Public Transport: ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್‌ ಕಡ್ಡಾಯ: ನಿಗಾವಹಿಸಲು ಏಜೆನ್ಸಿಗೆ ಆಹ್ವಾನ

By Sathish Kumar KH  |  First Published Dec 20, 2022, 2:37 PM IST

ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದ ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ವಾಹನ-ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸಲು ಮತ್ತು ನಿರ್ವಹಣೆ ಮಾಡಲು ಏಜೆನ್ಸಿಯೊಂದನ್ನು ಆಹ್ವಾನಿಸಿ ಟೆಂಡರ್ ಕರೆದಿದೆ.


ಬೆಂಗಳೂರು (ಡಿ.20): ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ 23 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರವೆಸಗಿದ ನಿರ್ಭಯಾ ಪ್ರಕರಣದ ಒಂದು ದಶಕದ ನಂತರ, ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದ ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ವಾಹನ-ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸಲು ಮತ್ತು ನಿರ್ವಹಣೆ ಮಾಡಲು ಏಜೆನ್ಸಿಯೊಂದನ್ನು ಆಹ್ವಾನಿಸಿ ಟೆಂಡರ್ ಕರೆಯಲಾಗಿದೆ.

ಕರ್ನಾಟಕದಲ್ಲಿ ಎಐಎಸ್-140 ಮಾನದಂಡದ ಪ್ರಕಾರ ಸುರಕ್ಷತೆ ಮತ್ತು ಜಾರಿಗಾಗಿ ವಾಹನ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್‌ ಅನುಷ್ಠಾನಕ್ಕಾಗಿ ಏಜೆನ್ಸಿಯನ್ನು ಆಯ್ಕೆ ಮಾಡಲು ಸಾರಿಗೆ ಇಲಾಖೆಯು ಟೆಂಡರ್ ಆಹ್ವಾನಿಸಿದೆ. ಟೆಂಡರ್‌ಗೆ ಅರ್ಜಿ ಸಲ್ಲಿಸಲು ಜನವರಿ 5 ಕೊನೆಯ ದಿನಾಂಕ ಆಗಿದೆ. ಸುರಕ್ಷತೆ ಮತ್ತು ಜಾರಿಗಾಗಿ ಮೇಲ್ವಿಚಾರಣಾ ಕೇಂದ್ರವನ್ನು ಒಳಗೊಂಡಿರುವ ವಾಹನ-ಟ್ರ್ಯಾಕಿಂಗ್ ವೇದಿಕೆಯನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tap to resize

Latest Videos

undefined

AIS 140-ಪ್ರಮಾಣೀಕೃತ ವಾಹನ ಸ್ಥಳ ಟ್ರ್ಯಾಕಿಂಗ್ ಸಾಧನ (VLTD) ಅಳವಡಿಸಲಾಗಿರುವ ಸಾರ್ವಜನಿಕ ಸೇವಾ ವಾಹನಗಳನ್ನು ಮೇಲ್ವಿಚಾರಣೆ ಮಾಡಲು ವೇದಿಕೆ ಸಿದ್ಧಪಡಿಸಲಾಗುತ್ತಿದೆ. ರಾಜ್ಯದ ತುರ್ತು ಪ್ರತಿಕ್ರಿಯೆ ಕೇಂದ್ರ ಮತ್ತು ಸಾರಿಗೆ ಇಲಾಖೆ/ಆರ್‌ಟಿಒಗಳಂತಹ ವಿವಿಧ ಮಧ್ಯಸ್ಥಗಾರರಿಗೆ ಇಂಟರ್‌ಫೇಸ್ ಒದಗಿಸಲು ಬಳಸಲಾಗುತ್ತದೆ. ಸಾರ್ವಜನಿಕ ಸೇವಾ ವಾಹನಗಳಾದ ಟ್ಯಾಕ್ಸಿಗಳು, ಶಾಲಾ- ಕಾಲೇಜು ಬಸ್ಸುಗಳು, ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಮತ್ತು ಪರ್ಮಿಟ್ ಹೊಂದಿರುವ ಸರಕು ವಾಹನಗಳು ಇದರ ವ್ಯಾಪ್ತಿಗೆ ಬರಲಿವೆ. 

