ಬೆಂಗಳೂರು (ನ.09): ವಾಯುಭಾರ ಕುಸಿತದಿಂದಾಗಿ ಮುಂದಿನ ನಾಲ್ಕು ದಿನ ರಾಜ್ಯದ ದಕ್ಷಿಣ ಒಳನಾಡಿನ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ (Heavy rain) ಸುರಿಯಲಿದ್ದು, ಕೆಲವು ಜಿಲ್ಲೆಗಳಿಗೆ ಭಾರಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ಎರಡು ದಿನ ‘ಯೆಲ್ಲೋ ಅಲರ್ಟ್’ (Yellow alert) ನೀಡಲಾಗಿದೆ ಎಂದು ಹವಾಮಾನ ಇಲಾಖೆ (weather Department) ತಿಳಿಸಿದೆ. ಸದ್ಯ ತಮಿಳುನಾಡು (Tamilnadu) ಕರಾವಳಿಯಲ್ಲಿ ಸುಳಿಗಾಳಿ ನಿರ್ಮಾಣವಾಗಿದೆ. ಇವುಗಳ ಪ್ರಭಾವದಿಂದ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮಂಗಳವಾರ ಗುಡುಗು ಸಹಿತ ಧಾರಾಕಾರ ಮಳೆ ಬೀಳಲಿದೆ. ನ.10ರಂದು ಮಳೆ ಅಬ್ಬರ ಕಡಿಮೆಯಾಗಲಿದೆ. ನ.11 ಹಾಗೂ ನ.12ರಂದು ಕೆಲವೆಡೆ ಭಾರಿ ಮಳೆ ಬೀಳಲಿದೆ.
ಪೂರ್ವ ಅರಬ್ಬಿ ಸಮುದ್ರದ ಮಧ್ಯದಲ್ಲಿ ಸೃಷ್ಟಿಯಾಗಿರುವ ಪ್ರಬಲ ವಾಯುಭಾರ ಕುಸಿತವು ಪಶ್ಚಿಮ ದಿಕ್ಕಿನ ಮಾರ್ಗವಾಗಿ ಹಾದು ರಾಜ್ಯದ ಕರಾವಳಿ (Coastal) ಸಮೀಪಿಸಿದೆ.
undefined
ಇದು ಮುಂದಿನ 48 ಗಂಟೆಗಳಲ್ಲಿ ದುರ್ಬಲಗೊಳ್ಳುವ ಸಾಧ್ಯತೆ ಇದೆ
ಪ್ರಮುಖವಾಗಿ ಬೆಂಗಳೂರು ನಗರ (Bengaluru), ಬೆಂಗಳೂರು ಗ್ರಾಮಾಂತರ, ಕೊಡಗು, ಹಾಸನ, ಮೈಸೂರು (Mysuru), ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಜೋರು ಮಳೆ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಹಿಂಗಾರು ಕ್ಷೀಣಿಸಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಉಳಿದೆಡೆ ಒಣಹವೆ ಮುಂದುವರಿಯಲಿದೆ. ಕಾರವಾರದಲ್ಲಿ ಗರಿಷ್ಠ 33.4 ಡಿಗ್ರಿ ಬೆಂಗಳೂರಿನಲ್ಲಿ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ನಗರದಲ್ಲಿ ಇಡೀ ದಿನ ಮೋಡ ಮುಸುಕು - ತಾಪಮಾನ ಕಡಿಮೆ ಹಿನ್ನೆಲೆ ತುಂಪು ಗಾಳಿ ಏರಿದ ಚಳಿ ಪ್ರಮಾಣ
ಕಳೆದೊಂದು ವಾರದಿಂದ ಕಂಡು ಬಂದ ಮೋಡ ಮುಸುಕಿದ ಮತ್ತು ಸಾಮಾನ್ಯ ಮಳೆಯ ವಾತಾವರಣ ಸೋಮವಾರವು ಮುಂದುವರಿಯಿತು. ತಾಪಮಾನ ಕಡಿಮೆ ಇರುವ ಹಿನ್ನೆಲೆಯಲ್ಲಿ ತಂಪು ಗಾಳಿ ಬೀಸಿತು. ಸಂಜೆಯಾಗುತ್ತಿದ್ದಂತೆ ಚಳಿ ಪ್ರಮಾಣದಲ್ಲಿ ಏರಿಕೆ ಕಂಡು ಬಂತು.
