ತುಳಸಿ ಮಾಲೆ ಧರಿಸಿದರೆ ಕೋವಿಡ್‌ಗೆ ತುತ್ತಾಗಲ್ಲ: ಸಂಸದೆ ಪ್ರಜ್ಞಾಸಿಂಗ್‌

By Govindaraj SFirst Published Dec 25, 2022, 12:36 PM IST
Highlights

ಶುದ್ಧ ತುಳಸಿ ಎಲೆಯ ಮಾಲೆಯನ್ನು ಧರಿಸಿದರೆ ಕೋವಿಡ್‌ ಸೋಂಕಿಗೆ ಒಳಗಾಗುವುದಿಲ್ಲ ಎಂದು ಸಂಸದೆ ಪ್ರಜ್ಞಾಸಿಂಗ್‌ ಠಾಕೂರ್‌ ಹೇಳಿದರು. 

ಮಂಗಳೂರು/ಶಿವಮೊಗ್ಗ (ಡಿ.25): ಶುದ್ಧ ತುಳಸಿ ಎಲೆಯ ಮಾಲೆಯನ್ನು ಧರಿಸಿದರೆ ಕೋವಿಡ್‌ ಸೋಂಕಿಗೆ ಒಳಗಾಗುವುದಿಲ್ಲ ಎಂದು ಸಂಸದೆ ಪ್ರಜ್ಞಾಸಿಂಗ್‌ ಠಾಕೂರ್‌ ಹೇಳಿದರು. ಶಿವಮೊಗ್ಗಕ್ಕೆ ತೆರಳುವ ಮಾರ್ಗಮಧ್ಯೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೋವಿಡ್‌ ಮತ್ತೆ ವಿದೇಶಗಳಲ್ಲಿ ಹರಡುತ್ತಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್‌ ಡೋಸ್‌ಗಳನ್ನು ತೆಗೆದುಕೊಂಡು ಸಾಂಪ್ರದಾಯಿಕ ಔಷಧೀಯ ವಿಧಾನಗಳನ್ನು ಅಳವಡಿಸಿಕೊಳ್ಳಿ. ತುಳಸಿಯ ಉಪಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶುದ್ಧ ತುಳಸಿ ಎಲೆಯ ಮಾಲೆಯನ್ನು ಧರಿಸಿದರೆ ಕೋವಿಡ್‌ ಸೋಂಕಿಗೆ ಒಳಗಾಗುವುದಿಲ್ಲ. 

ಇಂತಹ ಮಾಲೆಯು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಿದರು. ಈ ಮಧ್ಯೆ, ಹಿಂದು ಜಾಗರಣಾ ವೇದಿಕೆ, ಕರ್ನಾಟಕ ದಕ್ಷಿಣ ವತಿಯಿಂದ 3ನೇ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದ ಅಂಗವಾಗಿ ಶಿವಮೊಗ್ಗದ ಎನ್‌ಇಎಸ್‌ ಮೈದಾನದಲ್ಲಿ ಭಾನುವಾರ ಸಂಜೆ 4.30ಕ್ಕೆ ಪ್ರಾಂತೀಯ ಕಾರ್ಯಕರ್ತರ ಸಮ್ಮೇಳನ ನಡೆಯಲಿದೆ. ಇದರಂಗವಾಗಿ, ಮಧ್ಯಾಹ್ನ ಶಿವಮೊಗ್ಗದಲ್ಲಿ ಬೃಹತ್‌ ಶೋಭಾಯಾತ್ರೆ ನಡೆಯಲಿದ್ದು, ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌, ಭೂಪಾಲ್‌ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನ ಹಿನ್ನೆಲೆಯಲ್ಲಿ ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿದೆ.

