ರಾಜ್ಯದ ಗೃಹ ಸಚಿವರು ಗುಜರಾತ್‌ನಲ್ಲಿದ್ದ ವೇಳೆ ಸ್ಯಾಂಟ್ರೋ ರವಿ ಸಹ ಅಲ್ಲಿಯೇ ಇದ್ದ. ಗುಜರಾತ್‌ನಲ್ಲೂ ಬಿಜೆಪಿ ಸರ್ಕಾರವಿದ್ದು, ಅವರು ಏನು ಬೇಕಾದರೂ ಮಾಡುತ್ತಾರೆ. ಗುಜರಾತ್‌ನಿಂದ ಸ್ಯಾಂಟ್ರೋ ರವಿಯನ್ನು ರಾಜ್ಯಕ್ಕೆ ಕರೆತಂದ ಪೊಲೀಸರು ಅಜ್ಞಾತ ಸ್ಥಳಕ್ಕೆ ಮಾಧ್ಯಮಗಳ ಕಣ್ತಪ್ಪಿಸಿ ರಾಜಾತಿಥ್ಯ ಕೊಟ್ಟು ಕರೆದೊಯ್ದಿದ್ದಾರೆ: ಕುಮಾರಸ್ವಾಮಿ
ಬೆಂಗಳೂರು(ಜ.15): ಪುಣೆಯಿಂದ ಸ್ಯಾಂಟ್ರೋ ರವಿಯನ್ನು ಯಾವ ಕಾರಣಕ್ಕಾಗಿ ಗುಜರಾತ್‌ಗೆ ಕರೆಸಿಕೊಂಡು ಬಂಧನ ಮಾಡಲಾಗಿದೆ? ಪುಣೆಯಲ್ಲೇ ಬಂಧಿಸಬಹುದಿತ್ತಲ್ಲವೆ? ಗೃಹ ಸಚಿವರು ಅದೇ ವೇಳೆ ಗುಜರಾತ್‌ನಲ್ಲಿ ಯಾಕೆ ಇದ್ದರು?. ಸ್ಯಾಂಟ್ರೋ ರವಿ ಬಂಧನ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಈ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ಗುಜರಾತ್‌ನಿಂದ ಸ್ಯಾಂಟ್ರೋ ರವಿಯನ್ನು ರಾಜ್ಯಕ್ಕೆ ಕರೆತಂದ ಪೊಲೀಸರು ಅಜ್ಞಾತ ಸ್ಥಳಕ್ಕೆ ಮಾಧ್ಯಮಗಳ ಕಣ್ತಪ್ಪಿಸಿ ರಾಜಾತಿಥ್ಯ ಕೊಟ್ಟು ಕರೆದೊಯ್ದಿದ್ದಾರೆ. ಮಾಧ್ಯಮಗಳ ಕಣ್ತಪ್ಪಿಸಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಆತನನ್ನು ಕರೆದೊಯ್ಯಲು ವಿಐಪಿ ಗೇಟ್ ಬಳಸಿದ್ದಾರೆ. ಪಿಎಂ, ಸಿಎಂಗೆ ಮೀಸಲಾದ ವಿಐಪಿ ಗೇಟ್ ಅನ್ನು ಒಬ್ಬ ಕ್ರಿಮಿನಲ್‌ಗೆ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವರು ಗುಜರಾತ್‌ನಲ್ಲಿದ್ದ ವೇಳೆ ಸ್ಯಾಂಟ್ರೋ ರವಿ ಸಹ ಅಲ್ಲಿಯೇ ಇದ್ದ. ಗುಜರಾತ್‌ನಲ್ಲೂ ಬಿಜೆಪಿ ಸರ್ಕಾರವಿದ್ದು, ಅವರು ಏನು ಬೇಕಾದರೂ ಮಾಡುತ್ತಾರೆ. ಗುಜರಾತ್‌ನಿಂದ ಸ್ಯಾಂಟ್ರೋ ರವಿಯನ್ನು ರಾಜ್ಯಕ್ಕೆ ಕರೆತಂದ ಪೊಲೀಸರು ಅಜ್ಞಾತ ಸ್ಥಳಕ್ಕೆ ಮಾಧ್ಯಮಗಳ ಕಣ್ತಪ್ಪಿಸಿ ರಾಜಾತಿಥ್ಯ ಕೊಟ್ಟು ಕರೆದೊಯ್ದಿದ್ದಾರೆ.
ಸ್ಯಾಂಟ್ರೋ ರವಿ ಜತೆ 9 ಪೊಲೀಸರ ನಂಟು, ಇಲಾಖೆಗೆ ತೀವ್ರ ಮುಜುಗರ..!
ಗೃಹ ಸಚಿವರು ಯಾಕೆ ಗುಜರಾತ್‌ಗೆ ಹೋದರು?
