ಶನಿವಾರದಿಂದಲೇ ವಿದ್ಯುತ್‌ ದರ ಮತ್ತೆ ಏರಿಕೆ: 6 ತಿಂಗಳಲ್ಲಿ 2ನೇ ಬಾರಿ ದುಬಾರಿ

By Govindaraj SFirst Published Oct 2, 2022, 8:33 AM IST
Highlights

ರಾಜ್ಯಾದ್ಯಂತ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ಶನಿವಾರದಿಂದ ಪ್ರತಿ ಯುನಿಟ್‌ ವಿದ್ಯುತ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ದರ ಹೆಚ್ಚಳವಾಗಿದ್ದು, ಮುಂದಿನ ವಿದ್ಯುತ್‌ ಬಿಲ್‌ನಲ್ಲಿ ಪರಿಷ್ಕೃತ ದರದ ಹೊರೆ ಗ್ರಾಹಕರ ಮೇಲೆ ಬೀಳಲಿದೆ.

ಬೆಂಗಳೂರು (ಅ.02): ರಾಜ್ಯಾದ್ಯಂತ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ಶನಿವಾರದಿಂದ ಪ್ರತಿ ಯುನಿಟ್‌ ವಿದ್ಯುತ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ದರ ಹೆಚ್ಚಳವಾಗಿದ್ದು, ಮುಂದಿನ ವಿದ್ಯುತ್‌ ಬಿಲ್‌ನಲ್ಲಿ ಪರಿಷ್ಕೃತ ದರದ ಹೊರೆ ಗ್ರಾಹಕರ ಮೇಲೆ ಬೀಳಲಿದೆ. ಆರು ತಿಂಗಳಲ್ಲಿ ಎರಡನೇ ಬಾರಿ ದರ ಹೆಚ್ಚಳ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 

ಏಪ್ರಿಲ್‌ ತಿಂಗಳಲ್ಲಷ್ಟೇ ಪ್ರತಿ ಯುನಿಟ್‌ಗೆ 35 ಪೈಸೆಯಂತೆ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಇಂಧನ ಹೊಂದಾಣಿಕೆ ವೆಚ್ಚದ ಹೆಸರಿನಲ್ಲಿ ಅ.1ರಿಂದ ಮತ್ತೆ ಪ್ರತಿ ಯುನಿಟ್‌ಗೆ ಬೆಸ್ಕಾಂ 43 ಪೈಸೆ, ಮೆಸ್ಕಾಂ (ಮಂಗಳೂರು) 24 ಪೈಸೆ, ಚಾಮುಂಡೇಶ್ವರಿ (ಮೈಸೂರು) 34 ಪೈಸೆ, ಹೆಸ್ಕಾಂ (ಹುಬ್ಬಳ್ಳಿ) 35 ಪೈಸೆ, ಜೆಸ್ಕಾಂ (ಕಲಬುರಗಿ) 35 ಪೈಸೆ ದರ ಹೆಚ್ಚಳ ಮಾಡಿವೆ. ಮುಂದಿನ 6 ತಿಂಗಳವರೆಗೆ ಈ ದರ ಏರಿಕೆ ಇರಲಿದೆ. ಬೆಲೆ ಹೆಚ್ಚಳಕ್ಕೆ ಸಾರ್ವಜನಿಕರು, ಹೋಟೆಲ್‌ ಮಾಲೀಕರ ಸಂಘ, ಪ್ರತಿಪಕ್ಷಗಳ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಿದ್ಯುತ್‌ ದರ ಏರಿಕೆ ಶಾಕ್‌: ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ಏರಿಕೆ

ದರ ಹೆಚ್ಚಳ ಹಿಂಪಡೆಯಿರಿ- ಸಿದ್ದು: ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಯಥೇಚ್ಛವಾಗಿ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದರೂ ಕಡಿಮೆ ದರದಲ್ಲಿ ರೈತರಿಗೆ ಮತ್ತು ಗೃಹಬಳಕೆಗೆ ವಿದ್ಯುತ್‌ ಸರಬರಾಜು ಮಾಡುತ್ತಿಲ್ಲ. ಎಲ್ಲ ಬೆಲೆಗಳೂ ಗಗನಕ್ಕೆ ಮುಟ್ಟಿರುವ ಸಂದರ್ಭದಲ್ಲಿ ವಿದ್ಯುತ್‌ ದರಗಳನ್ನೂ ಹೆಚ್ಚಿಸಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರಗಳನ್ನು ಹೆಚ್ಚಿಸದೆ ಇಂಧನ ಇಲಾಖೆಯಲ್ಲಿನ ಸೋರಿಕೆ ತಡೆದರೆ ಸಾಕು, 5-6 ಸಾವಿರ ಕೋಟಿ ರು. ಉಳಿಸಬಹುದು ಎಂದು ಹೇಳಿದ್ದೆ. ಆದರೆ, ನಮ್ಮ ಸಲಹೆ ಸ್ವೀಕರಿಸದೆ ಜನರ ಮೇಲೆ ಬರೆ ಎಳೆದಿದೆ. ಕೂಡಲೇ ದರ ಹೆಚ್ಚಳ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.

