ದೆಹಲಿ ತಲುಪಿದ ಅಕ್ಷರಸಂತ ಹಾಜಬ್ಬ, ಇಂದು ಪದ್ಮಶ್ರೀ ಪ್ರಶಸ್ತಿ ಪ್ರದಾನ

By Kannadaprabha News  |  First Published Nov 8, 2021, 7:08 AM IST
  • ಅಕ್ಷರ ಸಂತ ಹರೇಕಳ ಹಾಜಬ್ಬ ಭಾನುವಾರವೇ ದೆಹಲಿ ತಲುಪಿದ್ದಾರೆ
  •  ಹಾಜಬ್ಬಗೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಗಮನಾರ್ಹ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ 

 ಮಂಗಳೂರು (ನ.08):  ದೆಹಲಿಯಲ್ಲಿ (Delhi) ಸೋಮವಾರ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ (Padmshri Award) ಸ್ವೀಕರಿಸಲು ಅಕ್ಷರ ಸಂತ ಹರೇಕಳ ಹಾಜಬ್ಬ (Harekala Hajabba) ಭಾನುವಾರವೇ ದೆಹಲಿ ತಲುಪಿದ್ದಾರೆ.

ದ.ಕ. ಜಿಲ್ಲಾಡಳಿತ ಹಾಗೂ ದ.ಕ. ಸಂಸದರ ಮುತುವರ್ಜಿ ಹಾಗೂ ವಿಶೇಷ ವ್ಯವಸ್ಥೆಯಲ್ಲಿ ಹಾಜಬ್ಬ ಹಾಗೂ ಅವರ ಸಹೋದರನ ಪುತ್ರ ದೆಹಲಿಗೆ ತೆರಳಿದ್ದಾರೆ. ಮಂಗಳವಾರ ದೆಹಲಿಯ ರಾಷ್ಟ್ರಪತಿ ಭವನದ (Rashtrapathi Bhavan) ದರ್ಬಾರ್‌ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಹಾಜಬ್ಬ ಅವರು ಶಿಕ್ಷಣ ಕ್ಷೇತ್ರಕ್ಕೆ (Education) ನೀಡಿದ ಗಮನಾರ್ಹ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವರು.

Tap to resize

Latest Videos

ದ.ಕ. ಜಿಲ್ಲಾಡಳಿತದ (Dakshina Kannada) ಸುಪರ್ದಿಯಲ್ಲಿ ಹಾಜಬ್ಬರಿಗೆ ಭಾನುವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ (Mangaluru Airport) ತೆರಳಲು ಪ್ರತ್ಯೇಕ ವಾಹನ (Vehicle) ವ್ಯವಸ್ಥೆ ಮಾಡಲಾಗಿತ್ತು. ಮುಂಜಾನೆ 5 ಗಂಟೆಗೆ ವಾಹನದೊಂದಿಗೆ ಹರೇಕಳಕ್ಕೆ ಆಗಮಿಸಿದ ಕಂದಾಯ ಅಧಿಕಾರಿಗಳು, ಹಾಜಬ್ಬ ಹಾಗೂ ಅವರ ಬಂಧುವೊಬ್ಬರನ್ನು ಕರೆದುಕೊಂಡು ವಾಹನದಲ್ಲಿ ಬೆಳಗ್ಗೆ 6 ಗಂಟೆಗೆ ವಿಮಾನ ನಿಲ್ದಾಣ ತಲುಪಿದರು. ಅಲ್ಲಿಂದ ತಪಾಸಣೆ ಪೂರೈಸಿ ಬೆಳಗ್ಗೆ 8.10ಕ್ಕೆ ಸ್ಪೈಸ್‌ಜೆಟ್‌ (Spicejet) ವಿಮಾನ ಏರಿದರು. 9.25ಕ್ಕೆ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ 11.20ಕ್ಕೆ ಏರ್‌ ಏಷಿಯಾ (Air Asia) ವಿಮಾನದಲ್ಲಿ ಹೊರಟು ಮಧ್ಯಾಹ್ನ 1.05ಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪಿದರು.

