ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಆರೋಪಿಸಿದ್ದಾರೆ. ಆರೋಪಿ ಎ1 ಆಗಿರುವ ತನ್ನೀರಾ ಮೈನಾ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ತನಿಖೆಯನ್ನು ದಿಕ್ಕುತಪ್ಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.12): ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡು ಹತ್ತು ದಿನಗಳೇ ಕಳೆದಿದ್ದರೂ ಆ ಸಾವಿಗೆ ಇದುವರೆಗೆ ನ್ಯಾಯ ದೊರೆತ್ತಿಲ್ಲ. ಬದಲಾಗಿ ತನಿಖೆಯನ್ನು ದಿಕ್ಕುತಪ್ಪಿಸಿ ಪ್ರಕರಣವನ್ನೇ ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಯುಡಿಆರ್ ಮಾಡಿ ಬಿಸಾಕಿ ಎಂದು ಪೊಲೀಸರಿಗೆ ಒತ್ತಡ ಬಂದಿದೆ ಎನ್ನಲಾಗುತ್ತಿದೆ. ಈ ಕುರಿತು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಎ1 ಆಗಿರುವ ಕಾಂಗ್ರೆಸ್ ನ ತನ್ನೀರಾ ಮೈನಾ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖಾಧಿಕಾರಿಯಾಗಿದ್ದ ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣ ದಾಖಲಾದ ಮಾರನೇ ದಿನವೇ ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಇವೆಲ್ಲವನ್ನೂ ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸುವುದಕ್ಕಾಗಿಯೇ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: 'ನನ್ನ ಗೌರವ ನಾನೇ ಕಾಪಾಡಿಕೊಳ್ತೇನೆ', ರಾಜಣ್ಣ ಗರಂ ಆಗಿದ್ದೇಕೆ?
ವಿನಯ್ ಸೋಮಯ್ಯ ಸತ್ತು ಹತ್ತು ದಿನವಾದರೂ ಯಾವುದೇ ತನಿಖೆ ನಡೆದಿಲ್ಲ. ಬದಲಾಗಿ ಮೃತ ವಿನಯ್ ಸೋಮಯ್ಯ ಕುಟುಂಬದವರು, ಸಂಪರ್ಕದಲ್ಲಿದ್ದರಿಗೆ ನೊಟೀಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಪಿಗಳ ವಿಚಾರಣೆಗೆ ಬದಲಾಗಿ ವಿನಯ್ ಕುಟುಂಬದವರ ವಿಚಾರಣೆಗೆ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಇದೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಪೊನ್ನಣ್ಣನವರಿಗೆ ಜನರು ಬೆಂಬಲ ಸೂಚಿಸಿ ಅವರನ್ನು ಸಮರ್ಥಿಸಿಕೊಂಡು ಪೋಸ್ಟ್ ಹಾಕುತ್ತಿದ್ದಾರೆ. ವಿನಯ್ ಸಾವಿಗೆ ಕಾಂಗ್ರೆಸ್ ಮುಖಂಡರು, ಶಾಸಕರೇ ಕಾರಣ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಕಾಂಗ್ರೆಸ್ ವಿನಯ್ ಸಾವಿಗೆ ಬಿಜೆಪಿ ಕಾರಣ ಎನ್ನುತ್ತಿದೆ. ಇವೆಲ್ಲವುಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆಗಳಾಗುತ್ತಿವೆ. ಪ್ರತಿಭಟನೆ ವೇಳೆ ಕಾಂಗ್ರೆಸ್ ಶಾಸಕರ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದನ್ನು ಟಾರ್ಗೆಟ್ ಮಾಡಿ ಪೊನ್ನಣ್ಣ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಎರಡು ಪಕ್ಷಗಳ ರಾಜಕೀಯ ಕೆಸರೆರಚಾಟದಲ್ಲಿ ವಿನಯ್ ಸಾವಿಗೆ ನ್ಯಾಯ ಸಿಗದಂತೆ ಆಗಿರುವುದು ವಿಪರ್ಯಾಸ.
ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡು ಹತ್ತು ದಿನಗಳು ಕಳೆದರೂ ಪ್ರಕರಣದ ಎ1 ಆರೋಪಿ ತನ್ನೀರಾ ಮೈನಾನನ್ನು ಪೊಲೀಸರು ಇಂದಿಗೂ ಬಂಧಿಸಿಲ್ಲ. ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಆರೋಪಿ ಮಾತ್ರ ತಮ್ಮೂರಿನ ಜಾತ್ರೆಯಲ್ಲೇ ಓಡಾಡಿಕೊಂಡಿರುವುದು ಪೊಲೀಸರ ಕಾರ್ಯವಿಧಾನದ ಬಗ್ಗೆ ಸಾಕಷ್ಟು ಅನುಮಾನ ಮೂಡಿಸಿದೆ. ಜೊತೆಗೆ ಆರೋಪಿಯನ್ನು ರಾಜಕಾರಣಿಗಳು ರಕ್ಷಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ವಿನಯ್ ಆತ್ಮಹತ್ಯೆ ಬಳಿಕ ಕಾಂಗ್ರೆಸ್ನ ತನ್ನೀರಾ ಮೈನಾ ವಿರುದ್ಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗಿದ್ದರೂ ಪೊಲೀಸರು ತನ್ನೀರಾ ಮೈನಾನನ್ನು ಇದುವರೆಗೆ ಬಂಧಿಸಿಯೂ ಇಲ್ಲ, ವಿಚಾರಣೆಗೂ ಕರೆದಿಲ್ಲ. ಸದ್ಯ ಕೊಡಗಿನಲ್ಲೇ ಓಡಾಡಿಕೊಂಡಿರುವ ತನ್ನೀರಾ ಮೈನಾ ಮಡಿಕೇರಿ ತಾಲ್ಲೂಕಿನ ಅರವತ್ತೊಕ್ಲು ಗ್ರಾಮದ ಪರಕೋಟು ದೇವರ ಹಬ್ಬದಲ್ಲಿ ಭಾಗವಹಿಸಿದ್ದಾನೆ. ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ಈ ಎಲ್ಲಾ ವಿಡಿಯೋಗಳನ್ನು ಸ್ಥಳೀಯರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ನೊಟೀಸ್ ಕೊಡುವುದಕ್ಕೂ ಆರೋಪಿ ದೊರೆತ್ತಿಲ್ಲ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಮಡಿಕೇರಿಯಲ್ಲಿ ವಿನಯ್ ಸೋಮಯ್ಯ ಆತ್ಮಹತ್ಯೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಪೊಲೀಸರ ಈ ನಡೆಗೆ ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಪೊಲೀಸರು ಯಾರದ್ದೋ ಮಾತು ಕೇಳಿ ಹೀಗೆಲ್ಲಾ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ಆಗಿವೆ. ನಿಮಗೆ ಸಂಬಳ ಕೊಡುವುದು ಸಾರ್ವಜನಿಕರ ತೆರಿಗೆ ದುಡ್ಡಿನಿಂದ. ಕಾಂಗ್ರೆಸ್ ಏನು ರಾಜ್ಯದಲ್ಲಿ ಶಾಶ್ವತ ಅಲ್ಲ, ಆತ ದೇವರ ಮುಂದೆ ಆರಾಮಾಗಿ ಕುಣಿಯುತಿದ್ದಾನೆ. ಬಿಜೆಪಿಯವರನ್ನು ಮೂದಲಿಸಿಕೊಂಡು ಓಡಾಡುತ್ತಿದ್ದಾನೆ. ಇಂತಹ ದುರಾಡಳಿತವನ್ನು ದೇವರೇ ಕೊನೆಗಾಣಿಸುತ್ತಾನೆ ಎಂದು ಪೊಲೀಸರ ವಿರುದ್ಧವೂ ಕೆ.ಜಿ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.