Idgah Maidan ಯಾರ ಸ್ವತ್ತು? ತಾರಕ್ಕೇರಿದ ಮಾಲಿಕತ್ವ ವಿವಾದ

By Kannadaprabha NewsFirst Published Jun 11, 2022, 11:31 AM IST
Highlights
  • ತಾರಕ್ಕೇರಿದ ಈದ್ಗಾ ಮೈದಾನ ಮಾಲಿಕತ್ವ
  • ಬಿಬಿಎಂಪಿ, ವಕ್ಫ್ ಬೋರ್ಡ್‌ ಹಗ್ಗಜಗ್ಗಾಟಕ್ಕೆ ಸೆಂಟ್ರಲ್‌ ಮುಸ್ಲಿಂ ಸಂಘ ಎಂಟ್ರಿ
  • ಜಾಗ ನನಗೆ ಸೇರಿದ್ದು ಎಂದು ಮೈಸೂರು ಆಡಳಿತದ ದಾಖಲೆ ಕೊಟ್ಟ ಸಿಎಂಎ

ಬೆಂಗಳೂರು (ಜೂ.11): ಚಾಮರಾಜಪೇಟೆಯ (Chamarajpet) ಈದ್ಗಾ ಮೈದಾನ (idgah ground) ಯಾರ ಸ್ವತ್ತು ಎನ್ನುವ ಕುರಿತು ಬಿಬಿಎಂಪಿ (BBMP) ಮತ್ತು ವಕ್ಫ್ ಬೋರ್ಡ್‌ (Karnataka Waqf Council) ನಡುವಿನ ಹಗ್ಗಜಗ್ಗಾಟ ಮುಂದುವರೆದಿದೆ. ಇದೀಗ ಕರ್ನಾಟಕದ ಸೆಂಟ್ರಲ್‌ ಮುಸ್ಲಿಂ ಅಸೋಸಿಯೇಷನ್‌(ಸಿಎಂಎ) ಮೈಸೂರು ಆಡಳಿತ ಕಾಲದಲ್ಲಿದ್ದ ದಾಖಲೆಗಳನ್ನು ಬಿಬಿಎಂಪಿಗೆ ಸಲ್ಲಿಸಿದೆ.

ಮೈಸೂರು ರಾಜ್ಯ ವಕ್ಫ್ ಮಂಡಳಿಯ 1965ರ ಅಧಿಕೃತ ಗೆಜೆಟ್‌ ಅಧಿಸೂಚನೆ, ಸುಪ್ರೀಂ ಕೋರ್ಚ್‌ ಆದೇಶ ಸೇರಿದಂತೆ ಇನ್ನಿತರ ಹಳೆಯ ದಾಖಲೆಗಳ ಪ್ರತಿಗಳನ್ನು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಆಯುಕ್ತ ಶ್ರೀನಿವಾಸ್‌ ಅವರಿಗೆ ಕಳುಹಿಸಿದೆ. 1965ರ ಜೂನ್‌ 7ರಂದು ವಕ್ಫ್ ಗೆಜೆಟ್‌ ಅಧಿಸೂಚನೆಯ ಅಡಿಯಲ್ಲಿ ಈದ್ಗಾ ಪ್ರದೇಶವನ್ನು ವಕ್ಫ್ ಆಸ್ತಿಯಾಗಿ ನೋಂದಾಯಿಸಲಾಗಿದೆ ಎಂದು ಅಸೋಸಿಯೇಷನ್‌ ತಿಳಿಸಿದೆ.

Chamrajpet ಈದ್ಗಾ ಮೈದಾನ ಅಲ್ಲ, ಬಿಬಿಎಂಪಿ ಆಟದ ಮೈದಾನ!

ದಾಖಲೆಗಳ ಪ್ರಕಾರ, ಕ್ರಮಸಂಖ್ಯೆ 137ರಲ್ಲಿ ಚಾಮರಾಜಪೇಟೆಯ ಈದ್ಗಾ ಸುನ್ನಿ 2.5 ಎಕರೆ ಜಮೀನು ಇದ್ದು, ಇದರ ಮಾಲಿಕತ್ವ ಸೆಂಟ್ರಲ್‌ ಮುಸ್ಲಿಂ ಅಸೋಸಿಯೇಷನ್‌ ಆಫ್‌ ಕರ್ನಾಟಕದ ಕಾರ್ಯದರ್ಶಿಗೆ ವಹಿಸಲಾಗಿದೆ. ಈ ಹಿಂದೆ ನಡೆದ ಕಾನೂನು ಹೋರಾಟದಲ್ಲಿಯೂ ಹೈಕೋರ್ಚ್‌ ಮತ್ತು ಸುಪ್ರೀಂ ಕೋರ್ಚ್‌ ತಮಗೆ ಜಯವಾಗಿದ್ದು, ಉದ್ದೇಶ ಪೂರ್ವಕವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಅಸೋಸಿಯೇಷನ್‌ ಆರೋಪಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂಎ ಪ್ರಧಾನ ಕಾರ್ಯದರ್ಶಿ ಜಹೀರುದ್ದೀನ್‌ ಅಹ್ಮದ್‌, ಭೂಮಿ ನಮ್ಮದು, ಇದು ಅಧಿಕೃತ ದಾಖಲೆಯಾಗಿರುವುದರಿಂದ ನಾವು ಬಿಬಿಎಂಪಿ ಜಂಟಿ ಆಯುಕ್ತರಿಗೆ ಆಯುಕ್ತರಿಗೆ ದಾಖಲೆಗಳನ್ನು ನೀಡಿದ್ದೇವೆ. ಈ ಮೊದಲು ನ್ಯಾಯಾಲಯವು ರಂಜಾನ್‌ ಮತ್ತು ಬಕ್ರೀದ್‌ ಪ್ರಾರ್ಥನೆಗೆ ಮಾತ್ರ ಅನುಮತಿ ನೀಡಿತ್ತು. ಜೊತೆಗೆ ಈ ಸ್ಥಳವನ್ನು ಸಾರ್ವಜನಿಕರಿಗೆ ಆಟದ ಮೈದಾನವಾಗಿ ಬಳಸಲು ಅವಕಾಶ ನೀಡಲಾಯಿತು ಎಂದು ಅವರು ಹೇಳಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ಮುನ್ನ, ಈ ಸಲಹೆಗಳನ್ನು ತಪ್ಪದೇ ತಿಳಿದುಕೊಳ್ಳಿ

