Vijayapura: ನಿವೃತ್ತ ಶಿಕ್ಷಕನಿಗೆ ಗ್ರಾಮಸ್ಥರಿಂದ ಕಂಡುಕೇಳರಿಯದ ಬೀಳ್ಕೊಡುಗೆ!

By Govindaraj SFirst Published Oct 2, 2022, 9:04 AM IST
Highlights

ಓರ್ವ ಶಿಕ್ಷಕ ನಿವೃತ್ತಿ ಹೊಂದಿದರೆ ಜಸ್ಟ್ ಶಾಲೆಯಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿ ಒಂದಿಷ್ಟು ಗಿಫ್ಟ್‌ ನೀಡಿ ಬೀಳ್ಕೋಡೊದು ಸರ್ವೇಸಾಮಾನ್ಯ. ಆದ್ರೆ‌ ವಿಜಯಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರೊಬ್ಬರಿಗೆ ಅಲ್ಲಿನ ಜನರು ಬೀಳ್ಕೊಟ್ಟ ಪರಿಯನ್ನ ಕೇಳಿದ್ರೆ ನೀವು ದಂಗಾಗುತ್ತೀರಿ. 

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಅ.02): ಓರ್ವ ಶಿಕ್ಷಕ ನಿವೃತ್ತಿ ಹೊಂದಿದರೆ ಜಸ್ಟ್ ಶಾಲೆಯಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿ ಒಂದಿಷ್ಟು ಗಿಫ್ಟ್‌ ನೀಡಿ ಬೀಳ್ಕೋಡೊದು ಸರ್ವೇಸಾಮಾನ್ಯ. ಆದ್ರೆ‌ ವಿಜಯಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರೊಬ್ಬರಿಗೆ ಅಲ್ಲಿನ ಜನರು ಬೀಳ್ಕೊಟ್ಟ ಪರಿಯನ್ನ ಕೇಳಿದ್ರೆ ನೀವು ದಂಗಾಗುತ್ತೀರಿ. ಚಿನ್ನ, ಬೆಳ್ಳಿ, ಫ್ರಿಡ್ಜ್‌, ಟಿವಿ ಸೇರಿದಂತೆ ಬೆಲೆಬಾಳುವ ತರಹೇವಾರಿ ಉಡುಗೊರೆ ನೀಡಿ ಬೀಳ್ಕೊಟ್ಟಿದ್ದಾರೆ.

ನಿವೃತ್ತ ಶಿಕ್ಷಕನಿಗೆ ಊರ ತುಂಬೆಲ್ಲ ಮೆರವಣಿಗೆ: ನಿವೃತ್ತ ಹೊಂದಿದ ಶಿಕ್ಷಕರೊಬ್ಬರನ್ನು ತೆರೆದ ವಾಹನದಲ್ಲಿ ಗ್ರಾಮದ ಚಾವಡಿಯಿಂದ ಪ್ರಮುಖ ಬೀದಿಗಳಲ್ಲಿ ಸಂಗೀತ ವಾದ್ಯಗಳನ್ನು ಬಾರಿಸುತ್ತಾ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಬಿಳ್ಕೊಟ್ಟರು. ತಿಕೋಟ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಬಿ.ಎ.ಕೆ.ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 40 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ಶುಕ್ರವಾರ ನಿವೃತ್ತ ಹೊಂದಿರುವ ದೈಹಿಕ ಶಿಕ್ಷಕ ಎನ್.ಜಿ.ಕೊಟ್ಯಾಳ ಅವರು ಈ ಅಭೂತಪೂರ್ವ ಘಳಿಗೆಗೆ ಸಾಕ್ಷಿಯಾದರು.

500 ಕೋಟಿ ನೀಡಿದ್ರೆ ವಿಜಯಪುರ ಲಂಡನ್‌ ಮಾಡುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಜಿಟಿಜಿಟಿ ಮಳೆ ಲೆಕ್ಕಿಸದೇ ಅದ್ದೂರಿ ಮೆರವಣಿಗೆ: ಗ್ರಾಮದ ಸಾವಿರಾರು ಜನರು, ಹಳೆಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಜನ ಪ್ರತಿನಿಧಿಗಳು, ಎಲ್ಲ ಸಮುದಾಯದವರು ಒಟ್ಟುಗೂಡಿ ಜಿಟಿಜಿಟಿ ಮಳೆಯನ್ನು ಲೆಕ್ಕಿಸದೇ ಮೆರವಣಿಗೆ ಮಾಡಿ ಕೊಟ್ಯಾಳ ಗುರುಗಳ ತಲೆಗೆ ರುಮಾಲು, ದೋತಿ, ನೆಹರು ಶರ್ಟ್‌ ಅಂಗಿ ಧರಿಸಿ ವೇದಿಕೆಗೆ ಬರಮಾಡಿಕೊಂಡರು.

ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದ ಶಿಕ್ಷಕ: ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಕೊಟ್ಯಾಳ ಅವರು ವ್ಯಕ್ತಿ ಸದೃಡವಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು, ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಚಟುವಟಿಕೆ ಮೂಲಕ ತರಬೇತಿ ನೀಡಿ ಜಿಲ್ಲಾ , ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳುಂವತೆ ಮಾಡಿದ ಸಂತೃಪ್ತಿ ನನಗಿದೆ. ಗ್ರಾಮಸ್ಥರೆಲ್ಲರೂ ವಿಜೃಂಭಣೆಯಿಂದ ನನ್ನನ್ನು ಬೀಳ್ಕೊಡುತ್ತಿರೋದನ್ನ ಜೀವನದಲ್ಲೆ ಮರೆಯಲು ಸಾಧ್ಯವಿಲ್ಲ. ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಹೂಟ್ಟೂರಿನ ಪುಣ್ಯ ಭೂಮಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದು ನನ್ನ ಭಾಗ್ಯ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.

ಶಿಕ್ಷಕ ಕೋಟ್ಯಾಳರನ್ನ ಹೊಗಳಿದ ಶ್ರೀಗಳು, ಗ್ರಾಮಸ್ಥರು: ವೀರಕ್ತ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಶಿಕ್ಷಕರೆಂದರೆ ಇವರಂತಿರಬೇಕು, ಇವರು ಮಾಡಿದ ನಿಸ್ವಾರ್ಥ ಸೇವೆ ನೆರೆದ ಗ್ರಾಮಸ್ಥರ ಪ್ರೀತಿಯಲ್ಲಿ ಕಾಣುತ್ತಿದೆ ಎಂದರು. ಹಳೆಯ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಎಸ್.ಬಿ.ಬಿರಾದಾರ ಕೊಟ್ಯಾಳ ಗುರುಗಳು ತಂದೆ ತಾಯಿಯಂತಹ ಹೃದಯ ಹೊಂದಿದವರು, ಎಲ್ಲ ವಿದ್ಯಾರ್ಥಿಗಳನ್ನು ಸಮನಾಗಿ ಕಂಡು ಮೌಲ್ಯಯುತ ಶಿಕ್ಷಣ ಕೊಟ್ಟಿದ್ದಾರೆ ಎಂದರು.

50 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ, ಟಿವಿ, ಫ್ರಿಡ್ಜ್‌ ಗುರು ಕಾಣಿಕೆ: ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಯವರಿಂದ 5 ತೊಲೆ ಬಂಗಾರ, 2 ಕೆಜಿ ಬೆಳ್ಳಿ ಮೂರ್ತಿಗಳು, ಡಬಲ್ ಡೋರ್ ಫ್ರಿಡ್ಜ್‌, 32 ಇಂಚಿನ ಎಲ್ಇಡಿ ಟಿವಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ 25 ಭಾವಚಿತ್ರಗಳು, ಬುದ್ದ ವಿವಾರ ಮೂರ್ತಿಗಳು, ಬೆಲೆಬಾಳುವ ಕಂಬಳಿ ಹಾಗೂ ಕನಕದಾಸ ಭಾವಚಿತ್ರ, ಬುದ್ದ, ಬಸವಣ್ಣ,‌ ಅಂಬೇಡ್ಕರ ಮಹಾನಾಯಕರ ಹಾಗೂ ಪರಿಸರ ಭಾವಚಿತ್ರಗಳು, ಕಂಚಿನ ಸರಸ್ವತಿ ಮೂರ್ತಿ ಕಾಣಿಕೆಯಾಗಿ ನೀಡಿದರು. 

ಆಲಮಟ್ಟಿ ಡ್ಯಾಂ ಎತ್ತರ: ನಾಲ್ಕು ಹಳ್ಳಿಗಳ ಸ್ಥಳಾಂತರಕ್ಕೆ 3,900 ಕೋಟಿ, ಸಿಎಂ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಬಿಜ್ಜರಗಿ, ರಾಮಲಿಂಗ ಲೋಣಿ, ಆರ್.ಎಂ.ಮಸಳಿ, ಎಂ.ಬಿ.ಕುಸನಾಳ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ.ದೆಯಗೊಂಡ, ರಾಜಕುಮಾರ ಮಸಳಿ, ಬಂದೇನವಾಜ ಬೇವನೂರ, ಆರ್.ಬಿ‌.ಬಿರಾದಾರ, ರಮೇಶ ಮಸಳಿ, ಎಸ್.ಆರ್.ಹಿರೇಮಠ, ಎಂ.ಎ.ಬಿರಾದಾರ, ರಾಜು ಡೆಂಗನವರ, ಅಮರೇಶ ಬಿರಾದಾರ, ಆರ್.ಡಿ.‌ಖ್ಯಾಡಿ , ಎಸ್. ಆರ್. ಹಿರೇಗಾಣ, ಶೇಖರ ಹುಡೆದ, ಮಲ್ಲಿಕಾರ್ಜುನ ಗುಣಕಿ, ಪ್ರಕಾಶ ಚಿನಗುಂಡಿ, ಶಿವಾನಂದ ದಾಶ್ಯಾಳ, ಸುರೇಶ ಮಸಳಿ, ಬಿ.‌ಸಿ.‌ನಾವಿ, ಸಂತೋಷ ಬಿರಾದಾರ, ಅರುಣಗೌಡ ಬಿರಾದಾರ, ಮಲ್ಲು ಹುನ್ನೂರ, ಎಸ್.‌ಎನ್.‌ತಳವಾರ , ಬೆಬಕ್ಕ ಸಂಖ, ರೇಣುಕಾ ಪೂಜೇರಿ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

click me!