
ಬೆಂಗಳೂರು (ನ.09): ಬಿಡಿಎ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ, ಸ್ವಾಧೀನಾನುಭವ ಪತ್ರ ಸೇರಿದಂತೆ ಕಟ್ಟಡ ನಿರ್ಮಾಣಕ್ಕೂ ಮೊದಲೇ ಸಾರ್ವಜನಿಕರಿಂದ ಹೆಚ್ಚುವರಿ ಶುಲ್ಕ ಪಾವತಿಸಿಕೊಂಡಿದ್ದ ಸುಮಾರು ಎರಡು ಸಾವಿರ ಕೋಟಿಗಳನ್ನು ತನ್ನ ಬಳಿಯೇ ಉಳಿಸಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರ ಇದೀಗ ಸುಗ್ರೀವಾಜ್ಞೆ ಜಾರಿಗೊಳಿಸಲು ಮುಂದಾಗಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.
ಕಟ್ಟಡ ನಿರ್ಮಾಣ, ನಕ್ಷೆ, ಸ್ವಾಧೀನಾನುಭವ ಪತ್ರ ನೀಡಲು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ಕ್ರಮವನ್ನು ನ್ಯಾಯಾಲಯದಲ್ಲಿ ಕೆಲವರು ಪ್ರಶ್ನಿಸಿದ್ದರು. ಕಟ್ಟಡ ನಿರ್ಮಿಸುವ ಮೊದಲೇ ತೆರಿಗೆ ಪಾವತಿಸಬೇಕು ಎನ್ನುವ ಬಿಬಿಎಂಪಿ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನ್ಯಾಯಲಯವು ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದೆ. ಒಂದು ವೇಳೆ ನ್ಯಾಯಾಲಯವು ಮರು ಪಾವತಿಸಬೇಕು ಎನ್ನುವ ಆದೇಶ ನೀಡಿದರೆ ಬಿಬಿಎಂಪಿ ಬೊಕ್ಕಸದಿಂದ ಎರಡು ಸಾವಿರ ಕೋಟಿ ರು. ಪಾವತಿಸಬೇಕಾಗುತ್ತದೆ.
ಕೆಎಂಸಿ ಕಾಯ್ದೆಯಲ್ಲಿ ಹೆಚ್ಚುವರಿ ಶುಲ್ಕದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಆದರೆ, ಬಿಬಿಎಂಪಿ ಬೈಲಾದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಕಾನೂನಿನಲ್ಲಿ ಅವಕಾಶ ಇಲ್ಲದಿರುವಾಗ ಬೈಲಾದಲ್ಲಿ ಆ ಅಂಶ ಸೇರಿಸಿರುವುದರಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಇದೀಗ ಕೆಲವು ಬದಲಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಹೆಚ್ಚುವರಿ ಶುಲ್ಕದ ಬಗ್ಗೆ ಕೆಎಂಸಿ ಕಾಯ್ದೆಯಲ್ಲಿಲ್ಲ. ಆದರೆ, ಬಿಬಿಎಂಪಿ ಬೈಲಾದಲ್ಲಿದೆ. ಹೀಗಾಗಿ ನಕ್ಷೆ, ಸ್ವಾಧೀನಾನುಭವ ಪತ್ರ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಮೊದಲೇ ಹೆಚ್ಚುವರಿ ಶುಲ್ಕ ಪಾವತಿಸಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯ ಮೆಟ್ಟಿಲೇರಿದ ಬಳಿಕವೇ ಗಮನಕ್ಕೆ ಬಂದಿದೆ. ಸುಮಾರು ಎರಡು ಸಾವಿರ ಕೋಟಿ ರು. ಮರುಪಾವತಿ ಮಾಡಬೇಕಾಗುತ್ತದೆ. ಇದನ್ನು ಸರ್ಕಾರದಲ್ಲಿಯೇ ಉಳಿಸಿಕೊಳ್ಳಲು ಸುಗ್ರೀವಾಜ್ಞೆ ತರಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ರಾಜೀವ್‌ಗಾಂಧಿ ನಿಗಮಕ್ಕೆ
ಜಮೀನು ಹಸ್ತಾಂತರ
ಬೆಂಗಳೂರು ನಗರ ಜಿಲ್ಲೆಯ ವಿವಿಧ ಗ್ರಾಮಗಳ ವಿವಿಧ ಸರ್ವೇ ಸಂಖ್ಯೆಯಲ್ಲಿ ಒಟ್ಟು 69.07 ಎಕರೆ ಸರ್ಕಾರಿ ಗೋಮಾಳ ಮತ್ತು ಖರಾಬು ವರ್ಗೀಕರಣಗಳ ಜಮೀನನ್ನು ಬೆಂಗಳೂರು ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಹಸ್ತಾಂತರ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಮಂಜೂರು ಮಾಡಲಾಗುವುದು. ಕೆಂಗೇರಿ ಹೋಬಳಿಯ ಆಗರ ಗ್ರಾಮದ ಸರ್ವೇ ನಂಬರ್ 28ರಲ್ಲಿ 0.21 ಗುಂಟೆ ಖರಾಬು ಜಮೀನನ್ನು ಶ್ರೀ ಸ್ವಾನಂದಾಶ್ರಮ ಬಾಲ ಗಣಪತಿ ಪ್ರತಿಷ್ಠಾನಕ್ಕೆ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಸಚಿವ ಮಾಧುಸ್ವಾಮಿ ಹೇಳಿದರು.
ಶೇ.50ರಷ್ಟುಬಡ್ಡಿ ಮನ್ನಾ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಮೊತ್ತವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿರುವ ವಿವಿಧ ಸಂಘ ಸಂಸ್ಥೆಗಳು ಸಂಪೂರ್ಣ ಬಾಕಿ ಮೊತ್ತವನ್ನು ಪಾವತಿಸಲು ಮುಂದೆ ಬಂದರೆ ನಿಯಮಾನುಸಾರ ವಿಧಿಸಲಾದ ಬಡ್ಡಿಯ ಒಟ್ಟು ಮೊತ್ತದಲ್ಲಿ ಶೇ.50ರಷ್ಟುಬಡ್ಡಿ ಮನ್ನಾ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