ದೆಹಲಿ ವಿಮಾನ ನಿಲ್ದಾಣದಿಂದ ಅಲ್ಲಿನ ಕನ್ನಡ ಸಂಘದ ಪ್ರಮುಖರು ಪ್ರತ್ಯೇಕ ವಾಹನದಲ್ಲಿ ಹಾಜಬ್ಬ ಅವರನ್ನು ಕರೆದುಕೊಂಡು ಹೊಟೇಲ್‌ (Hotel) ಅಶೋಕಗೆ ತಲುಪಿಸಿದರು.

ದೆಹಲಿ ಕನ್ನಡ ಸಂಘ ಸನ್ಮಾನ:

ದೆಹಲಿಗೆ ಆಗಮಿಸಿದ ಹಾಜಬ್ಬ ಅವರನ್ನು ಭಾನುವಾರ ಸಂಜೆ ಆಹ್ವಾನಿಸಿ ದೆಹಲಿ ಕನ್ನಡ ಶಾಲೆಗೆ ಕರೆಸಿ ಗೌರವ ಸನ್ಮಾನ ನೀಡಲಾಯಿತು. ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಸಂತ ಶೆಟ್ಟಿಬೆಳ್ಳಾರೆ ಅವರು ಹಾಜಬ್ಬಗೆ ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯದರ್ಶಿ ಡಾ. ಶಶಿಕುಮಾರ್‌, ಪ್ರಾಂಶುಪಾಲ ಪ್ರಶಾಂತ್‌ ಕುಮಾರ್‌ ಇದ್ದರು. ದೆಹಲಿಯ ಕನ್ನಡ ಶಾಲೆಯ ಸೊಗಸು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಹಾಜಬ್ಬ ಅವರು, ಪದ್ಮಶ್ರೀ ಪ್ರಶಸ್ತಿಗೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಸಂಜೆ ಹೊಟೇಲ್‌ಗೆ ತೆರಳಿ ಹಾಜಬ್ಬ ವಿಶ್ರಾಂತಿ ಪಡೆದರು.

ಪದ್ಮಶ್ರೀ ಹಾಜಬ್ಬಗೆ ನಾಳೆ ಜಿಲ್ಲಾಡಳಿತ ಗೌರವ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಮಂಗಳವಾರ ಮಂಗಳೂರಿಗೆ (Mangaluru) ಆಗಮಿಸುವ ಹಾಜಬ್ಬ ಅವರನ್ನು ಜಿಲ್ಲಾಡಳಿತ ಬರಮಾಡಿಕೊಂಡು ವಿಶೇಷ ಗೌರವ ಸನ್ಮಾನ ನೀಡಲಿದೆ.

