ಹೆಣ್ಣುತನದ ಪಾವಿತ್ರ್ಯತೆ ಮತ್ತು ಜವಾಬ್ದಾರಿಯನ್ನು ಅರಿತು ಬದುಕುವುದೇ ನಿಜವಾದ ಮಹಿಳಾ ದಿನಾಚರಣೆ ಎಂದು ಹರಿಹರಪುರ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದರು. ಚಿಕ್ಕಮಗಳೂರಿನಲ್ಲಿ ನಡೆದ ಕುರುಹಿನ ಶೆಟ್ಟಿ ಮಹಿಳಾ ಸಂಘದ ವಾರ್ಷಿಕೋತ್ಸವದಲ್ಲಿ ಈ ವಿಚಾರಗಳನ್ನು ಮಂಡಿಸಿದರು.
ಚಿಕ್ಕಮಗಳೂರು (ಜ.13): ಹೆಣ್ಣು ಎಂದರೆ ಒಂದು ಕುಲವನ್ನು ಉದ್ಧಾರ ಮಾಡುವವಳು. ಹೆಣ್ಣು ತನಕ್ಕೆ ಪಾವಿತ್ರ್ಯತೆ ಇದೆ. ಹೆಣ್ಣುತನದ ಜವಾಬ್ದಾರಿ ಅರಿತು ಬದುಕಿದ ದಿನ ನಿಜವಾದ ಮಹಿಳಾ ದಿನಾಚರಣೆ ಆಗುತ್ತದೆ ಎಂದು ಹರಿಹರಪುರ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದರು.
ಭಾನುವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕುರುಹಿನ ಶೆಟ್ಟಿ (ನೇಕಾರ) ಮಹಿಳಾ ಸಂಘದ ಎಂಟನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದಲ್ಲಿ ಪ್ರವಚನ ನೀಡಿದರು.
ಜಗತ್ತಿನಲ್ಲಿ ಬಿಡುವಿಲ್ಲದ ಚಕ್ರವೊಂದಿದೆ ಅದು ಕಾಲ ಚಕ್ರ. ಅದನ್ನು ಹೊರತು ಪಡಿಸಿದರೆ ಮನೆಗಳಲ್ಲಿರುವ ತಾಯಂದಿರು. ಆಕೆ ಒಂದು ಪುರುಷನ ಬೆಳವಣಿಗೆಗೆ ಮಹಿಳೆ ಐದು ರೀತಿ ಸಹಾಯ ಮಾಡುತ್ತಾಳೆ. ನಮಗೆ ಈ ಜಗತ್ತನ್ನು ತೋರಿಸಿದ್ದು ತಾಯಿ ಎಂದರು.ಹೆತ್ತ ತಾಯಿ ಬಳಿ ಬೆಳೆಯದೆ, ಅಜ್ಜಿಯ ತೊಡೆ ಮೇಲೆ ಮಲಗದೆ, ಹಬ್ಬಗಳಲ್ಲಿ ತಿಂಡಿ ತಿನಿಸುಗಳನ್ನು ಮಾಡಿಸಿಕೊಂಡು ತಿನ್ನುವಂತಹ ಸಹಜತೆಯೇ ಹೊರಟು ಹೋಗಿದೆ. ಈ ಹಿನ್ನೆಲೆಯಲ್ಲಿ ಎಷ್ಟೋ ಮಂದಿ ನಗರದ ಮಕ್ಕಳಿಗೆ ಸಂಸ್ಕಾರವೇ ಇಲ್ಲ ದಂತಾಗಿದೆ. ಏನೇ ಕೃತಕತೆ ಮಾಡಿದರೂ ಅಮ್ಮ ಎನ್ನುವ ಶಬ್ಧಕ್ಕೆ ಪರ್ಯಾಯವಿಲ್ಲ. ಎಷ್ಟೇ ದೊಡ್ಡ ರೌಡಿಯಾಗಿದ್ದರೂ ತಾಯಿ ತೀರಿಕೊಂಡಾಗ ಅಳುವುದನ್ನು ನಾವು ನೋಡಿದ್ದೇವೆ ಎಂದರು.