ಈದ್ಗಾ ಮೈದಾನ ದಾಖಲೆ ನಮ್ಮ ಬಳಿ ಇದೆ ಎಂದ ಪಾಲಿಕೆ: ಸೆಂಟ್ರಲ್‌ ಮುಸ್ಲಿಂ ಅಸೋಸಿಯೇಷನ್‌ ಸುಪ್ರೀಂ ಕೋರ್ಚ್‌, ಹೈಕೋರ್ಚ್‌ ಆದೇಶದ ಪ್ರತಿಗಳು ಮತ್ತು ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ದಾಖಲೆ ಸೇರಿದಂತೆ ಮೂರು ದಾಖಲೆಗಳನ್ನು ಸಲ್ಲಿಸಿದೆ. ಅದನ್ನು ಪಾಲಿಕೆಯ ಕಾನೂನು ವಿಭಾಗದ ಪರಿಶೀಲನೆಗೆ ಕಳುಹಿಸಿ ಕೊಡಲಾಗಿದೆ. ಸದ್ಯ ಈದ್ಗಾ ಮೈದಾನವು ಬಿಬಿಎಂಪಿ ಸ್ವಾಧೀನದಲ್ಲಿದ್ದು, ಅದರ ದಾಖಲೆಗಳು ಪಾಲಿಕೆಯ ಬಳಿಯಲ್ಲಿವೆ. ಎಲ್ಲ ದಾಖಲೆಗಳನ್ನು ಕಾನೂನು ವಿಭಾಗ ಪರಿಶೀಲಿಸಿದ ಬಳಿಕ ಅಂತಿಮ ವರದಿ ಸಿಗಲಿದೆ. ಒಂದು ವೇಳೆ ಅಧಿಕೃತ ದಾಖಲೆಗಳನ್ನು ಹೊಂದಿದವರು ನಿಯಮದ ಪ್ರಕಾರ ಖಾತೆ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್‌ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಈ ನಡುವೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಆಗಸ್ಟ್‌ 15ರಂದು ತ್ರಿವರ್ಣ ಧ್ವಜಾರೋಹಣ ಮಾಡಲು ವಕ್ಫ್ ಬೋಡ್‌ ತೀರ್ಮಾನಿಸಿದೆ. ಗುರುವಾರ ಈ ಕುರಿತು ವಕ್ಫ್ ಬೋರ್ಡ್‌ ಅಧ್ಯಕ್ಷ ಮೌಲಾನ ಶಫಿ ಅಸದಿ ಅವರು ಹೇಳಿಕೆ ನೀಡಿದ್ದು, ಸ್ವಾತಂತ್ರ್ಯೋತ್ಸವ ಪ್ರತಿಯೊಬ್ಬ ಭಾರತೀಯನಿಗೂ ಹಬ್ಬ. ಅಂದು ಮದರಸಾಗಳಲ್ಲಿ ಮತ್ತು ಮಸೀದಿಗಳಲ್ಲೂ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಅಂತೆಯೇ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುವ ತೀರ್ಮಾನ ಕೈಗೊಳ್ಳಲಾಗಿದ್ದು, ಸ್ಥಳೀಯ ಶಾಸಕ ಜಮೀರ್‌ ಅಹಮದ್‌ಖಾನ್‌ ಅವರೊಂದಿಗೆ ಮಾತನಾಡಿದ್ದೇವೆ ಎಂದು ತಿಳಿಸಿದ್ದಾರೆ.

ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವವನ್ನು ದೊಡ್ಡ ಉತ್ಸವದ ರೀತಿಯಲ್ಲಿ ಸರ್ವಧರ್ಮೀಯರು ಸೇರಿ ಧ್ವಜಾರೋಹಣವನ್ನು ಮಾಡಲಿದ್ದೇವೆ. ಇನ್ನು ಈದ್ಗಾ ಮೈದಾನ ಯಾರ ಸ್ವತ್ತು ಎನ್ನುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಸುಪ್ರೀಂ ಕೋರ್ಚ್‌ ಈಗಾಗಲೇ ಅದು ವಕ್ಫ್ ಬೋರ್ಡ್‌ ಜಾಗವೆಂದು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ವಕ್ಫ್ ಬೋರ್ಡ್‌ಗೆ ಸೇರಿದ ಸಾಕಷ್ಟುಜಾಗ ಕಬಳಿಕೆ ಆಗಿದೆ. ಹಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಈಗ ಅವರನ್ನು ಅಲ್ಲಿಂದ ತೆರವುಗೊಳಿಸಿ ವಶಕ್ಕೆ ಪಡೆಯುವುದಕ್ಕೆ ಆಗಲ್ಲ. ಹೀಗಾಗಿ ಮತ್ತೆ ಯಾವುದೇ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

click me!