಸೌಭಾಗ್ಯ ಬಸವರಾಜನ್ ಪೊಲೀಸರ ವಶಕ್ಕೆ
ಡಿ.26ರಂದು ಮಠಾಧೀಶರಿಂದ ಧರಣಿಗೆ ನಿರ್ಧಾರ: ಈಗ ರಾಜ್ಯ ಸರ್ಕಾರದಿಂದ ಮುರುಘಾ ಮಠಕ್ಕೆ ನೇಮಕ ಮಾಡಿರುವ ಆಡಳಿತಾಧಿಕಾರಿ ನಿಯೋಜನೆ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಡಿ.26ರಂದು ಮಠಾಧೀಶರಿಂದ ಧರಣಿಯನ್ನು ಮಾಡಲು ನಿರ್ಧರಿಸಲಾಗಿದೆ. ಚಿತ್ರದುರ್ಗ ಅಥವಾ ಬೆಳಗಾವಿಯಲ್ಲಿ ಮಠಾಧೀಶರಿಂದ ಧರಣಿ ಮಾಡಲಾಗುವುದು. ಇನ್ನು ಹೈಕೋರ್ಟ್ ನಿರ್ದೇಶನದಂತೆ ಮುರುಘಾಶ್ರೀ ಜಿಪಿಎ ನೀಡಿದ್ದಾರೆ. ಆದ್ದರಿಂದ ಸುಸೂತ್ರವಾಗಿ ಮುರುಘಾಮಠದ ಆಡಳಿತ ನಡೆಯುತ್ತಿದೆ. ಆದರೆ, ಆಡಳಿತಾಧಿಕಾರಿ ನೇಮಕದಿಂದ ಬರಸಿಡಿಲು ಬಡಿದಂತಾಗಿದೆ ಎಂದರು.
ಮಠಾಧೀಶರ ರಕ್ಷಣೆಗೆ ಕಾನೂನು ರಚಿಸಿ: ರಾಜ್ಯದಲ್ಲಿ ಮಠಾಧೀಶರ ರಕ್ಷಣೆಗಾಗಿ ಸರ್ಕಾರ ಕಾನೂನು ರೂಪಿಸಬೇಕು. ಇಲ್ಲವಾದರೆ ಮುಂದೆ ಮಠಾಧೀಶರಾಗಲು ಯಾರೂ ಒಪ್ಪದ ಸ್ಥಿತಿ ಬರಲಿದೆ. ಪಿತೂರಿ ಮಾಡುವ ಜನರಿಂದ ಕಾನೂನು ದುರ್ಬಳಕೆ ಆಗುತ್ತಿದೆ. ಸಂವಿಧಾನಾತ್ಮಕವಾಗಿ ಜಾರಿಗೊಳಿಸಲಾದ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೋ) ಕಾನೂನನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಸವಪ್ರಭು ಶ್ರೀಗಳು ತಿಳಿಸಿದರು.
ಈ ಮೊದಲು ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಆಗ್ರಹಿಸಿ ಎರಡು ಸಭೆಗಳು ಮಾಜಿ ಸಚಿವ ಎಚ್. ಏಕಾಂತಯ್ಯ ನೇತೃತ್ವದಲ್ಲಿ ನಡೆದಿದ್ದವು. ತದನಂತರ ನಿಯೋಗ ಮುರುಘಾ ಶರಣರ ವಜಾ ಹಾಗೂ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದವು. ಆನಂತರದಲ್ಲಿ ಮಠಕ್ಕೆ ಮಾಜಿ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
Chitradurga: ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ್ ನೇಮಕ
ಈ ನೇಮಕ ಹಿಂಪಡೆಯಲು ಆಗ್ರಹಿಸಿ ಇಂದು ನಡೆದ ಶರಣರ ಸಮಾಗಮ ಸಭೆಗೆ ಇಳಕಲ್ ಗುರುಮಹಾಂತ ಶ್ರೀ, ಅಥಣಿ ಶಿವಬಸವ ಶ್ರೀ, ಹುಲಸೂರು ಶಿವಾನಂದ ಶ್ರೀ, ಗೋಕಾಕ್ ಮುರುಘರಾಜೇಂದ್ರ ಶ್ರೀ, ಸತ್ತಿ ಬಸವಲಿಂಗ ಶ್ರೀ, ಶಿಗ್ಗಾಂವಿ ಸಂಗನಬಸವ ಶ್ರೀ, ಹಾವೇರಿ ಬಸವ ಶಾಂತಲಿಂಗ ಶ್ರೀ, ಕಲಬುರಗಿ ಸಿದ್ದಬಸವ ಕಬೀರ ಶ್ರೀ ಸೇರಿ ಇತರೆ ಶ್ರೀಗಳು ಸಭೆಯಲ್ಲಿ ಭಾಗವಹಿಸಿದ್ದರು. ಮುರುಘಾಮಠದ ಶಾಖಾಮಠಗಳು ಸೇರಿದಂತೆ ಇತರೆ ಮಠಗಳ ಶ್ರೀಗಳು ಸೇರಿ ಅನೇಕರು ಭಾಗಿಯಾಗಿದ್ದರು. ಮುರುಘಾಮಠದಲ್ಲಿ ಯಥಾಸ್ಥಿತಿ ಪೂಜಾ ಕೈಂಕರ್ಯ, ದಾಸೋಹ, SJM ವಿದ್ಯಾಸಂಸ್ಥೆಯ ಆಡಳಿತ ಸಾಗಿದೆ. ಸರ್ಕಾರ ಮಠಕ್ಕೆ ನೇಮಿಸಿರುವ ಆಡಳಿತಾಧಿಕಾರಿ ನೇಮಕ ಆದೇಶವನ್ನು ವಾಪಾಸ್ ಪಡೆಯಬೇಕೆಂದು ಮಠಾಧೀಶರಿಂದ ಆಗ್ರಹ ವ್ಯಕ್ತವಾಯಿತು.
ಇಂದು ನಡೆದ ಮಠಾಧೀಶರ ಸಮಾಗಮ ಕಾರ್ಯಕ್ರಮದ ನಂತರ ಮಠಾಧೀಶರೆಲ್ಲ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಮೂಲಕ ಆಡಳಿತಾಧಿಕಾರಿ ನೇಮಕ ಆದೇಶವನ್ನು ಹಿಂಪಡೆಯಲು ಸರಕಾರಕ್ಕೆ ಮನವಿ ಸಲ್ಲಿಸಿದರು.