*ನಿಮ್ಮ ವಸತಿ ಯೋಜನೆ ನಾವು ನಿಲ್ಲಿಸಿಲ್ಲ ನಿಮ್ಮ ಆರೋಪ ಸುಳ್ಳು: ಸೋಮಣ್ಣ
*ನಾನು ಸುಳ್ಳು ಹೇಳುತ್ತಿಲ್ಲ, ಹೇಳಿಕೆ ಸುಳ್ಳಾದರೆ ರಾಜೀನಾಮೆ: ಸಿದ್ದು ಗರಂ
*ವಿವಿಧ ಯೋಜನೆಯ 5 ಲಕ್ಷ ಮನೆ ನೀಡುವ ಕುರಿತು ಮುಖ್ಯಮಂತ್ರಿ ಘೋಷಣೆ
ವಿಧಾನಸಭೆ(ಡಿ. 15): ಮನೆ ಹಂಚಿಕೆ ವಿಷಯವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ವಸತಿ ಸಚಿವ ವಿ. ಸೋಮಣ್ಣ (V. Somanna) ಮಧ್ಯ ದಾಖಲೆ, ಅಂಕಿ-ಅಂಶಗಳೊಂದಿಗೆ ತೀವ್ರ ವಾಕ್ಸಮರ ನಡೆಯಿತು. ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ತಾವು ಹೇಳಿದ್ದು ಸುಳ್ಳು ಎಂಬುದು ಸಾಬೀತಾದರೆ ಪ್ರತಿಪಕ್ಷ ಸ್ಥಾನ ತ್ಯಾಗ ಮಾಡುವುದಾಗಿ ಸವಾಲೆಸದ ಪ್ರಸಂಗ ನಡೆಯಿತು.
ಮಂಗಳವಾರ ಪ್ರವಾಹದಿಂದ ಬೆಳೆಹಾನಿ, ಮನೆ ಹಾನಿ, ಪರಿಹಾರ ನೀಡಿಕೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ‘ಬಿಜೆಪಿ (BJP) ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಈವರೆಗೂ ಒಂದೇ ಒಂದು ಮನೆಯನ್ನೂ ನೀಡಿಲ್ಲ ಎಂದು ಸರ್ಕಾರ ನೀಡಿರುವ ದಾಖಲೆ ಪ್ರದರ್ಶಿಸಿದರಲ್ಲದೇ, ನಾವು ಅಧಿಕಾರದಲ್ಲಿದ್ದಾಗ 15 ಲಕ್ಷ ಮನೆ ಕೊಟ್ಟಿದ್ದೇವೆ’ ಎಂದು ವಿವರಿಸಿದರು.
undefined
ನಿಮ್ಮದು ಬರೀ ಘೋಷಣೆ : ಸೋಮಣ್ಣ
ಆಗ ಮಧ್ಯಪ್ರವೇಶಿಸಿದ ಸಚಿವ ವಿ.ಸೋಮಣ್ಣ, ‘ನೀವು ಸುಳ್ಳು ಹೇಳುತ್ತಿದ್ದೀರಿ. 15 ಲಕ್ಷ ಮನೆ ಕೊಡುತ್ತೇವೆ ಎಂದು ಘೋಷಿಸಿ ಕಾರ್ಯಾದೇಶ ಮಾಡಿ ಚುನಾವಣೆಗೆ ಹೋದಿರಿ, ನಿಮ್ಮದು ಬರೀ ಘೋಷಣೆ. ಅವುಗಳಿಗೆ ದುಡ್ಡು ಕೊಟ್ಟಿರುವುದು ನಾವು. ನಿಮ್ಮ ಘೋಷಣೆಯಿಂದಾಗಿ 22 ಸಾವಿರ ಕೋಟಿ ಸರ್ಕಾರದ ಮೇಲೆ ಹೊರೆಯಾಗಿದೆ. ಮೊದಲು ಹಳೆ ಮನೆ ಪೂರ್ಣಗೊಳಿಸುವ ಕೆಲಸ ಮಾಡುತ್ತಿರುವುದು ನಿಮಗೂ ಗೊತ್ತಿದೆ. ಆದರೂ ನಾವು ಒಂದೇ ಒಂದು ಮನೆ ಕೊಟ್ಟಿಲ್ಲ ಎಂದು ಭಜನೆ ಮಾಡುತ್ತಾ ಹೋಗುತ್ತಿದ್ದೀರಿ’ ಎಂದು ತಿರುಗೇಟು ನೀಡಿದರು. ಇದಕ್ಕೆ ಸಚಿವರಾದ ಆರ್.ಅಶೋಕ್, ಬಿ. ಶ್ರೀರಾಮುಲು ಸೇರಿದಂತೆ ಮತ್ತಿತರರು ಬೆಂಬಲಿಸಿದರು.