ಬದುಕಿನ ಜತೆ ಆಟ- ಹೋಟೆಲ್‌: ಇನ್ನು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌, ರಾಜ್ಯಾದ್ಯಂತ ವಿದ್ಯುತ್‌ ದರ ಹೆಚ್ಚಳದಿಂದ ಜನಸಾಮಾನ್ಯರ ಜತೆಗೆ ಹೋಟೆಲ್‌ ಮಾಲೀಕರು ಸಮಸ್ಯೆ ಎದುರಿಸುವಂತಾಗಲಿದೆ. ಬೆಂಗಳೂರು ವ್ಯಾಪ್ತಿಯಲ್ಲಂತೂ ಪ್ರತಿ ಯುನಿಟ್‌ಗೆ 43 ಪೈಸೆ ಹೆಚ್ಚಿಸಲಾಗಿದೆ. ಈಗಾಗಲೇ ವಿದ್ಯುತ್‌ ಮೇಲಿನ ತೆರಿಗೆ ಶೇ.9 ರಷ್ಟುಇದೆ. ಇದನ್ನು ಶೇ. 4ರಷ್ಟಕ್ಕೆ ಇಳಿಸಲು ಒತ್ತಾಯಿಸಿದ್ದೆವು. ನಮ್ಮ ಒತ್ತಾಯಕ್ಕೆ ಕಿವಿಗೊಡದ ಸರ್ಕಾರ ಏಪ್ರಿಲ್‌ನಲ್ಲಿ 35 ಪೈಸೆ ಹೆಚ್ಚಳ ಮಾಡಿದ್ದಲ್ಲದೆ ಈಗ ಮತ್ತೆ 45 ಪೈಸೆ ಹೆಚ್ಚಳ ಮಾಡುವ ಮೂಲಕ ನಮ್ಮ ಬದುಕುಗಳ ಜತೆ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಾಪ ಮುಗಿಯುತ್ತಿದ್ದಂತೆ ವಿದ್ಯುತ್‌ ದರ ಏರಿಕೆ: ಎಚ್‌ಡಿಕೆ ಕಿಡಿ

ವಿದ್ಯುತ್‌ ದರ ಹೆಚ್ಚಳಕ್ಕೆ ಸಿಎಂಗೆ ಪ್ರಸ್ತಾವನೆ: ಗ್ರಾಹಕರಿಗೆ ಹೊರೆಯಾಗದ ಹಾಗೆ ವಿದ್ಯುತ್‌ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಮುಂದೆ ಪ್ರಸ್ತಾವನೆ ಇಡಲಾಗಿದೆ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ 7 ವರ್ಷಗಳಲ್ಲಿ ದರದಲ್ಲಿ ಹೆಚ್ಚು ಕಡಿಮೆ ಎರಡೂ ಆಗಿದೆ. ಹೀಗಾಗಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2014ರಲ್ಲಿ ವಿದ್ಯುತ್‌ ದರ ಹೆಚ್ಚಳ ಬಗ್ಗೆ ಅಂದಿನ ಸರ್ಕಾರ ನಿರ್ಣಯ ತೆಗೆದುಕೊಂಡಿತ್ತು. ಎಲ್ಲಾ ಕಂಪನಿಗಳು ಕೆಆರ್‌ಸಿ ಮುಂದೆ ಅಪೀಲ್‌ ಹೋಗಿ ಅದರಂತೆ ದರ ಹೆಚ್ಚಳ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಚೇರಿಗಳಿಂದ ಪಾವತಿ ಆಗಬೇಕಾದ ವಿದ್ಯುತ್‌ ಬಿಲ್‌ಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಆರ್‌ಡಿಪಿಆರ್‌ ಇಲಾಖೆಯಿಂದ ಬಾಕಿ ಇರುವ ಬಿಲ್‌ನ್ನು ರಾಜ್ಯ ಸರ್ಕಾರದಿಂದ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

click me!