ಮಧ್ಯಾಹ್ನ ನಂತರ ಯಲಹಂಕ ಚೌಡೇಶ್ವರಿ ವಾರ್ಡ್, ವಿದ್ಯಾರಣ್ಯಪುರ, ಕೆಂಪೇಗೌಡ ವಾರ್ಡ್, ಕೊಡುಗೇಹಳ್ಳಿ, ದೊಡ್ಡಬೊಮ್ಮಸಂದ್ರ, ರಾಧಾಕೃಷ್ಣ ಟೆಂಪಲ್ ವಾರ್ಡ್, ಆರ್.ಆರ್.ನಗರ ಎಚ್‌ಎಂಟಿ ವಾರ್ಡ್, ಪೀಣ್ಯ ಕೈಗಾರಿಕಾ ಪ್ರದೇಶ, ನಾಗಪುರ, ನಂದಿನಿ ಬಡಾವಣೆ, ಅಟ್ಟೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲ ಕಾಲ ಜೋರು ಮಳೆ ಸುರಿಯಿತು. ವಾಹನ ಸವಾರರು, ಸಾರ್ವಜನಿಕರು ಆಗಾಗ ಬಂದ ಮಳೆಯಿಂದ ಕಿರಿಕಿರಿ ಅನುಭವಿಸಿದರು.
ಉಳಿದಂತೆ ದಯಾನಂದನಗರ, ಕಾಟನ್‌ಪೇಟೆ, ಹೂಡಿ, ಹೊರಮಾವು, ಜಕ್ಕೂರು, ಕೆ.ಆರ್.ಪುರಂ, ಹೆಗ್ಗನಹಳ್ಳಿ, ಜ್ಞಾನಭಾರತಿ ವಾರ್ಡ್, ಹೆರೋಹಳ್ಳಿ, ದೊಡ್ಡನೆಕ್ಕುಂದಿ, ಬೆಳಂದೂರು, ಕಾಡುಗೋಡಿ, ಹಗದೂರು, ಮೆಜೆಸ್ಟಿಕ್, ಸಂಜಯನಗರ ಸೇರಿದಂತೆ ವಿವಿಧೆಡೆ ಸೋನೆ ಮಳೆ ಬಿದ್ದಿದೆ.
ನಗರದಲ್ಲಿ ಮುಂದಿನ ನಾಲ್ಕು ದಿನ ಹೀಗೆ ಚಳಿ ಹಾಗೂ ಮಳೆ ಮುಂದುವರಿಯಲಿದೆ. ಈ ವೇಳೆ ತಾಪಮಾನ ಗರಿಷ್ಠ 23ರಿಂದ 27 ಹಾಗೂ ಕನಿಷ್ಠ 19ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
11ಕ್ಕೆ ಗುಡುಗು, ಮಿಂಚು, ಮಳೆ?
ಪೂರ್ವ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ನಗರದಲ್ಲಿ ನ.12ರ ವರೆಗೆ ಸಾಧಾರಣದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಸುರಿದ ಮಳೆ ನ.12ರವರೆಗೆ ಮುಂದುವರಿಯಲಿದೆ. ನ.9ಹಾಗೂ ನ.10 ಕೆಲವು ಪ್ರದೇಶಗಳಲ್ಲಿ ತುಂತುರು ಇಲ್ಲವೇ ಹಗುರ ಮಳೆ ಆಗಲಿದೆ. ನಂತರ ತುಸು ಚುರುಕಾಗಲಿರುವ ಹಿಂಗಾರು ನ.11ರಂದು ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿಸಲಿದೆ. ಹೀಗಾಗಿ ಅಂದು ಬೆಂಗಳೂರು ನಗರ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಮರುದಿನ ಹಿಂಗಾರಿನ ಅಬ್ಬರ ಕ್ಷೀಣಿಸಲಿದ್ದು, ಕೆಲವು ಕಡೆಗಳಲ್ಲಿ ಮಾತ್ರ ತುಂತುರು ಮಳೆಯ ನಿರೀಕ್ಷೆ ಇದೆ.