ಬಿಎಂಟಿಸಿ ಬಸ್‌ಗಳಲ್ಲಿ ಮಾಸ್ಕ್‌ಗೆ ಮಿಶ್ರ ಪ್ರತಿಕ್ರಿಯೆ: ನಿಯಮವಿದ್ದೂ ಎಚೆತ್ತುಕೊಳ್ಳದ ಪ್ರಯಾಣಿಕರು

ಕೋವಿಡ್‌ ನಿಯಂತ್ರಣಕ್ಕೆ ಮಾರ್ಗದರ್ಶಿ ಪಾಲಿಸಿ: ಕೋವಿಡ್‌ ಸೋಂಕಿನ ಕುರಿತಾಗಿ ಕೈಗೊಂಡ ಮುಂಜಾಗ್ರತೆ ಕ್ರಮಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಆನ್‌ಲೈನ್‌ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕೋವಿಡ್‌ ನಿಯಂತ್ರಣದ ಬಗ್ಗೆ ಸರ್ಕಾರದ ಮಾರ್ಗದರ್ಶಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಈ ಕೂಡಲೇ ತೆಗೆದುಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ್‌ ನಾಯಕ ಮಾತನಾಡಿ, ಜಿಲ್ಲೆಯಲ್ಲಿ 2020 ಮತ್ತು 21ರಲ್ಲಿ ಕೋವಿಡ್‌ ಕುರಿತಾಗಿ ಕೈಗೊಂಡ ಕ್ರಮ ಹಾಗೂ ಸ್ಥಿತಿಗತಿಗಳ ಕುರಿತ ಮಾಹಿತಿ ನೀಡಿದರು. 2020ರಲ್ಲಿ 16 ಸಾವಿರ ಕೋವಿಡ್‌ ಪ್ರಕರಣಗಳಿದ್ದವು. ಅದರಲ್ಲಿ 186 ರೋಗಿಗಳು ಕೋವಿಡ್‌ನಿಂದ ಮರಣ ಹೊಂದಿದ್ದಾರೆ. 2021ರಲ್ಲಿ 42 ಸಾವಿರ ಕೋವಿಡ್‌ ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ 606 ರೋಗಿಗಳು ಮರಣ ಹೊಂದಿದ್ದಾರೆ. 2022ರಲ್ಲಿ 15 ಸಾವಿರ ಪ್ರಕರವಿದ್ದು, ಅದರಲ್ಲಿ 48 ಜನರು ಮರಣ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.

ಕೋವಿಡ್‌ ಎದುರಿಸಲು ಡಿ.27ರಂದು ತಾಲೀಮು: ಸಚಿವ ಸುಧಾಕರ್‌

ಜಿಲ್ಲೆಯಲ್ಲಿ ಇದುವರೆಗೆ 11 ಲಕ್ಷ ಮೊದಲನೇ ಡೋಸ್‌ ಲಸಿಕೆಯನ್ನು ನೀಡಲಾಗಿದ್ದು, ಶೇ.99.64 ಸಾಧನೆಯಾಗಿದೆ. ಎರಡನೇ ಡೋಸ್‌ನಲ್ಲಿ ಶೇ.100 ಸಾಧನೆ ಮಾಡಲಾಗಿದೆ. ಬೂಸ್ಟರ್‌ ಡೋಸ್‌ ಇಲ್ಲಿಯವರೆಗೆ 3 ಲಕ್ಷದಷ್ಟುಈಗಾಗಲೇ ಲಸಿಕೆ ನೀಡಲಾಗಿದೆ ಎಂದರು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೂಸ್ಟರ್‌ ಡೋಸ್‌ ಲಸಿಕೆ ನೀಡಲು ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ಗಂಟಲು ದ್ರವ ಮಾದರಿ ತೆಗೆದುಕೊಳ್ಳುತ್ತಿದ್ದು, ಈವರೆಗೂ ಯಾವುದೇ ಪ್ರಕರಣಗಳು ಹೊಸದಾಗಿ ಕಂಡು ಬಂದಿಲ್ಲ ಎಂದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಖಂಡೋ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮೊದಲಾದವರು ಇದ್ದರು.

click me!