ನಮ್ಮ ಪ್ರಧಾನಿಗಳ ತಾಯಿ ತೀರಿಕೊಂಡಾಗ ಸಾಮಾನ್ಯ ಮನುಷ್ಯರಂತೆ ಶವ ಸಂಸ್ಕಾರಕ್ಕೆ ಗೌರವವನ್ನು ಕೊಟ್ಟು ತಾಯಿಯ ಎದುರು ಎಲ್ಲರೂ ಚಿಕ್ಕವರು ಎನ್ನುವುದನ್ನು ತೋರಿಸಿಕೊಟ್ಟರು. ನಾವು ಕಾರ್ಯಕ್ರಮಗಳಲ್ಲಿ ಸಕ್ರೀಯ ವಾಗಿರುತ್ತೇವೆ. ಆದರೆ ಪ್ರಗತಿ ವಿಚಾರದಲ್ಲಿ ಸಕ್ರೀಯರಾಗುವುದಿಲ್ಲ ಎಂದು ವಿಷಾಧಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಎದುರು 6 ಜನ ನಕ್ಸಲರು ಶರಣಾಗಲು ಮಧ್ಯಸ್ಥಿಕೆ ವಹಿಸಿದ್ದು ದನಗಾಹಿ ಮಹಿಳೆ !
ಮಹಿಳಾ ದಿನ ಆಚರಿಸುವಾಗ ಮೊದಲು ಮಹಿಳೆಯರು ಮಹಿಳೆಯರನ್ನು ದ್ವೇಷ ಮಾಡುವುದನ್ನು ಬಿಡಬೇಕು. ಉತ್ತರ ಕರ್ನಾಟಕದ ಭಾಗದಲ್ಲಿ ವೃದ್ಧಾಶ್ರಮಗಳು ಕಡಿಮೆ ಒಟ್ಟು ಕುಟುಂಬಗಳು ಅಲ್ಲಿ ಹೆಚ್ಚು. ಎಲ್ಲರೂ ಒಂದೇ ಮನೆಯಲ್ಲಿ ಜೋಳದ ರೊಟ್ಟಿ ತಟ್ಟಿ ಊಟ ಮಾಡುತ್ತಾರೆ. ಅಲ್ಲಿ ಭಾರೀ ದೊಡ್ಡದಾದ, ಸವಲತ್ತುಗಳಿರುವ ಮನೆಗಳಿಲ್ಲದಿದ್ದರೂ ಒಗ್ಗಟು ಉಂಟು ಅವರಲ್ಲಿ ವಿದ್ಯಾಭ್ಯಾಸ ಕಡಿಮೆ ಇದೆ. ನಮ್ಮಲ್ಲಿ ಎಂಬಿಬಿಎಸ್, ಎಂಬಿಎ ಎಲ್ಲ ಮಾಡಿದವರಿದ್ದಾರೆ. ಆದರೂ ಆ ರೀತಿ ಒಗ್ಗಟ್ಟಿಲ್ಲ. ಎಲ್ಲಿ ತಪ್ಪಾಗುತ್ತಿದೆ. ವಿದ್ಯೆಯೇ ಅಹಂಕಾರಕ್ಕೆ ದಾರಿಯಾಗುತ್ತಿದೆಯೇ ಎನ್ನುವುದನ್ನು ಆಲೋಚಿಸಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಮನೆಯೊಂದಿಗೆ ಮನಃಶಾಂತಿ, ಹಸಿವಿನೊಂದಿಗೆ ಭೋಜನ ಸಿಗುವಂತಾಗಲಿ, ಧನದೊಂದಿಗೆ ದಾನದ ಗುಣ ಬರಲಿ, ಹಾಸಿಗೆಯೊಂದಿಗೆ ನಿದ್ದೆಯೂ ಇರಬೇಕೆನ್ನುವ ರೀತಿ ಬದುಕು ಬೇಕೆನ್ನುವುದಾದರೆ ನಾವು ನಮಗೋಸ್ಕರ ಮಾತ್ರ ಎಂದು ಯೋಚಿಸದೆ ನಮ್ಮ ಬದುಕಿನ ಜೊತೆಗೆ ನೆರೆ ಹೊರೆಯವರ ಬದುಕಿನಲ್ಲೂ ನೆರವಾಗಬೇಕು ಎಂದು ಹೇಳಿದರು.
ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಸಂಘಟನೆಗೆ ಹೆಚ್ಚು ಶಕ್ತಿ ಇರುವುದರಿಂದ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡುವುದರಿಂದ ಹಕ್ಕುಗಳನ್ನು ಪಡೆಯಬಹುದು. ಪುರುಷರಷ್ಟೇ ಮಹಿಳೆಯರಿಗೂ ಎಲ್ಲ ಅವಕಾಶ ಕೊಟ್ಟಿರುವು ದರಿಂದ ಮುಂದೆ ಬರಲು ಸಾಕಷ್ಟು ಸಾಧ್ಯತೆಗಳಿವೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಎಲ್ಲಾ ಕಾಲಘಟ್ಟದಲ್ಲೂ ಮಹಿಳೆಯರು ಈ ದೇಶದ ಉನ್ನತಿಯಲ್ಲಿ ತನ್ನ ಪಾತ್ರವನ್ನು ನಿರಂತರವಾಗಿ ವಹಿಸುತ್ತಾ ಬಂದಿದ್ದಾರೆ. ಆಧುನಿಕ ಕಾಲದಲ್ಲೂ ಭಾರತಕ್ಕೆ ಹೊಸ ದಿಕ್ಕನ್ನು ಕೊಡುತ್ತಾ ಮಹಿಳೆಯರು ಪುರುಷನಿಗೆ ಸಮಾನರಾಗಿ ಬೆಳೆಯಬೇಕು ಎನ್ನುವುದನ್ನು ತೋರಿಸುತ್ತಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ನಮ್ಮ ಕೈಲಾದ ಸಹಾಯವನ್ನು ಹಿಂದುಳಿದ ಸಮಾಜಕ್ಕೆ ನೀಡಿ ಮುಂದೆ ತರುವ ಕೆಲಸ ಎಲ್ಲಾ ರಾಜಕಾರಣಿಗಳಿಂದಾಗಬೇಕು ಎಂದು ಹೇಳಿದರು.
ಶ್ರೀಮಂತರು ಸಾಮೂಹಿಕ ಮದುವೆ ಮಾಡಿಸುವ ಗುಣ ಹೊಂದಬೇಕು: ಸಚಿವ ಜಮೀರ್ ಅಹ್ಮದ್ ಖಾನ್
ಜಿಲ್ಲಾ ಕುರುಹಿನ ಶೆಟ್ಟಿ (ನೇಕಾರ) ಮಹಿಳಾ ಸಂಘದ ಅಧ್ಯಕ್ಷೆ ಸಿ.ಎಸ್.ಪುಷ್ಪಾ ರಾಜೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಅಂಬಾದಾಸ್, ಉಪಾಧ್ಯಕ್ಷ ಜಿ.ಟಿ.ಸೋಮಶೇಖರ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ನೇಯ್ಗೆ ನುಡಿ ಮಾಸ ಪತ್ರಿಕೆ ಸಂಪಾದಕ ಡಿ.ಸಿ.ಬೆಳ್ಳಿಚುಕ್ಕಿ ವೀರೇಂದ್ರ, ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ಜಿಲ್ಲಾ ಶ್ರೀ ನೀಲಕಂಠೇಶ್ವರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಎಚ್.ಇಂದುಕುಮಾರ್ ಜಯಾ ಶೇಖರ್ ಉಪಸ್ಥಿತರಿದ್ದರು.12 ಕೆಸಿಕೆಎಂ 4ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ ಕುರುಹಿನ ಶೆಟ್ಟಿ (ನೇಕಾರ) ಮಹಿಳಾ ಸಂಘದ ಎಂಟನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ನಡೆಯಿತು.