ಸಾಬರಮತಿ ಆಶ್ರಮದಲ್ಲಿ ಗಾಂಧಿ ಪ್ರತಿಮೆ ಬಳಿಯ ಫೋಟೋ, ವಿಡಿಯೋ ಕ್ಲಿಪ್ಪಿಂಗ್ ಯಾಕೆ ಕಳಿಸಿದರು? ಹಲವು ಅನುಮಾನಗಳು ಇವೆ. ಈ ಸರ್ಕಾರದಲ್ಲಿ ಸ್ಯಾಂಟ್ರೋ ರವಿಯಂತಹವರು ತುಂಬಾ ಜನ ಇದ್ದಾರೆ. ಕೆಲವು ಸಚಿವರು, ರಾಜಕಾರಣಿಗಳು ಸಂಪರ್ಕದಲ್ಲಿದ್ದಾರೆ. ನಾನು ಈ ಬಗ್ಗೆ ಹೇಳದೆ ಹೋಗಿದ್ದರೆ ಇದನ್ನು ಮುಚ್ಚಿಹಾಕುತ್ತಿದ್ದರು ಎಂದರು. ಸ್ಯಾಂಟ್ರೋ ರವಿಯನ್ನು 2-3 ದಿನಗಳ ಹಿಂದೆಯೇ ಗುಜರಾತ್‌ನಲ್ಲಿ ಬಂಧಿಸಿದ್ದಾರೆ. ಏನೆಲ್ಲಾ ಸಾಕ್ಷ್ಯ ಇಟ್ಟುಕೊಂಡಿದ್ದಾನೋ, ಅದನ್ನೆಲ್ಲಾ ಕಿತ್ತುಕೊಂಡಿದ್ದಾರೆ. ಮೈಸೂರಲ್ಲಿ ಮಹಿಳೆಯೊಬ್ಬರು ದಾಖಲಿಸಿದ ಪ್ರಕರಣ ಬಿಟ್ಟು ಉಳಿದೆಲ್ಲಾ ಪ್ರಕರಣಗಳನ್ನು ಯಾವ ರೀತಿ ತನಿಖೆ ಮಾಡುತ್ತಾರೆ ಗೊತ್ತಿಲ್ಲ ಎಂದರು.
ಸರ್ಕಾರದ ಆಡಳಿತ ದಂಧೆಕೋರರು, ದಲ್ಲಾಳಿಗಳಿಂದ ನಡೆಯಬೇಕು ಎಂದರೆ ಈ ಸರ್ಕಾರ ಮುಂದುವರಿಯಬೇಕಾ? ನಾನು ಆಡಳಿತ ನಡೆಸುವಾಗ ಬಿಗಿಯಾಗಿ ಇಟ್ಟುಕೊಂಡಿದ್ದೆ. ಜನರಿಗೆ ಉತ್ತರ ಕೊಡಬೇಕಾದವರು ಸರ್ಕಾರದವರೇ. ಪುಣೆಯಿಂದ ಗುಜರಾತ್‌ಗೆ ಕರೆಸಿಕೊಂಡು ಏನು ವಾಗ್ದಾನ ನೀಡಿದ್ದಾರೋ ಗೊತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಮಠಾಧೀಶರನ್ನು ಎತ್ತಿಕಟ್ಟುತ್ತಿರುವ ರಾಜಕಾರಣಿಗಳು:
ಈಗಿನ ರಾಜಕಾರಣಿಗಳು ಮೀಸಲಾತಿ ಸಂಬಂಧ ಮಠಾಧೀಶರನ್ನು ಎತ್ತಿ ಕಟ್ಟುತ್ತಿದ್ದಾರೆ. ಅವರನ್ನು ಬಿಸಿಲಲ್ಲಿ ಕೂರಿಸಿ ಹೋರಾಟ ಮಾಡಿಸಲಾಗುತ್ತಿದೆ. ಮೀಸಲಾತಿ ಕುರಿತು ಸರ್ಕಾರಕ್ಕೆ ಅರಿವಿಲ್ಲವೇ? ರಾಜಕಾರಣಿಗಳು ಮಠಾಧೀಶರನ್ನು ಮುಂದೆ ಬಿಟ್ಟು ಹೋರಾಟ ಮಾಡಿಸುತ್ತಿದ್ದಾರೆ. ಹೋದ ಕಡೆಯೆಲ್ಲಾ ನ್ಯಾ.ಸದಾಶಿವ ಆಯೋಗ ವರದಿ ಜಾರಿ ಮಾಡಿ ಎನ್ನುತ್ತಿದ್ದಾರೆ. ನಾವು ಈ ವರದಿ ಜಾರಿಗೆ ತಂದರೆ ಭೋವಿ, ಬಂಜಾರ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎನ್ನುವ ಭಯವಿದೆ. ನಾನು ಅಧಿಕಾರಕ್ಕೆ ಬಂದರೆ ಎಲ್ಲರನ್ನು ಕರೆದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.
ಸ್ಯಾಂಟ್ರೋ ರವಿ ಬಂಧನಕ್ಕೆ ನಿಮಿಷಾಂಬ ದೇವಿ ಪವಾಡ: ಹರಕೆ ತೀರಿಸಿದ ಎಡಿಜಿಪಿ ಅಲೋಕ್ ಕುಮಾರ್
ಇದೇ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷದೊಂದಿಗೆ ಕೈಜೋಡಿಸುವ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನಾನು ಅವರ ಜತೆ ಕೈಜೋಡಿಸಿಲ್ಲ, ಜೋಡಿಸುವುದೂ ಇಲ್ಲ. ನಮ್ಮ ಮತ್ತು ಅವರ ಕೈ ದೂರ. ಇದು ಉಹಾಪೋಹದ ಸುದ್ದಿ ಎಂದು ಸ್ಪಷ್ಟಪಡಿಸಿದರು.
ಯೋಗಿ ಆಡಿಯೋ ನಿರ್ಲಕ್ಷ್ಯಯೋಗ್ಯ
ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆಡಿಯೋ ವಿಚಾರ ಸಂಬಂಧ ಮಾತನಾಡುವ ಅಗತ್ಯ ಇಲ್ಲ. ಎಲ್ಲೋ ಕುಳಿತು ಮಾತನಾಡಿರುವುದಕ್ಕೆ ಪ್ರಾಮುಖ್ಯತೆ ಕೊಡುವುದು ಬೇಡ ಅಂತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.