5 ವರ್ಷದಲ್ಲಿ 20 ಲಕ್ಷ ಮನೆ ಘೋಷಣೆ : ಅದರಂತೆ ಕೆಲಸ ಮಾಡಿದ್ದೇವೆ
ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ‘ನಾವು 5 ವರ್ಷದಲ್ಲಿ 20 ಲಕ್ಷ ಮನೆ ಕೊಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ಕೆಲಸ ಮಾಡಿದ್ದೇವೆ.ಅವುಗಳನ್ನು ನೀವು ಮುಂದುವರಿಸಬೇಕು. ನೀವು ಎಷ್ಟುಮನೆಗಳನ್ನು ಕೊಟ್ಟಿದ್ದೀರಿ ಅದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.
ನೀವು ಮಾಡಿದ ಪಾಪದ ಕೊಳೆಯನ್ನು ತೊಳೆಯುತ್ತಿದ್ದೇವೆ
ಅದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ‘ನಾವು ಕೊಟ್ಟಿಲ್ಲ ಎಂದು ಹೇಳಬೇಡಿ. ನೀವು ಮಾಡಿದ ಪಾಪದ ಕೊಳೆಯನ್ನು ತೊಳೆಯುತ್ತಿದ್ದೇವೆ. ನೀವು ಘೋಷಿಸಿರುವ ಯೋಜನೆ ಕೈಬಿಟ್ಟರೆ ಬಡವರಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಸದ್ಯ ನಾವು ಹೊಸ ಯೋಜನೆ ಘೋಷಿಸದೇ ನೀವು ಘೋಷಿಸಿದ್ದ ಯೋಜನೆಯನ್ನೇ ಮುಂದುವರಿಸಿದ್ದೇವೆ. ಮೊದಲು ಅವುಗಳನ್ನು ಪೂರ್ಣಗೊಳಿಸುತ್ತೇವೆ. ನೀವು ಸುಳ್ಳು ಹೇಳಿ ಸದನದ ಹಾದಿ ತಪ್ಪಿಸಬೇಡಿ’ ಎಂದು ತಿರುಗೇಟು ನೀಡಿದರು.
ಸ್ಥಾನವನ್ನು ತ್ಯಾಗ ಮಾಡುತ್ತೇನೆ.
ಇದರಿಂದ ರೊಚ್ಚಿಗೆದ್ದ ಸಿದ್ದರಾಮಯ್ಯ, ‘ನಾನು ಸುಳ್ಳು ಹೇಳುತ್ತಿಲ್ಲ, ವಸತಿ ಇಲಾಖೆ ನೀಡಿದ ದಾಖಲೆಗಳನ್ನು ಹಿಡಿದೇ ಮಾತನಾಡುತ್ತಿದ್ದೇನೆ. ಒಂದು ವೇಳೆ ಸುಳ್ಳು ಹೇಳಿದ್ದನ್ನು ಸಾಬೀತು ಪಡಿಸಿದರೆ, ನನ್ನ ಸ್ಥಾನವನ್ನು ತ್ಯಾಗ ಮಾಡುತ್ತೇನೆ. ಈ ಬಗ್ಗೆ ಚರ್ಚಿಸಲು ಸಿದ್ಧ’ ಎಂದು ಸವಾಲು ಹಾಕಿದರು.
ಕೊನೆಗೆ ಸೋಮಣ್ಣ, ‘ನೀವು ಘೋಷಣೆ ಮಾಡಿದ ಮನೆಗಳನ್ನು ಪೂರ್ಣಗೊಳಿಸುವುದರ ಜತೆಗೆ ವಿವಿಧ ಯೋಜನೆಯ 5 ಲಕ್ಷ ಮನೆ ನೀಡುವ ಕುರಿತು ಇತ್ತೀಚಿಗೆ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ’ ಎಂದು ತಿಳಿಸಿದರು. ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಅತಿವೃಷ್ಟಿವಿಷಯ ಕುರಿತು ಚರ್ಚಿಸುವಂತೆ ಸೂಚನೆ ನೀಡಿದ ನಂತರ ಸಿದ್ದರಾಮಯ್ಯ ಮತ್ತೆ ಚರ್ಚೆ ಮುಂದುವರೆಸಿದರು.
ಇದನ್ನೂ ಓದಿ:
2) MLC Election Result ಸೋಲಿನ ಬೆನ್ನಲ್ಲೇ ರಮೇಶ್ ಜಾರಕಿಗೊಳಿಗೆ ಮತ್ತೊಂದು ಶಾಕ್, ಕ್ರಮಕ್ಕೆ ಮುಂದಾದ ಬಿಜೆಪಿ!
3) Karnataka Flood Relief: ಕೇಂದ್ರದಿಂದ ನಯಾಪೈಸೆ ನೆರೆ ಪರಿಹಾರ ಇಲ್ಲ: ಸಿದ್ದರಾಮಯ್ಯ