
ನೋ ಲೆಫ್ಟ್ ಆರ್ ರೈಟ್, ಐ ವಾಂಟ್ ಜಸ್ಟೀಸ್ ಓನ್ಲಿ! ಅದರ್ ವೈಸ್ ಐ ವಿಲ್ ಡೈ. ಆಗಸ್ಟ್ 2ರಂದು ವಿಜಯಪುರ ಜಿಲ್ಲೆಯ ತಿಕೋಟಾದ ಪರೀಕ್ಷಾ ಕೇಂದ್ರದ ಮುಂದೆ ಕೇಳಿಬಂದ ಈ ಕರುಣಾಜನಕ ಧ್ವನಿ, ಕೇವಲ ಒಬ್ಬ ಯುವಕನ ಆರ್ತನಾದವಲ್ಲ. ಅದು ವರ್ಷಪೂರ್ತಿ ರೊಟ್ಟಿ-ಚಟ್ನಿ ತಿಂದು, ಸಣ್ಣ ಕೊಠಡಿಯಲ್ಲಿ ರಾತ್ರಿಪೂರ್ತಿ ನಿದ್ದೆಗೆಟ್ಟು ಓದಿದ ಲಕ್ಷಾಂತರ ಬಡ ನಿರುದ್ಯೋಗಿ ಯುವಕರ ಕಣ್ಣೀರಿನ ಬಿಸಿಯಾಗಿತ್ತು. ಚಿಕ್ಕ ಮಗುವಿನಂತೆ ಕ್ಯಾಮೆರಾ ಮುಂದೆ ಗಳಗಳನೇ ಅತ್ತ ಆ ಹುಡುಗನ ಕಣ್ಣೀರು ಇಡೀ ವ್ಯವಸ್ಥೆಯ ಮುಖಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಉತ್ತರ ಕರ್ನಾಟಕದ ಭಾಗದಲ್ಲಿ 'ಸರ್ಕಾರಿ ನೌಕರಿ' ಎನ್ನುವುದು ಕೇವಲ ಒಂದು ಉದ್ಯೋಗವಲ್ಲ, ಅದು ಇಡೀ ಬಡ ಕುಟುಂಬವನ್ನು ದಾರಿದ್ರ್ಯದಿಂದ ಮೇಲೆತ್ತುವ ಮಹಾನ್ ಸಾಧನ. ಕಷ್ಟಪಟ್ಟು ಸಾಲ-ಸೋಲ ಮಾಡಿ ಓದಿಸಿದ ತಂದೆ-ತಾಯಿ, ಮಗ ಎಂದೋ ಒಂದು ದಿನ ಖಾಕಿ ಸಮವಸ್ತ್ರ ಧರಿಸಿ ಮನೆಗೆ ಬರುತ್ತಾನೆಂದು ಹಾದಿ ಕಾಯುತ್ತಿರುತ್ತಾರೆ. ಅಂತಹ ಕೋಟಿ ಕನಸುಗಳನ್ನು ಹೊತ್ತು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಗ್ರಾಮದಿಂದ ಬಂದಿದ್ದ ಆ ಯುವಕ, ತಿಕೋಟಾದ ಪರೀಕ್ಷಾ ಕೇಂದ್ರದಲ್ಲಿ ಕಂಡದ್ದು ಮಾತ್ರ ಸಂಪೂರ್ಣ ಭ್ರಮನಿರಸನ. ಹಾಗಾದರೆ ಆಗಿದ್ದೇನು?
