ನಿವೃತ್ತರು ಮತ್ತೆ ಸೇವೆಗೆ: ರಾಜ್ಯ ಸರ್ಕಾರ ಚಿಂತನೆ

Published : Oct 02, 2022, 04:50 AM IST
ನಿವೃತ್ತರು ಮತ್ತೆ ಸೇವೆಗೆ: ರಾಜ್ಯ ಸರ್ಕಾರ ಚಿಂತನೆ

ಸಾರಾಂಶ

ಸೇವೆಯಿಂದ ನಿವೃತ್ತರಾದ ಹಿರಿಯ ನಾಗರಿಕರ ಅನುಭವವನ್ನು ಬಳಸಿಕೊಳ್ಳುವ ಉದ್ದೇಶದಿಂದ ಸರ್ಕಾರಿ ಇಲಾಖೆಗಳಲ್ಲಿ ಪುನಃ ಅವರನ್ನು ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರು (ಅ.02): ಸೇವೆಯಿಂದ ನಿವೃತ್ತರಾದ ಹಿರಿಯ ನಾಗರಿಕರ ಅನುಭವವನ್ನು ಬಳಸಿಕೊಳ್ಳುವ ಉದ್ದೇಶದಿಂದ ಸರ್ಕಾರಿ ಇಲಾಖೆಗಳಲ್ಲಿ ಪುನಃ ಅವರನ್ನು ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಏರ್ಪಡಿಸಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು. ‘ಹಳೆ ಬೇರು ಹೊಸ ಚಿಗುರು ಇರಲು ಮರ ಸೊಬಗು’ ಎಂಬ ಕವಿ ವಾಣಿಯಂತೆ ಸರ್ಕಾರಿ ಇಲಾಖೆಯಲ್ಲಿ ಹಿರಿಯರ ಅನುಭವ ಬಳಸಿಕೊಂಡು ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಹಿರಿಯ ನಾಗರಿಕರನ್ನು ನೇಮಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆಯು ಯೋಜನೆ ರೂಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಚರ್ಮಗಂಟಿಗೆ ಬಲಿಯಾದ ಜಾನುವಾರಿಗೆ ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ

ಹಿರಿಯ ನಾಗರಿಕರನ್ನು ನೇಮಕ ಮಾಡಿಕೊಳ್ಳುವುದರಿಂದ ಯುವಕರಿಗೆ ಏನೂ ತೊಂದರೆ ಆಗುವುದಿಲ್ಲ. ಯುವಕರಿಗೆ ಅವಕಾಶ ಕೊಡಬೇಕೆಂದು ಹಿರಿಯ ನಾಗರಿಕರಿಗೆ 60 ವರ್ಷ ತಲುಪಿದ ನಂತರ ನಿವೃತ್ತಿ ಮಾಡಲಾಗುತ್ತಿದೆ. ಅದು ವೃತ್ತಿಯಿಂದ ಮಾತ್ರ ನಿವೃತ್ತಿಯೇ ಹೊರತು ಬದುಕಿನಿಂದ ನಿವೃತ್ತಿಯಲ್ಲ. ಅವರ ಅನುಭವವನ್ನು ಇಲಾಖೆಯಲ್ಲಿ ಆ ನಂತರವೂ ಬಳಕೆ ಮಾಡಿಕೊಂಡು ಸುಧಾರಣೆ ತರುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.

