ಸಾರಿಗೆ ಸಚಿವ ಶ್ರೀರಾಮುಲು ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳಿ..!

By Kannadaprabha NewsFirst Published Jan 15, 2023, 7:28 AM IST
Highlights

ಬಳ್ಳಾರಿಯ ಉದ್ಯಮಿ ಕೈಲಾಸ್‌ ವ್ಯಾಸ್‌ ಪಾಲುದಾರಿಕೆ ಕಂಪನಿಗಳ ಮೇಲೆ ದಾಳಿ, ಕೋಟ್ಯಂತರ ತೆರಿಗೆ ವಂಚನೆ ಆರೋಪ, ಮಹತ್ವದ ದಾಖಲೆಗಳ ವಶ, ಬೆಂಗಳೂರು, ಬಳ್ಳಾರಿ, ಕೊಪ್ಪಳ, ಚೆನ್ನೈ ಅಧಿಕಾರಿಗಳಿಂದ ದಾಳಿ. 

ಬಳ್ಳಾರಿ(ಜ.15):  ತೆರಿಗೆ ವಂಚನೆ ಗುಮಾನಿ ಮೇಲೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಶಾಸಕ ಸುರೇಶ್‌ ಬಾಬು ಅವರ ಆಪ್ತರ ಕಚೇರಿ ಹಾಗೂ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಶ್ರೀರಾಮುಲು ಹಾಗೂ ಸುರೇಶ್‌ಬಾಬು ಅವರ ಆಪ್ತ, ಉದ್ಯಮಿ ಕೈಲಾಸ್‌ ವ್ಯಾಸ್‌ ಪಾಲುದಾರಿಕೆಯ ಕಂಪನಿಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಶನಿವಾರ ಬೆಳಗ್ಗೆ ಬಳ್ಳಾರಿಯ ವಿದ್ಯಾನಗರದ ರಾಗಾಸ್‌ ಫೋರ್ಚ್‌ ಅಪಾರ್ಟಮೆಂಟ್‌ನ 310 ಹಾಗೂ 510 ನೇ ನಂಬರಿನ ಪ್ಲಾಟ್‌ಗಳಿಗೆ ತೆರಳಿದ ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ನಡೆಸಿದರು.

ಕೈಲಾಸ್‌ವ್ಯಾಸ್‌ ಅವರು ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಶಾಸಕ ಸುರೇಶ್‌ಬಾಬು ಜೊತೆಗೂಡಿ, ‘ಹರಿ ಇಸ್ಪಾತ್‌’ ಹೆಸರಿನ ಮೆದು ಕಬ್ಬಿಣದ ಘಟಕ ಖರೀದಿಸಿದ್ದಾರೆ. ಅಲ್ಲದೆ, ಶ್ರೀರಾಮುಲು ಹಾಗೂ ಸುರೇಶ್‌ಬಾಬು ಕುಟುಂಬಕ್ಕೆ ಸೇರಿದ ಮೆದು ಕಬ್ಬಿಣದ ಘಟಕಗಳನ್ನು ಬಾಡಿಗೆ ಹಾಗೂ ಲೀಸ್‌ಗೆ ಪಡೆದು ವ್ಯವಹಾರ ನಡೆಸುತ್ತಿದ್ದಾರೆ ಎನ್ನಲಾಗಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ನೂರಾರು ಕೋಟಿ ರು.ಗಳಷ್ಟುತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

Chikkamagaluru: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ದಾಳಿ

ಅಲ್ಲದೆ, ಶ್ರೀರಾಮುಲು ಮತ್ತು ಸುರೇಶ್‌ಬಾಬು ಅವರ ಆಪ್ತರಿಗೆ ಸೇರಿದ ಬಳ್ಳಾರಿಯ ವೆಂಕಟೇಶ್ವರ, ಶ್ರೀಹರಿ, ಪಿಜಿಎಂ ಪ್ಲಾಂಟ್‌ಗೆ ಸೇರಿದ ದಾಖಲೆಗಳು ಹಾಗೂ ಕೊಪ್ಪಳದ ಸಿಮ್ಲಾಡಾಬಾ ಬಳಿಯ ವಾಷಿಂಗ್‌ ಪ್ಲಾಂಟ್‌ಗೆ ಸೇರಿದ ದಾಖಲೆಗಳನ್ನು ಸಹ ಅಧಿಕಾರಿಗಳು ಪರಿಶೀಲಿಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆಗಳ ಪರಿಶೀಲನೆ ವೇಳೆ ಅಪಾರ ಪ್ರಮಾಣದ ತೆರಿಗೆ ವಂಚನೆಯಾಗಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ದಾಳಿಯಲ್ಲಿ ಬೆಂಗಳೂರು, ಬಳ್ಳಾರಿ, ಕೊಪ್ಪಳ ಹಾಗೂ ಚೆನ್ನೈನ 17 ಮಂದಿ ಅಧಿಕಾರಿಗಳು ಭಾಗವಹಿಸಿದ್ದರು. ಕಳೆದ ಎರಡು ದಿನಗಳ ಹಿಂದೆಯೇ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಬೀಡು ಬಿಟ್ಟಿದ್ದ ಅಧಿಕಾರಿಗಳು, ತೆರಿಗೆ ವಂಚನೆಯ ಆರೋಪ ಎದುರಿಸುತ್ತಿರುವ ಕಂಪನಿಗಳ ಕಚೇರಿಗಳ ಬಳಿ ತೆರಳಿ, ಅಲ್ಲಿನ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಶನಿವಾರ ಬೆಳಗ್ಗೆ ಏಕಾಏಕಿ ದಾಳಿ ನಡೆಸಿ, ಪರಿಶೀಲನೆ ಕಾರ್ಯ ಆರಂಭಿಸಿದ್ದಾರೆ.

ಯಾರ ಜೊತೆಯೂ ನನ್ನ ಪಾಲುದಾರಿಕೆ ಇಲ್ಲ: ರಾಮುಲು

ಈ ಮಧ್ಯೆ, ಆದಾಯ ತೆರಿಗೆ ದಾಳಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ‘ನಮ್ಮದು ಯಾವುದೇ ಫ್ಯಾಕ್ಟರಿಗಳಿಲ್ಲ. ಯಾರ ಜತೆ ಪಾಲುದಾರಿಕೆಯೂ ಇಲ್ಲ. ಈ ಹಿಂದೆಯೂ ನಾನು ಯಾವುದೇ ಫ್ಯಾಕ್ಟರಿಗಳ ಜೊತೆ ಪಾಲುದಾರಿಕೆ ಹೊಂದಿರಲಿಲ್ಲ. ಈಗಲೂ ಹೊಂದಿಲ್ಲ. ಗಣಿಗಾರಿಕೆ ನಡೆಯುವ ವೇಳೆಯಲ್ಲೂ ಸಹ ನನ್ನ ಬಳಿ ಯಾವುದೇ ಕೈಗಾರಿಕೆಗಳು ಇರಲಿಲ್ಲ. ಆದರೆ, ಐಟಿ ದಾಳಿ ಬಗ್ಗೆ ನಾನು ಮಾತನಾಡುವುದಿಲ್ಲ. ಕಾನೂನು ಪ್ರಕಾರ ಪ್ರಕ್ರಿಯೆಗಳು ನಡೆಯುತ್ತವೆ’ ಎಂದರು.

click me!