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಸೋಮವಾರ ರಾತ್ರಿಯೇ ಹಾಜಬ್ಬ ಅವರು ದೆಹಲಿಯಿಂದ ಹೊರಡಲಿದ್ದಾರೆ. ರಾತ್ರಿ 10.10ರ ಸ್ಪೈಸ್‌ಜೆಟ್‌ನಲ್ಲಿ ದೆಹಲಿಯಿಂದ ಹೊರಟು ತಡರಾತ್ರಿ 12.55ಕ್ಕೆ ಬೆಂಗಳೂರಿಗೆ ಆಗಮಿಸುವರು. ಬೆಂಗಳೂರಿನಿಂದ ಬೆಳಗ್ಗೆ 6.55ಕ್ಕೆ ಹೊರಟು 7.50ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪುವರು. ಅಲ್ಲಿ ಅವರನ್ನು ಜಿಲ್ಲಾಡಳಿತದಿಂದ ಬರಮಾಡಿಕೊಂಡು ಅವರನ್ನು ಜಿಲ್ಲಾಡಳಿತದ ವಾಹನದಲ್ಲೇ ಹರೇಕಳಕ್ಕೆ ತಲುಪಿಸುವ ಏರ್ಪಾಟು ಮಾಡಲಾಗಿದೆ. ಮಂಗಳವಾರ ಹಗಲು ಜಿಲ್ಲಾಡಳಿತದಿಂದ ಹಾಜಬ್ಬರನ್ನು ವಿಶೇಷವಾಗಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಆರೋಗ್ಯ ಸಿಬ್ಬಂದಿ ಅಭಿಮಾನ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಬೇಕಾದರೆ 72 ಗಂಟೆಯ ಕೋವಿಡ್‌ ನೆಗೆಟಿವ್‌ ಸರ್ಟಿಫಿಕೆಟ್‌ ಕಡ್ಡಾಯ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಆರ್‌ಟಿಸಿಪಿಆರ್‌ ಟೆಸ್ಟ್‌ಗಾಗಿ ಶನಿವಾರ ಹಾಜಬ್ಬರ ಹರೇಕಳ ಮನೆಗೆ ತೆರಳಿದ್ದರು. ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಫಲಪುಷ್ಪ ನೀಡಿ ಹಾಜಬ್ಬರನ್ನು ಗೌರವಿಸಿದರು. ಸಂಜೆ ವೇಳೆಗೆ ಹಾಜಬ್ಬರ ಆರ್‌ಟಿಪಿಸಿಆರ್‌ ಟೆಸ್ಟ್‌ ಫಲಿತಾಂಶ ಪ್ರತಿ ಒದಗಿಸಲಾಯಿತು.

ಅದೇ ಅಂಗಿ, ಪಂಚೆಯ ಅಕ್ಷರ ಸಂತ!

2004ರಲ್ಲಿ ‘ಕನ್ನಡಪ್ರಭ’ ವರ್ಷದ ವ್ಯಕ್ತಿ ಪುರಸ್ಕಾರ ನೀಡಿದ ಬಳಿಕ ಅನೇಕ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ಹಾಜಬ್ಬರನ್ನು ಹುಡುಕಿಕೊಂಡು ಬಂದಿವೆ. ಪ್ರಶಸ್ತಿಯ ಮೊತ್ತವನ್ನೆಲ್ಲ ಹಾಜಬ್ಬ ಶಾಲೆಯ ಅಭ್ಯುದಯಕ್ಕೆ ಮುಡಿಪಾಗಿಟ್ಟಿದ್ದಾರೆ. ದೇಶ, ವಿದೇಶಗಳಲ್ಲೂ ಹಾಜಬ್ಬ ಹೆಸರು ವ್ಯಾಪಿಸಿದೆ. ಇಷ್ಟೆಲ್ಲ ಪ್ರಸಿದ್ಧಿ ಪಡೆದರೂ ಹಾಜಬ್ಬ ಮಾತ್ರ ಬದಲಾಗಿಲ್ಲ.

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಭಾನುವಾರ ಹಾಜಬ್ಬ ದೆಹಲಿಗೆ ತೆರಳಿದ್ದು ಶ್ರೀಸಾಮಾನ್ಯರಲ್ಲಿ ಶ್ರೀಸಾಮಾನ್ಯನಂತೆ ಶುಭ್ರ ಅಂಗಿ ಹಾಗೂ ಧೋತಿ, ಹೆಗಲ್ಲೊಂದು ಶಾಲು, ಕೈಯೊಲ್ಲೊಂದು ಅಗತ್ಯ ವಸ್ತುಗಳ ಬ್ಯಾಗ್‌, ಕಾಲಿಗೊಂದು ಚಪ್ಪಲಿ. ಇದು ಬಿಟ್ಟರೆ ಭಜಾಭಜಂತ್ರಿ ಇಲ್ಲ. ತೀರ ಸರಳ, ನಾಚಿಕೆ ಸ್ವಭಾವದ ದಿರಿಸಿನಲ್ಲಿ ಹಾಜಬ್ಬ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿದ್ದಾರೆ.

click me!