ಉಚಿತ ಆರೋಗ್ಯ ತಪಾಸಣೆ ಶೀಘ್ರ: ಹಿರಿಯ ನಾಗರಿಕರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. 60 ವರ್ಷ ಮೇಲ್ಪಟ್ಟವರಿಗೆ ವರ್ಷಕ್ಕೆ 2 ಬಾರಿ ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆಗೆ ಸದ್ಯದಲ್ಲೇ ಚಾಲನೆ ನೀಡುತ್ತೇವೆ. ತಪಾಸಣೆ ವೇಳೆ ಆರೋಗ್ಯ ಸಮಸ್ಯೆ ಇರುವುದು ಕಂಡು ಬಂದಲ್ಲಿ ಸರ್ಕಾರದ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಕಣ್ಣಿನ ಉಚಿತ ತಪಾಸಣೆ ಮಾಡುವ ವ್ಯವಸ್ಥೆ ರೂಪಿಸಲಾಗುವುದು. ದೃಷ್ಟಿದೋಷ ಇದ್ದವರಿಗೆ ಕನ್ನಡಕ ನೀಡುವ ಯೋಜನೆಯನ್ನು ಈ ವರ್ಷದಲ್ಲಿ ಜಾರಿಗೆ ತರುತ್ತೇವೆ. ಶ್ರವಣ ದೋಷದವರಿಗೆ 8ರಿಂದ 10 ಲಕ್ಷ ರು.ವೆಚ್ಚದಲ್ಲಿ ಶ್ರವಣ ಸಾಧನ ಅಳವಡಿಸಲಾಗುವುದು. 

ಅದಕ್ಕಾಗಿ ಬಜೆಟ್‌ನಲ್ಲಿ 500 ಕೋಟಿ ರು. ಮೀಸಲಿಟ್ಟಿದ್ದೇವೆ. ಕ್ಯಾನ್ಸರ್‌ ಮತ್ತು ಡಯಾಲಿಸಿಸ್‌ ಚಿಕಿತ್ಸೆಯಲ್ಲಿ ಹಿರಿಯರಿಗೆ ಆದ್ಯತೆ ನೀಡಬೇಕೆಂದು ಈಗಾಗಲೇ ಆದೇಶ ಮಾಡಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿಶ್ವ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ವಿಜೇತ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ‘ದಿವ್ಯ ಚೇತನ-ಹಿರಿಯ ಚಿಂತನ’ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವರಾದ ವಿ.ಸೋಮಣ್ಣ, ಶಂಕರ ಪಾಟೀಲ್‌ ಮುನೇನಕೊಪ್ಪ, ಶಾಸಕರಾದ ಉದಯ್‌ ಬಿ.ಗರುಡಾಚಾರ್‌, ರವಿ ಸುಬ್ರಹ್ಮಣ್ಯ, ಹಿರಿಯ ಅಧಿಕಾರಿಗಳಾದ ಡಾ.ಎನ್‌.ಮಂಜುಳಾ, ಕೆ.ಎಸ್‌.ಲತಾ ಕುಮಾರಿ ಮತ್ತಿತರರಿದ್ದರು.

ಯಾರು ಭಾರತ್ ಜೋಡೋ ಮಾಡಿದ್ದಾರೆ, ತೋಡೋ ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ: ಸಿಎಂ ಬೊಮ್ಮಾಯಿ

ಹಿರಿಯ ನಾಗರಿಕರಿಗೆ ಆರೋಗ್ಯ ಉಚಿತ ಸೇವೆ ಒದಗಿಸಲು ಆರೋಗ್ಯ ಇಲಾಖೆಯಿಂದ ಜೀರಿಯಾಟ್ರಿಕ್‌ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇವರ ರಕ್ಷಣೆಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಅಗತ್ಯ ಕಾನೂನು ಬಗ್ಗೆ ಮಾಹಿತಿ ನೀಡಲಿದ್ದಾರೆ. 25 ಫಲಾನುಭವಿಗಳ ಒಂದು ವೃದ್ಧಾಶ್ರಮಕ್ಕೆ ನೀಡುತ್ತಿರುವ ಅನುದಾನವನ್ನು 8 ಲಕ್ಷದಿಂದ 12 ಲಕ್ಷ ರು.ಗೆ ಏರಿಸಲಾಗಿದೆ.
-ಹಾಲಪ್ಪ ಆಚಾರ್‌, ಸಚಿವರು, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್