3368 ಆ್ಯಂಬುಲೆನ್ಸ್‌ಗೆ ಜಿಪಿಎಸ್‌: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಪ್ಲೇಬ್ಯಾಕ್‌ ಸೌಲಭ್ಯವೂ ಲಭ್ಯ: ಕರ್ನಾಟಕದಲ್ಲಿ ಸಾರ್ವಜನಿಕ ಸೇವಾ ವಾಹನಗಳ ಮೇಲೆ ನಿಗಾ ಇಡಲು ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆ ಪ್ರಧಾನ ಕಚೇರಿಯಲ್ಲಿ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗುವುದು. GIS ಮಾನಿಟರಿಂಗ್ ನಕ್ಷೆಯಲ್ಲಿ ವಾಹನಗಳ ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಮಾರ್ಗ ಬದಲಾವಣೆ, ತುರ್ತು ಎಚ್ಚರಿಕೆಗಳಿಗೆ ತ್ವರಿತ ಪ್ರತಿಕ್ರಿಯೆ ಪಡೆಯಲಾಗುತ್ತದೆ. ಜೊತೆಗೆ, ಈ ಹಿಂದೆ ವಾಹನವು ಪ್ರಯಾಣಿಸಿದ ಮಾರ್ಗವನ್ನು ವೀಕ್ಷಿಸಲು ನಕ್ಷೆಯಲ್ಲಿ ಪ್ಲೇಬ್ಯಾಕ್ ಆಯ್ಕೆಯನ್ನು ಒಳಗೊಂಡಿರುತ್ತದೆ. ಇದು ನೈಜ ಸಮಯದ ಮೇಲ್ವಿಚಾರಣೆ, ಎಚ್ಚರಿಕೆಗಳಿಗೆ ತ್ವರಿತ ಪ್ರತಿಕ್ರಿಯೆ ಮತ್ತು ಜಾರಿ ಸಹಾಯವನ್ನು ಸಕ್ರಿಯಗೊಳಿಸುತ್ತದೆ. ಅತಿ ವೇಗ, ನಿರ್ಬಂಧಿತ ಪ್ರದೇಶದ ಉಲ್ಲಂಘನೆ ಮತ್ತು ಮಾರ್ಗದ ಉಲ್ಲಂಘನೆಯಂತಹ ವಿವಿಧ ಎಚ್ಚರಿಕೆಗಳನ್ನು ಈ ವ್ಯವಸ್ಥೆ ಒದಗಿಸಲಿದೆ. ಕೆಲವು ತುರ್ತು ಸಂದರ್ಭದಲ್ಲಿ ಸಾರಿಗೆ ಇಲಾಖೆಯು ತಕ್ಷಣವೇ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬಹುದು.

ಸಹಾಯಕ್ಕಾಗಿ ತುರ್ತು ಗುಂಡಿ ಅಳವಡಿಕೆ: ಒಮ್ಮೆ ನಿರ್ದಿಷ್ಟ ವಾಹನದಲ್ಲಿರುವ ಪ್ರಯಾಣಿಕರು ಅಥವಾ ಸಿಬ್ಬಂದಿ ತಕ್ಷಣದ ಸಹಾಯಕ್ಕಾಗಿ ತುರ್ತು ಗುಂಡಿಯನ್ನು ಒತ್ತಿದರೆ, ಎಚ್ಚರಿಕೆಯನ್ನು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗೆ ನೇರವಾಗಿ ಮತ್ತು ನಿಯಂತ್ರಣ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಟ್ರ್ಯಾಕಿಂಗ್ ವ್ಯವಸ್ಥೆಯು ಅತಿ ವೇಗದ ವಾಹನಗಳನ್ನು ಗುರುತಿಸುತ್ತದೆ. ಇನ್ನು ಗುತ್ತಿಗೆ ಪಡೆದ ಸಂಸ್ಥೆಯು ಮೊಬೈಲ್ ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸಿದುವುದು, ಜಿಐಎಸ್ ನಕ್ಷೆ, ಎನ್‌ಐಸಿ ಕ್ಲೌಡ್ ಸೇವೆಗಳು ಮತ್ತು ಮೇಲ್ವಿಚಾರಣಾ ಕೇಂದ್ರದಲ್ಲಿ ಅಗತ್ಯವಿರುವ ವೀಡಿಯೊ ಪರೆದೆಗಳು, ವರ್ಕ್‌ಸ್ಟೇಷನ್‌ಗಳು, ನೆಟ್‌ವರ್ಕಿಂಗ್ ಮತ್ತು ಇತರ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಘಟಕಗಳನ್ನು ಒಳಗೊಂಡಂತೆ ಐಸಿಟಿ ಮೂಲ ಸೌಕರ್ಯಗಳನ್ನು ನಿಯೋಜಿಸಬೇಕಾಗುತ್ತದೆ.