ನಾಲ್ಕು ಸುದೀರ್ಘ ವರ್ಷಗಳಿಂದ ಯಾವುದೇ ನೋಟಿಫಿಕೇಶನ್ ಇಲ್ಲದೆ ಕಾಯುತ್ತಿದ್ದ ಆ ಹುಡುಗ, ಹಗಲಿರುಳು ಕೆಲಸ ಮಾಡುತ್ತಲೇ ಖಾಕಿ ಕನಸಿಗೆ ಜೀವ ತುಂಬಿದ್ದ. ಆದರೆ, ಪರೀಕ್ಷಾ ಕೊಠಡಿಯಲ್ಲಿ ಕೈಗೆ ಸಿಕ್ಕ ಪ್ರಶ್ನೆ ಪತ್ರಿಕೆ' ಮತ್ತು 'ಒಎಂಆರ್ ಶೀಟ್' ನಡುವೆ ಅಜಾಗಜಾಂತರ ವ್ಯತ್ಯಾಸವಿತ್ತು. ತಕ್ಷಣವೇ ಎಚ್ಚೆತ್ತುಕೊಂಡು, ಅಲ್ಲಿದ್ದ ಅಧಿಕಾರಿಗಳು ಮತ್ತು ಪೋಲಿಸರಿಗೆ ಈ ಎಡವಟ್ಟನ್ನು ಗಮನಕ್ಕೆ ತಂದರೂ ಯಾರೊಬ್ಬರೂ ಕಿವಿಗೊಡಲಿಲ್ಲ. ನ್ಯಾಯ ಸಿಗದಿದ್ದಾಗ, ಅಸಹಾಯಕತೆಯಿಂದ ಪ್ರಶ್ನೆಪತ್ರಿಕೆ ಹಿಡಿದು ಆತ ಹೊರಬರಬೇಕಾಯಿತು. ಆತನ ಜೊತೆ ಇನ್ನುಳಿದ ಅಭ್ಯರ್ಥಿಗಳೂ ಪರೀಕ್ಷೆ ಬಹಿಷ್ಕರಿಸಿ ರಸ್ತೆಗೆ ಬಂದರು. ಆದರೆ, ಅಲ್ಲಿ ನಡೆದ ಘಟನೆ ಇನ್ನೂ ಭೀಕರವಾಗಿತ್ತು. ಅಧಿಕಾರಿಗಳು ಮತ್ತು ಪೊಲೀಸರು ಹೊರಗಡೆ ಪ್ರತಿಭಟಿಸುತ್ತಿದ್ದ ಅಭ್ಯರ್ಥಿಗಳನ್ನು ತಡೆಯುವುದರಲ್ಲೇ ನಿರತರಾಗಿದ್ದಾಗ, ಒಳಗಡೆ ಹಲವರು ಮೊಬೈಲ್‌ಗಳ ಮೂಲಕ ಸ್ಕ್ಯಾನ್ ಮಾಡಿ ಮುಕ್ತವಾಗಿ ಕಾಪಿ ಹೊಡೆಯುತ್ತಿದ್ದರು ಎಂಬ ಗಂಭೀರ ಆರೋಪವನ್ನು ಆ ಯುವಕ ಕಣ್ಣೀರಿಡುತ್ತಲೇ ಮಾಡಿದ. ಅಲ್ಲದೇ ಪ್ರಶ್ನೆ ಪತ್ರಿಕೆಯನ್ನು ತಡವಾಗಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ತಂದೆ-ತಾಯಿ ಮನೆಯಲ್ಲಿ ಕಾಯುತ್ತಿದ್ದಾರೆ ಸ್ವಾಮಿ, ನಾನು ಖಾಕಿ ತೊಡುವುದನ್ನು ನೋಡಲು ಕಾದು ಕುಳಿತಿದ್ದಾರೆ. ಸಮಯದ ಅಭಾವ, ವ್ಯವಸ್ಥೆಯ ನಿರ್ಲಕ್ಷ್ಯದಿಂದ ನಮಗೆ ಪರೀಕ್ಷೆ ಬರೆಯಲಾಗಲಿಲ್ಲ. ನಮಗೆ ಇನ್ನೊಂದು ಅವಕಾಶ ಬೇಕು, ನಮಗೆ ನ್ಯಾಯ ಬೇಕು. ಅಧಿಕಾರಿಗಳ ಮತ್ತು ವ್ಯವಸ್ಥೆಯ ಒಂದು ಸಣ್ಣ ನಿರ್ಲಕ್ಷ್ಯ, ನಾಲ್ಕು ವರ್ಷಗಳ ತಪಸ್ಸನ್ನು ಒಂದೇ ಕ್ಷಣದಲ್ಲಿ ಬೂದಿ ಮಾಡಿಬಿಟ್ಟಿದೆ. ಕಷ್ಟಪಟ್ಟು ಓದಿದವನು ಬೀದಿಯಲ್ಲಿ ನಿಂತು ನ್ಯಾಯ ಕೊಡಿ, ಇಲ್ಲವೇ ಸತ್ತು ಹೋಗುತ್ತೇನೆ' ಎಂದು ಅಳುವಾಗ, ಓದದೇ ಅಕ್ರಮ ಎಸಗಿದವರು ನಗುವಂತ ವಾತಾವರಣ ಸೃಷ್ಟಿಯಾಗಿದ್ದು ಎಂತಹ ವಿಪರ್ಯಾಸ. ಆ ಹುಡುಗ ಹರಿಸಿದ್ದು ಕೇವಲ ಕಣ್ಣೀರಲ್ಲ, ಅದು ನಿರುದ್ಯೋಗಿ ಯುವಕರ ಭವಿಷ್ಯದ ರಕ್ತದ ಹನಿಗಳು. ಆತನಿಗೆ ಮತ್ತು ಆತನಂತಹ ಸಾವಿರಾರು ಪ್ರಾಮಾಣಿಕ ಅಭ್ಯರ್ಥಿಗಳಿಗೆ ತಕ್ಷಣವೇ ನ್ಯಾಯ ಸಿಗಬೇಕಿದೆ. ಈ ಕಣ್ಣೀರಿಗೆ ಸರ್ಕಾರ ಮತ್ತು ವ್ಯವಸ್ಥೆ ಉತ್ತರಿಸಲೇಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