ರಾಜ್ಯದಲ್ಲೇ ಮೊದಲು: ಗ್ರಾಮೀಣ ಪ್ರದೇಶದ ಕಸ ವಿಲೇವಾರಿ ವಾಹನಕ್ಕೆ ಜಿಪಿಎಸ್‌..!

ಸರ್ಕಾರದ ಇತರೆ ಸೌಲಭ್ಯಗಳೊಂದಿಗೆ ಜೋಡಣೆ: ಸರ್ಕಾರದ VAHAN, ಪರವಾನಗಿ ಮತ್ತು ಜಾರಿ ವ್ಯವಸ್ಥೆಗಳು ಸೇರಿ ವಿವಿಧ ಸಾರಿಗೆ-ಸಂಬಂಧಿತ ಸಂಪರ್ಕ ಮಾಡಲಾಗುತ್ತದೆ. ಕರ್ನಾಟಕ ಪೊಲೀಸರ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ERSS), ಇಂಟಿಗ್ರೇಟೆಡ್ ರಸ್ತೆ ಅಪಘಾತ ಡೇಟಾಬೇಸ್ (iRAD ) ಸಹ ಯೋಜನೆಯ ಭಾಗವಾಗಿದೆ. ಆಯ್ದ ಸಂಸ್ಥೆಯು 66 ತಿಂಗಳ ಒಪ್ಪಂದದ ಅವಧಿಯಲ್ಲಿ ಹೆಲ್ಪ್‌ಡೆಸ್ಕ್ ಅನ್ನು ಸ್ಥಾಪಿಸುತ್ತದೆ. ಸಂಪರ್ಕ, SMS ಗೇಟ್‌ವೇ ಮತ್ತು ಇಮೇಲ್ ವ್ಯವಸ್ಥೆ, ನಿರ್ವಹಣೆ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ.

ತುರ್ತು ಬಟನ್‌ ಅಳವಡಿಕೆಗೆ ಕೇಂದ್ರದ ಆದೇಶ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MORTH) ಸಾರ್ವಜನಿಕ ಸೇವಾ ವಾಹನಗಳು ಮತ್ತು ರಾಷ್ಟ್ರೀಯ ಪರವಾನಿಗೆ ಅಗತ್ಯವಿರುವ/ಹೊಂದಿರುವ ವಾಹನಗಳು VLTD ಜೊತೆಗೆ ಒಂದು ಅಥವಾ ಹೆಚ್ಚಿನ ತುರ್ತು ಬಟನ್‌ಗಳನ್ನು ಹೊಂದಿರಬೇಕು ಎಂದು ಕಡ್ಡಾಯಗೊಳಿಸಿದೆ. ಈ ಅಧಿಸೂಚನೆಯ ಪ್ರಕಾರ, ವಾಹನ ಸ್ಥಳ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ರಾಜ್ಯಗಳು ಮೇಲ್ವಿಚಾರಣಾ ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಬೇಕು. ನಿರ್ಭಯಾ ಪ್ರಕರಣದ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ವಾಹನ-ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಅಳವಡಿಕೆ, ನಿಯೋಜನೆ ಮತ್ತು ನಿರ್ವಹಣೆಗಾಗಿ  ರಾಜ್ಯಗಳು/ಯುಟಿಗಳು, ಕೇಂದ್ರ ಸರ್ಕಾರದಿಂದ ಹಣವನ್ನು ಪಡೆಯುವ ಯೋಜನೆಯನ್ನ ಜಾರಿಗೊಳಿಸಲಾಗಿತ್ತು.

click me!